ಶುಕ್ರವಾರ, ನವೆಂಬರ್ 22, 2019
20 °C

`ಗ್ರಾಮೀಣರಿಗೆ ಕಂಪ್ಯೂಟರ್ ಶಿಕ್ಷಣ ಅಗತ್ಯ'

Published:
Updated:

ಔರಾದ್: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳಬೇಕು ಎಂದು ಡಾ.ಎಸ್. ಬಿ. ದೇಶಮುಖ ಹೇಳಿದರು.ಸಂತಪುರ ಜಿ.ವಿ. ಟೆಕ್ನಾಲಜಿ ಕೇಂದ್ರದಲ್ಲಿ ಈಚೆಗೆ ಯುವತಿಯರಿಗಾಗಿ ಹಮ್ಮಿಕೊಳ್ಳಲಾದ ತ್ರೈಮಾಸಿಕ ಕಂಪ್ಯೂಟರ್ ಕಲಿಕೆಯ ಸಮಾರೋಪದಲ್ಲಿ ಅವರು ಪ್ರಮಾಣಪತ್ರ ವಿತರಿಸಿ ಮಾತನಾಡಿದರು.ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಕಂಪ್ಯೂಟರ್ ಕಲಿಸುವ ವ್ಯವಸ್ಥೆ ಮಾಡಬೇಕು. ಆದರೆ ಸರ್ಕಾರ ಈಗಾಗಲೇ ಪ್ರೌಢಶಾಲೆ ಹಂತದಲ್ಲಿ ಕಂಪ್ಯೂಟರ್ ಕಲಿಸುವ ಬಗ್ಗೆ ಹೇಳಲಾಗುತ್ತಿದ್ದರೂ ಅದನ್ನು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗದ ಕಾರಣ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿಯೂ ಕಾನ್ವೆಂಟ್ ಶಾಲೆಗಳಿಗೆ ಮೀರಿಸುವ  ಶಿಕ್ಷಣ ನೀಡಿದರೆ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.ಆಹಾರ ನಿಮಗದ ಮಾಜಿ ಸದಸ್ಯ ಶಿವಯ್ಯ ಸ್ವಾಮಿ, ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಕಂಪ್ಯೂಟರ್ ಜ್ಞಾನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಬಡ ಯುವತಿಯರಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ಸಿಗಬೇಕು ಎಂದು ಹೇಳಿದರು.ರಾಜ್ಯ ಯುವ ಪ್ರಶಸ್ತಿ ವಿಜೇತ ಶಿವಕುಮಾರ ಸ್ವಾಮಿ ಅಧ್ಯಕ್ಷತೆ ವಹಿಸಿ, ಯುವತಿಯರು ಸಂಕೋಚ ಮರೆತು ಎಲ್ಲ ರಂಗದಲ್ಲಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.ಶಿವಕುಮಾರ ಪಾಟೀಲ ಉಪಸ್ಥಿತರಿದ್ದರು. ರವಿ ಮೇತ್ರೆ ಸ್ವಾಗತಿಸಿದರು. ಪ್ರಭು ಮೂಲಗೆ ನಿರೂಪಿಸಿದರು. ಪವನ ವಂದಿಸಿದರು. ಕಂಪ್ಯೂಟರ್ ತರಬೇತಿ ಪಡೆದ ಯುವತಿಯರಿಗೆ ಪ್ರಮಾಣಪತ್ರ ನೀಡಲಾಯಿತು.

ಪ್ರತಿಕ್ರಿಯಿಸಿ (+)