ಗುರುವಾರ , ಜೂನ್ 24, 2021
27 °C

ಗ್ರಾಮೀಣ ಅಂಗಡಿಯ ಬಣ್ಣಕ್ಕೆ ಬಲು ಬೇಡಿಕೆ

–ಇ.ಎಸ್‌.ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

ಬಣ್ಣದ ಹಬ್ಬಕ್ಕೆ ಸಕಲ ಸಿದ್ಧತೆಗಳೂ ನಡೆದಿವೆ. ಸಾಕಷ್ಟು ಕ್ಲಬ್‌ಗಳು ಬಾಲಿವುಡ್‌ ಡಿಜೆಗಳು, ರೈನ್ ಡ್ಯಾನ್ಸ್‌ ಸೇರಿದಂತೆ ಹೋಳಿಯ ಸಂಭ್ರಮ ಕಳೆ ಕಟ್ಟಲು ಬೇಕಾದ ಸಕಲ ಸಿದ್ಧತೆಗಳನ್ನು ನಡೆಸಿವೆ. ಇದೇ ಸಂದರ್ಭದಲ್ಲಿ  ಬಣ್ಣಗಳ ಆಯ್ಕೆಯಲ್ಲೂ ಕೆಲವು ಕ್ಲಬ್‌, ಕಂಪೆನಿಯ ಉದ್ಯೋಗಿಗಳು ಹಾಗೂ ಬೆಂಗಳೂರಿಗರು ಅಷ್ಟೇ ಮುತುವರ್ಜಿವಹಿಸಿದ್ದಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ನೈಸರ್ಗಿಕ ಬಣ್ಣಗಳನ್ನು ತಯಾರಿಸುವ ‘ಗ್ರಾಮೀಣ ಅಂಗಡಿ’ ಬಣ್ಣಗಳನ್ನು ತರಿಸುತ್ತಿದ್ದೇವೆ ಎಂದು ಸಾಕಷ್ಟು ಆಯೋಜಕರು ತಮ್ಮ ಕರಪತ್ರಗಳಲ್ಲಿ ಮುದ್ರಿಸಿ ಹಂಚುತ್ತಿರುವುದೇ ಇದಕ್ಕೆ ಸಾಕ್ಷಿ.ಕಳೆದ ಕೆಲವು ವರ್ಷಗಳಿಂದ ನೈಸರ್ಗಿಕ ಬಣ್ಣ ತಯಾರಿಕೆಯಲ್ಲಿ ತೊಡಗಿಕೊಂಡರುವ ಗ್ರಾಮೀಣ ಅಂಗಡಿಯ ‘ಮೈತ್ರಿ ನೈಸರ್ಗಿಕ ಬಣ್ಣ’ಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಜಯನಗರ 4ನೇ ಟಿ ಬ್ಲಾಕ್‌ನಲ್ಲಿರವ ಗ್ರಾಮೀಣ ಅಂಗಡಿಯು  ಗ್ರಾಮೀಣ ಕರಕುಶಲ ಉದ್ದಿಮೆಯನ್ನು ಉತ್ತೇಜಿಸುವ ಹಾಗೂ ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಸ್ವಯಂ ಸೇವಾ ಸಂಸ್ಥೆ. ಶಿವಮೊಗ್ಗ, ಭಟ್ಕಳ, ಸಾಗರ, ಕನಕಪುರದಲ್ಲಿ ಸಂಸ್ಥೆ ತನ್ನ ಶಾಖೆಗಳನ್ನು ಹೊಂದಿದೆ.‘ಹೋಳಿ ಹಬ್ಬದ ಸಂದರ್ಭದಲ್ಲಿ ಬಳಸಲಾಗುವ ನೈಸರ್ಗಿಕ ಬಣ್ಣಗಳು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ತಯಾರಾಗುತ್ತವೆ. ಈ ಕೆಲಸದಲ್ಲಿ 60 ಕುಶಲಕರ್ಮಿಗಳು ತೊಡಗಿದ್ದು, ಅವರಲ್ಲಿ ಮಹಿಳೆಯರೇ ಹೆಚ್ಚು. ಜನವರಿಯಿಂದ ಆರಂಭವಾಗುವ ಬಣ್ಣ ತಯಾರಿಕೆ ಕೆಲಸ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ’ ಎನ್ನುತ್ತಾರೆ ಗ್ರಾಮೀಣ ಅಂಗಡಿಯ ಮಾರುಕಟ್ಟೆ ವಿಭಾಗದ ಗಂಗಾಧರ್‌.ಇಲ್ಲಿ ತಯಾರಾಗುವುದು ಐದು ಪ್ರಮುಖ ಬಣ್ಣಗಳು. ಅರಿಶಿಣ ಹಾಗೂ ಕುಂಕುಮ ಬಣ್ಣಗಳನ್ನು ಸಾವಯವ ಅರಿಶಿಣದಿಂದಲೇ ತಯಾರಿಸಲಾಗುತ್ತದೆ. ಕೂದಲು ಕಪ್ಪಾಗಿಸುವ ಇಂಡಿಗೋದಿಂದ ಕಪ್ಪು ಬಣ್ಣವನ್ನು, ತುಳಸಿ, ಬೇವು, ಬೀಟ್‌ರೂಟ್‌, ಗುಲಾಬಿ ಬಣ್ಣಗಳಿಂದ ಇತರ ಬಣ್ಣಗಳನ್ನು ತಯಾರಿಸಲಾಗುತ್ತಿದೆ. ಹೀಗೆ ತಯಾರಾದ ಬಣ್ಣಗಳನ್ನು ನಯವಾಗಿ ಪುಡಿ ಮಾಡಿದ ಅಕ್ಕಿಹಿಟ್ಟಿನೊಡನೆ ಬೆರಸಿ ಅದನ್ನು ಮೂರು ದಿನಗಳ ಕಾಲ ನೆರಳಿನಲ್ಲಿ ಒಣಗಿಸಲಾಗುತ್ತದೆ. ನಂತರ ಇವುಗಳನ್ನು ಪೊಟ್ಟಣ ಕಟ್ಟಲಾಗುತ್ತದೆ.‘ಐದು ಬಣ್ಣಗಳು ತಲಾ 50 ಗ್ರಾಂಗಳಂತೆ 250 ಗ್ರಾಂಗಳ ಪ್ಯಾಕ್‌ನಲ್ಲಿ ಲಭ್ಯ. 2013ರ ಹೋಳಿ ಹಬ್ಬದಲ್ಲಿ 250 ಕೆ.ಜಿ. ಬಣ್ಣ ಮಾರಾಟವಾಗಿತ್ತು. ಈ ಬಾರಿ ನೈಸರ್ಗಿಕ ಬಣ್ಣದ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಹಬ್ಬಕ್ಕೂ ಹಲವು ದಿನಗಳಷ್ಟು ಮುಂಚೆಯೇ ಆಯೋಜಕರು 250 ಕೆ.ಜಿ. ಬಣ್ಣಕ್ಕೆ ಬೇಡಿಕೆ ಸಲ್ಲಿಸಿದ್ದು, ಅದನ್ನು ಪೂರೈಸಲಾಗಿದೆ. ಬೇಡಿಕೆ ಹೆಚ್ಚಾಗಿದ್ದರಿಂದ ಈ ಬಾರಿ ನಮ್ಮ ಉತ್ಪಾದನೆಯನ್ನು 600 ಕೆ.ಜಿ.ಗೆ ಹೆಚ್ಚಿಸಲಾಗಿದೆ. ಗಾಂಧಿಬಜಾರ್‌, ಎಚ್‌ಎಸ್‌ಆರ್‌ ಬಡಾವಣೆ ಸೇರಿದಂತೆ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿರುವ ಸಾವಯವ, ಕರಕುಶಲ ಮಳಿಗೆಗಳಲ್ಲಿ ಗ್ರಾಮೀಣ ಅಂಗಡಿಯ ಮೈತ್ರಿ ನೈಸರ್ಗಿಕ ಬಣ್ಣಗಳು ಲಭ್ಯ’ ಎನ್ನುತ್ತಾರೆ ಅವರು.‘ಒಂದು ಕೆ.ಜಿ. ರಾಸಾಯನಿಕಯುಕ್ತ ಬಣ್ಣ ₨ 250ಕ್ಕೆ ಲಭ್ಯ. ಆದರೆ ನೈಸರ್ಗಿಕ ಬಣ್ಣ ತಯಾರಿಸುವ ಪ್ರಕ್ರಿಯೆಯೇ ಕ್ಲಿಷ್ಟಕರವಾದ್ದರಿಂದ ಇದು ತುಸು ದುಬಾರಿ ಎನಿಸಬಹುದು. ಆದರೆ ನಮ್ಮದು ಸ್ವಯಂ ಸೇವಾ ಸಂಘವಾದ್ದರಿಂದ ಲಾಭದ ಉದ್ದೇಶ ಇಲ್ಲ. ಜತೆಗೆ ನೈಸರ್ಗಿಕ ಬಣ್ಣಗಳು ಆರೋಗ್ಯಕ್ಕೆ ಹಾನಿಯಲ್ಲದ ಕಾರಣ ನಿರಾತಂಕವಾಗಿ ಹೋಳಿಯ ಸವಿಯನ್ನು ಸವಿಯಬಹುದು’ ಎಂದೆನ್ನುವುದು ಗಂಗಾಧರ್‌ ಅವರ ಅಭಿಪ್ರಾಯ.ನೈಸರ್ಗಿಕ ಬಣ್ಣಗಳ ಮಾರಾಟದಲ್ಲಿ ಕಳೆದ ಬಾರಿ ₨ 25 ಸಾವಿರ ಹಣ ಸಂಗ್ರಹವಾಗಿತ್ತಂತೆ. ಈ ಬಾರಿ ಇನ್ನೂ ಹೆಚ್ಚು ಹಣ ಸಂಗ್ರಹವಾಗಲಿದೆ ಎನ್ನುವುದು ಗ್ರಾಮೀಣ ಅಂಗಡಿಯ ಅಂದಾಜು. ಹೀಗೆ ಬಂದ ಹಣವನ್ನು ಸಂಕಷ್ಟದಲ್ಲಿರುವ ಉಡುಪಿಯ ಪ್ರಾಥಮಿಕ ನೇಕಾರರ ಸಂಘಕ್ಕೆ ನೀಡಲಾಗುತ್ತಿದೆ.

ರಾಸಾಯನಿಕದಿಂದ ಆದಷ್ಟು ಮುಕ್ತರಾಗುವತ್ತ ಬೆಂಗಳೂರಿಗರು ಹೆಜ್ಜೆ ಇಟ್ಟಂತಿದೆ. ಈ ನಿಟ್ಟಿನಲ್ಲಿ ಸಾವಯವ ಆಹಾರದಂತೆಯೇ ನೈಸರ್ಗಿಕ ಬಣ್ಣಕ್ಕೂ ಬೇಡಿಕೆ ಹೆಚ್ಚಾಗಿದೆ.

ಈ ಬಣ್ಣಕ್ಕೇ ಸೈ

ಬೆಂಗಳೂರಿನಲ್ಲಿ ನಿಸರ್ಗದತ್ತವಾಗಿ ಸಿಗುವ ಪ್ರತಿಯೊಂದನ್ನೂ ಈಗ ರಾಸಾಯನಿಕ ಆವರಿಸಿಕೊಂಡಿದೆ. ತಿನ್ನುವ ಆಹಾರ, ಕುಡಿಯುವ ನೀರು ಹಾಗೂ ಸೇವಿಸುವ ಗಾಳಿಯಲ್ಲೂ ಆರೋಗ್ಯಕ್ಕೆ ಮಾರಕವಾಗಬಲ್ಲ ರಾಸಾಯನಿಕವಿದೆ. ಹೀಗಾಗಿ ಈ ಹೋಳಿ ಹಬ್ಬದ ಸಂದರ್ಭದಲ್ಲಾದರೂ ಲಭ್ಯವಿರುವ ನೈಸರ್ಗಿಕ ಬಣ್ಣ ಬಳಸುವ ಮನಸ್ಸು ಮಾಡಿದ್ದೇವೆ. ನಮ್ಮ ಈ ನಿರ್ಧಾರಕ್ಕೆ ಸ್ನೇಹಿತರೂ ಸೈ ಎಂದಿದ್ದಾರೆ.

–ವೇಣು ಗೋಪಾಲ್‌, ಖಾಸಗಿ ಕಂಪೆನಿ ಉದ್ಯೋಗಿ

125 ಕೆ.ಜಿ. ಬೇಡಿಕೆ

ಬನ್ನೇರುಘಟ್ಟದಲ್ಲಿರುವ ‘ಸೆವೆನ್‌ ಸ್ಟಾರ್‌’ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಪ್ರತಿವರ್ಷ ಹೋಳಿ ಆಚರಿಸಲಾಗುತ್ತದೆ. ಹೀಗಾಗಿ ಕಳೆದ ಕೆಲವು ವರ್ಷಗಳಿಂದ ನೈಸರ್ಗಿಕ ಬಣ್ಣಗಳನ್ನು ಗ್ರಾಮೀಣ ಅಂಗಡಿಯಿಂದ ತರಿಸಲಾಗುತ್ತಿದೆ. ಈ ಬಣ್ಣದಿಂದ ಆಡಿದ ಕಂಪೆನಿಯ ನೌಕರರು ಪ್ರತಿವರ್ಷ  ನೈಸರ್ಗಿಕ ಬಣ್ಣಗಳೇ ಬೇಕೆಂದು ಮನವಿ ಮಾಡುತ್ತಾರೆ. ಅದರಂತೆಯೇ ಈ ಬಾರಿ 125 ಕೆ.ಜಿ. ನೈಸರ್ಗಿಕ ಬಣ್ಣ ತರಿಸಲಾಗಿದೆ.

–ಸಿದ್ಧಾರ್ಥ್‌

ಯಾವುದೇ ಸಮಸ್ಯೆ  ಇಲ್ಲ

ರಾಸಾಯನಿಕ ಬಣ್ಣದಿಂದ ಹೋಳಿ ಆಡಿದಾಗ ಒಂದು ದಿನ ಕಳೆದರೂ ಕಣ್ಣು ಉರಿ ಹೋಗದು. ಜೊತೆಗೆ ಕೂದಲು ಒರಟಾಗುತ್ತದೆ. ಇದಕ್ಕೆ ಮತ್ತೆ ಸರಿದಾರಗೆ ತರಲು ಸಾಕಷ್ಟು ದಿನಗಳೇ ಬೇಕು. ಆದರೆ ನೈಸರ್ಗಿಕ ಬಣ್ಣದಿಂದ ಇಂಥ ಯಾವುದೇ ಸಮಸ್ಯೆ ಎದುರಾಗಿಲ್ಲ. ಹೀಗಾಗಿ ಪ್ರತಿ ವರ್ಷವೂ ಇದೇ ಮಾದರಿಯನ್ನು ಅನುಸರಿಸುತ್ತಿದ್ದೇವೆ.

– ಪ್ರಿಯಾಂಕಾ, ಗೃಹಿಣಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.