ಗುರುವಾರ , ಮೇ 6, 2021
27 °C

ಗ್ರಾಮೀಣ ಕೆರೆಗಳ ಅಭಿವೃದ್ಧಿಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಬುರ್ಗಾ: ಸಾಮೂಹಿಕ ವಿವಾಹ ಕಾರ್ಯಕ್ರಮ ಹೊರತುಪಡಿಸಿ ಸಾರ್ವಜನಿಕರಿಗೆ ಒಳ್ಳೆಯದಾಗುವ ಅನೇಕ ವಿಧದ ಸೇವೆಗೆ ಅವಕಾಶಗಳಿದ್ದು,  ಕೆರೆಗಳ ಪುನಃಶ್ಚೇತನವು ಒಂದಾಗಿದೆ. ಧನಿಕರು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ ಎಂದು ಹಾಲಕೇರಿ ಶಿವಯೋಗ ಮಂದಿರದ ಅನ್ನದಾನೇಶ್ವರ ಸ್ವಾಮೀಜಿ ಸಲಹೆ ನೀಡಿದರು. ಪಟ್ಟಣದಲ್ಲಿ ಸೋಮವಾರ ನಡೆದ ಜಿ.ಟಿ. ಪಂಪಾಪತಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಜನತೆ ಇಂದಿಗೂ ಕುಡಿಯುವ ನೀರಿಗಾಗಿ ಕೆರೆ, ಭಾವಿಗಳನ್ನೆ ಅವಲಂಬಿಸಿದ್ದಾರೆ. ಆದರೆ ಕಾಯಕಲ್ಪವಿಲ್ಲದೆ ಇದ್ದು ಇಲ್ಲದಂತಿವೆ. ಇಂತಹಗಳನ್ನು ಗುರುತಿಸಿ ಅಭಿವೃದ್ಧಿಗೊಳಿಸುವ ಕೆಲಸ ಸೇವಾ ಸಂಸ್ಥೆಯವರು ಮಾಡಿದರೆ ಜೀವಕ್ಕೆ ಚೈತನ್ಯಕೊಟ್ಟ ಪುಣ್ಯ ಲಭಿಸುತ್ತದೆ. ಇದು ಇತರೆ ಸತ್ಕಾರಗಳಿಗಿಂತಲೂ ಮಿಗಿಲಾದುದು ಎಂದರು.ಇಲಕಲ್ಲನ ಹಜರತ್ ಸ್ಥಯದ್ ಶಹಾ ಮರ್ತುಜಾ ಖಾದ್ರಿ ಹುಸೇನ ಉಲ್ ಉರ್ಫ್ ಫೈಸಲ್ ಪಾಷಾ ಅವರು ಮಾತನಾಡಿ, ಸರ್ವ ಧರ್ಮ ಸಮನ್ವಯತೆಗೆ ಹೆಸರಾಗಿರುವ ಯಲಬುರ್ಗಾದಲ್ಲಿ ಹಿಂದು ಕುಟುಂಬಗಳ ಮದುವೆ ಸಂಭ್ರಮದ ಜೊತೆಗೆ ಮುಸ್ಲಿಂ ಕುಟುಂಬಗಳು ಸಹ ಒಂದೇ ವೇದಿಕೆ ಅಡಿಯಲ್ಲಿ ವಿವಾಹ ಮಾಡಿಕೊಂಡು ಸಂಭ್ರಮಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿವಿಧ ಮಠಗಳ ಸ್ವಾಮೀಜಿಗಳ ಹಾಗೂ ಅಸಂಖ್ಯಾತ ಜನರ ಆಶೀರ್ವಾದದಲ್ಲಿ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದ್ದು ನಿಜಕ್ಕು ಭಾಗ್ಯವಂತರು ಎಂದರು.ಉದ್ದೇಶ ಏನೇ ಆಗಿರಲಿ ಮಾಡುವ ಕಾರ್ಯ ಒಳ್ಳೆಯದಾಗಿದ್ದರೆ, ಅದಕ್ಕೆ ದೇವರು ತಕ್ಕ ಪ್ರತಿಫಲ ಕರುಣಿಸುತ್ತಾನೆ. ಸಾರ್ವಜನಿಕ ವಲಯದಲ್ಲಿ ಪ್ರತಿಯೊಂದಕ್ಕೂ ಟೀಕೆಗಳು ಬರುವುದು ಸಹಜ, ಅವುಗಳಿಗೆ ಕಿವಿಗೊಡದೆ ಒಳ್ಳೆಯ ಕಾರ್ಯದಲ್ಲಿ ಮುನ್ನೆಡೆದರೆ ಸಾಕು ದೇವರ ಅನುಗ್ರಹ ಇದ್ದೇ ಇರುತ್ತದೆ ಎಂದು ಕುದ್ರಿಮೋತಿ ಮೈಸೂರುಮಠದ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.ಜಿ.ಟಿ. ಸೇವಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಂಪಾಪತಿ, ಟಣಕನಕಲ್ ವಿರೇಶ್ವರ ಹಿರೇಮಠದ ಸ್ವಾಮೀಜಿ ಶರಣ ಬಸವ ಸ್ವಾಮೀಜಿ, ಮಂತ್ರಾಲಯ ಶ್ರೀಗಳ ಆಪ್ತ ಕಾರ್ಯದರ್ಶಿ ರಾಜಾ ಎಸ್. ರಾಜಗೋಪಾಲಚಾರ್ಯ ಮಾತನಾಡಿದರು. ಶ್ರೀಧರ ಮುರಡಿ ಹಿರೇಮಠದ ಬಸಲಿಂಗೇಶ್ವರ ಸ್ವಾಮೀಜಿ, ಗದಗ ವೀರೇಶ್ವರ ಪೂಣ್ಯಾಶ್ರಮದ ಕಲ್ಲಯ್ಯಜ್ಜನವರು, ಕುಕನೂರು ಗುದ್ನೇಪ್ಪನಮಠದ ಪ್ರಭುಲಿಂಗ ಸ್ವಾಮೀಜಿ, ಬೆವಟ್ಟಿಯ ಶಿವ ಸಂಗಮೇಶ್ವರ ಸ್ವಾಮೀಜಿ, ಮಂಗಳೂರಿನ ಅರಳೆಲೆ ಹಿರೇಮಠದ ಸಿದ್ದಲಿಂಗ ಸ್ವಾಮೀಜಿ, ಕುಷ್ಟಗಿಯ ಕರಿಬಸವೇಶ್ವರ ಸ್ವಾಮೀಜಿ ಸೇರಿದಂತೆ ಅನೇಕರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.