ಶನಿವಾರ, ಜೂನ್ 12, 2021
24 °C

ಗ್ರಾಮೀಣ ಪರಿಸರದಲ್ಲೊಂದು ಅಪರೂಪದ ಶಾಲೆ!

ಪ್ರಜಾವಾಣಿ ವಾರ್ತೆ/ಪ್ರಸನ್ನ ಮಂಡಲಗಿರಿ Updated:

ಅಕ್ಷರ ಗಾತ್ರ : | |

ಶಹಾಬಾದ: ತಾಲ್ಲೂಕಿನ ಭಂಕೂರು ಗ್ರಾಮ, ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಬಡ್ತಿ ಪಡೆಯುವ ಹಂತದಲ್ಲಿರುವ ಗ್ರಾಮ. ಈ ಭಾಗದಲ್ಲಿ ಕಳೆದ ಒಂದು ದಶಕ (2004)ದಿಂದ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ‘ಬ್ರೈಟ್ ಲ್ಯಾಂಡ್ ಕನ್ನಡ ಮತ್ತು ಇಂಗ್ಲಿಷ್ ಕಾನ್ವೆಂಟ್‌ ಶಾಲೆ’ ಉತ್ತಮ ಹೆಸರು ಮಾಡುತ್ತಿದೆ. ಭಂಕೂರ ಸುತ್ತಮುತ್ತಲ ಶಾಂತನಗರ, ಭಂಕೂರ ವಾಡ, ಮುಗಳನಾಗಾವಿ, ಶಂಕರವಾಡಿ, ತರಿತಾಂಡಾ ಹಾಗೂ ದೇವನತೇಗನೂರ ಗ್ರಾಮಗಳ ಸಾಧಾ­ರಣ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯ ಮಕ್ಕಳ ದಂಡು ಈ ಶಾಲೆಯ ವಿದ್ಯಾರ್ಥಿಗಳು.ಬಡ, ಗ್ರಾಮೀಣ ಮಕ್ಕಳಿಗೆ ವಸತಿ ಸಹಿತಿ ಒಂದು ಉತ್ತಮ ಶಾಲೆ ಆರಂಭಿಸಬೇಕು ಎಂಬ  ಉದ್ದೇ­ಶದಿಂದ  ’ಕ್ರಿಶ್ಚಿಯನ್ ಔಟ್ ರೀಚ್ ಮಿನಿಸ್ಟ್ರಿ’ಯ ಪಾಸ್ಟರ್ ಪೀಟರ್ ಜಮಖಂಡಿ ಅವರ ಕನಸಿನ ಕೂಸಾದ ಈ ಶಾಲೆಗೆ ಈಗ ದಶಕದ ಸಂಭ್ರಮ!

ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದ ಆಡಳಿತದ ಈ ಶಾಲೆ ಆರಂಭದ ದಿನಗಳಲ್ಲಿ ಶಿಶುಪಾಲನಾ ಕೇಂದ್ರವಾಗಿ ಕಾರ್ಯನಿ­ರ್ವಹಿಸಿತ್ತು. ನಂತರ ಪ್ರಾಥಮಿಕ, ಈಗ ಪ್ರೌಢ­ಶಾಲೆಯ ಮಟ್ಟಕ್ಕೆ ಬೆಳೆದಿದೆ. ಬಡ ಮಕ್ಕಳಿಗೆ ಇಲ್ಲಿ ಉಚಿತ ವಸತಿ ನಿಲಯವೂ ಇದೆ.ಬಡತನದ ಬೇಗು­ದಿಯ ಹಿನ್ನೆಲೆಯಲ್ಲಿ ಬಂದು ಈ ಶಾಲೆ­ಯಲ್ಲಿ ಓದುವ ಮಕ್ಕಳು ಇಂದು ಪ್ರತಿಭಾವಂತ ವಿದ್ಯಾರ್ಥಿಗಳೆನಿಸಿದ್ದಾರೆ. ರಾಜ್ಯ ಪಠ್ಯ ಮಾದರಿ ಹೊಂದಿರುವ ಈ ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಗೆಗಳಲ್ಲಿ ಇಲ್ಲಿನ ಮಕ್ಕಳು ರಾಜ್ಯ ಮಟ್ಟಕ್ಕೆ ಬೆಳೆದಿದ್ದಾರೆ. ನೃತ್ಯ, ಹಾಡು, ಭಾಷಣ, ಕ್ರೀಡೆ ಇಲ್ಲಿನ ಮಕ್ಕಳಿಗೆ ಒಲಿದಿದೆ. ಅವರು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಶಾಲೆಯ ಹೆಸರನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಶಾಲೆಯಲ್ಲಿ ನೂರಕ್ಕೆ ನೂರು ಫಲಿತಾಂಶವಿದ್ದು ಏಳನೆಯ ತರಗತಿಯ ವಿದ್ಯಾರ್ಥಿನಿ ಆರಿಫಾ ಈಚೆಗೆ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅದ್ಭುತ ಯಶಸ್ಸು ಸಾಧಿಸಿ ಉರ್ದು ಭಾಷಣದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ಉತ್ತಮ ಸೌಲಭ್ಯಗಳು: ಗ್ರಾಮೀಣ ಪರಿಸರದ ಈ ಶಾಲೆ ಉತ್ತಮ ಸೌಲಭ್ಯ ಹೊಂದಿದ್ದು 15 ಕೋಣೆ­ಗಳು, ವಿಶಾಲ ಮೈದಾನ, ವಸತಿ ಕೋಣೆ­ಗ­ಳು ಪ್ರತ್ಯೇಕವಾಗಿದ್ದು 10 ನೇ ತರಗತಿವರೆಗೆ ಒಟ್ಟು 250 ವಿದ್ಯಾರ್ಥಿಗಳು, 12 ಜನ ಶಿಕ್ಷಕರಿದ್ದಾರೆ. ಶಾಲಾ ಆವರಣದ ತುಂಬ ಸಾಕಷ್ಟು ಮರ ಬೆಳೆಸಿ ಹಸಿರು ವಾತಾವರಣ ನಿರ್ಮಿಸ­ಬಹುದಾದ ಅನುಕೂಲವಿದೆ. ‘ಗ್ರಾಮೀಣ ­ಮಕ್ಕಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆ, ಬಡ ­ಮಕ್ಕಳಿಗೆ ಇಂಗ್ಲಿಷ್ ಕಲಿಯಲು ಸಾಧ್ಯವಿಲ್ಲ’ ಎಂಬ ಮಾತಿಗೆ ಅಪವಾದ ಎನ್ನುವಂತೆ ಇಲ್ಲಿ ಬಡ, ಗ್ರಾಮೀಣ ಎನ್ನದೆ ಎಲ್ಲ ಮಕ್ಕಳೂ ಮಾತೃ­ಭಾಷೆ ಕನ್ನಡದ ಜೊತೆಗೆ ಇಂಗ್ಲಿಷ ಕಲಿಯಲು ಅವಕಾಶವಿದೆ.ಬಡ ವಿದ್ಯಾರ್ಥಿಗಳು ಶಾಲಾ ಶುಲ್ಕ ತುಂಬಲು ಸಾಧ್ಯವಾಗದೆ ಇದ್ದರೆ, ಉಚಿತ ಪ್ರವೇಶ ಒದಗಿಸಿದ ಉದಾಹರಣೆಗಳು ಸಾಕ­ಷ್ಟಿವೆ. ದೂರದ ರಾಯಚೂರು, ಯಾದಗಿರಿ ಜಿಲ್ಲೆ­ಗಳ ಮತ್ತು ಗುಲ್ಬರ್ಗ ನಗರದ ಮಕ್ಕಳೂ ಈ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ. ಸುತ್ತಲ ಗ್ರಾಮಗಳ ಮಕ್ಕಳ ಅನುಕೂಲಕ್ಕಾಗಿ ಶಾಲಾ ಬಸ್ಸಿನ ವ್ಯವಸ್ಥೆಯೂ ಇದೆ.‘ಕೇಂದ್ರ ಸರ್ಕಾರದ ಕಡ್ಡಾಯ ಶಿಕ್ಷಣ ಕಾಯ್ದೆ(ಆರ್.ಟಿ.ಇ) ಯೋಜನೆಯಡಿ ಆರ್ಥಿಕ, ಸಾಮಾ­ಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೆ ನಮ್ಮ ಶಾಲೆಯಲ್ಲಿ 8 ಸ್ಥಾನ ಕಾದಿರಿಸ­ಲಾಗಿದೆ. ಈ ಬಗ್ಗೆ ಶಾಲೆಯಲ್ಲಿ ಈಗಾಗಲೆ ಸೂಚನಾ ಫಲಕದ ಮೇಲೆ ವಿವರ ನೀಡಲಾಗಿದೆ. ಆ ಪೈಕಿ ಪರಿಶಿಷ್ಠ ಜಾತಿ 3, ಪರಿಶಿಷ್ಠ ಪಂಗಡ 1 ಹಾಗೂ ಸಾಮಾನ್ಯ 4 ಹೀಗೆ ಒಟ್ಟು 8 ಸ್ಥಾನ ಮೀಸಲಾಗಿಡ­ಲಾಗಿದೆ’ ಎಂದು ಮುಖ್ಯೋಪಾ­ಧ್ಯಾಯ ಮಹಾದೇವ ಬಿ.ನಾಟೇಕಾರ್ ಹೇಳುತ್ತಾರೆ.ಸರ್ಕಾರದ ಆದೇಶದಂತೆ, ಒಂದನೇ ತರಗತಿಯಲ್ಲಿ ಶೇ 25ರಷ್ಟು ಸೀಟು ನೀಡಿಕೆಯ ನಿಬಂಧನೆ ಪ್ರಕಾರ, ಒಟ್ಟು 32 ಒಂದನೇ ತರಗತಿಯ ಸೀಟುಗಳಲ್ಲಿ 8 ಸೀಟುಗಳನ್ನು ಮೀಡಲಿಡಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.