ಭಾನುವಾರ, ನವೆಂಬರ್ 17, 2019
24 °C
ಬಿಜೆಪಿ ಪ್ರಚಾರ ಸಭೆಯಲ್ಲಿ ರಾಜನಾಥಸಿಂಗ್ ಘೋಷಣೆ

`ಗ್ರಾಮೀಣ ಪ್ರದೇಶಕ್ಕೆ 15 ತಾಸು ವಿದ್ಯುತ್'

Published:
Updated:

ವಿಜಾಪುರ: `ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಗ್ರಾಮೀಣ ಪ್ರದೇಶಕ್ಕೆ 15 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸಲಾ ಗುವುದು. ಮುಂದಿನ ಚುನಾವಣೆಯಲ್ಲಿ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರದ ಆಡಳಿತ ಬರಲಿದ್ದು, ದೇಶದ ಎಲ್ಲ ರೈತರಿಗೆ ಶೇ1ರ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಲಾಗುವುದು' ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಹೇಳಿದರು.ಬಸವನ ಬಾಗೇವಾಡಿಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಸೋಮವಾರ ಪ್ರಚಾರ ನಡೆಸಿದ ಅವರು, `ರಾಜ್ಯದಲ್ಲಿ ಬಿಜೆಪಿ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾವ ಶಕ್ತಿಗಳಿಗೂ ಸಾಧ್ಯವಾಗುವುದಿಲ್ಲ' ಎಂದರು.`ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ರೈತರಿಗೆ ಶೇ.4ರ ಬಡ್ಡಿ ದರದಲ್ಲಿ ಸಾಲ ನೀಡುವಂತೆ ಆಗಿನ ಹಣಕಾಸು ಸಚಿವ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೂಚಿಸಿದ್ದೆ. ಹಂತ ಹಂತವಾಗಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಜಾರಿಗೆ ತರಲಾಯಿತು. ಬಿಜೆಪಿ ಸರ್ಕಾರ ಆಡಳಿತ ಇರುವ ರಾಜ್ಯಗಳಲ್ಲಿಯೂ ರೈತರಿಗೆ ಈ ನೆರವು ನೀಡಲಾಗಿದೆ' ಎಂದು ಹೇಳಿದರು.`ವಿದ್ಯುತ್ ಉತ್ಪಾದನೆಗೆ ಕರ್ನಾಟಕ ಹೆಚ್ಚಿನ ಒತ್ತು ನೀಡಿದ್ದು, ಬಿಜೆಪಿಗೆ ಮತ್ತೆ ಐದು ವರ್ಷ ಅಧಿಕಾರ ದೊರೆತರೆ ಗ್ರಾಮೀಣ ಪ್ರದೇಶಕ್ಕೆ 15 ಗಂಟೆಗಳ ಕಾಲ ತಡೆ ರಹಿತ ಗುಣಮಟ್ಟದ ವಿದ್ಯುತ್ ಪೂರೈಸಲಾಗುವುದು. ಆ ನಂತರ ಮತ್ತೆ 2-3 ವರ್ಷ ಅಧಿಕಾರ ದೊರೆತರೆ 24 ಗಂಟೆಗಳ ಕಾಲ ವಿದ್ಯುತ್ ನೀಡಲಾಗುವುದು. ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಈಡೇರಿಸಲು ತಮ್ಮ ಪಕ್ಷ ಬದ್ಧವಾಗಿದೆ' ಎಂದರು.`ರಾಜ್ಯದಲ್ಲಿ ಬಿಜೆಪಿ ಉತ್ತಮ ಸರ್ಕಾರ ನೀಡಿದೆ. ಬರ ನಿರ್ವಹಣೆಯಲ್ಲಿ ಮಾದರಿ ಕೆಲಸ ಮಾಡಿದ್ದು, ಇದನ್ನು ಗಮನಿಸಿದ್ದ ಪಕ್ಕದ ಮಹಾರಾಷ್ಟ್ರ ರಾಜ್ಯದ ಜನತೆ ಅಲ್ಲಿಯ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತು ತಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂಬ ಬೇಡಿಕೆ ಇಟ್ಟಿದ್ದರು' ಎಂದು ಹೇಳಿದರು.

`ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಮನುಷ್ಯರಿಗೆ ಬೆಲೆ ಕಡಿವೆುಯಾಗಿದ್ದು, ಉಳಿದೆಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರಕ್ಕೆ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕೆ ಇರಲಿಲ್ಲ. ಈಗಿನ ಕೇಂದ್ರ ಸರ್ಕಾರ ರೂ. 5.50 ಲಕ್ಷ ಕೋಟಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದೆ' ಎಂದು ದೂರಿದರು.`ಸಚಿವ ಎಸ್.ಕೆ. ಬೆಳ್ಳುಬ್ಬಿ ಸಜ್ಜನ ರಾಜಕಾರಣಿ. ಭ್ರಷ್ಟಾಚಾರದ ಯಾವ ಕಳಂಕವೂ ಅವರಿಗಿಲ್ಲ. ಆ ಕಾರಣಕ್ಕಾಗಿಯೇ ನಾನು ಅವರಿಗೆ ಗೌರವ ನೀಡುತ್ತೇನೆ. ಬೆಳ್ಳುಬ್ಬಿ ಅವರು ಗೆದ್ದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಅವರು ಮತ್ತೆ ಸಚಿವರಾಗಲಿದ್ದಾರೆ' ಎಂದರು.ನಾವು ಹೊರಹಾಕಿಲ್ಲ: `ಯಡಿಯೂರಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದು ನಾವಲ್ಲ. ಅವರನ್ನು ನಾವು ಪಕ್ಷದಿಂದಲೂ ಹೊರಹಾಕಿಲ್ಲ. ಭ್ರಷ್ಟಾಚಾರದ ಆರೋಪದಲ್ಲಿ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಾದರೆ ಆ ವ್ಯಕ್ತಿ ಹುದ್ದೆ ತ್ಯಜಿಸಬೇಕು ಎಂಬುದು ಪಕ್ಷದ ಸಿದ್ಧಾಂತ. ಹಿಂದೆ ಆಧಾರ ರಹಿತ ಹವಾಲಾ ಹಗರಣದ ಆರೋಪ ಕೇಳಿ ಬಂದಾಗ ಅಡ್ವಾಣಿ ಅವರೂ ಪದತ್ಯಾಗ ಮಾಡಿದ್ದರು. ನೀವು ಕಳಂಕ ರಹಿತರಾಗಿ ಬನ್ನಿ, ನಿಮ್ಮನ್ನೇ ಮತ್ತೆ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಯಡಿಯೂರಪ್ಪ ಅವರಿಗೆ ಹೇಳಿದ್ದೆವು. ಆದರೆ, ಅವರು ಪಕ್ಷ ಬಿಟ್ಟು ಹೋಗಬಾರದಾಗಿತ್ತು' ಎಂದರು.ಗಲ್ಲು ಶಿಕ್ಷೆ: `ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬುದು ನಮ್ಮ ಪಕ್ಷದ ಬೇಡಿಕೆ. ಸಂಸತ್ ಅಧಿವೇಶನದಲ್ಲಿ ಈ ವಿಯಷವನ್ನೂ ಪ್ರಸ್ತಾಪಿಸುತ್ತೇವೆ' ಎಂದು ರಾಜನಾಥ ಸಿಂಗ್ ಹೇಳಿದರು.`ಸಾಧನೆ ಹೇಳಿ ಮತ ಕೇಳಿ'

ವಿಜಾಪುರ: `ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಅವರು ತಮ್ಮ ಅವಧಿಯಲ್ಲಿ ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ತಿಳಿಸಿ, ಆ ನಂತರ ಮತ ಕೇಳಲಿ' ಎಂದು ಬಸವನ ಬಾಗೇವಾಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಕೆ. ಬೆಳ್ಳುಬ್ಬಿ ಸವಾಲು ಹಾಕಿದರು.

ಬಸವನ ಬಾಗೇವಾಡಿಯಲ್ಲಿ ಸೋಮವಾರ ನಡೆದ ರಾಜನಾಥ ಸಿಂಗ್ ಅವರ ಪ್ರಚಾರ ಸಭೆಯಲ್ಲಿ ಮಾತನಾಡಿದರು.`ವಿಜಾಪುರ ನಗರ ಕ್ಷೇತ್ರದ ಟಿಕೆಟ್ ಕೊಡಬೇಕು ಎಂದು ಶಿವಾನಂದರು ಕಾಂಗ್ರೆಸ್ ಮುಖಂಡರ ದುಂಬಾಲು ಬಿದ್ದಿದ್ದರು. ವಿಜಾಪುರ ಟಿಕೆಟ್ ಕೊಡುವುದಿಲ್ಲ, ಬಸವನ ಬಾಗೇವಾಡಿಗೆ ಹೋಗು ಎಂದು ಹೇಳಿದ ನಂತರ ಇಲ್ಲಿಗೆ ಬಂದಿದ್ದಾರೆ. ನಾನು 35 ವರ್ಷಗಳಿಂದಲೂ ಜನತೆಯ ಮಧ್ಯೆ ಇದ್ದೇನೆ. ಸಂತೆ-ಜಾತ್ರೆಗೆ ಬಂದವರಿಗೆ ಮತ ನೀಡಬೇಡಿ' ಎಂದರು.`ಯಾವುದೋ ಒಬ್ಬನನ್ನು ಹಾರಹಾಕಿ ಬರಮಾಡಿಕೊಂಡ ಮಾತ್ರಕ್ಕೆ ಬಿಜೆಪಿ ಖಾಲಿಯಾಗಿದೆ ಎನ್ನುತ್ತಿದ್ದಾರೆ. ಬಿಜೆಪಿ ಖಾಲಿ ಆಗಿಲ್ಲ. ಕಾಂಗ್ರೆಸ್ ಸ್ಥಿತಿಯೇ ಶೋಚನೀಯವಾಗಿದೆ' ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)