ಗ್ರಾಮೀಣ ಪ್ರದೇಶಗಳಲ್ಲಿ ಈರುಳ್ಳಿ ಬೆಳೆ ಇಳಿಮುಖ

7

ಗ್ರಾಮೀಣ ಪ್ರದೇಶಗಳಲ್ಲಿ ಈರುಳ್ಳಿ ಬೆಳೆ ಇಳಿಮುಖ

Published:
Updated:

ಸಂತೇಬೆನ್ನೂರು: ಇಲ್ಲಿಗೆ ಸಮೀಪದ ಜಿಲ್ಲೆಯ ಗಡಿಭಾಗದ ಕೊರಟಿಕೆರೆ, ಚಿಕ್ಕಗಂಗೂರು, ಹಿರೇಗಂಗೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಈರುಳ್ಳಿ ಬೆಳೆಯುವ ರೈತರ ಸಂಖ್ಯೆ ತೀವ್ರ ಇಳಿಮುಖವಾಗಿದೆ. ದರ ಕುಸಿತ, ಕೃಷಿ ಕಾರ್ಮಿಕರ ಕೊರತೆ, ಮಳೆ ಅನಿಶ್ಚಿತತೆ, ದುಬಾರಿ ವೆಚ್ಚದಿಂದಾಗಿ ರೈತರು ಈರುಳ್ಳಿ ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಅದಕ್ಕೆ ಬದಲಾಗಿ ಮೆಕ್ಕೆಜೋಳ ಕೃಷಿಗೆ ರೈತರು ವಾಲಿದಿದ್ದಾರೆ.ಕಪ್ಪುಮಣ್ಣು ಸಾಂಪ್ರಾದಾಯಿಕವಾಗಿ ಈರುಳ್ಳಿ ಬೆಳೆಗೆ ಉತ್ತಮ. ಒಣ ಹವೆಯಲ್ಲೂ ಗೆಡ್ಡೆಗಳನ್ನು ಸುಲಭವಾಗಿ ಕಿತ್ತು ತೆಗೆಯುವ ಸ್ವಾಭಾವಿಕ ಮಣ್ಣಿನ ಗುಣ. ಉತ್ತಮ ಮಳೆಯಿಂದ ಈ ಭಾಗದ ಶೇ 70 ಭಾಗ ರೈತರು  ಈ ಬೆಳೆಯನ್ನು ಅಪ್ಪಿಕೊಂಡಿದ್ದರು. ಈ ಬಾರಿ ಬೆರಳೆಣಿಕೆಯಷ್ಟು ರೈತರು ಈರುಳ್ಳಿ ಬೆಳೆದಿದ್ದಾರೆ. ಉತ್ತಮ ಧಾರಣೆಯ ನಿರೀಕ್ಷೆಯಲ್ಲಿದ್ದಾರೆ. ಪಕ್ಕದ ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಉತ್ತಮ ಇಳುವರಿ ಪಡೆದು ರೈತರು ಯಶಸ್ಸು ಗಳಿಸಿದ್ದಾರೆ.ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಈರುಳ್ಳಿ ಬೀಜ ಬಿತ್ತನೆ ಮಾಡಲಾಗುತ್ತದೆ. ಡಿಎಪಿ ಗೊಬ್ಬರದೊಂದಿಗೆ ಬೀಜ ಮಿಶ್ರಣ ಮಾಡಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಈರುಳ್ಳಿ ಗೆಡ್ಡೆಗಳನ್ನು ತೆಗೆಯಲಾಗುತ್ತದೆ. ಬೆಲೆ ಏರಿಕೆಯ ಈ ಸಮಯದಲ್ಲಿ ಉತ್ತಮ ಧಾರಣೆ ಸಿಗುವುದರಿಂದ ಕೆಲ ರೈತರು ಈರುಳ್ಳಿ ಕೀಳುತ್ತಿದ್ದಾರೆ.ಸಾಮಾನ್ಯವಾಗಿ 1 ಎಕರೆಗೆ 50 ರಿಂದ 60 ಕ್ವಿಂಟಲ್‌ನಷ್ಟು ಇಳುವರಿ ನೀಡುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ರೂ 2 ರಿಂದ 3 ಸಾವಿರದ ಆಸುಪಾಸಿನಲ್ಲಿ ಬೆಲೆಯಿದೆ. ಅತಿವೃಷ್ಠಿಯಿಂದಾಗಿ ಶೀತ ಹೆಚ್ಚಾಗಿ ಈರುಳ್ಳಿ ಗೆಡ್ಡೆಗಳ ಗಾತ್ರ ತುಸು ಕಡಿಮೆ ಆಗಿದೆ.ಹಲವು ರೈತರು ಈರುಳ್ಳಿ ಬೆಳೆಯನ್ನು ಗೇಣಿದಾರರಿಗೆ ಗುತ್ತಿಗೆ ನೀಡಿದ್ದಾರೆ. ಇಲ್ಲವಾದರೆ 50 ಕೆ.ಜಿ.ಯ ಚೀಲದಲ್ಲಿ ತುಂಬಿಸಿ ಬೆಂಗಳೂರು ಮಾರುಕಟ್ಟೆಗೆ ಬಿಡಬೇಕು.ಈರುಳ್ಳಿ ಬೆಳೆಗೆ ನಿರ್ದಿಷ್ಟ ಬೆಲೆ ನಿಗದಿ ಪಡಿಸಬೇಕು. ಪೂರಕ ಭೌಗೋಳಿಕ ಅನುಕೂಲತೆಗಳಿದ್ದರೂ ಬೆಳೆಯಿಂದ ರೈತರು ವಿಮುಖರಾಗಿದ್ದಾರೆ.  ಕೃಷಿ ಇಲಾಖೆ ಈರುಳ್ಳಿ ಬೆಳೆಯಲು ರೈತರಿಗೆ ಪ್ರೋತ್ಸಾಹಿಸಬೇಕು ಎನ್ನುತ್ತಾರೆ ಕೊರಟಿಕೆರೆ ಗ್ರಾಮದ ರೈತರಾದ ಕೆ.ಜಿ. ಪರಮಶಿವಪ್ಪ, ರವಿ, ಕೆ.ಜಿ. ನವೀನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry