ಶುಕ್ರವಾರ, ನವೆಂಬರ್ 22, 2019
20 °C

ಗ್ರಾಮೀಣ ಪ್ರದೇಶದಲ್ಲಿ ಚುನಾವಣೆ ಸುಗ್ಗಿ

Published:
Updated:

ಚಿಕ್ಕಬಳ್ಳಾಪುರ: `ಚುನಾವಣೆ ಬಂದ್ರೆ ಸಾಕು, ಅದು ನಮ್ಮಂತಹವರ ಪಾಲಿಗೆ ಸುಗ್ಗಿಯಿದ್ದಂತೆ. ದೀಪಾವಳಿ, ಯುಗಾದಿ ಹಬ್ಬದಂತೆಯೇ ಚುನಾವಣೆಯು ಕೆಲವೇ ದಿನಗಳ ಹಬ್ಬವಾಗುತ್ತದೆ. ಹಬ್ಬದ ರಂಗೇರಿಸಲು ಚುನಾವಣಾ ಅಭ್ಯರ್ಥಿಗಳು ನಮ್ಮ ನಮ್ಮ ಗ್ರಾಮಗಳಿಗೆ ಬಂದು ಮತಯಾಚನೆ ಮಾಡುವುದಲ್ಲದೇ ಭರವಸೆಗಳ ಹೊಳೆಯನ್ನೇ ಹರಿಸುತ್ತಾರೆ. ಅವರ ಮಾತಿಗೆ ಕೆಲವರು ಮರುಳಾದರೆ, ಇನ್ನೂ ಕೆಲವರು ಅವರನ್ನ ಪ್ರಶ್ನಿಸಿ ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಕೆಲವೇ ದಿನಗಳ ಈ ಚುನಾವಣೆ ಹಬ್ಬ ಸಂತೋಷ, ಸಂಭ್ರಮವಲ್ಲದೇ ಪ್ರಮುಖರ ಅಗ್ನಿಪರೀಕ್ಷೆಗೂ ಕಾರಣವಾಗುತ್ತದೆ'.ಹೀಗೆ ಮನಬಿಚ್ಚಿ ಮಾತನಾಡಿದವರು ಶಿಡ್ಲಘಟ್ಟ ತಾಲ್ಲೂಕಿನ ತಾತಹಳ್ಳಿ ಗ್ರಾಮಸ್ಥರು. ಚುನಾವಣೆ ಪ್ರಕ್ರಿಯೆ ಆರಂಭಗೊಂಡ ದಿನದಿಂದ ಗ್ರಾಮೀಣ ಪ್ರದೇಶದ ಚಿತ್ರಣವೇ ಬದಲಾಗಿದೆ. ಬರಗಾಲ, ಸಾಲ, ತೋಟ, ಹೊಲಗದ್ದೆ ಮುಂತಾದ ವಿಷಯಗಳನ್ನು ಮಾತ್ರವೇ ಮಾತನಾಡುತ್ತಿದ್ದ ಗ್ರಾಮಸ್ಥರ ಈಗ ಚುನಾವಣೆ ವಿಷಯಗಳನ್ನೇ ಅಷ್ಟೇ ಮಾತನಾಡುತ್ತಿದ್ದಾರೆ.`ಆ ಪಕ್ಷದೋರು ನಾಳೆ ಬರ‌್ತಾರಂತೆ, ಈ ಪಕ್ಷದೋರು ಈಗಲೇ ಬರ‌್ತಾರಂತೆ' ಎಂದು ಶುರುವಾಗುವ ಅವರ ಮಾತು ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದವರೆಗೂ ಮುಂದುವರೆಯುತ್ತದೆ.ಬೆಳಿಗ್ಗೆ ಮತ್ತು ಸಂಜೆ ಹೊತ್ತು ಚಹಾ-ಕಾಫಿ ಅಂಗಡಿ ಅಥವಾ ಕಿರಾಣಿ ಅಂಗಡಿ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವ ಗ್ರಾಮಸ್ಥರು ಸದ್ಯದ ಸ್ಥಿತಿಯಲ್ಲಿ ಚುನಾವಣೆ ಹೊರತುಪಡಿಸಿದರೆ, ಬೇರೆ ವಿಷಯಗಳತ್ತ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. `ಕಳೆದ ಸಲದ ಚುನಾವಣೆಯಿಂದ ಈಗಿನ ಚುನಾವಣೆಯ ವರೆಗೂ ಏನೇನೂ ಆಯಿತು' ಎಂದು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮತ್ತು ಅವಲೋಕನ ಮಾಡುತ್ತಿರುವ ಗ್ರಾಮಸ್ಥರು `ಚುನಾವಣಾ ಕಣದಲ್ಲಿ ಇರುವವರ ಪೈಕಿ ಯಾರು ಹಿತವರು' ಎಂಬುದರ ಬಗ್ಗೆ ಗಹನವಾದ ಚರ್ಚೆ ನಡೆಸುತ್ತಿದ್ದಾರೆ.`ನಮ್ಮ ಗ್ರಾಮವು ಶಿಡ್ಲಘಟ್ಟ ಪಟ್ಟಣದಿಂದ ಸುಮಾರು ಹತ್ತು ಕಿ.ಮೀ.ಗಳಷ್ಟು ದೂರದಲ್ಲಿದೆ. ಸರಿಯಾದ ಬಸ್ ಸೌಕರ್ಯವಿಲ್ಲ. ಬಸ್ ಹತ್ತಬೇಕಿದ್ದರೆ, ಸಮೀಪದ ಊರಿಗೆ 2 ಅಥವಾ 3 ಕಿ.ಮೀ. ನಡೆಯಬೇಕು.ಒಂದರ್ಥದಲ್ಲಿ ತಾಲ್ಲೂಕು ಕೇಂದ್ರದ ಜೊತೆಗೆ ಅಲ್ಪಸ್ವಲ್ಪ ಸಂಪರ್ಕ ಹೊಂದಿರುವ ನಮ್ಮಂತಹ ಗ್ರಾಮಸ್ಥರಿಗೆ ಚುನಾವಣೆಯೆಂದರೆ ಸುಗ್ಗುಯಿದ್ದಂತೆ. ಪ್ರಚಾರದ ನೆಪದಲ್ಲಿ ಚುನಾವಣಾ ಅಭ್ಯರ್ಥಿಗಳು ನಮ್ಮ ಗ್ರಾಮಕ್ಕೆ ಭೇಟಿ ನೀಡುವುದೇ ಸಂಭ್ರಮಕ್ಕೆ ಕಾರಣವಾಗುತ್ತದೆ. ಯಾವುದೇ ಪಕ್ಷದ ಅಭ್ಯರ್ಥಿ ಅಥವಾ ಪಕ್ಷೇತರರು ಬಂದರೂ ನಮ್ಮ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸೇರುತ್ತಾರೆ' ಎಂದು ಗ್ರಾಮಸ್ಥ ವೆಂಕಟೇಶ್ `ಪ್ರಜಾವಾಣಿ'ಗೆ ತಿಳಿಸಿದರು.

`ಚುನಾವಣೆ ಸಂದರ್ಭದಲ್ಲಿ ಪ್ರಚಾರ ಮತ್ತು ಓಡಾಟದ್ದೇ ನೆಪವಾಗಿಸಿಕೊಂಡು ಕೆಲಸ ಕಾರ್ಯ ಗಳಿಂದ ದೂರ ಉಳಿಯುತ್ತಾರೆ.ಕೂಲಿ ಮಾಡುವುದರಿಂದ ಪ್ರತಿ ದಿನ ಸಿಗುವಷ್ಟೇ ಹಣವನ್ನೇ ಚುನಾವಣೆಯಲ್ಲಿ ಗಳಿಸುವಾಗ, ಅವರು ಯಾಕೆ ಕೆಲಸ ಮಾಡಲು ಬರುತ್ತಾರೆ? ಕೂಲಿ ಕಾರ್ಮಿಕರಿಲ್ಲದೇ ನಮ್ಮ ಹೊಲಗದ್ದೆ ಮತ್ತು ತೋಟದ ಕೆಲಸಗಳಿಗೆ ತೊಂದರೆಯಾಗುತ್ತದೆ. ನಾವು ಚುನಾವಣೆ ವೇಳೆ ಅವರಿಗೆ ಅಲ್ಪಸ್ವಲ್ಪ ರಿಯಾಯಿತಿ ನೀಡುತ್ತೇವೆ. ಚುನಾವಣೆಯಲ್ಲಿ ದುಡಿದಿದ್ದು ಸ್ವಲ್ಪ ದಿನವಾದರೂ ನಮ್ಮ ಕೈಯಲ್ಲಿ ಇರುತ್ತದೆ. ನಂತರ ಕಷ್ಟದ ದಿನಗಳು ಇದ್ದೇ ಇರುತ್ತವೆ' ಎಂದು ಅವರು ತಿಳಿಸಿದರು.ಗ್ರಾಮೀಣ ಪ್ರದೇಶದ ಈ ಸ್ಥಿತಿ ಶಿಡ್ಲಘಟ್ಟ ತಾಲ್ಲೂಕಿನ ತಾತಹಳ್ಳಿ ಗ್ರಾಮಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು ಮತ್ತು ಬಾಗೇಪಲ್ಲಿ ತಾಲ್ಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಇಂತಹದ್ದೇ ವಾತಾವರಣ ಕಂಡು ಬರುತ್ತಿದೆ. `ಬೇಸಿಗೆಗಾಲದಲ್ಲಿ ಮಳೆಯೂ ಆಗಲ್ಲ, ಕೃಷಿ ಚಟುವಟಿಕೆಯೂ ಹೆಚ್ಚು ಇರಲ್ಲ. ಇಂತಹ ಸಂದರ್ಭದಲ್ಲೇ ಚುನಾವಣೆ ನಡೆಯುತ್ತಿ ರುವುದು ಕೆಲ ಗ್ರಾಮಸ್ಥರ ಪಾಲಿಗೆ ವರದಾನವಾಗಿ ಮಾರ್ಪಟ್ಟಿದೆ.ಚುನಾವಣೆ ಕೆಲಸ ಮಾಡಿಕೊಂಡು ಗ್ರಾಮಸ್ಥರು ಅಲ್ಪಸ್ವಲ್ಪ ಹಣ ಗಳಿಸಿದರೂ ತಮ್ಮ ನಿಷ್ಠೆಯನ್ನು ಮಾತ್ರ ಎಂದಿಗೂ ಬಿಟ್ಟುಕೊಡುವುದಿಲ್ಲ. ಯಾರು ಎಷ್ಟೇ ಆಸೆ-ಆಮಿಷ ಒಡ್ಡಿದ್ದರೂ ಕ್ಷೇತ್ರದ ಪರವಾಗಿ ಕಾಳಜಿ ಮತ್ತು ಕಳಕಳಿಯುಳ್ಳ ಅಭ್ಯರ್ಥಿಯ ಪರವಾಗಿಯೇ ಅವರು ಮತ ಚಲಾಯಿಸುತ್ತಾರೆ' ಎಂದು ಗ್ರಾಮಸ್ಥ ವೆಂಕಟೇಶ್ ತಿಳಿಸಿದರು.

ಪ್ರತಿಕ್ರಿಯಿಸಿ (+)