ಭಾನುವಾರ, ಜೂನ್ 20, 2021
21 °C

ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: `ಜನರ ಆರೋಗ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ~ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ. ಈಶ್ವರ್ ವಿಷಾದಿಸಿದರು.ಪಟ್ಟಣದ ಗುರುಭವನದಲ್ಲಿ ಮಂಗಳವಾರ ಕರ್ನಾಟಕ ಆರೋಗ್ಯ ವ್ಯವಸ್ಥೆ ಮತ್ತು ಸುಧಾರಣಾ ಯೋಜನೆ ಹಾಗೂ ಉದ್ಭವ್ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಜನಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮಗಳ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಯೋಜನೆ ಮಹತ್ವದ ಯೋಜನೆಯಾಗಿದೆ. ಜನತೆ ಇದರ ಮಹತ್ವ ಅರಿಯದಿರುವುದು ಮತ್ತು ಇಚ್ಛಾಶಕ್ತಿಯ ಕೊರತೆಯಿಂದ  ಅನೇಕ ಗ್ರಾಮಗಳು ಅಭಿವೃದ್ಧಿಯಿಂದ ವಂಚಿತವಾಗಿದೆ. ಆದ್ದರಿಂದ ಗ್ರಾಮೀಣ ಜನತೆ ಸಹಭಾಗಿತ್ವದಿಂದ ಮಾತ್ರ ಉತ್ತಮ ಕೆಲಸ ನಿರ್ವಹಿಸಲು ಸಾಧ್ಯ ಎಂದರು.ಉದ್ಭವ್ ಸಂಸ್ಥೆ ಅಧ್ಯಕ್ಷೆ ಚಂದ್ರಕಲಾಬಾಯಿ ಪ್ರಸ್ತಾವಿಕ ಭಾಷಣ ಮಾಡಿ, ಆರೋಗ್ಯ ವ್ಯವಸ್ಥೆ ಮತ್ತು ಸುಧಾರಣಾ ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲೇ ಚಾಮರಾಜನಗರ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.ಧನಗೆರೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸುವರ್ಣ ಮಾತನಾಡಿ, ಗ್ರಾಮದಲ್ಲಿ ಜನತೆಗೆ ಪೂರೈಸುವ ನೀರಿನಲ್ಲಿ ಹುಳುಗಳು ಕಂಡುಬರುತ್ತಿವೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು. ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಧುವನಹಳ್ಳಿ ಇಂದ್ರಮ್ಮ ಅವರು ಸಾಮೂಹಿಕ ಶೌಚಾಲಯ ನಿರ್ಮಿಸಲು ಮನವಿ ಮಾಡಿದರು.ಲೊಕ್ಕನಹಳ್ಳಿ ಸೇಬಿನಕೋಬೆಯಲ್ಲಿ ಕಳೆದ 20 ವರ್ಷಗಳಿಂದ ಗುಡಿಸಿಲಿನಲ್ಲಿ ಮಣ್ಣಿನ ನೆಲದ ಮೇಲೆ 30 ಅಂಗನವಾಡಿ ಮಕ್ಕಳನ್ನು ಪೋಷಿಸಲಾಗುತ್ತಿದೆ. ಯಾರೊಬ್ಬರೂ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಈವರೆಗೆ ಮುಂದಾಗಿಲ್ಲ ಕೂಡಲೇ ಅಂಗನವಾಡಿ ನಿರ್ಮಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಒತ್ತಾಯಿಸಿದರು.ಪಿ.ಜಿ.ಪಾಳ್ಯ, ಕಾಮಗೆರೆ, ಉಯಿಲನತ್ತ ಇತರೆ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಮಹಿಳೆಯರು ಒತ್ತಾಯಿಸಿದರು.ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವಸ್ವಾಮಿ, ತಾಲ್ಲೂಕು ಆರೋಗ್ಯ ಅಧಿಕಾರಿ ರಮೇಶ್ ಮಹಿಳೆಯರ ಪ್ರಶ್ನೆಗಳಿಗೆ ಸೂಕ್ತ ಕ್ರಮದ ಭರವಸೆ ನೀಡಿದರು.ತಾ.ಪಂ.ಅಧ್ಯಕ್ಷೆ ನಾಗಲಾಂಬಿಕ, ತಾ.ಪಂ.ಉಪಾಧ್ಯಕ್ಷ ಮಲ್ಲಯ್ಯ, ಸದಸ್ಯ ಮುರಳಿ, ಸತ್ಯವತಿ, ಡಾ.ಮಹಾದೇವಸ್ವಾಮಿ, ಶಿವಮಲ್ಲು, ಪ್ರಭಾವತಿ, ಮೆಹಬೂಬ್‌ಖಾನ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.