ಗ್ರಾಮೀಣ ಮಹಿಳೆಯರಿಗೆ ಪ್ರೋತ್ಸಾಹ ನೀಡಲು ಸಲಹೆ

ಗುರುವಾರ , ಜೂಲೈ 18, 2019
24 °C

ಗ್ರಾಮೀಣ ಮಹಿಳೆಯರಿಗೆ ಪ್ರೋತ್ಸಾಹ ನೀಡಲು ಸಲಹೆ

Published:
Updated:

ಶಿವಮೊಗ್ಗ: ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ಸಾಹಿತ್ಯ ರಚನೆಗೆ ವೇದಿಕೆ ಒದಗಿಸಿ, ಪ್ರೋತ್ಸಾಹ ನೀಡಬೇಕು ಎಂದು ಅನುಪಮಾ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪ್ರೇಮಾಭಟ್ ಹೇಳಿದರು.

ನಗರದ ಕರ್ನಾಟಕ ಸಂಘ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮಾಂತರ ಪ್ರದೇಶದಲ್ಲಿ ಮಹಿಳೆಯರು ಓದುವುದು ಕಡಿಮೆ. ಓದಿದರೂ ಉನ್ನತ ಶಿಕ್ಷಣ ಪಡೆಯುವುದು ಮತ್ತೂ ಕಡಿಮೆ. ಆದರೂ ಅವರು ಪ್ರತಿಭಾನ್ವಿತರು. ಅವರಿಗೆ ಸಾಹಿತ್ಯ ರಚನೆಗೆ, ಅವರ ಸಂವೇದನೆಯ ಅಭಿವ್ಯಕ್ತಿಗೆ ವೇದಿಕೆ ಕಲ್ಪಿಸಿಕೊಡುವ ಕಾರ್ಯವನ್ನು ಸಂಘ ಮಾಡಬೇಕು ಎಂದು ತಿಳಿಸಿದರು.ಜಾನಪದ ಸಾಹಿತ್ಯ, ಶಿಷ್ಠ ಸಾಹಿತ್ಯಕ್ಕೆ ಗರ್ಭಕೋಶ ಇದ್ದಂತೆ. ಜಾನಪದ ಸಾಹಿತ್ಯದ ಜೀವಾಳ ಗ್ರಾಮೀಣ ಜೀವನ. ಆದ್ದರಿಂದ ಕೇವಲ ಶಿಷ್ಠ ಸಾಹಿತ್ಯಕ್ಕೆ ಪ್ರಾಮುಖ್ಯತೆ ನೀಡದೆ ಜಾನಪದ ಸಾಹಿತ್ಯಕ್ಕೂ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.ಸಾಹಿತ್ಯದ ಕೆಲಸಗಳ ಹೊರತಾಗಿಯೂ ಸಮಾಜಮುಖಿ ಚಿಂತನೆಗಳಲ್ಲಿ ಸಂಘ ಕಾರ್ಯನಿರ್ವಹಣೆ ಮಾಡಬೇಕು. ಮಹಿಳೆಯರ ಮೇಲಿನ ಶೋಷಣೆ ವಿರುದ್ಧ ದನಿ ಎತ್ತುವ, ಹೋರಾಟ ನಡೆಸುವ ಕೆಲಸವನ್ನು  ಮಾಡಬೇಕು ಎಂದರು.ಕವಯತ್ರಿ ಡಾ.ಕೆ.ಷರೀಫಾ ಮಾತನಾಡಿ, ಮಹಿಳಾ ಸಾಹಿತ್ಯ ಕೇವಲ ಅಡಿಗೆ ಮನೆಗೆ ಸೀಮಿತವಾಗಿಲ್ಲ. ಅದರಾಚೆ ಚಿಂತನೆ, ವಿಶ್ಲೇಷಣೆ, ಸ್ಪಂದನೆಗಳನ್ನು ಒಳಗೊಂಡಿದೆ. ಸಮಕಾಲೀನ ಮಹಿಳೆಯರ ತಲ್ಲಣಗಳ ದಾಖಲೆಗಳನ್ನೂ ಮಾಡಿದೆ. ಲೇಖಕಿಯರು ಸಮಾಜದ ಒಪ್ಪಿತ ಮೌಲ್ಯಗಳನ್ನು ಪ್ರಶ್ನಿಸಿ ಬರೆಯುತ್ತಿದ್ದಾರೆ. ಆದ್ದರಿಂದ ಸ್ತ್ರೀವಾದಿ ಸಾಹಿತ್ಯವನ್ನು ಓದುಗರು ವಿಮರ್ಶಕರು ಗಂಭೀರವಾಗಿ ಪರಿಗಣಿಸಬೇಕು ಎಂದರು.ಲೇಖಕಿ ಡಾ.ಎಲ್.ಸಿ.ಸುಮಿತ್ರಾ ಮಾತನಾಡಿ, ಹಿಂದೆ ಹಿರಿಯ ಲೇಖಕಿಯರಿಗೆ ಕೃತಿ ಪ್ರಕಟಣೆಗೆ ಸಂಕಷ್ಟದ ವಾತಾವರಣ ಇತ್ತು. ಆದರೆ, ಇಂಟರ್‌ನೆಟ್, ಬ್ಲಾಗ್ ತಂತ್ರಜ್ಞಾನ ಇದ್ದರೂ ಹಲವು ಲೇಖಕಿಯರಿಗೆ ತಮ್ಮ ಕೃತಿಗಳನ್ನು ಪ್ರಕಟಿಸಲು ತೊಂದರೆ ಆಗುತ್ತಿದೆ. ಇದಕ್ಕೆ ಕಾರಣಗಳನ್ನು ವಿಶ್ಲೇಷಿಸಬೇಕಿದೆ. ಈ ಮೂಲಕ ಯುವಲೇಖಕಿಯರ ಬರವಣಿಗೆಗೆ ಪ್ರೋತ್ಸಾಹಿಸಬೇಕಿದೆ ಎಂದು ಹೇಳಿದರು.ಲೇಖಕಿಯರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಎಸ್.ವಿ.ಚಂದ್ರಕಲಾ, ಮಲೆನಾಡು ಹೆಬ್ಬಾಗಿಲಾಗಿರುವ ಶಿವಮೊಗ್ಗದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಆಸಕ್ತಿ ಉಳ್ಳವರು ಹೆಚ್ಚಾಗುತ್ತಿದ್ದಾರೆ. ಹೆಚ್ಚಿನ ಮಹಿಳೆಯರು ಸಾಹಿತ್ಯ ರಚನೆಯ ಬಗ್ಗೆ ಅಭಿರುಚಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಅವರಿಗೆ ಅವಕಾಶಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸಂಘದ ಶಾಖೆ ಜಿಲ್ಲೆಗೆ ತರಲಾಗಿದೆ ಎಂದು ಹೇಳಿದರು.ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಎಸ್.ವಿ.ತಿಮ್ಮಯ್ಯ, ರಾಜ್ಯ ಲಲಿತಕಲಾ ಅಕಾಡೆಮಿ ಸದಸ್ಯೆ ಕಾತ್ಯಾಯನಿ ಉಪಸ್ಥಿತರಿದ್ದರು. ಸಂಘದ ಸದಸ್ಯೆ ಮಂಜುಳಾ ಮೋಹನ್  ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry