ಬುಧವಾರ, ಜೂನ್ 16, 2021
26 °C
ಮಹಿಳಾ ದಿನದ ವಿಶೇಷ: ಸ್ವಾವಲಂಬನೆಯ ಹಾದಿಯಲ್ಲಿ ವಿನೂತನ ಪ್ರಯೋಗ

ಗ್ರಾಮೀಣ ಯುವತಿಯರ ಉದ್ಯೋಗ ಪರ್ವ

ಪ್ರಜಾವಾಣಿ ವಾರ್ತೆ/ ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಅಲ್ಲಿ ಕೆಲಸ ಮಾಡುವವರಲ್ಲಿ ಬಹು­ತೇಕರು ಹೆಚ್ಚು ಓದಿದವರಲ್ಲ. ಎಸ್ಸೆಸ್ಸೆಲ್ಸಿವರೆಗೆ ಮಾತ್ರ ಓದಿದವರಾದರೂ, ಅವರೆಲ್ಲ ಕಂಪ್ಯೂ­ಟರ್ ಮೂಲಕ ಕೆಲಸ ಮಾಡುತ್ತ, ಇಂಗ್ಲಿಷ್‌ ಬಲ್ಲವರಾಗಿದ್ದಾರೆ. ಮೇಲಾಗಿ ಅವರೆಲ್ಲ ಗ್ರಾಮೀಣ ಪ್ರದೇಶದ ಮೂಲದ ಯುವತಿಯರೇ ಆಗಿದ್ದು, ಉತ್ತಮ ಸಂಬಳ ಪಡೆಯುತ್ತ ಗೌರವಯುತ ಜೀವನ ನಡೆಸುತ್ತಿದ್ದಾರೆ.ಇದಕ್ಕೆ ಕಾರಣವಾಗಿದ್ದು ಜಿಲ್ಲೆಯ ತೋರಣಗಲ್‌ನಲ್ಲಿರುವ ಜೆಎಸ್‌ಡಬ್ಲ್ಯೂ ಪ್ರತಿಷ್ಠಾನದ ಡೇಟಾ ಹಳ್ಳಿ ಬಿಪಿಒ (ಬಿಸಿನೆಸ್‌ ಪ್ರಾಸೆ್ಔಟ್‌ಸೋರ್ಸಿಂಗ್).ಬೆಂಗಳೂರು ಮತ್ತಿತರ ಮಹಾನಗರಗಳಲ್ಲಿನ ಬಿಪಿಒಗಳಲ್ಲಿ ಉನ್ನತ ವ್ಯಾಸಂಗ ಮಾಡಿದ ಯುವತಿಯರು ಹಗಲು– ರಾತ್ರಿ ಪಾಳಯದಲ್ಲಿ ದುಡಿಯುವುದು ಸಾಮಾನ್ಯ. ಆದರೆ, ಈ ಸಂಸ್ಥೆ ಆ ಭಾವನೆಯನ್ನು ದೂರವಾಗಿಸಿ, ಅಪ್ಪಟ ಗ್ರಾಮೀಣ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸಿದ್ದು, ತೋರಣಗಲ್‌ ಸುತ್ತಮುತ್ತಲಿನ ಗ್ರಾಮಗಳ ಯುವತಿಯರು ಸ್ವಾಭಿಮಾನಿ ಜೀವನ ನಡೆಸಲು ನೆರವಾಗಿದೆ.ಕನಿಷ್ಠ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯಿರುವ ಹಳ್ಳಿಯ ಯುವತಿಯರಿಗೆ ಕಂಪ್ಯೂಟರ್  ತರಬೇತಿ ನೀಡಿ, ಉದ್ಯೋಗ ಒದಗಿಸಿದೆ.

ಹತ್ತಾರು ಹಳ್ಳಿಗಳ 150ಕ್ಕೂ ಅಧಿಕ ಯುವತಿಯರು ತಿಂಗಳಿಗೆ ಕನಿಷ್ಠ ₨ 4500ರಿಂದ  ₨ 6500 ಸಂಬಳ ಪಡೆಯುತ್ತಿದ್ದು, ತಮ್ಮತಮ್ಮ ಕುಟುಂಬಕ್ಕೆ ನೆರವಾಗುವಂತಾಗಿದೆ.ಜೆಎಸ್‌ಡಬ್ಲ್ಯೂ ಪ್ರತಿಷ್ಠಾನದ ಮುಖ್ಯಸ್ಥೆ ಸಂಗೀತಾ ಜಿಂದಾಲ್ ಅವರ ಕನಸಿನ ಕೂಸಾಗಿ ಹೊರಹೊಮ್ಮಿರುವ ಈ ಸಂಸ್ಥೆ, ಜೆಎಸ್‌ಡಬ್ಲ್ಯೂ ಸ್ಟೀಲ್‌ ಕಂಪೆನಿಯ ಕಾರ್ಪೋರೇಟ್‌ ಸೋಸಿಯಲ್‌ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್‌) ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತ, ಸುತ್ತಮುತ್ತಲಿನ ಹಳ್ಳಿಗಳ ಯುವತಿಯರಿಗೆ ಉದ್ಯೋಗ ನೀಡಿದೆ.ಇಂಗ್ಲಿಷ್ ಮೇಲೆ ಸಂಪೂರ್ಣ ಹಿಡಿತ ಇಲ್ಲದಿದ್ದರೂ ಓದಲು, ಬರೆಯಲು ಬರುವ ಗ್ರಾಮೀಣ ಯುವತಿಯರಿಗೆ ಒಂದೂವರೆ ತಿಂಗಳ ಕಾಲ ತರಬೇತಿ ನೀಡಿ, ಅಣಿಗೊಳಿಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ನಂತರ ಮದುವೆಯಾಗಿ, ಗಂಡನ ಮನೆ  ಸೇರುತ್ತಿದ್ದವರಿಗೆ ಸ್ವಯಂ ಉದ್ಯೋಗ ಕಲ್ಪಿಸಿ, ಸ್ವಾಭಿಮಾನೀ ಜೀವನ ನಡೆಸುವುದಕ್ಕೆ ನೆರವಾಗಿರುವ ಈ ಬಿಪಿಓದಲ್ಲಿ ಅಂತರ್ಜಾಲದ ಸಂಪರ್ಕದೊಂದಿಗೆ ದೇಶ– ವಿದೇಶದ ವಿವಿಧ ಕಂಪೆನಿಗಳ ವಹಿವಾಟಿನ ಕುರಿತ ಮಾಹಿತಿ, ವಿವರಣೆ ಒಟ್ಟುಗೂಡಿಸುವ ಕೆಲಸವನ್ನು ಹಳ್ಳಿಯ ಈ ಯುವತಿಯರು ಮಾಡುತ್ತಿದ್ದಾರೆ.ತೋರಣಗಲ್ಲು, ಕುರೇಕುಪ್ಪ, ಬಸಾಪುರ, ತಾಳೂರು, ವಡ್ಡು, ಬಂಡಿಹಟ್ಟಿ, ಗಾದಿಗನೂರು, ಸುಶೀಲನಗರ, ಭುವನಹಳ್ಳಿ, ತಾರಾನಗರ ಮತ್ತಿತರ ಗ್ರಾಮಗಳ ಯುವತಿಯರು ಬೆಳಿಗ್ಗೆ 7.30, 8.30 ಮತ್ತು 9.30ಕ್ಕೆ ಆರಂಭವಾಗಿ, ಸಂಜೆ 6ಕ್ಕೆ ಕೊನೆಗೊಳ್ಳುವ 3 ಪಾಳೆಯಗಳಲ್ಲಿ ದುಡಿಯುತ್ತಿದ್ದಾರೆ.ಇವರನ್ನು ಮನೆಯಿಂದ ಕರೆ ತರಲು, ವಾಪಸ್ ಕಳುಹಿಸಲು ಪ್ರತ್ಯೇಕ ವಾಹನ ವ್ಯವಸ್ಥೆ ಇದ್ದು, ಅನೇಕ ಯುವತಿಯರು ಜೀವನ ರೂಪಿಸಿಕೊಂಡಿದ್ದಾರೆ.‘ಈ ಸಂಸ್ಥೆಯಿಂದ ಸಾಕಷ್ಟು ಸಹಾಯವಾ­ಗಿದ್ದು, ತಮ್ಮ, ತಂಗಿಗೆ ವಿದ್ಯಾಭ್ಯಾಸ ಕೊಡಿಸಲೂ ನನಗೆ ಸಾಧ್ಯವಾಗಿದೆ. ಇಂಗ್ಲಿಷ್‌, ಕಂಪ್ಯೂಟರ್‌ ಜ್ಞಾನ ದೊರತಿರುವುದರಿಂದ ದೇಶದ ಯಾವುದೇ ಭಾಗದಲ್ಲೂ ಕೆಲಸ ನಿರ್ವಹಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿದೆ. ಮುಖ್ಯವಾಗಿ ಧೈರ್ಯ ಬಂದಿದೆ’ ಎಂದು ಕಳೆದ ಏಳೂವರೆ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗಾದಿಗನೂರಿನ 25ರ ತರುಣಿ ಹಾವಮ್ಮ ಹೆಮ್ಮೆಯಿಂದ ಹೇಳುತ್ತಾರೆ.‘ಗೌರವಯುತವಾದ ಕೆಲಸದ ಜತೆಗೆ ನಮಗೆ ನೀಡುವ ಯೋಗ ತರಬೇತಿಯಿಂದ ವ್ಯಕ್ತಿತ್ವ ವಿಕಸನಕ್ಕೆ ಸಾಕಷ್ಟು ಸಹಾಯವಾಗಿದ್ದು, ಏಕತಾನತೆಯಿಂದ ಹೊರ ಬರಲು ಇಲ್ಲಿ ನಡೆ­ಯುವ ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆ­ಗಳೂ ನೆರವಾಗಿವೆ’ ಎಂದೂ ಅವರು ತಿಳಿಸುತ್ತಾರೆ.‘ಎಸ್ಸೆಸ್ಸೆಲ್ಸಿ ನಂತರ ಮುಂದೆ ಏನು ಮಾಡಬೇಕು ಎಂಬುದೇ ಪ್ರಶ್ನೆಯಾಗಿದ್ದಾಗ. ಸಂಸ್ಥೆ ಹೊಸ ಬೆಳಕಾಗಿ ಕಂಡಿತು. ಇಲ್ಲಿ ಕೆಲಸಕ್ಕೆ ಸೇರಿದ ನಂತರ ಜೀವನ ಕ್ರಮವೇ  ಬದಲಾಗಿದ್ದು, ಸಹನೆ, ಹೊದಾಣಿಕೆಯ ಗುಣಗಳೂ ಮೇಳೈಸಿವೆ. ಏಕಾಗ್ರತೆ, ಮಾತನಾಡುವ ಕಲೆ, ನಾಯಕತ್ವದ ಗುಣಗಳು ಇಲ್ಲಿಂದಲೇ ರೂಢಿಯಾಗಿವೆ’ ಎಂಬುದು ಸಂಸ್ಥೆಯಲ್ಲಿ ಆರು ವರ್ಷಗಳಿಂದ ಕೆಲಸ ಮಾಡುತ್ತ, ‘ಟೀಮ್‌ ಲೀಡರ್‌’  ಆಗಿರುವ ತೋರಣಗಲ್ ಗ್ರಾಮದ 24ರ ಹರೆಯದ ಎಂ.ಲಕ್ಷ್ಮಿ ಅವರ ಅಭಿಪ್ರಾಯ.ಗ್ರಾಮೀಣ ಯುವತಿಯರಿಗೆ ಉದ್ಯೋಗ ಕಲ್ಪಿಸಿ, ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯ ಸಾಧನೆಯನ್ನು ಪರಿಗಣಿಸಿ, ಅಮೆರಿಕಾದ ಗ್ಲೋಬಲ್ ಸೋರ್ಸಿಂಗ್ ಕೌನ್ಸಿಲ್, 2013ನೇ ಸಾಲಿನಲ್ಲಿ ‘ಎಸ್ಆರ್ಎಸ್ ಛಾಯ್ಸ್’ ಪ್ರಶಸ್ತಿ ನೀಡಿದೆ. ನೆಸ್ಕಾಂ ಸಂಸ್ಥೆಯು ಕಂಪೆನಿಯ ಸಿಎಸ್‌ಆರ್ ಚಟುವಟಿಕೆಯ ಭಾಗವಾಗಿರುವ ಈ ಸಂಸ್ಥೆಯ ಕಾರ್ಯ ವೈಖರಿ ಮೆಚ್ಚಿ ಪ್ರಸಕ್ತ ಸಾಲಿನ ಪ್ರಶಸ್ತಿ ನೀಡಿ ಗೌರವಿಸಿದೆ. ಹಳ್ಳಿಯ ಹುಡುಗಿಯರಿಗೂ ಉತ್ತಮ ಜೀವನಕ್ಕೆ ಆಸರೆಯಾಗಿರುವ ಸಂಸ್ಥೆಯಲ್ಲಿ ಕೆಲಸ ಮಾಡುವವರು ಹೆಮ್ಮೆಯ ಪ್ರತೀಕವಾಗಿದ್ದಾರೆ ಎಂದು ಬಿಪಿಓದ ಉಸ್ತುವಾರಿ ವಹಿಸಿಕೊಂಡಿ­ರುವ ಶೈಲಾ ಲೋಬೋ ಹೇಳುತ್ತಾರೆ.ಇಲ್ಲಿ ಕೆಲಸ ಮಾಡುತ್ತಿರುವ ಯುವತಿಯರು ಆರ್ಥಿಕವಾಗಿ ಸಬಲರಾಗುವಂತೆ ಮಾಡಿರುವ ಸಂಸ್ಥೆ, ಅವರೆಲ್ಲರಿಗೂ ಸಾಮಾಜಿಕ ಭದ್ರತೆ ಒದಗಿಸಿದ್ದು, ಭವಿಷ್ಯನಿಧಿ, ಜೀವ ವಿಮೆ, ಆರೋಗ್ಯ ವಿಮೆ ಸೌಲಭ್ಯವನ್ನೂ ಕಲ್ಪಿಸಿ, ಯುವತಿಯರ ದಂಡು ಯಾವುದೇ ಹಿಂಜರಿಕೆ ಇಲ್ಲದೆ ಸೇವೆಗೆ ಸೇರುವಂತೆ ಮಾಡಿದೆ. ಸ್ವಾವಲಂಬಿ ಬದುಕು ನಿರ್ವಹಿಸುವಂತೆ ದಾರಿ ತೋರಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.