ಭಾನುವಾರ, ಜೂನ್ 13, 2021
23 °C

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ರಸ್ತೆಗಳು ಒಂದು ದೇಶದ ಅಭಿವೃದ್ಧಿಯ ಸಂಕೇತವಾಗಿದ್ದು, ಪ್ರಮುಖ ರಸ್ತೆಗಳೂ ಸೇರಿದಂತೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.ತಾಲ್ಲೂಕಿನ ಕೊಂಡಾಪುರದಲ್ಲಿ ಶುಕ್ರವಾರ ರೂ 1 ಕೋಟಿ ವೆಚ್ಚದಲ್ಲಿ ಶಿವಗಂಗಾದಿಂದ ಮಹದೇವಪುರ ಮಾರ್ಗವಾಗಿ ಕೊಂಡಾಪುರದವರೆಗೆ ನೂತನವಾಗಿ ನಿರ್ಮಿಸಿರುವ ರಸ್ತೆ ಉದ್ಘಾಟಿಸಿ ಅವರು ಮಾತನಾಡಿದರು.ರಾಷ್ಟ್ರೀಯ ಹೆದ್ದಾರಿ-13ರಿಂದ ಕೊಂಡಾಪುರದವರೆಗೆ ರಸ್ತೆ ನಿರ್ಮಿಸುವುದು ಇಲ್ಲಿನ ಜನರ ಬಹುದಿನಗಳ ಕನಸಾಗಿತ್ತು. ಈಗ ಆ ಕನಸು ನನಸಾಗಿದ್ದು, ಈ ರಸ್ತೆ ನಿರ್ಮಾಣದಿಂದ ಸುತ್ತಲಿನ ಹತ್ತಾರು ಹಳ್ಳಿಗಳ ಜನರಿಗೆ ಅನುಕೂಲವಾಗಿದೆ. ಮಹದೇವಪುರ, ಕೊಂಡಾಪುರ ಸುತ್ತಲಿನ ಗ್ರಾಮಗಳ ಜನ ತಾಲ್ಲೂಕು ಕೇಂದ್ರ ತಲುಪಲು ಚಿತ್ರಹಳ್ಳಿ ಗೇಟ್‌ಗೆ ಹೋಗಿ, ಮತ್ತೆ ಪಟ್ಟಣಕ್ಕೆ ವಾಪಸ್ ಬರುವ ಪರಿಸ್ಥಿತಿ ಇತ್ತು.ಈಗ ಈ ರಸ್ತೆಯ ಮೂಲಕ ನೇರವಾಗಿ ಶಿವಗಂಗಾ ಮೂಲಕ ಪಟ್ಟಣ ತಲುಪ ಬಹುದು. ಇದರಿಂದ ಜನರಿಗೆ ಸುಮಾರು 6 ಕಿ.ಮೀ. ದೂರ, ಸಮಯವೂ ಉಳಿಯುತ್ತದೆ. ರೈತರಿಗೆ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಮತ್ತು ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೂ ಈ ರಸ್ತೆಯಿಂದ ಹೆಚ್ಚು ಅನುಕೂಲವಾಗಿದೆ ಎಂದರು.ಸ್ವಾತಂತ್ರ್ಯ ಬಂದು 65 ವರ್ಷಗಳಾದರೂ ನಮ್ಮ ಹಳ್ಳಿಗಳಲ್ಲಿ ಸುಸಜ್ಜಿತ ರಸ್ತೆಗಳಿಲ್ಲ. ಇದುವರೆಗೆ ಇರುವ ರಸ್ತೆಗಳನ್ನೇ ಕಾಟಾಚಾರಕ್ಕೆ ಗುಂಡಿಮುಚ್ಚುವ ಕೆಲಸ ಮಾಡುತ್ತಿದ್ದರು. ಇದರಿಂದ ಹಣ ಮತ್ತು ಶ್ರಮ ವ್ಯರ್ಥವಾಗುತ್ತದೆಯೇ ಹೊರತು ರಸ್ತೆ ಹೆಚ್ಚುಕಾಲ ಬಾಳಿಕೆ ಬರುವುದಿಲ್ಲ.ಇದನ್ನು ಮನಗಂಡು ನಾನು ಹಳೆಯ ರಸ್ತೆಗಳನ್ನು ಕಿತ್ತು ಹಾಕಿ ಮಣ್ಣು ಮತ್ತು ಜಲ್ಲಿಗಳಿಂದ ಎತ್ತರಿಸಿ, ನೂತನ ರಸ್ತೆ ನಿರ್ಮಿಸುತ್ತಿದ್ದೇನೆ. ಇದಕ್ಕೆ ಹೆಚ್ಚು ಹಣ ಬೇಕಾಗುತ್ತದಾದರೂ, ರಸ್ತೆಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಕಳೆದ ಮೂರುವರೆ ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ರೂ 500 ಕೋಟಿ ಅನುದಾನ ತಂದಿದ್ದು, ಅರ್ಧದಷ್ಟು ಹಣವನ್ನು ರಸ್ತೆ ಅಭಿವೃದ್ಧಿಗೆ ಬಳಸಲಾಗಿದೆ ಎಂದರು.ಜಿ.ಪಂ. ಸದಸ್ಯೆ ಇಂದಿರಾ ಕಿರಣ್, ತಾ.ಪಂ. ಉಪಾಧ್ಯಕ್ಷೆ ಪಾರ್ವತಮ್ಮ ಕರಿಯಪ್ಪ, ಸದಸ್ಯ ತಿಮ್ಮೇಶ್, ಗ್ರಾ.ಪಂ. ಅಧ್ಯಕ್ಷ ರಂಗಸ್ವಾಮಿ, ಪರಮೇಶ್ವರಪ್ಪ ಮತ್ತಿತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.