ಗ್ರಾಮೀಣ ರೈತ ದಸರಾ ಆಚರಣೆ

7
ಅಗತ್ಯ ಸಿದ್ಧತೆ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಗ್ರಾಮೀಣ ರೈತ ದಸರಾ ಆಚರಣೆ

Published:
Updated:

ಚಾಮರಾಜನಗರ: ಮೈಸೂರು ದಸರಾ ಆಚರಣೆಯ ಭಾಗವಾಗಿ ಹನೂರು ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರದಲ್ಲಿ ಈ ಬಾರಿಯಿಂದ ದಸರಾ ಆಚರಣೆ ಹಮ್ಮಿಕೊಳ್ಳಲು ನಿರ್ಧರಿಸ­ಲಾಗಿದೆ. ಹೀಗಾಗಿ, ಶೀಘ್ರವೇ ತಾಲ್ಲೂಕು ಮಟ್ಟದ ಸಭೆ ಕರೆದು ಸಿದ್ಧತಾ ಕಾರ್ಯ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ದಸರಾ ಆಚರಣೆ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಜಿಲ್ಲಾ ಕೇಂದ್ರದಲ್ಲಿ ಅ. 5ರಿಂದ 12ರವರೆಗೆ ದಸರಾ ಉತ್ಸವ ನಡೆಸಲಾಗುತ್ತದೆ. ಕಲಾ ತಂಡಗಳ ಬೃಹತ್ ಮೆರವಣಿಗೆ, ಪ್ರತಿದಿನ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು. ಜಿಲ್ಲಾ ಕೇಂದ್ರದ ಕಾರ್ಯಕ್ರಮ ಹೊರತುಪಡಿಸಿ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲು­ಪೇಟೆ ತಾಲ್ಲೂಕು ಹಾಗೂ ಹನೂರು ಪಟ್ಟಣದಲ್ಲೂ ಅ. 7 ರಿಂದ 11ರವರೆಗೆ ಒಂದು ದಿನ ನಿಗದಿ ಮಾಡಿ ಗ್ರಾಮೀಣ ದಸರಾ ನಡೆಸಲು ನಿರ್ಧರಿಸಲಾಗಿದೆ. ದಸರಾ  ಆಚರಣೆಗೆ ಪ್ರತಿ ತಾಲ್ಲೂಕಿಗೆ ₨ 2 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.ತಾಲ್ಲೂಕು ಕೇಂದ್ರಗಳಲ್ಲಿ ವಿಭಿನ್ನ ಬಗೆಯ ಸಾಂಸ್ಕೃತಿಕ ಚಟುವಟಿಕೆ, ಗ್ರಾಮೀಣ ಕ್ರೀಡೆ, ಕಲಾತಂಡಗಳ ಮೆರವಣಿಗೆ ಹಮ್ಮಿಕೊಳ್ಳಬೇಕು. ಶಾಲಾ– ಕಾಲೇಜು ವಿದ್ಯಾರ್ಥಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಾಲೇಜು ಉಪನ್ಯಾಸಕರು, ಶಿಕ್ಷಕರು, ಸ್ತ್ರೀಶಕ್ತಿ ಸಂಘದ ಸದಸ್ಯರನ್ನು ದಸರಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳ­ಬೇಕು. ವಿಶೇಷವಾಗಿ ರೈತ ದಸರಾ ಸಹ ಆಚರಣೆ ಮಾಡುವ ಹಿನ್ನೆಲೆಯಲ್ಲಿ ರೈತರು ಸಕ್ರಿಯವಾಗಿ ಪಾಲ್ಗೊಳ್ಳಲು ಕಾರ್ಯ­ಕ್ರಮ ರೂಪಿಸಬೇಕು ಎಂದು ಸೂಚಿಸಿದರು.ದಸರಾ ಆಚರಣೆ ವೇಳೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿರುವ ಮುಖ್ಯವೃತ್ತ, ಸರ್ಕಾರಿ ಕಟ್ಟಡಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಬೇಕು. ತಳಿರು–ತೋರಣಗಳಿಂದ ನಗರವನ್ನು ಸಿಂಗರಿಸಬೇಕು ಎಂದರು.ಉದ್ಘಾಟನೆ, ಮೆರವಣಿಗೆ ಕಾರ್ಯ­ಕ್ರಮದ ಆಹ್ವಾನ ಪತ್ರಿಕೆ ಮುದ್ರಿಸಬೇಕು. ಶಿಷ್ಟಾಚಾರ ಅನುಸಾರ ಗಣ್ಯರನ್ನು ಆಹ್ವಾ­ನಿಸ­ಬೇಕು. ಯಾವುದೇ, ಲೋಪಕ್ಕೆ ಅವಕಾಶವಾಗದಂತೆ ಎಚ್ಚರಿಕೆ ವಹಿಸ­ಬೇಕು. ಶಿಷ್ಟಾಚಾರ ಪಾಲನೆ ಬಗ್ಗೆ ಗೊಂದಲವಿದ್ದರೆ ಹಿರಿಯ ಅಧಿಕಾರಿ­ಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳ­ಬೇಕು. ಉಪ ವಿಭಾಗಾಧಿಕಾರಿಗಳಿಂದ ಆಹ್ವಾನ ಪತ್ರಿಕೆಗೆ ಅನುಮೋದನೆ ಪಡೆಯಬೇಕು ಎಂದು ತಿಳಿಸಿದರು.ತಾಲ್ಲೂಕು ಕೇಂದ್ರದಲ್ಲಿ ನಡೆಸುವ ದಸರಾ ಆಚರಣೆ ಸಂಬಂಧ ತಹಶೀಲ್ದಾ­ರರು ಕೂಡಲೇ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಪೂರ್ವಭಾವಿ ಸಭೆ ನಡೆಸ­ಬೇಕು. ಅವರಿಂದ ಅಗತ್ಯ ಸಲಹೆ, ಮಾರ್ಗ­ದರ್ಶನ ಪಡೆದು ಸಿದ್ಧತಾ ಕಾರ್ಯ ಪ್ರಾರಂಭಿಸಬೇಕು.ಸೆ.  21 ರೊಳಗೆ ದಸರಾ ಆಚರಣೆ ಸಿದ್ಧತೆ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎಚ್‌. ನರಸಿಂಹಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್, ತಹಶೀಲ್ದಾರ್‌­ಗಳಾದ ಮಹದೇವ್, ಮಾಳಿಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಮಂಜಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry