ಗ್ರಾಮೀಣ ಶಾಲೆಯಲ್ಲಿ ಕಂಪ್ಯೂಟರ್ ಕ್ಲಾಸ್

7

ಗ್ರಾಮೀಣ ಶಾಲೆಯಲ್ಲಿ ಕಂಪ್ಯೂಟರ್ ಕ್ಲಾಸ್

Published:
Updated:

ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಕಂಪ್ಯೂಟರ್‌ಗಳು ಓದು, ಬರಹ, ಜ್ಞಾನಾರ್ಜನೆಗೆ ಹೊಸ ಆಯಾಮ ಕಲ್ಪಿಸಿ ಇಡೀ ವಿಶ್ವವನ್ನೇ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿವೆ.

 

ಜೀವನಪೂರ್ತಿ ಕಲಿಯುತ್ತಲೇ ಇರುವ ಪರಿಸರ ಸೃಷ್ಟಿಸಿದ ನಿರ್ಮಾತೃ ಗಣಕಲೋಕ. ರಾಶಿ ರಾಶಿ ಪುಸ್ತಕಗಳನ್ನು ಅಂಗುಲ ಗಾತ್ರದ ಕಂಪ್ಯೂಟರ್ ಚಿಪ್‌ನಲ್ಲಿ ಸಂಗ್ರಹಿಸಿಡಬಹುದಾಗಿದೆ.ಜ್ಞಾನ ಪ್ರಸಾರದಲ್ಲಿ ಇವುಗಳ ಪಾತ್ರ ವರ್ಣಿಸಲಸದಳ. ಆಧುನಿಕ ಯುಗದಲ್ಲಿನ ಹೊಸ ಆವಿಷ್ಕಾರಗಳು, ಸುಧಾರಣೆಗಳು ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತಂದಿವೆ. ಪರಂಪರಾಗತ ಬೋಧನಾ ವಿಧಾನಕ್ಕೆ ಪೂರಕವಾಗಿ ಸ್ಮಾರ್ಟ್ ಕ್ಲಾಸ್, ಡಿಜಿಟಲ್ ಲರ್ನಿಂಗ್ ಪದ್ಧತಿಗಳು ಈ ವಲಯಕ್ಕೆ ಹೈಟೆಕ್ ಸ್ಪರ್ಶ ನೀಡಿವೆ.ಪ್ರತಿಯೊಂದು ವಿಷಯವನ್ನೂ ವಿದ್ಯಾರ್ಥಿಗಳ ಮಿದುಳಿಗೆ ತುರುಕುವ ಶ್ರಮಕ್ಕೆ ವಿದಾಯ, ನೋಟ್ಸ್ ನೀಡುವ ಪದ್ಧತಿಗೆ ಇತಿಶ್ರೀ, ದೃಶ್ಯ-ಶ್ರವ್ಯ ತಂತ್ರಗಾರಿಕೆ ಬೋಧನೆಯಡಿ ಕಲಿಕಾರ್ಥಿಗಳಿಗೆ `ಸ್ಮಾರ್ಟ್ ಕ್ಲಾಸ್~ ಇಂಬು ನೀಡುತ್ತಿದೆ.

 

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೋದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಉನ್ನತೀಕರಿಸಿದ ಶಾಲೆ) ಕಂಪ್ಯೂಟರ್ಸ್‌ ಆನ್ ವ್ಹೀಲ್ಸ್ (್ಚಟಡಿ) ಯೋಜನೆಯಡಿ ಲ್ಯಾಪ್‌ಟ್ಯಾಪ್ ಬಳಸಿ ಪಠ್ಯ ಬೋಧಿಸಲಾಗುತ್ತಿದೆ.ಈ ಸ್ಕೂಲಿನ 7 ಮತ್ತು 8 ನೇ ತರಗತಿ ವಿದ್ಯಾರ್ಥಿಗಳು ಕಂಪ್ಯೂಟರ್ ಪರದೆ ಮೇಲೆ ಅನಿಮೇಷನ್, 3 ಡಿ ಗ್ರಾಫಿಕ್ಸ್, ವಿಡಿಯೋ ಕ್ಲಿಪಿಂಗ್ಸ್ ಮೂಲಕ ಅಭ್ಯಾಸ ಮಾಡುತ್ತಿದ್ದಾರೆ.

ತಂತ್ರಜ್ಞಾನ ಆಧರಿತ ಬೋಧನೆ- ಕಲಿಕೆಯ ಈ ವಿನೂತನ ಕ್ರಮ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ಸಹಕಾರಿಯಾಗಿದೆ. ಆರು ತಿಂಗಳ ಹಿಂದೆ ಇಲ್ಲಿ ಯೋಜನೆ ಜಾರಿಗೊಳಿಸಲಾಗಿದೆ.`ಸ್ಮಾರ್ಟ್ ಕ್ಲಾಸ್~ ಶಿಕ್ಷಕರ ಬೋಧನಾ ವಿಧಾನವನ್ನೇ ಬದಲಾಯಿಸಿದೆ. ಗ್ರಾಮೀಣ ವಿದ್ಯಾರ್ಥಿಗಳ ಹಿಂಜರಿಕೆಗೆ ಕಾರಣವಾಗಿರುವ ಕಂಪ್ಯೂಟರ್ ಭಯ ತೊಡೆದು, ಅವರಲ್ಲಿ ತಾಂತ್ರಿಕ ಕೌಶಲದ ಭರವಸೆ ಮೂಡಿಸಿದೆ. ವಿಶ್ವ ದರ್ಜೆ ಕಲಿಕೆ, ಫಲಿತಾಂಶ ಸುಧಾರಣೆಗೆ ಸೂಕ್ತವಾಗಿದೆ.ಮೋದೂರಿನ ಶಾಲೆಗೆ 41 ಲ್ಯಾಪ್‌ಟ್ಯಾಪ್‌ಗಳನ್ನು ಪೂರೈಸಲಾಗಿದೆ. ಈಗ ಇಲ್ಲಿನ ಒಂದು ಕೊಠಡಿ `ಕಂಪ್ಯೂಟರ್ ಆಧಾರಿತ ಕಲಿಕಾ ಕೇಂದ್ರ~. ಶಾಲೆಯ ಮೂವರು ಶಿಕ್ಷಕರಿಗೆ (ಇಂಗ್ಲಿಷ್, ವಿಜ್ಞಾನ-ಗಣಿತ, ಸಮಾಜ ವಿಜ್ಞಾನ) ಎಜುಕಾಂಪ್ ಸಂಸ್ಥೆ ಸ್ಮಾರ್ಟ್ ಕ್ಲಾಸ್ ಬೋಧನೆ ತರಬೇತಿ ನೀಡಿ, ಈ ಶಾಲೆಗೆ ಸಂಸ್ಥೆಯ ಒಬ್ಬ ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಿದೆ. ಪ್ರಸ್ತುತ 7ನೇ ತರಗತಿಯ 40 ಮತ್ತು 8ನೇ ತರಗತಿಯ 42 ಮಕ್ಕಳಿಗೆ ದಿನದಲ್ಲಿ 3 ಗಂಟೆ ಲ್ಯಾಪ್‌ಟ್ಯಾಪ್ ಮೂಲಕ ಬೋಧನೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಉತ್ಸಾಹದಿಂದ ಕಲಿಕೆಯಲ್ಲಿ ತೊಡಗಿದ್ದಾರೆ. ಇಂಗ್ಲಿಷ್ ಗ್ರಾಮರ್, ಸ್ಪೆಲ್ಲಿಂಗ್, ಲೆಕ್ಕ ಬಿಡಿಸುವ ಸರಳ ವಿಧಾನ, ವಿಜ್ಞಾನದ ಸೈದ್ಧಾಂತಿಕ ವಿವರಣೆಗೆ ಕಂಪ್ಯೂಟರ್ ಪರದೆಯಲ್ಲಿ ದೃಶ್ಯ ಸಹಿತ ಪ್ರಾಯೋಗಿಕ ಅರ್ಥ ನೋಡಬಹುದು.ಸಮಾಜ ವಿಜ್ಞಾನದಲ್ಲಿ ರಾಜ-ಮಹಾರಾಜರ ಆಳ್ವಿಕೆ ಸ್ಥಳಗಳ ಸಚಿತ್ರ ಪರಿಚಯ, ನಕ್ಷೆಗಳು, ಪಠ್ಯಕ್ಕೆ ತಕ್ಕ ಸಂಗೀತ ಇತ್ಯಾದಿಗಳು ವಿದ್ಯಾರ್ಥಿಗಳು ಅಭ್ಯಸಿಸಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಹಾಯಕವಾಗಿವೆ. ಪಾಠ-ಪ್ರವಚನ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ ಎಂದು ವಿದ್ಯಾರ್ಥಿಗಳೇ ಖುಷಿಯಿಂದ ಹೇಳುತ್ತಿದ್ದಾರೆ.ಸೀಮೆಸುಣ್ಣ, ಡಸ್ಟರ್, ಕಪ್ಪು ಹಲಗೆಗಳನ್ನು ಬಿಟ್ಟು ಈಗ ಶಿಕ್ಷಕರು ಮೌಸ್ ಹಿಡಿದು ಬೋಧಿಸಬೇಕು. ಶಿಕ್ಷಕ ಮತ್ತು ವಿದ್ಯಾರ್ಥಿ ನಡುವೆ ನೇರಸಂಪರ್ಕ ಏರ್ಪಟ್ಟಿರುತ್ತದೆ. ಪಠ್ಯದಲ್ಲಿನ ಅರ್ಥವಾಗದ ಅಂಶವನ್ನು ತಕ್ಷಣವೇ ಬಗೆಹರಿಸಿಕೊಳ್ಳಲು ಅವಕಾಶವಿದೆ.ದೃಶ್ಯ ಸಮೇತವಾಗಿ ಸುಶ್ರಾವ್ಯ ದನಿಯಲ್ಲಿ ಪ್ರತಿ ಸಂಗತಿಗಳ ವಿವರಣೆ ಲಭ್ಯ ಇರುತ್ತದೆ. ಕೇಳಿ- ನೋಡಿ- ಮಾಡಿ- ಒರೆಗೆ ಹಚ್ಚಿ ಕಲಿಯುವುದರಿಂದ ವಿಷಯ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ದಾಖಲಾಗುತ್ತದೆ.  ಬೋಧಕರು ಮಕ್ಕಳ ಬುದ್ಧಿಮತ್ತೆಯನ್ನು ಪರೀಕ್ಷಿಸುವುದು ಸುಲಭ. ಸ್ವಯಂ ಮೌಲ್ಯಮಾಪನ ವ್ಯವಸ್ಥೆಯಲ್ಲಿ (ಎಸ್‌ಎಎಸ್) ವಿದ್ಯಾರ್ಥಿಯ ಕಲಿಕೆ- ಗ್ರಹಿಕೆ ಮಟ್ಟ  ತಿಳಿಯಬಹುದಾಗಿದೆ. ತರಗತಿ ಕೊನೆಯಲ್ಲಿ ಪ್ರದರ್ಶಕ ಪರದೆಯಲ್ಲಿ ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನು ಮೂಡಿಸಿ ಪ್ರತಿ ವಿದ್ಯಾರ್ಥಿಗೂ ರಿಮೋಟ್ ಮೂಲಕ ಸರಿ ಉತ್ತರವನ್ನು ದಾಖಲಿಸಲು ಸೂಚಿಸಲಾಗುವುದು.

 

ನಂತರ ಪ್ರತೀ ವಿದ್ಯಾರ್ಥಿ ಗಳಿಸಿದ ಅಂಕ ಪರದೆಯಲ್ಲಿ ಮೂಡುತ್ತದೆ. ಉತ್ತರಗಳನ್ನು ತಾಳೆ ನೋಡಲೂ ಅವಕಾಶವಿದೆ. ಇಲ್ಲಿ ಆಟ, ಮನರಂಜನೆ, ಪಾಠ ಎಲ್ಲವೂ ಏಕಕಾಲದಲ್ಲಿ ನಡೆಯುತ್ತಿರುತ್ತವೆ.ಈ ಡಿಜಿಟಲ್ ವ್ಯಾಸಂಗ ಕ್ರಮದಲ್ಲಿ ಪಠ್ಯವನ್ನು ಲ್ಯಾಪ್‌ಟ್ಯಾಪ್‌ಗೆ ಅಳವಡಿಸಲಾಗಿರುತ್ತದೆ. ಮಕ್ಕಳು ತರಗತಿಯಲ್ಲಿ ಕಂಪ್ಯೂಟರ್ ತೆರೆ ಮೇಲೆ ಅನಿಮೇಷನ್, ಕಲಾಕೃತಿ, ರೇಖೆಗಳು, ಚಿತ್ರಗಳು ಇತ್ಯಾದಿಗಳ ಮೂಲಕ ವಿಷಯ ಅರಿಯುತ್ತಿರುತ್ತಾರೆ.ನೂತನ ತಂತ್ರಜ್ಞಾನ ಮತ್ತು ರಚನಾತ್ಮಕ ಶಿಕ್ಷಣ ವಿದ್ಯಾರ್ಥಿಗಳ ಜೀವನಕ್ಕೆ ವಿಭಿನ್ನ ಆಯಾಮ ನೀಡಿದೆ. ವಿದ್ಯಾರ್ಥಿಗಳಲ್ಲಿ ತಾರ್ಕಿಕ ಆಲೋಚನೆ, ಪ್ರಶ್ನಿಸುವ ಸ್ವಭಾವ, ಸ್ಪರ್ಧಾತ್ಮಕ ಗುಣ, ಕಂಪ್ಯೂಟರ್ ಜ್ಞಾನ, ಸಾಮಾನ್ಯ ಜ್ಞಾನ, ಕುತೂಹಲ, ಪ್ರಾಯೋಗಿಕ ಚಿಂತನೆ, ಸಂಶೋಧನಾಸಕ್ತಿ, ತಾಂತ್ರಿಕ ಕೌಶಲ ಇತ್ಯಾದಿಗಳನ್ನು ಹುಟ್ಟುಹಾಕುತ್ತದೆ.ರಾಜ್ಯದಲ್ಲಿ ಐದು ಜಿಲ್ಲೆಗಳ ಆಯ್ದ ಶಾಲೆಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಇಂಟೆಲ್ ಸಹಭಾಗಿತ್ವದಲ್ಲಿ ಎಚ್‌ಸಿಎಲ್ ಸಂಸ್ಥೆ ಕಂಪ್ಯೂಟರ್ ಪೂರೈಸಿದೆ. ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ಮಾರ್ಟ್ ಕ್ಲಾಸ್ ಅಳವಡಿಕೆಯಲ್ಲಿ ದಾಪುಗಾಲು ಇಟ್ಟಿವೆ.

 

ಗ್ರಾಮೀಣ ಸರ್ಕಾರಿ ಶಾಲೆಗಳೂ ಆಸಕ್ತಿ ತೋರಿದರೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಸ್ಮಾರ್ಟ್ ಕ್ಲಾಸ್ ಅಳವಡಿಕೆಯ ಹೆಚ್ಚಿನ ಮಾಹಿತಿಗೆ www.educomp.com  ಸಂಪರ್ಕಿಸಬಹುದು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry