ಗ್ರಾಮೀಣ ಸೇವೆ ಕಡ್ಡಾಯ

7
ಎಂಜಿನಿಯರಿಂಗ್ ಕಾಲೇಜು ಸಿಬ್ಬಂದಿ

ಗ್ರಾಮೀಣ ಸೇವೆ ಕಡ್ಡಾಯ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ರಾಜ್ಯದ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್‌ಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣಕ್ಕೆ ಅವಕಾಶ ಕಲ್ಪಿಸುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆ ಸಿಬ್ಬಂದಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ಎರಡು ಮಸೂದೆಗಳನ್ನು ಉಭಯ ಸದನಗಳು ಗುರುವಾರ ಅಂಗೀಕರಿಸಿದವು.`ವರ್ಗಾವಣೆ ಉದ್ದೇಶಕ್ಕಾಗಿ ಎ, ಬಿ ಮತ್ತು ಸಿ ಎಂಬ ಮೂರು ವಲಯಗಳನ್ನು ರಚಿಸಲಾಗಿದ್ದು, ಗ್ರಾಮಾಂತರ ಭಾಗದಲ್ಲಿ ಸಿಬ್ಬಂದಿ ಕೊರತೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ' ಎಂದು ಮಸೂದೆ ಮಂಡಿಸಿದ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ತಿಳಿಸಿದರು. `ಎ' ವರ್ಗದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳು, ನಗರಸಭೆಗಳು ಮತ್ತು ಜಿಲ್ಲಾ ಕೇಂದ್ರ ಸ್ಥಾನಗಳ ಮಿತಿಯಲ್ಲಿ ಬರುವ ಪ್ರದೇಶಗಳು ಸೇರಿವೆ.`ಬಿ' ವಲಯದಲ್ಲಿ ಪಟ್ಟಣ ಪಂಚಾಯಿತಿಗಳು ಮತ್ತು ಎಲ್ಲ ತಾಲ್ಲೂಕು ಕೇಂದ್ರಗಳ ಮಿತಿಯಲ್ಲಿ ಬರುವ ಪ್ರದೇಶಗಳು ಇವೆ. `ಎ' ಮತ್ತು `ಬಿ' ವಲಯದಲ್ಲಿ ಸೇರಿರದ ಎಲ್ಲ ಪ್ರದೇಶಗಳನ್ನು `ಸಿ' ವಲಯದಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ವಿವರಿಸಿದರು.ಇನ್ನುಮುಂದೆ ಇಲಾಖೆಯಲ್ಲಿ ಯಾವುದೇ ನೇಮಕಾತಿ ನಡೆದರೂ `ಸಿ' ವಲಯದ ಖಾಲಿ ಹುದ್ದೆಗಳನ್ನು ಮೊದಲು ಭರ್ತಿ ಮಾಡಿಕೊಳ್ಳಬೇಕು. ಬಳಿಕ ಉಳಿದ ವಲಯಗಳ ಕಡೆಗೆ ಗಮನ ಹರಿಸಬೇಕು.`ಸಿ' ವಲಯದಲ್ಲಿ ಕನಿಷ್ಠ ನಾಲ್ಕು ವರ್ಷ ಸೇವೆ ಸಲ್ಲಿಸಿದ ಮೇಲೆ ಆ ನೌಕರರು `ಬಿ' ವಲಯಕ್ಕೆ ವರ್ಗಾವಣೆಗೊಳ್ಳಲು ಅರ್ಹತೆ ಗಿಟ್ಟಿಸುತ್ತಾರೆ. ಹಾಗೆಯೇ `ಬಿ' ವಲಯದಲ್ಲಿ ನಾಲ್ಕು ವರ್ಷ ಪೂರೈಸಿದವರು `ಎ' ವರ್ಗಕ್ಕೆ ವರ್ಗಾವಣೆಯಾಗಲು ಅವಕಾಶ ಪಡೆಯುತ್ತಾರೆ ಎಂದು ಮಾಹಿತಿ ಒದಗಿಸಿದರು.`ಎ' ವಲಯದಿಂದ ಮತ್ತೆ `ಸಿ' ವಲಯಕ್ಕೆ ವರ್ಗಾವಣೆ ಮಾಡಲು ನಿಯಮಾವಳಿಯಲ್ಲಿ ಅವಕಾಶ ಇದೆ. ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುತ್ತದೆ.ಗಂಡ-ಹೆಂಡತಿಯರಿಬ್ಬರೂ ಸರ್ಕಾರಿ ನೌಕರರಾಗಿದ್ದು, ಲಭ್ಯತೆ ಇದ್ದಲ್ಲಿ ಅವರಲ್ಲಿ ಒಬ್ಬರನ್ನು ಬೇಕಾದ ಸ್ಥಳಕ್ಕೆ ವರ್ಗಾವಣೆ ಮಾಡಲು ಅವಕಾಶ ಒದಗಿಸಲಾಗಿದೆ ಎಂದು ಹೇಳಿದರು.ಗಂಭೀರ ಕಾಯಿಲೆಯಿಂದ ಬಳಲುವವರು ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ತಂದರೆ ಅವರ ಮನವಿಯನ್ನು ಪರಿಗಣಿಸಲು ನಿಯಮಾವಳಿ ರೂಪಿಸಲಾಗಿದೆ ಎಂದು ತಿಳಿಸಿದರು.`ಪ್ರಾಂಶುಪಾಲ ಸೇರಿದಂತೆ ಕಾಲೇಜಿನಲ್ಲಿ ಸೃಜಿಸಿರುವ ಎಲ್ಲ ಹುದ್ದೆಗಳ ವರ್ಗಾವಣೆಗೆ ಈ ನಿಯಮಾವಳಿ ಅನ್ವಯವಾಗಲಿದೆ.ನಿರ್ದೇಶಕರು, ಹೆಚ್ಚುವರಿ ನಿರ್ದೇಶಕರು, ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರ ವರ್ಗಾವಣೆಯನ್ನು ಈ ಮಸೂದೆಯಿಂದ ಹೊರಗಿಡಲಾಗಿದೆ' ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry