ಗ್ರಾಮ ಚರಿತ್ರೆ ಕೋಶ ದುಡುಕಿನ ಅಪಾಯಕಾರಿ ಯೋಜನೆ

7

ಗ್ರಾಮ ಚರಿತ್ರೆ ಕೋಶ ದುಡುಕಿನ ಅಪಾಯಕಾರಿ ಯೋಜನೆ

Published:
Updated:

ಕರ್ನಾಟಕದಲ್ಲಿ ಹೊಸದಾಗಿ ಸ್ಥಾಪಿಸಲ್ಪಟ್ಟ, ದೇಶದ ಪ್ರಥಮ ಜಾನಪದ ವಿಶ್ವವಿದ್ಯಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾದ ಕರ್ನಾಟಕದ ಜಾನಪದ ವಿ.ವಿಯು `ಗ್ರಾಮ ಚರಿತ್ರೆ ಕೋಶ~ ಎಂಬ ಯೋಜನೆಯನ್ನು ಕೈಗೆತ್ತಿಕೊಂಡು ರಾಜ್ಯದ 36ಸಾವಿರ ಹಳ್ಳಿಗಳ ಚರಿತ್ರೆ ರಚನೆಗೆ ಮುಂದಾಗಿದೆ.

 

ಈ ಮಹತ್ವದ ಯೋಜನೆಯಡಿ ಒಂದು ಗ್ರಾಮದ ಸಮಕಾಲೀನ ಭಾಷೆ, ಸಂಸ್ಕೃತಿ, ಸೊಗಡು, ನಡವಳಿಕೆಗಳು, ಆಚರಣೆಗಳು ಸಂಪ್ರದಾಯಗಳು ಜಾನಪದದ ನೆಲೆಯಲ್ಲಿ ದಾಖಲೆಗೊಳ್ಳುವುದು ಸ್ವಾಗತಾರ್ಹ. ಆದರೆ ಆಯಾ ಹಳ್ಳಿಯ ಚರಿತ್ರೆ (ಇತಿಹಾಸ) ಸಮರ್ಪಕವಾಗಿ ದಾಖಲಾಗಿಲ್ಲ. ಅದನ್ನು ಆಯಾ ಗ್ರಾಮದ ಹಿರಿಯರ ಹೇಳಿಕೆಗಳ, ಲಭ್ಯ ಆಕರಗಳ ಮೇಲೆ  ದಾಖಲು ಮಾಡಲಾಗುವುದು ಎಂಬ ವಿಶ್ವವಿದ್ಯಾಲಯದ ಆಶಯವು ದುಡುಕಿನದ್ದು ಮತ್ತು ಅಪಾಯಕಾರಿಯಾದದ್ದು.

ಒಂದು ಗ್ರಾಮದ ಜನಪದ ಸಂಸ್ಕೃತಿ ಎಂಬುದು ಆಯಾ ಕಾಲದ ಜನಸಾಮಾನ್ಯರ ಜೀವನದೊಂದಿಗೆ ಬೆಸೆದುಕೊಂಡು ಬಂದ ಸಾಮಾಜಿಕ, ಧಾರ್ಮಿಕ, ಆರ್ಥಿಕ ಪದ್ಧತಿಗಳನ್ನು ಹಿಡಿದಿಟ್ಟ ರೀತಿನೀತಿಯಾಗಬೇಕು. ಕೆಳವರ್ಗದ ಸಾಮಾನ್ಯ ಜನತೆಯ ನಿತ್ಯ ಬದುಕಿನ ಸಂಘರ್ಷದ ದಾಖಲೆಯಾಗಿ ಅವರ ವೃತ್ತಿ, ಪ್ರವೃತ್ತಿಗಳನ್ನೊಳಗೊಂಡ ನಂಬಿಕೆ, ಭಾವನೆ, ಆಶಯಗಳ ಅಭಿವ್ಯಕ್ತಿಗೆ ಇಲ್ಲಿ ಪ್ರಾಧಾನ್ಯತೆ ಇರಬೇಕು.

 

ಆದರೆ ವಿಶ್ವವಿದ್ಯಾಲಯವು ದಾಖಲಿಸ ಹೊರಟ ಚರಿತ್ರೆಯ ಮಾನದಂಡ ಯಾವುದು? ಸತ್ಯಸಂಶೋಧನೆಯ ಒಂದು ಜೀವಂತ ಸಂಶೋಧನಾ ಕ್ರಮಕ್ಕೆ ಇವರು ಯಾವುದನ್ನು ಮಾದರಿಯಾಗಿ ಸ್ವೀಕರಿಸಿದ್ದಾರೆ? ಅವರು ಸಂಪರ್ಕಿಸಲು ಹೊರಟ ಹಿರಿಯ ಜೀವಗಳು ಯಾವ ವರ್ಗಕ್ಕೆ ಸೇರಿದವರು? ಎಂಬುದರ ಕುರಿತು ಸ್ಪಷ್ಟನೆಯ ಅಗತ್ಯವಿದೆ.ಯಾಕೆಂದರೆ, ಇಂದು ಕರ್ನಾಟಕದ ಬಹಳಷ್ಟು ಗ್ರಾಮಗಳು ದೀರ್ಘಕಾಲದ ಇತಿಹಾಸವಿಲ್ಲದ, ರಾಜಕೀಯ ಹಿಡಿತ ಹೊಂದಿದ, ಜಾತಿ ವಿಭಜಕ ಮಠಗಳೇ ತುಂಬಿದ ಕೆಲವೇ ಕೆಲವು ಬಲಾಢ್ಯ ಜಾತಿಗಳ ಹಿಡಿತದಲ್ಲಿವೆ ಎಂಬುದು ವಾಸ್ತವ ಸಂಗತಿ.

ಅಂಬೇಡ್ಕರ್ ಅವರು `ಗ್ರಾಮಗಳು ಪ್ರಾದೇಶಿಕತೆಯ ಕೊಳೆಗುಂಡಿಗಳು, ಅಜ್ಞಾನದ, ಸಂಕುಚಿತ ಮನೋಭಾವದ, ಜಾತೀಯತೆಯ ಬಿಲಗಳು~ ಎಂದು ಕರೆದಿದ್ದರು. ಬಲಾಢ್ಯ ಜಾತಿಯ ಹಿರಿಯರು ಹೇಳಿದ ಆಯಾ ಗ್ರಾಮದ ಚರಿತ್ರೆ, ಅವರ ಒತ್ತಡಕ್ಕೆ ಮಣಿದು ದಾಖಲಿಸಿದ ಇತಿಹಾಸ ನಿಜವಾದ ಚರಿತ್ರೆ ಆಗಬಲ್ಲದೆ? ಈಗಾಗಲೇ ಶಾಸನ, ಕಾವ್ಯ, ತಾಮ್ರಪಟ, ಕೈಪಿಯತ್ತು, ನಿರೂಪಗಳು, ಸನ್ನದುಗಳು ಮುಂತಾದ ಪ್ರಾಚೀನ ದಾಖಲೆಗಳಿಂದ ತಮಗೆ ಬೇಕಾದ ಅಂಶವನ್ನು ಮಾತ್ರ ಆಯ್ಕೆ ಮಾಡಿಕೊಂಡು ದಲಿತ ಹಿಂದುಳಿದ ಶ್ರಮವರ್ಗದ ಸಾಧಕರನ್ನು ಮೂಲೆಗುಂಪು ಮಾಡಿ, ಕರ್ನಾಟಕದ ಚರಿತ್ರೆಯನ್ನು ಅತಿರಂಜಿತಗೊಳಿಸಲಾಗಿದೆ.

 

ಇದು ಗ್ರಾಮ ಚರಿತ್ರೆಯ ದಾಖಲೀಕರಣದಲ್ಲಿ ಮರುಕಳಿಸುವುದಿಲ್ಲ ಎಂಬುದಕ್ಕೆ ಸಮರ್ಥನೆ ಏನು? ಸಮಾಜದ ಕೆಲವೇ ಕೆಲವು ಮೇಲ್ವರ್ಗದ ಜನರು ಕೊಡುವ ಆಧಾರ, ರಾಜಕೀಯ ಒತ್ತಡ, ತಮ್ಮ ಜಾತಿ ಜನಾಂಗಗಳ ಅತಿರಂಜಿತ ವೈಭವ ಕುರಿತ ಹೇಳಿಕೆಗಳು ನೈಜ ಚರಿತ್ರೆಯನ್ನು ಮರೆಮಾಚುವುದಿಲ್ಲ ಎನ್ನಲು ಆಧಾರವೆಲ್ಲಿಯದು?ಅಷ್ಟಕ್ಕೂ `ಗ್ರಾಮಗಳ ಚರಿತ್ರೆ~ ರಚನೆಗೆ ಜಾನಪದ ವಿಶ್ವವಿದ್ಯಾಲಯಕ್ಕೆ ಅನುಮತಿಯನ್ನು ನೀಡಿದವರು ಯಾರು? ಒಂದು ಪ್ರದೇಶದ ಚರಿತ್ರೆಯನ್ನು ರಚಿಸುವುದು, ಅದನ್ನು ಸಾರ್ವಜನಿಕವಾಗಿ ದಾಖಲಿಸುವುದು `ಜಾನಪದ ವಿಶ್ವವಿದ್ಯಾಲಯ~ದ ಕಾರ್ಯವ್ಯಾಪ್ತಿಗೆ ಬರುತ್ತದೆಯೆ? ಭಾರತದಲ್ಲಿ, ಅದರಲ್ಲೂ ಕರ್ನಾಟಕದ ಸಂದರ್ಭದಲ್ಲಿ ಇತಿಹಾಸವೆಂಬುದು ಇದ್ದವರ, ಮೇಲ್ವರ್ಗದವರ ಹಿತಾಸಕ್ತಿಗಾಗಿಯೇ ರಚಿಸಿದ ಸುಳ್ಳು ಸಾಧನೆಗಳ ಪೊಳ್ಳು ದಾಖಲೆ ಎಂದು ಹೇಳಬಹುದು.

 

ಕರ್ನಾಟಕದ ಬೀದರ್‌ನಿಂದ ಬೆಂಗಳೂರುವರೆಗಿನ ಎಲ್ಲ ನಗರ ಪ್ರದೇಶದಲ್ಲಿ ಸಿಗುವ ವೃತ್ತಗಳ ಹೆಸರು, ಅಲ್ಲಿ ಅನಾವರಣಗೊಂಡಿರುವ ಚಾರಿತ್ರಿಕ ವ್ಯಕ್ತಿಗಳ ಶಿಲ್ಪಗಳನ್ನು ಗಮನಿಸಿದಾಗ ನಮ್ಮ ಹುಸಿ ಇತಿಹಾಸದ ಪೊರೆ ಅನಾವರಣಗೊಳ್ಳುತ್ತದೆ. ಯುದ್ಧರಂಗವನ್ನು ಕಣ್ಣಿನಿಂದಲೂ ನೋಡದವರು (ಈ ಕುರಿತು ದಾಖಲೆಗಳಿಲ್ಲ) ಕುದುರೆ ಏರಿ ಖಡ್ಗ ಝಳಪಿಸುತ್ತ, ವೀರರಾಜ, ವೀರರಾಣಿ ಎನ್ನಿಸಿದ್ದಾರೆ. ಮತೀಯವಾದಿ, ಕನ್ನಡ ವಿರೋಧಿ ಸಾಮ್ರಾಟನೊಬ್ಬನ ಪಟ್ಟಾಭಿಷೇಕದ ನೆನಪಿನ ಉತ್ಸವವನ್ನು ಕೋಟಿಗಟ್ಟಲೆ ಹಣದಿಂದ ಆಚರಿಸಿ, ಅದೇ ಸಾಮ್ರಾಜ್ಯ ಸ್ಥಾಪಿಸಿದ ಶೂದ್ರ ಶ್ರಮಿಕ ಶೂರರನ್ನು ಕತ್ತಲೆಯಲ್ಲಿಡಲಾಗಿದೆ.ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತೆತ್ತ ಕೆಳವರ್ಗದ ಹೋರಾಟಗಾರರ ನೆನಪು ಜನಮಾನಸದಿಂದ ಮರೆಯಾಗಿದೆ. ಧರ್ಮ-ಜಾತಿ ಆಧಾರಿತ ಉಳ್ಳವರ ಸಂಘ-ಸಂಸ್ಥೆಗಳು ಅಲ್ಪಸಾಧನೆ ತೋರಿದ ತಮ್ಮವರನ್ನು ಹೊತ್ತು ಮೆರಸುವ ಉತ್ಸವದಲ್ಲಿ, ಈ ನಾಡಿನಲ್ಲಿ ಸಾಮ್ರಾಜ್ಯ ಕಟ್ಟಿ, ಧರ್ಮ-ಸಾಮಾಜಿಕ ಜಾಗೃತಿ ಉಂಟು ಮಾಡಿದ ಬುಡಕಟ್ಟು, ಆದಿಮ ಜನಾಂಗದ ನಾಯಕರನ್ನು ಮೂಲೆಗೆ ತಳ್ಳಿದ್ದಾರೆ. ಇಂತಹ ಸಿದ್ಧಮಾದರಿಯ ಚರಿತ್ರೆ ರಚನೆ ನಮಗೆ ಬೇಕೆ? ಈ ಕುರಿತು ಸಾರ್ವಜನಿಕ ಚರ್ಚೆಯಾಗಲಿ.

`ಭಾರತದ ನಿಜವಾದ ಇತಿಹಾಸ ಮರೆಮಾಚಲ್ಪಟ್ಟು ದಲಿತರ, ಹಿಂದುಳಿದವರ ಸಾಧನೆಯ ಮೇಲೆ ದೂಳಿನ ಮುಸುಕು ಕವಿದಿದೆ. ಈ ದೇಶದ ನೈಜ ಇತಿಹಾಸವನ್ನು ಪುನರ್‌ರಚಿಸಬೇಕಾದ ಅಗತ್ಯವಿದೆ~ ಎಂಬುದು ಅಂಬೇಡ್ಕರ್ ಅವರ ಮತ್ತು ನೈಜ ಇತಿಹಾಸ ಸಂಶೋಧಕರ ಅಭಿಪ್ರಾಯ. ಇಂದು ಜಾನಪದ ವಿಶ್ವವಿದ್ಯಾಲಯವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ `ನೈಜ ಇತಿಹಾಸವನ್ನು ಕೆಲವೇ ಪ್ರಭಾವಿ ವ್ಯಕ್ತಿಗಳ ಹೇಳಿಕೆ, ಅವರು ಸೃಷ್ಟಿಸಿದ ಕೃತ್ರಿಮ ಐತಿಹ್ಯಗಳ (ಇತ್ತೀಚಿನ ಪುರಾಣ, ಕಾವ್ಯ, ವಚನ ಇತ್ಯಾದಿ) ಆಧಾರದಲ್ಲಿ ರಚಿಸಲು ಹೊರಟು ಚರಿತ್ರೆಯನ್ನು ಸಮಾಧಿ ಮಾಡಲು ಹೊರಟಿದೆಯೇನೋ ಎಂಬ ಆತಂಕ  ಕಾಡುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry