ಗ್ರಾಮ ಪಂಚಾಯಿತಿಗೆ ಜಿ.ಪಂ, ತಾ.ಪಂ. ಅಧ್ಯಕ್ಷರ ಭೇಟಿ

7

ಗ್ರಾಮ ಪಂಚಾಯಿತಿಗೆ ಜಿ.ಪಂ, ತಾ.ಪಂ. ಅಧ್ಯಕ್ಷರ ಭೇಟಿ

Published:
Updated:

ಸೋಮವಾರಪೇಟೆ: ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಶಿವಪ್ಪ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅರೆಯೂರು ಜಯಣ್ಣ ಅವರು ಗುರುವಾರ ತಾಲ್ಲೂಕಿನ ಕಿರಗಂದೂರು, ಶಾಂತಳ್ಳಿ ಹಾಗೂ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು.ಸಮೀಪದ ಕಿರಗಂದೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಅರೆಯೂರು ಜಯಣ್ಣ, ಪಂಚಾಯಿತಿ ಕಾಮಗಾರಿಗಳ ವಿವರ, ಕಾರ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ, ಸ್ಥಳೀಯರಿಂದ ಅಹವಾಲುಗಳನ್ನು ಸ್ವೀಕರಿಸಿದರು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ನಿಗದಿತ ಸಮಯಗಳಲ್ಲಿ ಕಾಮಗಾರಿಗಳ ಪ್ರಗತಿಯನ್ನು ಕಂಪ್ಯೂಟರ್‌ಗೆ ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಕಂದಾಯ ಕಟ್ಟದಿರುವ ಮನೆಗಳಿಗೆ ನೋಟಿಸ್ ಜಾರಿ ಮಾಡಿ, ಸ್ಪಂದಿಸದಿದ್ದರೆ ನೀರಿನ ಸಂಪರ್ಕವನ್ನು ಕಡಿತಗೊಳಿಸಿ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅರೆಯೂರು ಜಯಣ್ಣ ಹೇಳಿದರು.ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿರುವ ಶೇ 25ರ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗುತ್ತದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಪಂಚಾಯಿತಿ ಒಳಗೆ ರಾಜಕೀಯ ಮಾಡಬಾರದು ಎಂದು ಅವರು ಕಿವಿಮಾತು ಹೇಳಿದರು.ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಕಚೇರಿಯ ದಾಖಲಾತಿಗಳನ್ನು ಪರಿಶೀಲಿಸಿ, ಕೆಲವೊಂದು ದಾಖಲಾತಿಗಳು ಸಮರ್ಪಕವಾಗಿರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಬಸವ, ಇಂದಿರಾ ಆವಾಸ್ ಸೇರಿದಂತೆ ಇನ್ನಿತರ ಯೋಜನೆಗಳಡಿ ಮನೆ ಮಂಜೂರಾಗಿರುವ ಫಲಾನುಭವಿ ಗಳಲ್ಲಿ ಕೆಲವರು ಇನ್ನೂ ಮನೆ ನಿರ್ಮಾಣಕ್ಕೆ ಮುಂದಾಗದಿರುವ ಬಗ್ಗೆ ಸಂಬಂಧಿಸಿದ ನಿಗಮಗಳು ವರದಿ ಕೇಳಿದ್ದು, ಈ ತಿಂಗಳ ಒಳಗೆ ಎಲ್ಲಾ ಮನೆಗಳ ಕಾಮಗಾರಿ ಪ್ರಾರಂಭಿಸಬೇಕು. ತಪ್ಪಿದಲ್ಲಿ ಅನುದಾನ ಹಿಂದಕ್ಕೆ ಹೋಗುತ್ತದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಪ್ಪ, ಪಂಚಾಯಿತಿ ಅಧ್ಯಕ್ಷ ಬೆಳ್ಳಿಯಪ್ಪ, ಅಭಿವೃದ್ಧಿ ಅಧಿಕಾರಿ ಚಂಗಪ್ಪ ಸೇರಿದಂತೆ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry