ಗ್ರಾಮ ಪಂಚಾಯಿತಿ ಕಾಗದ ಪತ್ರಗಳಿಗೆ ಬೆಂಕಿ!

7

ಗ್ರಾಮ ಪಂಚಾಯಿತಿ ಕಾಗದ ಪತ್ರಗಳಿಗೆ ಬೆಂಕಿ!

Published:
Updated:

ಲಕ್ಷ್ಮೇಶ್ವರ: ಸಮೀಪದ ಬಟ್ಟೂರು ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಸಂಗ್ರಹಿಸಿಟ್ಟಿದ್ದ ಕಾಗದ ಪತ್ರಗಳಿಗೆ ಬುಧವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದ್ದು ಮಹತ್ವದ ದಾಖಲೆಗಳು ಸುಟ್ಟಿವೆ. ಆದರೆ ಬೆಂಕಿಗೆ ಕಾರಣ ಏನು ಎಂದು ಗೊತ್ತಾಗಿಲ್ಲ.ದಿನ ನಿತ್ಯದಂತೆ ಪಂಚಾಯ್ತ ಕಾರ್ಯಾಲಯದ ಬಾಗಿಲನ್ನು ತೆರೆಯಲಾಗಿತ್ತು. ಆದರೆ ಮಧ್ಯಾಹ್ನದ ವೇಳೆ ಯಾರೂ ಇಲ್ಲದ ಸಮಯದಲ್ಲಿ ಕಾಗದ ಪತ್ರಗಳಿಗೆ ಬೆಂಕಿ ಹೊತ್ತಿಕೊಂಡಿರುವುದು ನಾನಾ ಸಂಶಯಗಳಿಗೆ ಕಾರಣವಾಗಿದೆ.ಪಿಡಿಒ, ಕಾರ್ಯದರ್ಶಿ ಹಾಗೂ ಕ್ಲಾರ್ಕ್ ದಿನಾಲೂ ಪಂಚಾಯ್ತಿಗೆ ಬರುವುದಿಲ್ಲ. ನೆಪಕ್ಕೆ ಮಾತ್ರ ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಾರೆ. ಹೀಗಾಗಿ ಕಳೆದ ಎರಡ್ಮೂರು ತಿಂಗಳಿಂದ ಉದ್ಯೋಗ ಖಾತ್ರಿ ಯೋಜನೆ ತಟಸ್ಥವಾಗಿದೆ ಎಂದು ಗುರುವಾರ ಪಂಚಾಯ್ತಿಗೆ ಭೇಟಿ ನೀಡಿದ ಸುದ್ದಿಗಾರರಿಗೆ ಗ್ರಾಮ ಪಂಚಾಯ್ತಿ ಸದಸ್ಯ ಮಾಲತೇಶ ಹೊಳಲಾಪುರ ತಿಳಿಸಿದರು.ಇನ್ನೊಬ್ಬ ಸದಸ್ಯ ಬಸವರಾಜ ದಾನಿ ಕಾಗದ ಪತ್ರಗಳಿಗೆ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಯಾವ ಯಾವ ಕಾಗದ ಪತ್ರಗಳು ಸುಟ್ಟಿವೆ ಎಂಬುದು ಅಧಿಕಾರಿಗಳೇ ತಿಳಿಸಬೇಕು ಎಂದು ಹೇಳಿದ ಅವರು ಅಧಿಕಾರಿಗಳು ಮಾತ್ರ ಸರಿಯಾಗಿ ಪಂಚಾಯ್ತಿಗೆ ಬರುವುದಿಲ್ಲ ಎಂದು ದೂರಿದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry