ಶನಿವಾರ, ನವೆಂಬರ್ 23, 2019
18 °C

ಗ್ರಾಮ ಪಂಚಾಯ್ತಿ ಸದಸ್ಯನಿಂದಲೇ ಕುಡಿಯುವ ನೀರಿನ ದುರ್ಬಳಕೆ

Published:
Updated:

ಚಿಕ್ಕಜಾಜೂರು: ಗ್ರಾಮ ಪಂಚಾಯ್ತಿ ಸದಸ್ಯನಿಂದಲೇ ಗ್ರಾಮಕ್ಕೆ ಪೂರೈಕೆ ಆಗುತ್ತಿರುವ ಕುಡಿಯುವ ನೀರಿನ ದುರ್ಬಳಕೆ ಆಗುತ್ತಿರುವುದು ಬೆಳಕಿಗೆ ಬಂದಿದೆ.ಸಮೀಪದ ಉಡೊಗೆರೆ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯ ಓಂಕಾರಪ್ಪ ಅವರು ಗ್ರಾಮದ ಜನತೆಗೆ ಪೂರೈಕೆ ಆಗುತ್ತಿದ್ದ ನೀರನ್ನು ಸ್ವಂತಕ್ಕೆ ಬಳಸಿಕೊಂಡಿರುವ ಘಟನೆ ಶನಿವಾರ ರಾತ್ರಿ ಬೆಳಕಿಗೆ ಬಂದಿದೆ. ಗ್ರಾಮದಲ್ಲಿ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಜ. 6ರಂದು ಬಿಂದಿಗೆ ಹಿಡಿದು ರಸ್ತೆ ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ `ಪ್ರಜಾವಾಣಿ'ಯಲ್ಲಿ ಸುದ್ದಿ ಪ್ರಕಟವಾಗಿತ್ತು. ಇದರ ಪರಿಣಾಂ ಗ್ರಾಮ ಪಂಚಾಯ್ತಿ ಅಧಿಕಾರಿಗಳು  ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಕಳೆದ ವಾರದವರೆಗೂ ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆ ಆಗುತ್ತಿದ್ದು, ದಿಢೀರನೆ ಒಂದು ವಾರದಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬರಲಾರಂಭಿಸಿತು.ಯುಗಾದಿ ಹಬ್ಬದಲ್ಲಂತೂ ಸಮಸ್ಯೆ ಹೇಳತೀರದಾಗಿತ್ತು. ಈ ಬಗ್ಗೆ ಗ್ರಾಮದ ಕೆಲವು ಯುವಕರು ಕಾರಣ ಹುಡುಕಲಾರಂಭಿಸಿದಾಗ ಗ್ರಾಮದ ಹೊರ ಭಾಗದಲ್ಲಿ ಕೊಳವೆ ಬಾವಿಯಿಂದ ತರಲಾಗಿದ್ದ ಪೈಪ್ ಲೈನನ್ನು ಮದ್ಯದಲ್ಲೇ ತಡೆದು, ಓಂಕಾರಪ್ಪ ಅವರು ಈ ಪೈಪ್ ಲೈನ್‌ನಿಂದ ತಮ್ಮ ಮನೆ ಹಾಗೂ ತೋಟಕ್ಕೆ ನೀರನ ಸಂಪರ್ಕ ಮಾಡಿಕೊಂಡಿರುವುದು ಕಂಡು ಬಂದಿತು. ಈ ಬಗ್ಗೆ ಶನಿವಾರ ರಾತ್ರಿ ಗ್ರಾಮಸ್ಥರು ಓಂಕಾರಪ್ಪ ಅವರನ್ನು ಕೇಳಿದಾಗ, ಇದು ನನ್ನ ಇಷ್ಟ ಏನಾದರೂ ಮಾಡಿಕೊಳ್ಳಿ ಎಂದು ಅವ್ಯಾಚ ಪದಗಳಿಂದ ಬೈಯ್ಯುತ್ತಾರೆ ಎಂದು ಗ್ರಾಮದ ರಾಜಣ್ಣ, ಪ್ರಕಾಶ್, ಎಸ್. ಮಂಜಪ್ಪ, ಸಿದ್ದೇಶ್ ತಿಳಿಸಿದ್ದಾರೆ.ಈ ಬಗ್ಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಅವರು ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ಚಿಕ್ಕಜಾಜೂರಿನ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಓಂಕಾರಪ್ಪ ಅವರನ್ನು ಕರೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಿಎಸ್‌ಐ ರವೀಶ್ ತಿಳಿಸಿದ್ದಾರೆಂದು ಬಿ. ರಾಜು, ಮಂಜುನಾಥ್, ಪ್ರಕಾಶ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)