ಗ್ರಾಮ ಭಾರತ ಗುರುತಿಸಲು ಪತ್ರಕರ್ತರಿಗೆ ಸಲಹೆ

7

ಗ್ರಾಮ ಭಾರತ ಗುರುತಿಸಲು ಪತ್ರಕರ್ತರಿಗೆ ಸಲಹೆ

Published:
Updated:

ಬೆಂಗಳೂರು: `ಪತ್ರಕರ್ತರ ಪಾಲಿಗೆ ಭಾರತ ಸ್ವರ್ಗವಿದ್ದಂತೆ. ಇಲ್ಲಿ ಪತ್ರಕರ್ತನಾದವನು ಸಮಸ್ಯೆಗಳನ್ನು ಹುಡುಕುತ್ತಾ ಹೋಗುವ ಅಗತ್ಯವೇ ಇಲ್ಲ, ಬದಲಾಗಿ ಸಮಸ್ಯೆಗಳೇ ಪತ್ರಕರ್ತನ ಮುಖಕ್ಕೆ ಬಂದು ಬಡಿಯುತ್ತವೆ~ ಎಂದು ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಹೇಳಿದರು.ನಗರದಲ್ಲಿ ಶನಿವಾರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜರ್ನಲಿಸಂ ಅಂಡ್ ನ್ಯೂ ಮೀಡಿಯಾ ಸಂಸ್ಥೆಯ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಭಾರತದ ಸಮಸ್ಯೆಗಳ ಬಗ್ಗೆ ಬರೆಯಲು ಇಂದಿನ ಯುವ ಪತ್ರಕರ್ತರಿಗೆ ಸಾಕಷ್ಟು ಅವಕಾಶಗಳಿದ್ದು, ಇಲ್ಲಿನ ಸಮಸ್ಯೆಗಳೇ ಯುವ ಪತ್ರಕರ್ತರು ಬೆಳೆಯುವ ಸಾಧ್ಯತೆಗಳನ್ನು ವಿಸ್ತರಿಸುತ್ತವೆ. ಹೀಗಾಗಿ ನಮ್ಮ ದೇಶದಲ್ಲಿ ಯುವ ಪತ್ರಕರ್ತರು ಇರುವ ಸಮಸ್ಯೆಗಳನ್ನು ಪರಿಹರಿಸುವ ಕನಿಷ್ಠ ಪ್ರಯತ್ನ ಪಟ್ಟರೂ ದೇಶದ ಹಿತಕ್ಕೆ ಅದು ದೊಡ್ಡ ಕಾಣಿಕೆಯೇ ಆಗುತ್ತದೆ~ ಎಂದು ಅವರು ಅಭಿಪ್ರಾಯ ಪಟ್ಟರು.`ಮಹತ್ವಾಕಾಂಕ್ಷೆಗಳನ್ನು ಹೊತ್ತು ಮಾಧ್ಯಮ ಕ್ಷೇತ್ರಕ್ಕೆ ಕಾಲಿಡುವ ಯುವ ಪತ್ರಕರ್ತರಿಗೆ ಬಹುಪಾಲು ನಿರಾಸೆಯೇ ಕಾದಿರುತ್ತದೆ. ಗುಮಾಸ್ತಿಕೆಯ ಕೆಲಸ ಮಾಡಲು ಪತ್ರಿಕೋದ್ಯಮವನ್ನು ಅಧ್ಯಯನ ಮಾಡಬೇಕಿತ್ತೇ ಎಂಬ ಸಿನಿಕತನ ಬಹುಬೇಗ ಯುವ ಪತ್ರಕರ್ತರನ್ನು ಆವರಿಸುತ್ತದೆ. ಆದರೆ ನಿಜವಾಗಿ ಈ ದೇಶದ ಮೂಲದಲ್ಲಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಜವಾಬ್ದಾರಿ ತಮ್ಮ ಮೇಲಿದೆ ಎಂಬುದನ್ನು ಯುವ ಪತ್ರಕರ್ತರು ಮರೆಯಬಾರದು~ ಎಂದು ಅವರು ಕಿವಿಮಾತು ಹೇಳಿದರು.`ಮಾಧ್ಯಮ ಜಗತ್ತು ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಮಾಧ್ಯಮದ ಮಾಲೀಕತ್ವ ಬೃಹತ್ ಬಂಡವಾಳಗಾರರ ಕೈ ಸೇರಿದೆ. ಬಂಡವಾಳಶಾಹಿಗಳಿಗೆ ತಾವು ಹೂಡಿದ ಹಣದಿಂದ ಲಾಭ ಬರಬೇಕೆಂಬ ಉದ್ದೇಶ ಬಿಟ್ಟು ಬೇರಾವುದೇ ಸಾಮಾಜಿಕ ಕಾಳಜಿ ಬೇಕಿಲ್ಲ. ಹೀಗಾಗಿ ಮಾಧ್ಯಮ ಜಗತ್ತಿನ ಮೌಲ್ಯಗಳೇ ಕಣ್ಮರೆಯಾಗುತ್ತಿವೆ. ಪತ್ರಕರ್ತರು ಮಾಧ್ಯಮ ಸಂಸ್ಥೆಗಳಿಗೆ ಮಾರಿಕೊಳ್ಳುವುದು ತಮ್ಮ ದುಡಿಮೆಯನ್ನೇ ಹೊರತು ತಮ್ಮ ಆತ್ಮವನ್ನಲ್ಲ ಎಂಬ ಸತ್ಯವನ್ನು ಅರಿಯಬೇಕು. ಇಂದಿನ ಮಾಧ್ಯಮದ ಕಲುಷಿತ ವಾತಾವರಣದಲ್ಲೂ, ಬಡತನದ ನಿಜವಾದ ಗ್ರಾಮೀಣ ಭಾರತವನ್ನು ಗುರುತಿಸುವ ಕೆಲಸ ಯುವ ಪತ್ರಕರ್ತರಿಂದ ಆಗಬೇಕು~ ಎಂದು ಅವರು ಆಶಿಸಿದರು.`ಮಾಧ್ಯಮ ಸಂಸ್ಥೆಗಳು ಸ್ವಯಂ ನಿಯಂತ್ರಣದ ಬಗ್ಗೆ ಮಾತನಾಡುತ್ತಲೇ ಇವೆಯೇ ಹೊರತು ಯಾವ ಸಂಸ್ಥೆಗಳೂ ಈವರೆಗೂ ಸ್ವಯಂ ನಿಯಂತ್ರಣಕ್ಕೆ ಮುಂದಾಗಿಲ್ಲ. ಹಣಕ್ಕಾಗಿ ಮೌಲ್ಯಗಳನ್ನೂ ಮಾರಿಕೊಳ್ಳುವ ಮಟ್ಟಕ್ಕೆ ಇಂದಿನ ಬಹುತೇಕ ಪತ್ರಿಕೆಗಳ ಮಾಲೀಕರು ಇಳಿದಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. `ಹಣಕ್ಕಾಗಿ ಸುದ್ದಿ~ ಎಂಬ ಪರಿಕಲ್ಪನೆಯೇ ಹೀನವಾದುದು~ ಎಂದು ಅವರು ವಿಷಾದಿಸಿದರು.`ಭಾರತದ ಅಭಿವೃದ್ಧಿಯ ಪಥವೇ ವೈರುಧ್ಯದಿಂದ ಕೂಡಿದ್ದು, ದೇಶದಲ್ಲಿ ಒಂದು ಕಡೆಗೆ ಅತಿಯಾದ ಬಡತನ ಹಾಗೂ ಮತ್ತೊಂಡೆದೆ ಅತಿಯಾದ ಶ್ರೀಮಂತಿಕೆ ಮೆರೆಯುತ್ತಿದೆ. ತಾವು ಮಾಡುತ್ತಿರುವುದೇ ದೇಶೋದ್ಧಾರದ ಕೆಲಸ ಎಂದು ಬಿಂಬಿಸಿಕೊಳ್ಳುತ್ತಿರುವ ದೇಶದ ನೀತಿ ನಿರೂಪಕರು ನಿಜವಾದ ಭಾರತವನ್ನು ಮರೆತಿದ್ದಾರೆ.

 

ಸರಾಸರಿ ವಾರಕ್ಕೊಮ್ಮೆ ವಿದೇಶ ಪ್ರವಾಸ ಮಾಡುವ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್‌ಸಿಂಗ್ ಅಹ್ಲುವಾಲಿಯಾ ಅವರ ದಿನದ ಖರ್ಚು ಸುಮಾರು ನಾಲ್ಕು ಸಾವಿರ ಡಾಲರ್‌ಗಳಷ್ಟಿದೆ. ಇವರು ದೇಶದ ಬಡತನದ ರೇಖೆಯನ್ನು ಗ್ರಾಮೀಣ ಪ್ರದೇಶದಲ್ಲಿ ಇಪ್ಪತ್ತೆರಡು ಹಾಗೂ ನಗರ ಪ್ರದೇಶಗಳಲ್ಲಿ ಮೂವತ್ತೆರಡು ರೂಪಾಯಿಗಳಲ್ಲಿ ಅಳೆಯುವುದು ಎಷ್ಟು ಸರಿ~ ಎಂದು ಅವರು ಪ್ರಶ್ನಿಸಿದರು.ಸಮಾರಂಭದಲ್ಲಿ 65 ಜನ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಹಾಗೂ ಇಬ್ಬರಿಗೆ ಡಿಪ್ಲೋಮಾ ಪದವಿ ಪ್ರದಾನ ಮಾಡಲಾಯಿತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜರ್ನಲಿಸಂ ಅಂಡ್ ನ್ಯೂ ಮೀಡಿಯಾ ಸಂಸ್ಥೆಯ ಬೆಂಗಳೂರು ಕೇಂದ್ರದ ಮುಖ್ಯಸ್ಥೆ ಕಂಚನ್ ಕೌರ್, ಹಿರಿಯ ಪತ್ರಕರ್ತರಾದ ಸಂಸ್ಥೆಯ ಅತಿಥಿ ಉಪನ್ಯಾಸಕ ನಾಗೇಶ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry