ಗ್ರಾಮ ಸಾಧನೆ ಮೆಚ್ಚಿದ ಬ್ರಿಟನ್ ಸಚಿವ

7

ಗ್ರಾಮ ಸಾಧನೆ ಮೆಚ್ಚಿದ ಬ್ರಿಟನ್ ಸಚಿವ

Published:
Updated:
ಗ್ರಾಮ ಸಾಧನೆ ಮೆಚ್ಚಿದ ಬ್ರಿಟನ್ ಸಚಿವ

ತುಮಕೂರು: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಸಾಧನೆ ಕಂಡು ಬ್ರಿಟನ್ ಸಮುದಾಯ ಮತ್ತು ಸ್ಥಳೀಯಾಡಳಿತ ಸಚಿವ ಎರಿಕ್ ಪಿಕಲ್ಸ್ ಅವರ ತಂಡ ತಂಡ ತಲೆದೂಗಿತು.

ದೇಶದ ಸ್ಥಳೀಯ ಸಂಸ್ಥೆಗಳ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಅವುಗಳ ಪಾತ್ರದ ಕುರಿತು ಅಧ್ಯಯನ ನಡೆಸಲು ಪಿಕಲ್ಸ್ ನೇತೃತ್ವದಲ್ಲಿ  ಬ್ರಿಟನ್‌ನ ನಾಲ್ವರು ಅಧಿಕಾರಿಗಳ ತಂಡ ಜಿಲ್ಲೆಗೆ ಮಂಗಳವಾರ ಭೇಟಿ ನೀಡಿತ್ತು.ಬೆಳಿಗ್ಗೆ ನಗರ ಸಮೀಪದ ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ ತಂಡಕ್ಕೆ ಅಲ್ಲಿನ ಅಧಿಕಾರಿಗಳು, ವಿಜ್ಞಾನಿಗಳು ಕೇಂದ್ರದ ಕಾರ್ಯ   ವೈಖರಿ, ಸಂಶೋಧನೆಗಳ ಕುರಿತು ಮಾಹಿತಿ ನೀಡಿದರು. ಕೇಂದ್ರದ ನೂತನ ತಳಿಗಳ ಫಾರಂಗೆ ಭೇಟಿ ನೀಡಿದ ತಂಡವು ಸಾಧನೆ ಕಂಡು ಬೆರಗಾಯಿತು. ಸುಮಾರು 45 ನಿಮಿಷ ಕಾಲ ಕೇಂದ್ರದ ಫಾರಂನಲ್ಲಿದ್ದ ತಂಡ ಮಾವು, ತೆಂಗು,   ಅಡಿಕೆಯ ವಿವಿಧ ತಳಿಗಳ ಕುರಿತು ಮಾಹಿತಿ ಪಡೆಯಿತು. ತೆಂಗು, ಅಡಿಕೆ ನೆಡುವ ಕುರಿತು ಮಾಹಿತಿ ಪಡೆದು, ಅಚ್ಚರಿ ವ್ಯಕ್ತಪಡಿಸಿದರು,ನಂತರ ನಡೆದ ಹಿರೇಹಳ್ಳಿ ಗ್ರಾಮ ಪಂಚಾಯಿತಿ ಸಭೆ ಮತ್ತು ಗ್ರಾಮ ಸಭೆಯಲ್ಲಿ ತಂಡವು ಭಾಗವಹಿಸಿತು. ಗ್ರಾಮ ಸಭೆಯ ನಡಾವಳಿಗಳು, ಫಲಾನುಭವಿಗಳ ಆಯ್ಕೆಯ ವಿಧಾನ ಕಂಡು ಅಚ್ಚರಿಪಟ್ಟಿತು. ‘ಇದೊಂದು ಪಾರದರ್ಶಕತೆಯ ಆಯ್ಕೆ’ ಎಂದು ಮೆಚ್ಚುಗೆಯನ್ನು ಬ್ರಿಟನ್ ಸಚಿವರು ವ್ಯಕ್ತಪಡಿಸಿದರು. ಈ ಸಂದರ್ಭ ಶಾಸಕ  ಬಿ.ಸುರೇಶ್‌ಗೌಡ ಹಾಜರಿದ್ದರು.

ಹಿರೇಹಳ್ಳಿಯಿಂದ ಜಿ.ಪಂ.ಗೆ ಭೇಟಿ ಇತ್ತ ತಂಡವು ಜಿ.ಪಂ. ಸದಸ್ಯರೊಂದಿಗೆ ಸಭೆ ನಡೆಸಿತು. ಜಿ.ಪಂ. ಸದಸ್ಯ ವೈ.ಎಚ್. ಹುಚ್ಚಯ್ಯ ಅವರು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಕಟ್ಟಡದ ಕೊರತೆ, ಸೌಲಭ್ಯಗಳ ಕುರಿತು ಪ್ರಶ್ನೆ ಕೇಳುವ ಮೂಲಕ ಸಭೆ ನಡೆಯುವ ಮಾದರಿ ತೋರಿಸಿಕೊಟ್ಟರು. ಜಿ.ಪಂ. ಸಿಇಒ ಶಿವಯೋಗಿ ಚ.ಕಳಸದ ದುಭಾಷಿಯಾಗಿದ್ದರು.ಗ್ರಾಮ ಪಂಚಾಯಿತಿಗಳ ಆಡಳಿತ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಜಲ ನಿರ್ಮಲ ಯೋಜನೆ, ಸಂಪೂರ್ಣ ಸ್ವಚ್ಛತಾ ಆಂದೋಲನ ಯಶಸ್ಸು, ಇ- ಆಡಳಿತ, ಸುವರ್ಣ ಗ್ರಾಮೋದಯ ಮುಂತಾದ ಯೋಜನೆಗಳನ್ನು ಗ್ರಾ.ಪಂ.ಗಳ ಮೂಲಕ ಅನುಷ್ಠಾನಗೊಳಿಸಿದ ಯಶಸ್ಸಿನ ಗಾಥೆಯನ್ನು ತೋರಿಸಲಾಯಿತು. ‘ತಾಂತ್ರಿಕತೆ ಮೂಲಕ ಸಾಮಾನ್ಯ ಜನರಿಗೂ ಮಾಹಿತಿ ನೀಡುವ ಪಂಚತಂತ್ರದ ಕಾರ್ಯ ಶ್ಲಾಘನೀಯ’ ಎಂದು ಸಚಿವರು ಕೊಂಡಾಡಿದರು. ಸಚಿವ ಎರಿಕ್ ಪಿಕಲ್ಸ್   ಅವರಿಗೆ ಜಿಲ್ಲಾಡಳಿತ ವತಿಯಿಂದ ಮೈಸೂರು ಪೇಟ ತೊಡಿಸಿ ಏಲಕ್ಕಿ ಹಾರ ಹಾಕಿ ಗೌರವಿಸಲಾಯಿತು.ಬ್ರಿಟನ್‌ನ ಭಾರತೀಯ ಉಪ ರಾಯಭಾರಿ ರಿಚರ್ಡ್ ಹೈಡ್, ರಾಯಭಾರಿ ಕಚೇರಿಯ ರಿಚರ್ಡ್ ಎಡ್ವರ್ಡ್, ಜಿಲ್ಲಾಧಿಕಾರಿ ಡಾ.ಸಿ. ಸೋಮಶೇಖರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ನಾರಾಯಣಸ್ವಾಮಿ, ಜಿ.ಪಂ. ಕಾರ್ಯದರ್ಶಿ (ಅಭಿವೃದ್ಧಿ) ಪ್ರಕಾಶ್ ಮತ್ತಿತರರಿದ್ದರು. ನಂತರ ತಂಡವು ಮಹಾನಗರ ಪಾಲಿಕೆಗೆ ಭೇಟಿ ನೀಡಿ ತುಮಕೂರು ಒನ್ ಕೇಂದ್ರದ ಕಾರ್ಯವೈಖರಿ ತಿಳಿದುಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry