ಗುರುವಾರ , ಮೇ 6, 2021
25 °C
ಪಂಚಾಯತ್‌ರಾಜ್‌ ಕಾಯ್ದೆಗೆ ಕಾಯಕಲ್ಪ

ಗ್ರಾಮ ಸ್ವರಾಜ್ಯದ ಕನಸು ಚಿಗುರೀತೆ?

ರವೀಂದ್ರ ಭಟ್ Updated:

ಅಕ್ಷರ ಗಾತ್ರ : | |

1993ರ ಕರ್ನಾಟಕ ಪಂಚಾಯತ್‌­ರಾಜ್‌ ಕಾಯ್ದೆ ಅನುಷ್ಠಾನಕ್ಕೆ ಬಂದು 20 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ ಅದರ ಪುನರಾವಲೋಕನ ಮತ್ತು ಅಗತ್ಯವಾದರೆ ಸೂಕ್ತ ತಿದ್ದುಪಡಿಯನ್ನು ಮಾಡಲು ಶಾಸಕ ಕೆ.ಆರ್‌.­ರಮೇಶಕುಮಾರ್‌ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸ­ಲಾಗಿತ್ತು. ಈ ಹಿಂದೆ ನಜೀರ್‌ಸಾಬ್‌ ಅವರ ಕನಸಿನ ಕೂಸಾಗಿ ಹೊರಬಂದ ಪಂಚಾಯತ್‌ರಾಜ್‌ ವ್ಯವಸ್ಥೆಯಲ್ಲಿಯೇ ಕೆಲಸ ಮಾಡಿದ ಸಿ.ನಾರಾಯಣ­ಸ್ವಾಮಿ, ಜಿ.ಸಿ.ಬೈರಾರೆಡ್ಡಿ, ಡಿ.ಆರ್‌.ಪಾಟೀಲ್‌ ಅವರ­ಲ್ಲದೆ ಪಂಚಾಯತ್‌ರಾಜ್‌ ವ್ಯವಸ್ಥೆಯ ಬಗ್ಗೆ ಸಾಕಷ್ಟು ಕೆಲಸ ಮಾಡಿದ ಎಂ.ಚಂದ್ರ ಪೂಜಾರಿ, ನಂದನಾ ರೆಡ್ಡಿ, ವೆಂಕಟರಾವ್‌ ಘೋರ್ಪಡೆ ಮೊದಲಾದ ಒಟ್ಟು 22 ಮಂದಿ ಸಮಿತಿಯಲ್ಲಿದ್ದರು.ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವುದಕ್ಕೆ ಇದೊಂದು ಉತ್ತಮ ಹೆಜ್ಜೆ ಎಂದು ಸಮಿತಿಯ ಅಧ್ಯಕ್ಷ ಕೆ.ಆರ್‌.ರಮೇಶಕುಮಾರ್‌ ಅವರು ಹೇಳಿದ್ದಾರೆ. ಸಮಿ­ತಿಯ ಶಿಫಾರಸುಗಳನ್ನು ನೋಡಿದರೆ ನಜೀರ್‌­ಸಾಬ್‌ ಜಾರಿಗೆ ತಂದ ಪಂಚಾಯತ್‌ರಾಜ್‌ ವ್ಯವಸ್ಥೆ­ಯಲ್ಲಿನ ಸಾಕಷ್ಟು ವಿಚಾರಗಳು ಈ ಸಮಿತಿಯ ಸದಸ್ಯರ ಮೇಲೆ ಪ್ರಭಾವ ಬೀರಿದೆ ಎನ್ನುವುದನ್ನು ತಳ್ಳಿ ಹಾಕಲಾಗದು.ರಾಜ್ಯದಲ್ಲಿ ಅಧಿಕೃತವಾಗಿ ಪಂಚಾಯತ್‌ರಾಜ್‌ ವ್ಯವಸ್ಥೆ ಜಾರಿಯಾಗಿ 30 ವರ್ಷಗಳಾದರೂ ಇನ್ನೂ ಗ್ರಾಮ­ಗಳು ಸ್ವಾವಲಂಬಿಯಾಗದೇ ಇರುವುದು ಮಾತ್ರ ದುರಂತ. ಅದರಿಂದಾಗಿ ಗ್ರಾಮಗಳ ಬಲವೃದ್ಧಿಗೆ ಹೊಸತಾದ ವಿಭಿನ್ನ ದೃಷ್ಟಿಕೋನದ ವ್ಯವಸ್ಥೆಯೊಂದು ಜಾರಿಗೆ ಬರಬೇಕಾಗಿದ್ದು ಈ ಕಾಲದ ತುರ್ತು ಅಗತ್ಯವಾಗಿತ್ತು. ಅದಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದ್ದು ಮೆಚ್ಚಬಹುದಾದ ವಿಷಯ. 2015ರ ಮೇ ತಿಂಗಳೊಳಗೆ ಗ್ರಾಮ ಪಂಚಾ­ಯಿತಿ ಚುನಾ­ವಣೆ ನಡೆಯಲೇಬೇಕಾಗಿರು­ವುದರಿಂದ ಅಷ್ಟ­ರ­ಲ್ಲಿಯೇ ಇಂತಹ ಕಾಯ್ದೆ ಮಾಡಲು ಬಯ­ಸಿದ್ದು ಕೂಡ ಸ್ವಾಗತಾರ್ಹವಾದ ವಿಷಯ. ಆದರೆ ಸಮಿತಿ ಗ್ರಾಮ ಸ್ವ­ರಾಜ್ಯದ ಕನಸು ನನಸು ಮಾಡುವುದಕ್ಕೆ ಇನ್ನಷ್ಟು ಕಠಿಣ ಕ್ರಮಗಳನ್ನು ಶಿಫಾರಸು ಮಾಡಬೇಕಿತ್ತು ಎನ್ನಿಸುತ್ತದೆ.ನಮ್ಮ ದೇಶದಲ್ಲಿ ಕಾಯ್ದೆ ಮಾಡುವ ಜನರಿಗೆ ಬರವಿಲ್ಲ. ಕಾಯ್ದೆಗಳು ಅತ್ಯುತ್ತಮವಾಗಿಯೇ ಇರು­ತ್ತವೆ. ಆದರೆ ನಾವು ಯಾವಾಗಲೂ ಕಾಯ್ದೆ ಅನು­ಷ್ಠಾನ­ದಲ್ಲಿ ಸೋಲುತ್ತೇವೆ. ಈ ಎಚ್ಚರಿಕೆಯನ್ನು ಇಟ್ಟು­ಕೊಂಡೇ ಪಂಚಾಯತ್‌ರಾಜ್‌ ಕಾನೂನು ತಿದ್ದುಪಡಿ ಸಮಿತಿ ನೀಡಿದ ವರದಿಯನ್ನು ಅವಲೋಕಿಸಬೇಕು.ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ­ಯಾಗುತ್ತದೆ ಎಂದು ಮಹಾತ್ಮಾಗಾಂಧೀಜಿ ಅವರು ಹೇಳಿ­ದ್ದರು. ಆದರೆ ಶಾಸಕರು ತಮ್ಮ ಅಧಿಕಾರ ಕಡಿಮೆ­ಯಾಗುತ್ತದೆ ಎಂದು ತಿಳಿದುಕೊಂಡಿದ್ದರಿಂದ ನಮ್ಮ ರಾಜ್ಯದಲ್ಲಿ ಪಂಚಾಯತ್‌ರಾಜ್‌ ವ್ಯವಸ್ಥೆ ಹಾಳಾಗಿತ್ತು. ಎಲ್ಲ ಜವಾಬ್ದಾರಿಗಳನ್ನೂ ಶಾಸಕರೇ ಕಸಿದುಕೊಳ್ಳಲು ಮುಂದಾಗಿದ್ದರು. ರಮೇಶ್‌ಕುಮಾರ್‌ ಅವರ ನೇತೃತ್ವದ ಸಮಿತಿ ಈಗ ನೀಡಿರುವ ಶಿಫಾರಸುಗಳು ಅದನ್ನು ಕೊಂಚ ಕಡಿಮೆ ಮಾಡುವ ಹಾಗಿದೆ.ಗ್ರಾಮಸಭೆಗಳೇ ಎಲ್ಲ ನಿರ್ಣಯ ಕೈಗೊಳ್ಳುವ ಕೇಂದ್ರ­ಗಳಾಗಬೇಕು. ದುರ್ಬಲ ವರ್ಗದವರು, ಮಹಿಳೆಯರು, ಮಕ್ಕಳೂ, ಪರಿಶಿಷ್ಟರು ಗ್ರಾಮಸಭೆಗಳಲ್ಲಿ ಯಾವುದೇ ಭಯವಿಲ್ಲದೆ ಭಾಗಿಯಾಗಲು ಅವಕಾಶ ಇರಬೇಕು. ಪಂಚಾ­ಯತ್‌ಗಳು ಜನರಿಗೆ ಉತ್ತರದಾಯಿಯಾಗಿ­ರ­ಬೇಕು. ಯೋಜನೆ, ಹಣಕಾಸು ಹಾಗೂ ಕಾರ್ಯ­ನಿರ್ವಾ­ಹಕ ಜನಶಕ್ತಿಯಿಂದ ಗ್ರಾಮಸಭೆಗಳು ನಿರೂಪಿ­ಸಿದ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತಾಗಬೇಕು. ಮುಖ್ಯವಾಗಿ ಮೂರು ಹಂತದ ಪಂಚಾಯಿತಿಗಳ ಅಧ್ಯಕ್ಷರು, ಶಾಸ­ಕರು, ಸಂಸತ್‌ ಸದಸ್ಯರ ಕರ್ತವ್ಯ ಏನು ಎನ್ನು­ವುದನ್ನು ನಿಗದಿ ಮಾಡಬೇಕು. ಅವರು ತಮಗೆ ವಹಿಸಲಾದ ಕೆಲಸವನ್ನು ಸೂಕ್ತರೀತಿಯಲ್ಲಿ ಮಾಡಿದರೆ ಅಭಿವೃದ್ಧಿ ಎನ್ನುವುದು ಗಗನ ಕುಸುಮ ಏನಲ್ಲ.ಈಗ ಜಾರಿಯಲ್ಲಿರುವ ವ್ಯವಸ್ಥೆಯಲ್ಲಿ ಪಂಚಾಯತ್‌­ರಾಜ್‌ ಸಂಸ್ಥೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ವಿತರಿಸುವ ಏಜೆನ್ಸಿಗಳಾಗಿವೆ. ಮೇಲಿನಿಂದ ಕೆಳಕ್ಕೆ ಯೋಜನೆಗಳು ಹರಿದುಬರುತ್ತವೆ. ಆದರೆ ಇದು ತಿರುವುಮುರುವಾಗಬೇಕು. ಯೋಜನೆ­ಗಳು ಕೆಳಗಿನಿಂದ ಮೇಲಕ್ಕೆ ಹೋಗಬೇಕು. ಪಂಚಾಯತ್‌­ರಾಜ್‌ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಪಡಿಸಬೇಕು. ಈ ಬಗ್ಗೆ ಸಮಿತಿ ಗಮನ ನೀಡಿದೆ. ಆದರೆ ಆದಾಯದ ಮೂಲವನ್ನು ಗುರುತಿಸಿದ್ದರೆ ಚೆನ್ನಾಗಿತ್ತು.ಬಡತನ ನಿವಾರಣೆ, ಗ್ರಾಮಗಳ ಮೂಲಭೂತ ಸೌಲಭ್ಯ ಒದಗಿಸುವುದು ಪಂಚಾಯತ್‌ರಾಜ್‌ ಸಂಸ್ಥೆ­ಗಳ ಮೂಲ ಕರ್ತವ್ಯವಾಗಬೇಕು. ಪ್ರತಿಯೊಂದು ಸಮು­ದಾಯಗಳ ಅಗತ್ಯಗಳಿಗೆ ಅನುಗುಣವಾಗಿ ವೀಶೇಷ ಆದ್ಯತೆ ನೀಡಬೇಕು. ಆ ಮೂಲಕ ಯಾವ ಉದ್ದೇಶಕ್ಕೆ ಸಂಪ­ನ್ಮೂಲ ನೀಡಲಾಗಿದೆಯೋ ಅದಕ್ಕೆ ಬಳಕೆ­ಯಾಗುವಂತೆ ಮಾಡಬೇಕು. ಇವುಗಳ ಬಗ್ಗೆ ಸಮಿತಿಯ ವರದಿ ಸಾಕಷ್ಟು ಗಮನ ಹರಿಸಿದಂತೆ ಕಾಣುತ್ತದೆ.ಚುನಾವಣಾ ವೆಚ್ಚವನ್ನು ರಾಜ್ಯ ಸರ್ಕಾರವೇ ವಹಿಸಿ­ಕೊಳ್ಳಬೇಕು ಎನ್ನುವ ಶಿಫಾರಸು ಅತ್ಯಂತ ಸ್ವಾಗ­ತಾರ್ಹ. ಚುನಾವಣಾ ಭ್ರಷ್ಟಾಚಾರ ಕಡಿಮೆ­ಯಾದರೆ ಒಟ್ಟಾರೆ ಭ್ರಷ್ಟಾಚಾರದಲ್ಲಿ ಶೇ 50ಕ್ಕಿಂತಲೂ ಹೆಚ್ಚು ಪ್ರಮಾಣದ ಭ್ರಷ್ಟಾಚಾರ ಕಡಿಮೆಯಾಗುತ್ತದೆ. ನಮ್ಮ ದೇಶ ಭ್ರಷ್ಟಾಚಾರದಲ್ಲಿ ನಂಬರ್‌ ಒನ್‌ ಆಗಿರುವುದಕ್ಕೆ ನಮ್ಮ ಚುನಾವಣಾ ವ್ಯವಸ್ಥೆ ಹದಗೆಟ್ಟಿರುವುದು ಪ್ರಮುಖ ಕಾರಣ.ಈವರೆಗೆ ಚುನಾವಣೆಯ ದಿನ ಹಾಗೂ ಮತ ಎಣಿಕೆಯ ದಿನ ಮಾತ್ರ ಮದ್ಯದಂಗಡಿಗಳು ಬಂದ್‌ ಆಗುತ್ತಿದ್ದವು. ಆದರೆ ಈ ಸಮಿತಿ ಚುನಾವಣೆ ಘೋಷಣೆ­ಯಾದ ದಿನದಿಂದ ಚುನಾವಣೆ ಪ್ರಕ್ರಿಯೆ ಪೂರ್ಣ­ಗೊಳ್ಳುವವರೆಗೂ ಮದ್ಯದಂಗಡಿಗಳನ್ನು ಬಂದ್‌ ಮಾಡಲು ಶಿಫಾರಸು ಮಾಡಿದೆ. ಪಂಚಾಯಿತಿ ವ್ಯಾಪ್ತಿಯ ಎಲ್ಲ ಮದ್ಯದಂಗಡಿಗಳ ಕೀಲಿ ಜಿಲ್ಲಾಧಿಕಾರಿ­ಗಳ ಬಳಿ ಇರುವಂತೆ ಹೇಳಿದೆ. ಇದು ಕೂಡ ಸ್ವಾಗತಾರ್ಹವೇ ಆಗಿದೆ. ಗ್ರಾಮೀಣಾಭಿವೃದ್ಧಿಯಲ್ಲಿ ಸಂಪತ್ತಿನ ಸಮನಾದ ಹಂಚಿಕೆ ಬಹಳ ಮುಖ್ಯ. ರಾಜ್ಯ ಬಜೆಟ್‌ನ ಶೇ 30ರಷ್ಟು ಪಾಲನ್ನು ಇದಕ್ಕೆ ನಿಗದಿಗೊಳಿಸಬೇಕು ಎಂದು ಹೇಳಿರು­ವುದೂ ಕೂಡ ಸರಿಯಾಗಿಯೇ ಇದೆ.ಅಭಿವೃದ್ಧಿ ಜವಾಬ್ದಾರಿ: ನಮಗೆ ಈಗ ಬೇಕಾಗಿರುವುದು ಅಭಿವೃದ್ಧಿ ಕಾರ್ಯ­ಕ್ರಮ­ಗಳಲ್ಲ. ಅಭಿವೃದ್ಧಿಯ ಜವಾಬ್ದಾರಿ. ಗ್ರಾಮದ ಜನರು ತಮ್ಮ ಅಗತ್ಯಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿ­ಕೊಳ್ಳುವ ವ್ಯವಸ್ಥೆ. ಅದಕ್ಕೆ ತಕ್ಕಟ್ಟು ಹಣಕಾಸು ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಮಾತ್ರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡಬೇಕು. 29 ಅಭಿವೃದ್ಧಿ ವಿಷಯಗಳ ಬಗ್ಗೆ ಬೇರೆ ಬೇರೆ ಹಂತದ ಪಂಚಾ­ಯತ್‌ರಾಜ್‌ ವ್ಯವಸ್ಥೆಯಲ್ಲಿ ಎಲ್ಲೆಲ್ಲಿ ಏನೇನು ನಡೆಯ­ಬೇಕು ಎಂದು ಗುರುತಿಸಲಾಗಿರುವುದು ಸಮಿ­ತಿಯ ಉತ್ತಮ ಕಾರ್ಯಗಳಲ್ಲಿ ಒಂದು. ಅಭಿವೃದ್ಧಿ ಕಾರ್ಯಕ್ರಮಕ್ಕೆ ಯಾರು ಜವಾಬ್ದಾರರು, ಅದನ್ನು ಹೇಗೆ ನಿರ್ವಹಿಸಬೇಕು ಹಾಗೂ ಅದರಲ್ಲಿ ಗ್ರಾಮಸಭೆಗೆ ಇರುವ ಪಾತ್ರ ಏನು ಎನ್ನುವುದನ್ನು ಗುರುತಿಸಲಾಗಿದೆ. ಇದು ಕೂಡ ಅತ್ಯಂತ ಮಹತ್ವದ್ದು.ಅಭಿವೃದ್ಧಿ ಕಾರ್ಯಕ್ರಮಗಳನ್ನು ಇಲಾಖಾವಾರು ನೋಡದೆ ಯಾವ ಕಾಮಗಾರಿ ಎಲ್ಲಿ ಆಗಬೇಕು. ಎಷ್ಟು ಅಗತ್ಯ ಎನ್ನುವುದನ್ನು ನೋಡಿಕೊಂಡು ಅದನ್ನು ಮಾಡ­ಬೇಕು. ಅಲ್ಲಿಗೇ ಸಂಪನ್ಮೂಲದ ಹರಿವು ಬರುವಂತೆ ಮಾಡ­ಬೇಕು. ವೈಜ್ಞಾನಿಕ ಮತ್ತು ವಾಸ್ತವದ ನೆಲೆಯಲ್ಲಿ ಯೋಜನೆಗಳನ್ನು ಜಾರಿಗೊಳಿಸಬೇಕು.ಗ್ರಾಮಸಭೆಗಳಲ್ಲಿ ಜನರು ಭಾಗಿಯಾಗಲು ನಕ್ಷೆ ತಯಾರಿಸಿರುವುದು ಕೂಡ ಸ್ವಾಗತಾರ್ಹ ಕ್ರಮ. ತಳಮಟ್ಟದ ಯೋಜನೆಗಳಿಗೆ ಗ್ರಾಮಸಭೆ ಆಧಾರ­ವಾದರೆ ಎಲ್ಲ ತಾಲ್ಲೂಕು ಮಟ್ಟದ ಯೋಜನೆಗಳು ಜಿಲ್ಲಾ ಯೋಜನೆಗಳಿಗೆ ಆಧಾರ­ವಾಗಿರಬೇಕು.ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಮಂಡಳಿಗೆ ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಪ್ರತಿನಿಧಿ­ಗಳೂ ಸದಸ್ಯರಾಗಿರುತ್ತಾರೆ. ಅದೇ ರೀತಿ ಜಿಲ್ಲಾ ಯೋಜನಾ ಸಮಿತಿಯಲ್ಲಿಯೂ ಗ್ರಾಮ ಮಟ್ಟದ ಸದ­ಸ್ಯರೂ ಇರು­ತ್ತಾರೆ. ಜಿಲ್ಲಾ ಮಟ್ಟದ ಯೋಜನೆಗೂ ಗ್ರಾಮಸಭೆಯೇ ತಳಹದಿಯಾಗಿರ­ಬೇಕು ಎನ್ನುವುದು ಸಮಿತಿಯ ಒತ್ತಾಸೆ.ಸಂಪನ್ಮೂಲ: ರಾಜ್ಯ ಬಜೆಟ್‌ನ ಶೇ 30ರಷ್ಟು ಯೋಜನಾ ಸಂಪನ್ಮೂಲ ಮೂರು ಹಂತದ ಪಂಚಾಯತ್‌ರಾಜ್‌ ವ್ಯವಸ್ಥೆಗೆ ಮೀಸಲಾಗಿಡಬೇಕು. ಅದರಲ್ಲಿ ಶೇ 50ರಷ್ಟು ಹಣವನ್ನು ಮುಕ್ತ ನಿಧಿಯಾಗಿಡಬೇಕು. ಆಯಾ ಪಂಚಾಯತ್‌ ಸಂಸ್ಥೆಗಳ ಅಗತ್ಯ, ಯೋಜನೆಗಳ ಆದ್ಯತೆ ಮೂಲಕ ಸಂಪತ್ತು ಹಂಚಿಕೆಯಾಗಬೇಕು. ಗ್ರಾಮ ಪಂಚಾಯತ್‌ಗಳಿಗೆ ಆದಾಯದ ಮೂಲಗಳನ್ನು ಗುರುತಿಸಬೇಕು. ಅನುದಾನವನ್ನೂ ನೇರವಾಗಿ ಗ್ರಾಮ ಪಂಚಾಯಿತಿಗಳಿಗೇ ನೀಡಬೇಕು ಎಂಬುದಕ್ಕೆ ಸಮಿತಿಯ ವರದಿಯಲ್ಲಿ ಆದ್ಯತೆ ನೀಡಲಾಗಿದೆ.ಆದರೆ ಈಗಲೂ ಕೂಡ ಪಂಚಾಯತ್‌ರಾಜ್‌ ಸಂಸ್ಥೆ­ಗಳು ಸಂಪನ್ಮೂಲಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ­ಗಳನ್ನೇ ಅವಲಂಬಿಸಿವೆ. ಇದನ್ನು ತಪ್ಪಿಸಿ ಗ್ರಾಮ ಪಂಚಾಯಿತಿ­ಗಳು ತಮ್ಮ ಆದಾಯದ ಮೂಲವನ್ನು ಹುಡುಕಿ­ಕೊಳ್ಳುವಂತೆ, ವಿಸ್ತರಿಸುವಂತೆ ಸೂಕ್ತ ಶಿಫಾರಸು­ಗಳನ್ನು ಮಾಡಬಹುದಿತ್ತು. ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಹೊಸ ಹೊಸ ಆದಾಯದ ಮೂಲಗಳ ದಾರಿಯನ್ನು ತೋರಿ ಗ್ರಾಮ ಪಂಚಾಯಿತಿಗಳು ಆರ್ಥಿಕ ಸ್ವಾವಲಂಬನೆ ಪಡೆಯಲು ಅವಕಾಶ ಕಲ್ಪಿಸಿದ್ದರೆ ಚೆನ್ನಾಗಿತ್ತು.ಕೇಂದ್ರ ಸರ್ಕಾರ ತನ್ನ ತೆರಿಗೆಯ ಆದಾಯದಲ್ಲಿ ರಾಜ್ಯದ ಪಾಲನ್ನು ನೀಡುತ್ತದೆ. ಅದೇ ರೀತಿ ರಾಜ್ಯ ಸರ್ಕಾರ ಕೂಡ ಪಂಚಾಯತ್‌ರಾಜ್‌ ಸಂಸ್ಥೆಗಳಿಗೆ ಪ್ರತ್ಯೇಕ ಪಾಲನ್ನು ನೀಡುವ ವ್ಯವಸ್ಥೆಯನ್ನು ಶಿಫಾರಸು ಮಾಡ­­ಬಹುದಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡ­ದವರಿಗಾಗಿ ಪ್ರತ್ಯೇಕ ಗ್ರಾಮ­ಸಭೆ ನಡೆಸಬೇಕು ಎಂದು ಶಿಫಾರಸು ಮಾಡಲಾಗಿದೆ. ಸಮಿತಿ ಹಲವಾರು ಉತ್ತಮ ಅಂಶಗಳನ್ನು ಹೇಳಿದೆ. ಆದರೆ ಇದು ಕಾಯ್ದೆ­ಯಾ­­­­ಗ­ಬೇಕು. ಅದಕ್ಕೆ ಶಾಸ­ಕರೂ ಬೆಂಬಲ ನೀಡ­ಬೇಕು. ಕಾಯ್ದೆ ಜಾರಿಗೆ ಬಂದ ನಂತರ ಅದು ಕಟ್ಟು­ನಿಟ್ಟಾಗಿ ಜಾರಿಗೆ ಬರುವಂತಹ ವ್ಯವಸ್ಥೆಯನ್ನೂ ರೂಪಿಸಬೇಕು.ಬಿಕ್ಕಟ್ಟು ನಿವಾರಣೆ

ಜನ ಮತ್ತು ಜನರ ನಡುವೆ, ಜನರು ಮತ್ತು ಸ್ಥಳೀಯ ಸರ್ಕಾರಗಳ ನಡುವೆ, ಪರಸ್ಪರ ಸ್ಥಳೀಯ ಸರ್ಕಾರಗಳ ನಡುವೆ ಹಾಗೂ ಸ್ಥಳೀಯ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ಬಿಕ್ಕಟ್ಟು ಉಂಟಾದರೆ ಅವುಗಳ ಪರಿಹಾರಕ್ಕೆ ಜಿಲ್ಲಾ ಮಟ್ಟದ ಪಂಚಾಯತ್‌ ನ್ಯಾಯ ಮಂಡಳಿ ರಚಿಸಬೇಕು.

ಪಂಚಾಯತ್‌ ಪ್ರತಿನಿಧಿಗಳು, ಅಧಿಕಾರಿಗಳು ಹಣ ಮತ್ತು ಅಧಿಕಾರದ ದುರ್ಬಳಕೆ ಮಾಡಿಕೊಂಡರೆ ಅಥವಾ ಭ್ರಷ್ಟಾಚಾರದಲ್ಲಿ ತೊಡಗಿದರೆ ಅವುಗಳ ಬಗ್ಗೆ ತನಿಖೆ ನಡೆಸಲು ಒಂಬುಡ್ಸ್‌ಮನ್‌ ನೇಮಕ ಮಾಡಬೇಕು.

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪಂಚಾಯತ್‌ ಸಮಿತಿ ರಚಿಸಬೇಕು.ಸಂಸ್ಥೆಗಳ ಸ್ಥಾಪನೆ

*ಪಂಚಾಯತ್‌ ಸಂಸ್ಥೆಗಳಲ್ಲಿ ಅಗತ್ಯ ಸಿಬ್ಬಂದಿ ನೇಮಕಕ್ಕೆ ಸಿಬ್ಬಂದಿ ಆಯ್ಕೆ ಮತ್ತು ನೇಮಕಾತಿ ಸಂಸ್ಥೆ ಆರಂಭಿಸಬೇಕು.

*ಕರ್ನಾಟಕ ಪಂಚಾಯತ್‌ ಆಡಳಿತ ಮತ್ತು ತಾಂತ್ರಿಕ ಸೇವಾ ಮಂಡಳಿ ಸ್ಥಾಪಿಸಬೇಕು. ಇದರ ಮೂಲಕ ಪಂಚಾಯತ್‌ ಪ್ರತಿನಿಧಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಇತರ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿ ಸಾಮರ್ಥ್ಯಾಭಿವೃದ್ಧಿಯನ್ನು ನಿರಂತರವಾಗಿ ಪರಿಶೀಲಿಸಬೇಕು.

*ಮೂರು ಹಂತದ ಪಂಚಾಯತ್‌ ವ್ಯವಸ್ಥೆಯ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ವಿಶ್ವವಿದ್ಯಾಲಯದಲ್ಲಿ 2 ವರ್ಷದ ಪಂಚಾಯತ್‌ರಾಜ್‌ ಕೋರ್ಸ್ ಆರಂಭಿಸಬೇಕು.

*ಯೋಜನೆ ಮತ್ತು ನೀತಿ ನಿಯಮಗಳಿಗಾಗಿ ಸಲಹೆ ನೀಡಲು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು.ಉಗುರು, ಹಲ್ಲು ಬೇಕು

* ಪಂಚಾಯತ್‌ರಾಜ್‌ ಸಂಸ್ಥೆಗಳಿಗೆ ಉಗುರು, ಹಲ್ಲುಗಳೂ ಬೇಕು. ತಮ್ಮ ವ್ಯಾಪ್ತಿಯಲ್ಲಿನ ಅಕ್ರಮಗಳಿಗೆ ತಡೆಯೊಡ್ಡಲು ಅವುಗಳಿಗೆ ಸೂಕ್ತ ಅಧಿಕಾರ ನೀಡಬೇಕಾಗಿತ್ತು. ಇದಕ್ಕೆ ಸಂಬಂಧಿಸಿದ ಶಿಫಾರಸುಗಳು ಇಲ್ಲ.

* ಜನ ಪ್ರತಿನಿಧಿಗಳು ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ. ಕಾಯ್ದೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚುತ್ತಾರೆ ಎನ್ನುವುದು ಕಳೆದ 20 ವರ್ಷದ ಅನುಭವದಿಂದ ವೇದ್ಯವಾಗಿದೆ. ಇದನ್ನು ತಪ್ಪಿಸಲು ಕಠಿಣ ಕ್ರಮಗಳ ಬಗ್ಗೆ ಹೇಳಿಲ್ಲ.

* ನಮ್ಮದು ಪ್ರತಿನಿಧಿಗಳ ಆಧಾರಿತ ಪ್ರಜಾಪ್ರಭುತ್ವ ವ್ಯವಸ್ಥೆಯಾದರೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ನೇರ ಚುನಾವಣೆಯಲ್ಲಿ ಆಯ್ಕೆಯಾಗಿದ್ದರೆ ಅವರು ಜನರಿಗೆ ಉತ್ತರದಾಯಿಯಾಗುತ್ತಿದ್ದರು. ನೇರ ಚುನಾವಣೆ ವ್ಯವಸ್ಥೆ ಜಾರಿಗೆ ಬಂದರೆ ಪಾಳೇಗಾರಿಕೆ ಮತ್ತೆ ಶುರುವಾಗುತ್ತದೆ ಎಂದು ರಮೇಶ್‌ಕುಮಾರ್‌ ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಚರ್ಚೆ ಅಗತ್ಯ.

* ಪಂಚಾಯತ್‌ರಾಜ್ ವ್ಯವಸ್ಥೆಗೆ ಈಗಲೂ ಪೂರ್ಣ ಪ್ರಮಾಣದ ಸ್ವಾಯತ್ತೆ ದೊರಕಿಲ್ಲ. ಆ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕು.

*ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಪಾರದರ್ಶಕತೆಗೆ ಇನ್ನಷ್ಟು ಒತ್ತು ನೀಡಬೇಕಾಗಿತ್ತು.

* ನಗರಕ್ಕೆ ವಲಸೆ ಹೋಗುವುದನ್ನು ತಡೆಯಲು ಏನು ಮಾಡಬಹುದು ಎಂಬುದರ ಬಗ್ಗೆಯೂ ಚರ್ಚಿಸಬಹುದಾಗಿತ್ತು.

* ಗ್ರಾಮೀಣ ಅರ್ಥ ವ್ಯವಸ್ಥೆ ಪುನರುಜ್ಜೀವನಗೊಳಿಸುವ ಬಗ್ಗೆ ಒಂದಿಷ್ಟು ಸಲಹೆಗಳಿದ್ದರೆ ಒಳಿತಾಗುತ್ತಿತ್ತು.

* ಕಾನೂನಿನ ಭಯವಿಲ್ಲದೆ ಯಾವುದೇ ಕೆಲಸವಾಗುವುದಿಲ್ಲ ಎನ್ನುವುದು ಈಗಾಗಲೇ ದೃಢಪಟ್ಟಿದೆ. ಇನ್ನಷ್ಟು ಕಠಿಣ ಕಾನೂನಿಗೆ ಶಿಫಾರಸು ಮಾಡಬಹುದಾಗಿತ್ತು.ಸಮಿತಿಯ ಪ್ರಮುಖ ಶಿಫಾರಸುಗಳು

**ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಅವಧಿಯನ್ನು 5 ವರ್ಷಕ್ಕೆ ನಿಗದಿ ಮಾಡಬೇಕು.

**ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ 30 ತಿಂಗಳ ಒಳಗೆ ಅವಿಶ್ವಾಸ ಮಂಡನೆಗೆ ಅವಕಾಶ ಇರಬಾರದು

**ಪಂಚಾಯಿತಿ ವ್ಯಾಪ್ತಿಯ ಜಾತಿವಾರು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು. 10 ವರ್ಷಕ್ಕೆ ಮೀಸಲಾತಿ ಬದಲಾಗಬೇಕು.

**ಮೀಸಲಾತಿ ನಿಗದಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರದಿಂದ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಬೇಕು.

**ಚುನಾವಣೆಯಲ್ಲಿ ಹಣದ ಹೊಳೆ ಹರಿಯುವುದನ್ನು ತಡೆಯಲು ಪ್ರಚಾರ ಮತ್ತು ಕರಪತ್ರಗಳ ವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳಬೇಕು.

**ಚುನಾವಣೆ ಘೋಷಣೆಯಾದ ದಿನಾಂಕದಿಂದ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಮದ್ಯದಂಗಡಿಗಳನ್ನು ಬಂದ್‌ ಮಾಡಬೇಕು. ಮದ್ಯದಂಗಡಿ ಕೀಲಿ ಕೈ ಜಿಲ್ಲಾಧಿಕಾರಿಗಳ ವಶದಲ್ಲಿರಬೇಕು.

**ಚುನಾವಣೆ ಪ್ರಕ್ರಿಯೆ ದೀರ್ಘವಾಗಿರಬಾರದು.

**ಚುನಾವಣೆ ಮುಗಿದು ಒಂದು  ತಿಂಗಳ ಒಳಗೆ ಪಂಚಾಯಿತಿ ಸದಸ್ಯರು ತಮ್ಮ ಆಸ್ತಿಯ ವಿವರವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸಲ್ಲಿಸಬೇಕು.

**ಆಸ್ತಿ ವಿವರ ತಪ್ಪಿದ್ದರೆ ಅಥವಾ ಅನುಮಾನ ಬಂದರೆ ತಕ್ಷಣವೇ ತನಿಖೆ ನಡೆಸಿ ಸದಸ್ಯತ್ವ ರದ್ದು ಮಾಡಬೇಕು.

**ಪಂಚಾಯಿತಿ ಸದಸ್ಯರು ಪ್ರತಿ ವರ್ಷವೂ ಆಸ್ತಿ ಘೋಷಣೆ ಮಾಡಬೇಕು.

**ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು.

**ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಬೇಕು.

**ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ  ತಮ್ಮ ಕೆಳಗಿನ ಅಧಿಕಾರಿಗಳ ಕುರಿತು ಗೋಪ್ಯ ವರದಿ ನೀಡುವ ಅಧಿಕಾರ ನೀಡಬೇಕು. ಗೆಜೆಟೆಡ್‌ ಅಧಿಕಾರಿಗಳ ಕಾರ್ಯನಿರ್ವಹಣಾ ಮೌಲ್ಯಮಾಪನ ಮಾಡುವ ಅಧಿಕಾರ ನೀಡಬೇಕು.

**ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹುದ್ದೆಗೆ ಐಎಎಸ್‌ ಅಧಿಕಾರಿಯನ್ನೇ ನೇಮಿಸಬೇಕು.

**ಜಿಲ್ಲಾ ಯೋಜನಾ ಸಮಿತಿಯಂತೆ ತಾಲ್ಲೂಕು ಯೋಜನಾ ಸಮಿತಿ ರಚಿಸಬೇಕು.

**ನಗರ ಮತ್ತು ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ಯೋಜನಾ ಮಂಡಳಿಯ ಕೆಲಸವನ್ನು ವಿಕೇಂದ್ರೀಕರಣಗೊಳಿಸಬೇಕು.

**ಗ್ರಾಮಸಭೆ, ಮಹಿಳಾ ಗ್ರಾಮ ಸಭೆ, ಮಕ್ಕಳ ಗ್ರಾಮಸಭೆ ಮತ್ತು ವಾರ್ಡ ಸಭೆ ನಿಯಮಿತವಾಗಿ ನಡೆಯಬೇಕು.

**ವಾರ್ಷಿಕ ಲೆಕ್ಕಪರಿಶೋಧನೆ ಕಡ್ಡಾಯಗೊಳಿಸಬೇಕು. ಇದನ್ನು ಪಾಲಿಸದ ಅಧ್ಯಕ್ಷರನ್ನು ವಜಾ ಮಾಡಲು ಅವಕಾಶ ಇರಬೇಕು.

**ಪಂಚಾಯತ್‌ಗಳ ಅವಧಿ ಪೂರ್ಣಗೊಳ್ಳುವ 3 ಅಥವಾ 6 ತಿಂಗಳ ಮೊದಲೇ ಚುನಾವಣೆ ನಡೆಯಬೇಕು. ವಿಜೇತ ಅಭ್ಯರ್ಥಿಗಳು ಆಡಳಿತ ತರಬೇತಿ ಪಡೆಯಲು ಅವಕಾಶ ಇರಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.