ಮಂಗಳವಾರ, ಜೂನ್ 22, 2021
27 °C
ರಿಯಾಯಿತಿ ದರದಲ್ಲಿ ಗೃಹೋಪಯೋಗಿ ವಸ್ತು ಮಾರಾಟ ಜಾಲ ಪತ್ತೆ

ಗ್ರಾಹಕರಿಗೆ ವಂಚನೆ ಯತ್ನ: ಪೊಲೀಸ್‌ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಗೃಹೋಪಯೋಗಿ ವಸ್ತುಗಳನ್ನು ಶೇ 45ರ ರಿಯಾಯಿತಿ ದರದಲ್ಲಿ ಕೊಡಲಾಗುತ್ತದೆ ಎಂದು ಗ್ರಾಹಕರಿಂದ 10 ದಿನ ಮುಂಚಿತವಾಗಿ ಹಣ ಪಡೆದು ಗ್ರಾಹಕರಿಗೆ ಗೃಹೋಪಯೋಗಿ ವಸ್ತುಗಳನ್ನು ನೀಡದೇ ವಂಚನೆ ಹುನ್ನಾರದಲ್ಲಿದ್ದ ಸಟ್ಲೇಜ್ ಗೃಹೋಪಯೋಗಿ ವಸ್ತು ಮಾರಾಟ ಮಳಿಗೆಯನ್ನು ಗುರುವಾರ ಸಂಜೆ ಪೊಲೀಸರು ಜಪ್ತಿ ಮಾಡಿ ವಶಕ್ಕೆ ಪಡೆದರು.ಅಂಗಡಿ ಮಾಲೀಕರಾದ ಮುತ್ಯಾಲಗನ್, ಮುತ್ತು ರಾಮನ್ ಎಂಬುವವರನ್ನು ಬಂಧಿಸಲಾಗಿದೆ. ಬಾಲಾಜಿ ಮತ್ತು ವಿಜಯಾ ಎಂಬುವವರು ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಎಲ್ಲ ತಮಿಳು ನಾಡಿನವರು. ಅಂಗಡಿಯಲ್ಲಿದ್ದ ₨ 7 ಲಕ್ಷ ಮೊತ್ತದ ವಸ್ತುಗಳನ್ನು ಜಪ್ತಿ ಮಾಡಿದ್ದೇವೆ ಎಂದು ಸದರ ಬಜಾರ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಹೇಳಿದರು.ಮಾ. 12ರಿಂದ ಈ ಗೃಹೋಪಯೋಗಿ ವಸ್ತು ಮಾರಾಟ ಮಳಿಗೆ ಶುರುವಾಗಿದೆ. ಟಿವಿ, ಟೇಬಲ್, ಅಡುಗೆ ಪಾತ್ರೆ, ಕುಕ್ಕರ್, ಡೈನಿಂಗ್ ಟೇಬಲ್, ಫ್ಯಾನ್, ಸ್ಟೀಲ್ ಟಾಕಿ, ಸೂಟ್‌ಕೇಸ್, ಫ್ರಿಜ್ ಸೇರಿದಂತೆ ಮುಂತಾದ ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದು, ವಸ್ತುವಿನ ಮೂಲ ಬೆಲೆಯಲ್ಲಿ ಶೇ 45ರಷ್ಟು ರಿಯಾಯಿತಿ ನೀಡಿ ವಸ್ತು ಮಾರಾಟ ಮಾಡುವ ಯೋಜನೆಯನ್ನು ಅಂಗಡಿ ಮಾಲೀಕರು ರೂಪಿಸಿದ್ದರು. ವಸ್ತು ಖರೀದಿಸಬೇಕಾದರೆ ಗ್ರಾಹಕರು 10 ದಿನ ಮುಂಗಡವಾಗಿ ಹಣ ನೀಡಬೇಕು. 10 ದಿನದ ಬಳಿಕ ಗ್ರಾಹಕರಿಗೆ ಆ ವಸ್ತು ಕೊಡಲಾಗುತ್ತದೆ ಎಂಬುದು ಈ ಯೋಜನೆ ತಂತ್ರವಾಗಿದೆ. ಅನೇಕ ಗ್ರಾಹಕರು ಮುಗಿಬಿದ್ದು ಬಂದು ಇಲ್ಲಿ ವಸ್ತುಗಳ ಖರೀದಿಗೆ ಹಣ ಕೊಟ್ಟಿದ್ದಾರೆ. ಅನೇಕರಿಗೆ ವಸ್ತುಗಳು ದೊರಕುವ ಬಗ್ಗೆ ಸಂಶಯಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸಿಪಿಐ ಚಂದ್ರಶೇಖರ ಹಾಗೂ ಪೊಲೀಸ್ ಇನ್ಸಪೆಕ್ಟರ್ ‘ದಾದಾವಲಿ’ ಅವರು ಸ್ಥಳಕ್ಕೆ ಭೇಟಿ ನೀಡಿದ್ದ ಪ್ರಜಾವಾಣಿಗೆ ತಿಳಿಸಿದರು.ಅಂಗಡಿ ಇರುವ ಕಟ್ಟಡ ಲಿಯಾಖತ್ ಎಂಬುವವರದು. ಈ ಅಂಗಡಿ ಮಾಲೀಕನ ಸ್ಕೀಮ್ ಬಗ್ಗೆ ಸಂಶಯಗೊಂಡ ಅವರು ಅಂಗಡಿ ಮುಂದೆ ಕನ್ನಡ, ಇಂಗ್ಲಿಷ್, ಉರ್ದು ಭಾಷೆಯಲ್ಲಿ ಎಚ್ಚರಿಕೆ ಸಂದೇಶದ ಬೋರ್ಡ್‌ ಹಾಕಿದ್ದಾರೆ. ಅದನ್ನು ಲೆಕ್ಕಿಸದೇ ಗ್ರಾಹಕರು ಮುಗಿಬಿದ್ದು ವಸ್ತುಗಳನ್ನು ಖರೀದಿಸಲು ಮುಂಗಡವಾಗಿ ಹಣ ಕೊಟ್ಟಿದ್ದಾರೆ ಎಂದು ಹೇಳಿದರು.ಕನಿಷ್ಠ 800ರಿಂದ 1000 ಗ್ರಾಹಕರು ಈಗಾಗಲೇ ಮುಂಗಡವಾಗಿ ಹಣ ಕೊಟ್ಟಿರುವುದು ಗೊತ್ತಾಗಿದೆ. ಪತ್ತೆ ಕಾರ್ಯ ನಡೆದಿದೆ. ಗೋದಾಮಿನಲ್ಲೂ ಗೃಹೋಪಯೋಗಿ ವಸ್ತು ಸಂಗ್ರಹಿಸಿಟ್ಟಿದ್ದು, ಅವುಗಳನ್ನು ತರಿಸಲಾಗುತ್ತಿದೆ. ಮುಂಗಡ ಹಣ ಕೊಟ್ಟ ಗ್ರಾಹಕರ ಯಾರು ಎಂಬುದನ್ನು ರಶೀದಿ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ವಿವರಿಸಿದರು.ಪೊಲೀಸರು ಈ ಅಂಗಡಿಗೆ ದಾಳಿ ನಡೆಸಿ ಜಪ್ತಿ ಮಾಡಿದ ಸುದ್ದಿ ತಿಳಿದ ಜನ ತಂಡೋಪತಂಡವಾಗಿ ಆಗಮಿಸಿ ವೀಕ್ಷಿಸಿದರು. ಮುಂಗಡ ಹಣ ಕೊಟ್ಟಿದ್ದ ನೂರಾರು ಗ್ರಾಹಕರು ತಾವು ಹಣ ಕೊಟ್ಟ ಬಳಿಕ ಅಂಗಡಿಯವನು ಕೊಟ್ಟ ರಶೀದಿ ಹಿಡಿದು ಆತಂಕದಿಂದ ಅಂಗಡಿ ಮುಂದೆ ನಿಂತಿದ್ದರು. ವಸ್ತು ಕೊಡಿಸಿ ಇಲ್ಲವೇ ಹಣ ಕೊಡಿಸಿ ಎಂದು ಮನವಿ ಮಾಡುತ್ತಿದ್ದುದು ಕಂಡು ಬಂದಿತು. ಬಹುಪಾಲು ಗ್ರಾಹಕರು ಮುಸ್ಲಿಂ ಸಮುದಾಯದ ಮಹಿಳೆಯರೇ ಆಗಿರುವುದು ಕಂಡು ಬಂದಿತು.ಸ್ಕೀಮ್ ಏನು? ಅಂಗಡಿಯಲ್ಲಿ ಕಂಡಿದ್ದು?

ಒಂದು ಟೇಬಲ್ ಮೂಲ ಬೆಲೆ ₨ 2,300. ಶೇ 45ರಷ್ಟು ರಿಯಾಯಿತಿ ನೀಡಿದರೆ ₨ 1,300ಕ್ಕೆ ಲಭ್ಯ! ಒಂದು ಷರತ್ತು. 10 ದಿನ ಮುಂಗಡವಾಗಿ ₨ 1,300 ಪಾವತಿ ಮಾಡಬೇಕು. 10 ದಿನದ ಬಳಿಕ ವಸ್ತು ನಿಮ್ಮ­ದಾಗುತ್ತದೆ. ಇದು ಸ್ಕೀಮ್. ಈ ಸ್ಕೀಮ್‌ಗೆ ಮರುಳಾದ ಜನ ಮುಂಗಡ ಹಣ ತುಂಬಿ ಆತಂಕ­ಗೊಂಡಿದ್ದಾರೆ.

ಅಂಗಡಿಯಲ್ಲಿಟ್ಟಿದ್ದ ವಸ್ತುಗಳ ಮೇಲೂ ಮೂಲ ಬೆಲೆ, ಡಿಸ್ಕೌಂಟ್ ಬೆಲೆಯನ್ನೂ ಅಚ್ಚುಕಟ್ಟಾಗಿ ಬರೆದಿಟ್ಟು ಗ್ರಾಹಕರ ನಂಬಿಕೆ ಗಳಿಸುವ ಮಾರ್ಗವನ್ನೂ ಅಂಗಡಿ ಮಾಲೀಕ ಕಂಡುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.