ಶುಕ್ರವಾರ, ನವೆಂಬರ್ 22, 2019
25 °C

`ಗ್ರಾಹಕರ ಮಹತ್ವ ಬ್ಯಾಂಕ್‌ಗೆ ಕಲಿಸಿ'

Published:
Updated:

ಮಂಗಳೂರು: `ತೃಪ್ತಿಕರ ಸೇವೆ ನೀಡದ ಬ್ಯಾಂಕಿನಲ್ಲಿ ವ್ಯವಹಾರವನ್ನು ಮೊಟಕುಗೊಳಿಸುವ ಮೂಲಕ ಗ್ರಾಹಕರೇ ತಕ್ಕ ಪಾಠ ಕಲಿಸುವ ಮೂಲಕ ತಮ್ಮ ಮಹತ್ವ ಏನು ಎಂಬುದನ್ನು ತೋರಿಸಿಕೊಡಬೇಕು' ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಉಪಗವರ್ನರ್ ಡಾ.ಕೆ.ಸಿ.ಚಕ್ರವರ್ತಿ ಹೇಳಿದರು.ಇಲ್ಲಿನ ಕಾರ್ಪೊರೇಷನ್ ಬ್ಯಾಂಕಿನ ಕೇಂದ್ರ ಕಚೇರಿಯ ವಜ್ರಮಹೋತ್ಸವ ಸಭಾಂಗಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಪುರಭವನ ಸಭೆ'ಯಲ್ಲಿ ಅವರು ಮಾತನಾಡಿದರು.`ದೇಶದಲ್ಲಿ ಮುಕ್ತ ಬ್ಯಾಂಕಿಂಗ್ ವ್ಯವಸ್ಥೆ ಇದೆ. ಬ್ಯಾಂಕ್‌ಗಳು ಉತ್ತಮ ಸಾರ್ವಜನಿಕ ನೀತಿ ಹಾಗೂ ಉತ್ತಮ ಕಾರ್ಯವೈಖರಿಯನ್ನು ಹೊಂದಿರುವಂತೆ ನೋಡಿಕೊಳ್ಳುವುದು ಆರ್‌ಬಿಐ ಕೆಲಸ. ಬ್ಯಾಂಕ್‌ಗಳ ಆಂತರಿಕ ವಿಷಯದಲ್ಲಿ ಆರ್‌ಬಿಐ ಮೂಗು ತೂರಿಸುವುದಿಲ್ಲ. ವ್ಯವಸ್ಥೆಯ ಹುಳುಕುಗಳನ್ನು ಸರಿಪಡಿಸಲು ಹಾಗೂ ಗ್ರಾಹಕರಿಗೆ ಕಡಿಮೆ ಖರ್ಚಿನಲ್ಲಿ ನ್ಯಾಯ ಒದಗಿಸುವ ಉದ್ದೇಶದಿಂದ ಒಂಬುಡ್ಸ್‌ಮನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಗ್ರಾಹಕರು ಬ್ಯಾಂಕಿನಲ್ಲಿ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಒಂಬುಡ್ಸ್‌ಮನ್ ಅವರನ್ನು ಸಂಪರ್ಕಿಸಬಹುದು' ಎಂದರು.`ಗ್ರಾಹಕರು ಬ್ಯಾಂಕ್‌ನ ಜತೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವಾಗ ಎಲ್ಲ ಕರಾರುಗಳನ್ನು ಸರಿಯಾಗಿ ಓದಿಕೊಳ್ಳಬೇಕು. ಯಾವುದೇ ಸೇವೆಗೆ ಎಷ್ಟು ದರ ನಿಗದಿಪಡಿಸಬೇಕು ಎಂಬುದು ಬ್ಯಾಂಕ್ ಹಾಗೂ ಗ್ರಾಹಕರ ನಡುವಿನ ವ್ಯವಹಾರ. ಈ ವಿಷಯದಲ್ಲಿ ಆರ್‌ಬಿಐ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ' ಎಂದರು.ಬ್ಯಾಂಕಿನ ಪಾನ್ ಸಂಖ್ಯೆ ತಪ್ಪಾಗಿರುವುದನ್ನು ಸರಿಪಡಿಸಲು 9 ತಿಂಗಳು ಹೆಣಗಾಡಬೇಕಾಗಿ ಬಂದ ಬಗ್ಗೆ ಮನೋಹರ ಪಾಲ್ಕೆ ಅವರು ಸಭೆಯ ಗಮನ ಸೆಳೆದರು. ಈ ಬಗ್ಗೆ ಕಾರ್ಪೊರೇಶನ್ ಬ್ಯಾಂಕಿನ ಪ್ರಬಂಧಕರಿಂದ ಅದರ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರ ಗಮನಕ್ಕೆ ತಂದಿದ್ದೆ. ಆದರೂ ಸಮಸ್ಯೆ ಬಗೆಹರಿಯಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು. ಲೋಪ ಎಸಗುವ ಬ್ಯಾಂಕ್ ಸಿಬ್ಬಂದಿಗೆ ಕಡ್ಡಾಯವಾಗಿ ಶಿಕ್ಷೆ ವಿಧಿಸಬೇಕು. ಸೇವೆಗೆ ಕಾಲಮಿತಿ ನಿಗದಿಪಡಿಸಬೇಕು. ಬ್ಯಾಂಕ್ ಸಿಬ್ಬಂದಿಗೆ ಆಗಾಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಬೇಕು. ಒಬ್ಬ ಒಂಬುಡ್ಸ್‌ಮನ್ ಬದಲು, ನಾಲ್ಕೈದು ಮಂದಿಯ ಬಳಗವನ್ನು ರೂಪಿಸಬೇಕು  ಎಂದು ಅವರು ಸಲಹೆ ನೀಡಿದರು.`ಕೆಲವು ಬ್ಯಾಂಕ್‌ಗಳು ಪಿಂಚಣಿದಾರರ ಖಾತೆಗೆ ಆ ತಿಂಗಳ 5ನೇ ತಾರೀಕಿನ ಬಳಿಕ ಪಿಂಚಣಿಯ ಹಣವನ್ನು ಜಮೆ ಮಾಡುತ್ತಿವೆ. ಇದರಿಂದ ಜೀವನದ ಇಳಿಸಂಜೆಯಲ್ಲಿರುವ ಹಿರಿಯ ಜೀವಗಳು ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ' ಎಂದು ಕೆ.ವಿಶ್ವನಾಥ್ ದೂರಿದರು.`ಪಿಂಚಣಿ ಪಡೆಯುವ ವ್ಯಕ್ತಿಯ ಕುಟುಂಬಸ್ಥರ ವಿವರ ಬ್ಯಾಂಕಿನಲ್ಲಿರುತ್ತದೆ. ಆದರೂ, ಪಿಂಚಣಿದಾರ ಮೃತಪಟ್ಟರೆ ಆತನ ಕುಟುಂಬಸ್ಥರಿಗೆ ಪಿಂಚಣಿ ನೀಡಲು ಬ್ಯಾಂಕ್ ಸಿಬ್ಬಂದಿ  ಖಜಾನೆಯಿಂದ ಮತ್ತೆ ದಾಖಲೆ ತರುವಂತೆ ಸೂಚಿಸಿ ಸತಾಯಿಸುತ್ತಾರೆ' ಎಂದು ಪಿಂಚಣಿದಾರರ ಸಂಘದವರು ದೂರಿದರು.ಶಿಕ್ಷಣ ಸಂಸ್ಥೆಗಳಿಗೆ ಬಡ್ಡಿದರದಲ್ಲಿ ರಿಯಾಯಿತಿ ನೀಡಬೇಕು ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ನರೇಂದ್ರ ನಾಯಕ್ ಕೋರಿದರು. `ಇದೊಂದು ಒಳ್ಳೆಯ ಸಲಹೆಯೆ. ಆದರೆ, ಸಾಲ ಪಡೆದ ಶಿಕ್ಷಣ ಸಂಸ್ಥೆಗಳು ರಿಯಾಯಿತಿ ದರದಲ್ಲಿ ಶಿಕ್ಷಣ ನೀಡುತ್ತವೆಯೇ? ವಿದ್ಯಾರ್ಥಿಗಳಿಂದಲೂ ಲಕ್ಷಗಟ್ಟಲೆ ದೇಣಿಗೆ ಪಡೆದು ಲೂಟಿ ಮಾಡುವ ಶಿಕ್ಷಣ ಸಂಸ್ಥೆಗೆ ಬಡ್ಡಿಯಲ್ಲಿ ರಿಯಾಯಿತಿ ನೀಡುವುದರಿಂದ ಏನು ಪ್ರಯೋಜನ?' ಎಂದು ಚಕ್ರವರ್ತಿ ಪ್ರಶ್ನಿಸಿದರು.ವ್ಯತ್ಯಾಸ ಗುರುತಿಸಲು ಅನುಕೂಲವಾಗುವಂತೆ ನಾಟ್ಯಗಳ ವಿನ್ಯಾಸವನ್ನು ಬದಲಾಯಿಸಬೇಕು ಎಂದು ರಾಮ ರಾವ್ ಸಲಹೆ ನೀಡಿದರು.ಬ್ಯಾಂಕಿಂಗ್ ಕೋಡ್ ಅಂಡ್ ಸ್ಟ್ಯಾಂಡರ್ಡ್ ಬೋರ್ಡ್ ಆಫ್ ಇಂಡಿಯಾ ಅಧ್ಯಕ್ಷ ಎ.ಸಿ.ಮಹಾಜನ್, ಬ್ಯಾಂಕಿಂಗ್ ಒಂಬುಡ್ಸ್‌ಮನ್ ಪಳನಿಸ್ವಾಮಿ, ಕಾರ್ಪೊರೇಶನ್ ಬ್ಯಾಂಕ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅಜಯ್ ಕುಮಾರ್, ವಿಜಯ ಬ್ಯಾಂಕ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಎಚ್.ಎಸ್.ಉಪೇಂದ್ರ ಕಾಮತ್, ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಎಂ.ಜಿ.ಸಾಂಘ್ವಿ, ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಪಿ.ಜಯರಾಂ ಭಟ್ ಮತ್ತಿತರರು ಇದ್ದರು. ಅಧಿಕಾರಿ ವಿಜಯ್ ವಾದ್ವ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)