ಗ್ರಾಹಕರ ವೇದಿಕೆ ಹುದ್ದೆಗಳು ಖಾಲಿ ಖಾಲಿ...

7

ಗ್ರಾಹಕರ ವೇದಿಕೆ ಹುದ್ದೆಗಳು ಖಾಲಿ ಖಾಲಿ...

Published:
Updated:

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರು ಹಾಗೂ ಸದಸ್ಯರ ಹುದ್ದೆಗಳು 2011ರಿಂದ ಖಾಲಿ ಇವೆ.ಇವುಗಳ ಭರ್ತಿಗೆ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪ್ರಯತ್ನ ನಡೆಸಿದ್ದರೂ, ಒಂದಲ್ಲ ಒಂದು ಕಾನೂನು ತೊಡಕಿನ ಕಾರಣ,  ಅರ್ಹರನ್ನು ನೇಮಕ ಮಾಡಲು ಇದುವರೆಗೂ ಆಗಿರಲಿಲ್ಲ.ವೇದಿಕೆಯ ಖಾಲಿ ಹುದ್ದೆ ಭರ್ತಿ  ಪ್ರಕ್ರಿಯೆ ಕ್ರಮಬದ್ಧವಾಗಿಲ್ಲ ಎಂದು ದೂರಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯೊಂದು ಇದೇ 4 ರಂದು ಇತ್ಯರ್ಥಗೊಂಡಿದೆ. ಆ ಮೂಲಕ, ಹುದ್ದೆಗಳ ಭರ್ತಿಗೆ ಇದ್ದ ಕಡೆಯ ಕಾನೂನು ತೊಡಕು ನಿವಾರಣೆ ಆಗಿದೆ. ರಾಜ್ಯ ಆಯೋಗ,  ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತೀರ್ಣರಾದವರ ಹೆಸರನ್ನು ಸರ್ಕಾರಕ್ಕೆ ಕಳುಹಿಸಿದೆ.ಕೋಲಾರ, ಬೀದರ, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ 2011ರಿಂದಲೇ ಅಧ್ಯಕ್ಷರ ಹುದ್ದೆ ಖಾಲಿ ಬಿದ್ದಿದೆ. ಬೆಂಗ ಳೂರು ನಗರದ 2ನೇ ಹೆಚ್ಚುವರಿ ವೇದಿಕೆ, ಶಿವಮೊಗ್ಗ, ಯಾದಗಿರಿ, ವಿಜಾಪುರ ಮತ್ತು ಹಾವೇರಿ ಜಿಲ್ಲಾ ವೇದಿಕೆಗಳ ಅಧ್ಯಕ್ಷರ ಹುದ್ದೆ 2012ರಿಂದ ಖಾಲಿ ಉಳಿದುಕೊಂಡಿದೆ. ಮೈಸೂರು ಮತ್ತು ರಾಯಚೂರು ಗ್ರಾಹಕರ ವೇದಿಕೆಗಳ ಅಧ್ಯಕ್ಷರ ಅವಧಿ ಇದೇ ಜೂನ್‌ಗೆ ಪೂರ್ಣಗೊಂಡಿದೆ.  ಇದಲ್ಲದೆ, ವಿವಿಧ ವೇದಿಕೆಗಳ ಒಟ್ಟು 23 ಸದಸ್ಯರ ಹುದ್ದೆಗಳು ಖಾಲಿ ಉಳಿದಿವೆ.ಗ್ರಾಹಕರಿಗೆ ಸಂಬಂಧಿಸಿದ ವ್ಯಾಜ್ಯ ಗಳಲ್ಲಿ ರಾಜ್ಯ ಆಯೋಗ ಮತ್ತು ಜಿಲ್ಲಾ ವೇದಿಕೆಗಳು ಅರೆ ನ್ಯಾಯಾಂಗ ಅಧಿಕಾರ ಹೊಂದಿವೆ. ಪ್ರತಿ ವೇದಿಕೆಯಲ್ಲೂ ಅಧ್ಯಕ್ಷರು, ಒಬ್ಬ ಸದಸ್ಯ ಮತ್ತು ಒಬ್ಬರು ಮಹಿಳಾ ಸದಸ್ಯರು ಇರಬೇಕು.ಆಗಸ್ಟ್‌ 31ರ ವೇಳೆಗೆ ವಿವಿಧ ವೇದಿಕೆ ಗಳಲ್ಲಿ ಒಟ್ಟು 9,477 ಪ್ರಕರಣಗಳು ಬಾಕಿ ಉಳಿದಿದ್ದವು. ರಾಜ್ಯ ಆಯೋಗದಲ್ಲಿ 4,625 ವ್ಯಾಜ್ಯಗಳು ಬಾಕಿ ಇದ್ದವು. ಎಲ್ಲ ಜಿಲ್ಲಾ ವೇದಿಕೆಗಳಿಗೆ ಸದಸ್ಯರು ಮತ್ತು ಅಧ್ಯಕ್ಷರ ನೇಮಕ ಪೂರ್ಣಗೊಂಡರೆ, ಪ್ರಕರಣಗಳನ್ನು ಇನ್ನಷ್ಟು ತ್ವರಿತ ವಾಗಿ ವಿಲೇವಾರಿ ಮಾಡಲು ಸಾಧ್ಯ ವಾಗುತ್ತದೆ ಎಂಬುದು ಆಯೋಗದ ಮೂಲಗಳ ಅಭಿಪ್ರಾಯ.ಕಾನೂನು ತೊಡಕು: ಕೆಲವು ಜಿಲ್ಲೆಗಳ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳು 2011ರಲ್ಲಿ ಖಾಲಿ ಆದಾಗ, ರಾಜ್ಯ ಆಯೋಗ ಅರ್ಹರಿಂದ ಅರ್ಜಿ ಆಹ್ವಾನಿ ಸಿತ್ತು. ಆದರೆ ಈ ಸಂದರ್ಭದಲ್ಲಿ ಸರ್ಕಾರ ನಡೆಸಿದ ಜಿಲ್ಲಾ ವೇದಿಕೆಯೊಂದರ ಅಧ್ಯಕ್ಷರ ವರ್ಗಾವಣೆಯನ್ನು ನ್ಯಾಯಾ ಲಯದಲ್ಲಿ ಪ್ರಶ್ನಿಸಲಾಯಿತು. ಆಗ ನ್ಯಾಯಾಲಯ, ಎಲ್ಲ ನೇಮಕಾತಿ ಗಳಿಗೆ ತಡೆಯಾಜ್ಞೆ ನೀಡಿತು. ಈ ಅರ್ಜಿ ಯನ್ನು ಇದೇ ವರ್ಷದ ಜನವರಿಯಲ್ಲಿ ಇತ್ಯರ್ಥ ಪಡಿಸಿ, ತಡೆಯಾಜ್ಞೆ ತೆರವು ಮಾಡಲಾಯಿತು.ಎದುರಾಗಿದ್ದ ಒಂದು ಕಾನೂನು ತೊಡಕು ಇಲ್ಲವಾಯಿತು, ಇನ್ನು ಖಾಲಿ ಹುದ್ದೆಗಳ ಭರ್ತಿ ಸರಾಗ ಎಂಬ ಭಾವಿಸಿದ್ದ ರಾಜ್ಯ ಆಯೋಗಕ್ಕೆ ಇನ್ನೊಂದು ವಿಘ್ನ ಎದುರಾಯಿತು. ಇಡೀ ಆಯ್ಕೆ ಪ್ರಕ್ರಿಯೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಯಾಯಿತು. ಆಗ ಆಯ್ಕೆ ಪ್ರಕ್ರಿಯೆಗೆ ಹೈಕೋರ್ಟ್‌ನ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿತು. ನಂತರದ ದಿನ ಗಳಲ್ಲಿ ಪೀಠ, ರಾಜ್ಯ ಆಯೋಗದ ಪರ ಆದೇಶ ನೀಡಿತು.ಇದನ್ನು ಪ್ರಶ್ನಿಸಿ ಅರ್ಜಿದಾರರು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದರು. ಪೀಠ, ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ ಪ್ರಕ್ರಿಯೆಗೆ ಪುನಃ ತಡೆಯಾಜ್ಞೆ ನೀಡಿತು. ಇದೇ 4ರಂದು ವಿಭಾಗೀಯ ಪೀಠ, ಮೇಲ್ಮನವಿ ಇತ್ಯರ್ಥ ಪಡಿಸಿದೆ. ತಡೆಯಾಜ್ಞೆ ತೆರವಾಗಿದೆ. ಆಯ್ಕೆಯಾಗಿ ರುವ ಅಧ್ಯಕ್ಷರು, ಸದಸ್ಯರ ಹೆಸರನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ರವಾನಿಸಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ. ಆಯೋಗವು ಈ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ.ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿ ಕ್ರಿಯೆ ನೀಡಿದ ಇಲಾಖೆಯ ಪ್ರಧಾನ ಕಾರ್ಯದರ್ಶಿ ಲತಾ ಕೃಷ್ಣರಾವ್‌, ‘ಆಯೋಗ ಕಳುಹಿಸಿರುವ ಹೆಸರುಗಳಿಗೆ ಬರುವ ವಾರದಲ್ಲಿ ಅನುಮೋದನೆ ನೀಡಲಾಗುವುದು. ನಂತರ ಕಡತವನ್ನು ಸಚಿವರ (ದಿನೇಶ್‌ ಗುಂಡೂರಾವ್‌) ಅನುಮೋದನೆಗೆ ರವಾನಿಸಲಾಗುವುದು’ ಎಂದರು.ವೇದಿಕೆಯೇ ಇಲ್ಲ!

2007ರಲ್ಲಿ ರಚಿಸಲಾದ ರಾಮ ನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪ್ರತ್ಯೇಕ ಗ್ರಾಹಕರ ವೇದಿಕೆ ಇಲ್ಲ.

 ಆ ಭಾಗದ ಗ್ರಾಹಕರು, ವ್ಯಾಜ್ಯಗಳ ಇತ್ಯರ್ಥಕ್ಕೆ ಬೆಂಗಳೂರನ್ನೇ ಆಶ್ರಯಿಸ ಬೇಕಾಗಿದೆ. ಗ್ರಾಹಕರ ಹಕ್ಕುಗಳ ರಕ್ಷಣಾ ಕಾಯ್ದೆ– 1986ರ ಅನ್ವಯ, ಪ್ರತಿ ಜಿಲ್ಲೆಯಲ್ಲಿ ಒಂದು ವೇದಿಕೆ ರಚಿಸುವುದು ಕಡ್ಡಾಯ.ಪರ್ಯಾಯ ವ್ಯವಸ್ಥೆ

ಜಿಲ್ಲಾ ವೇದಿಕೆಗಳ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆ ಕೆಲವೆಡೆ ಖಾಲಿ ಇದ್ದರೂ, ಅಲ್ಲಿ ಪ್ರಕರಣಗಳ ವಿಚಾರಣೆ ನಡೆಯುವಂತೆ ಪರ್ಯಾಯ ವ್ಯವಸ್ಥೆ ಮಾಡಲಾ ಗಿದೆ. ಪಕ್ಕದ ಅಥವಾ ಹತ್ತಿರದ ಜಿಲ್ಲೆಗಳ ವೇದಿಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ಹುದ್ದೆಗಳು ಖಾಲಿ ಇರುವ ಜಿಲ್ಲಾ ವೇದಿಕೆಗಳಿಗೆ ವಾರ ದಲ್ಲಿ ಎರಡು ದಿನ ಕಳುಹಿಸಿ, ಅಲ್ಲಿನ ಅರ್ಜಿಗಳ ವಿಚಾರಣೆ ನಡೆಸಲಾಗು ತ್ತಿದೆ. ಎಲ್ಲ ಹುದ್ದೆಗಳು ಭರ್ತಿಯಾ ದರೆ ವಿಚಾರಣೆ ಇನ್ನಷ್ಟು ವೇಗ ಪಡೆ ದುಕೊಳ್ಳಬಹುದು ಎಂದು ಆಯೋ ಗದ ಹಿರಿಯ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.ಇಲ್ಲೆಲ್ಲ ಖಾಲಿ ಅಧ್ಯಕ್ಷರ ಹುದ್ದೆ

ಕೋಲಾರ, ಬೀದರ, ಹಾಸನ, ಕೊಡಗು, ಬೆಂಗಳೂರು ನಗರ 2ನೇ ಹೆಚ್ಚುವರಿ ವೇದಿಕೆ, ಶಿವಮೊಗ್ಗ, ಯಾದಗಿರಿ, ವಿಜಾಪುರ, ಹಾವೇರಿ, ಮೈಸೂರು, ರಾಯಚೂರುಸದಸ್ಯರೇ ಇಲ್ಲದ ವೇದಿಕೆಗಳು:  ಬೆಂಗಳೂರು ನಗರ 2ನೇ ಮತ್ತು 4ನೇ ಹೆಚ್ಚುವರಿ ವೇದಿಕೆ, ಉತ್ತರ ಕನ್ನಡ, ಚಿಕ್ಕಮಗಳೂರು,ಕೋಲಾರ, ಬೀದರ್‌ ಮತ್ತು ಯಾದಗಿರಿ.ಸದಸ್ಯರ ಒಂದು ಹುದ್ದೆ ಖಾಲಿ:  ಗುಲ್ಬರ್ಗ, ಮಂಡ್ಯ, ಧಾರವಾಡ, ಉಡುಪಿ, ದಾವಣಗೆರೆ, ಮೈಸೂರು, ಹಾವೇರಿ, ಶಿವಮೊಗ್ಗ ಮತ್ತು ಹಾಸನ. (ಖಾಲಿಯಾಗಲಿರುವ ಕೆಲವು ಹುದ್ದೆಗಳಿಗೆ ಆಯೋಗ ಇತ್ತೀಚೆಗೆ ಅರ್ಜಿ ಆಹ್ವಾನಿಸಿದೆ.)ಕೋರಂ ಎಷ್ಟು?

ಅಧ್ಯಕ್ಷರ ಹುದ್ದೆ ಭರ್ತಿಯಾಗಿ, ಎರಡೂ ಸದಸ್ಯರ ಹುದ್ದೆಗಳು ಖಾಲಿ ಇದ್ದರೆ ವ್ಯಾಜ್ಯಗಳ ವಿಚಾರಣೆ ನಡೆಸುವಂತಿಲ್ಲ. ಸದಸ್ಯರು ಮಾತ್ರ ಇದ್ದು, ಅಧ್ಯಕ್ಷರು ಇಲ್ಲವಾದರೂ ಇದೇ ಕತೆ. ಆದರೆ ಅಧ್ಯಕ್ಷ ಮತ್ತು ಒಬ್ಬ ಸದಸ್ಯ ಇದ್ದರೆ ವಿಚಾರಣೆ ನಡೆಸಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry