ಭಾನುವಾರ, ಏಪ್ರಿಲ್ 11, 2021
33 °C

ಗ್ರಾಹಕರ ಸ್ವಯಂ ಜಾಗೃತಿ ಅಗತ್ಯ: ಪತ್ತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ಸ್ವಯಂ ಜಾಗೃತಗೊಂಡಾಗ ಮಾತ್ರ ಶೋಷಣೆ ಮತ್ತು ವಂಚನೆಗಳಿಗೆ ಕಡಿವಾಣ ಹಾಕುವುದು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಗ್ರಾಹಕರ ದೂರು ಪರಿಹಾರ ವೇದಿಕೆ ಅಧ್ಯಕ್ಷ ಎ.ಎಂ. ಪತ್ತಾರ ಅಭಿಪ್ರಾಯಪಟ್ಟರು.ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಮತ್ತು ಅಕ್ಕಮಹಾದೇವಿ ಕಲಾ-ವಿಜ್ಞಾನ ಮಹಾವಿದ್ಯಾಲಯದ ಆಶ್ರಯದಲ್ಲಿ ಬವಿವ ಸಂಘದ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಹಕರು ಬಹಳ ದಿನಗಳಿಂದಲೂ ಶೋಷಣೆಗೊಳಗಾಗುತ್ತಿದ್ದು, ಅದನ್ನು ತಡೆಗಟ್ಟುವ ಉದ್ದೇಶದಿಂದ 1986 ಡಿಸೆಂಬರ್ 24ರಂದು ಗ್ರಾಹಕರ ಹಕ್ಕು ಸಂರಕ್ಷಣಾ ಕಾಯ್ದೆ ಜಾರಿಗೆ ತರಲಾಗಿದೆ ಎಂದು ವಿವರಿಸಿದರು.ಸರ್ಕಾರ ಅಥವಾ ಸಂಘ-ಸಂಸ್ಥೆಗಳಿಂದ ಮಾತ್ರ ಶೋಷಣೆ ತಡೆಗಟ್ಟುವುದು ಸಾಧ್ಯವಿಲ್ಲ. ಆದ್ದರಿಂದ ಗ್ರಾಹಕರೇ ತಮ್ಮ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.ಜಿಲ್ಲೆಯ ಗ್ರಾಹಕರ ದೂರು ಪರಿಹಾರ ವೇದಿಕೆ ವತಿಯಿಂದ ವಿವಿಧ ಪ್ರಕರಣಗಳಲ್ಲಿ 1.5 ಕೋಟಿ ರೂಪಾಯಿ ಪರಿಹಾರ ಕೊಡಿಸಲಾಗಿದೆ ಎಂದು ಪತ್ತಾರ ಹೇಳಿದರು.ತೂಕ ಮತ್ತು ಅಳತೆ ಉಪಕರಣಗಳ ಪ್ರದರ್ಶನ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕವಿತಾ ದಡ್ಡೇನವರ, ಯಾವುದೇ ವಸ್ತುಗಳನ್ನು ಖರೀದಿಸುವಾಗ ಗ್ರಾಹಕರು ಎಚ್ಚರಿಕೆ ವಹಿಸಬೇಕು ಎಂದರು.ವಿಶೇಷ ಉಪನ್ಯಾಸ ನೀಡಿದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಜಿ. ಅಳ್ಳಗಿ, ಗ್ರಾಹಕರು ಬ್ರಾಂಡೆಡ್ ವಸ್ತುಗಳನ್ನು ಖರೀದಿಸುವುದಕ್ಕೆ ಆದ್ಯತೆ ನೀಡಿದರೆ ವ್ಯಾಪಾರಿಗಳ ಶೋಷಣೆ ಹಾಗೂ ಕಳಪೆ ಗುಣಮಟ್ಟದ ವಸ್ತುಗಳಿಂದ ಪಾರಾಗಬಹುದು ಎಂದರು.ಯಾವುದೇ ವಸ್ತು ಖರೀದಿಸಿದಾಗ ಸೂಕ್ತ ರಶೀದಿಯನ್ನು ಪಡೆದು ಕೊಂಡರೆ ಮುಂದಾಗಬಹುದಾದ ನಷ್ಟಕ್ಕೆ ಪರಿಹಾರ ಪಡೆದುಕೊಳ್ಳು ವುದು ಸುಲಭಸಾಧ್ಯ ಎಂದು ಅವರು ಹೇಳಿದರು.ಗ್ರಾಹಕರ ದೂರು ಪರಿಹಾರ ವೇದಿಕೆ ಸದಸ್ಯೆ ಗಿರಿಜಾ ಅಡಿಕೆನ್ನವರ, ಮಹಿಳೆಯರು ಜಾಹೀರಾತುಗಳನ್ನು ನಂಬಿ ಮೋಸ ಹೋಗಬಾರದು ಎಚ್ಚರಿಕೆ ನೀಡಿದರು.ಗ್ರಾಹಕರ ಹಕ್ಕುಗಳ ಸಂರಕ್ಷಣೆಗೆ ಸಂಬಂಧಿಸಿದ ಕರಪತ್ರಗಳನ್ನು ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಹಾಗೂ ಗಿರಿಜಾ ಅಡಿಕೆನ್ನವರ ಬಿಡುಗಡೆಗೊಳಿಸಿದರು.ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕೆ.ಎಸ್. ಕಲ್ಲನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.ತಹಸೀಲ್ದಾರ ಬಿ.ಎಲ್.ಗೋಠೆ, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎ.ಎಂ. ಹಿರೇಮಠ ಉಪಸ್ಥಿತರಿದ್ದರು.ಭಾಗೀರಥಿ ಪ್ರಾರ್ಥಿಸಿದರು. ಸುಷ್ಮಾ ಒಡೆಯರ ಕಾರ್ಯಕ್ರಮ ನಿರೂಪಿಸಿದರು. ಪ್ರಾಚಾರ್ಯೆ ಎಸ್.ಎಚ್. ಶೆಟ್ಟರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.