ಗುರುವಾರ , ಮೇ 6, 2021
27 °C

ಗ್ಲಾಕೊಮಾ ಇರಲಿ ಎಚ್ಚರ

ಸತೀಶ್.ಬಿ Updated:

ಅಕ್ಷರ ಗಾತ್ರ : | |

ಗ್ಲಾಕೊಮಾ ಇರಲಿ ಎಚ್ಚರ

ಮಧುಮೇಹ, ರಕ್ತದೊತ್ತಡ ಹಾಗೂ ದೀರ್ಘಕಾಲದ ಕಾಯಿಲೆಗಳಿಗೆ ಔಷಧೋಪಚಾರ ಪಡೆಯುವವರು ಗ್ಲಾಕೊಮಾ ಎಂಬ ಶಾಶ್ವತ ಅಂಧತ್ವಕ್ಕೆ ಕಾರಣವಾಗುವ ರೋಗದ ಬಗ್ಗೆ ಜಾಗೃತರಾಗಿ ಇರಬೇಕಾದ ಅಗತ್ಯವಿದೆ.ಗ್ಲಾಕೊಮಾ ಎಂಬ ಅಪಾಯಕಾರಿ ರೋಗ ಸದ್ದಿಲ್ಲದಂತೆ ನಿಮ್ಮ ದೃಷ್ಟಿಗೆ ಸಂಚಕಾರ ತರಬಹುದು. ರಾಜ್ಯದಲ್ಲಿ ಶೇ 90ಕ್ಕೂ ಅಧಿಕ ಜನರಿಗೆ ಈ ರೋಗದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅಮೆರಿಕ ಸೇರಿದಂತೆ ಮುಂದುವರಿದ ದೇಶಗಳಲ್ಲೂ ಶೇ 50ರಷ್ಟು ಜನರಿಗೆ ಗ್ಲಾಕೊಮಾ ಬಗ್ಗೆ ಮಾಹಿತಿ ಇಲ್ಲದಿರುವುದು ಕಳವಳಕಾರಿ ಸಂಗತಿ ಎಂದು ನೇತ್ರ ತಜ್ಞರು ಅಭಿಪ್ರಾಯ ಪಡುತ್ತಾರೆ.`ದೃಷ್ಟಿಯ ಮೌನ ನಾಶಕ ಎಂದೇ ಕರೆಯಲಾಗುವ ಗ್ಲಾಕೊಮಾ, ಕಣ್ಣಿನ ಆಪ್ಟಿಕ್ ನರವನ್ನು ಹಾನಿಗೊಳಿಸುತ್ತದೆ. ಇದು ಶಾಶ್ವತವಾಗಿ ದೃಷ್ಟಿ ನಾಶಕ್ಕೆ ಕಾರಣವಾಗುತ್ತದೆ. ಆಪ್ಟಿಕ್ ನರ ಹಾನಿಗೆ ಒಳಗಾಗುವುದರಿಂದ ಕಣ್ಣಿನ ಒಳಗೆ ಒತ್ತಡ ಹೆಚ್ಚಾಗುತ್ತದೆ (ಇಂಟ್ರಾ ಆಕ್ಯುಲಾರ್ ಪ್ರೆಶರ್ -ಐಓಪಿ) ಇದರಿಂದಾಗಿ ಕಣ್ಣಿನಲ್ಲಿ ಸಂಚರಿಸುವ ಅಕ್ವೆಯಸ್ ಹ್ಯೂಮರ್ ದ್ರವವು ಸರಿಯಾದ ಪ್ರಮಾಣದಲ್ಲಿ ಹರಿದುಹೋಗುವುದು ನಿಲ್ಲುತ್ತದೆ. ಈ ಪ್ರಕ್ರಿಯೆ ನಿಂತಾಗ ಅಧಿಕ ಒತ್ತಡ ಉಂಟಾಗಿ  ಕಣ್ಣಿನಲ್ಲಿ ಹೆಚ್ಚಳವಾಗುವ ಐಓಪಿಯು ಆಪ್ಟಿಕ್ ನರಕ್ಕೆ ವಿರುದ್ಧವಾಗಿ ಒತ್ತುವುದರಿಂದ ನಿಧಾನವಾಗಿ ಕಣ್ಣಿನ ದೃಷ್ಟಿಗೆ ಹಾನಿ ಉಂಟಾಗುತ್ತದೆ' ಎಂದು ವಿವರಿಸುತ್ತಾರೆ ನಾರಾಯಣ ನೇತ್ರಾಲಯದ ನಿರ್ದೇಶಕ ಡಾ. ಭುಜಂಗ ಶೆಟ್ಟಿ.`ಆಟವಾಡುವ ಅಥವಾ ಇನ್ನಾವುದೇ ಸಂದರ್ಭದಲ್ಲಿ ಕಣ್ಣಿಗೆ ಬೀಳುವ ಪೆಟ್ಟಿನಿಂದ ಕಣ್ಣಿನ ನರ ದುರ್ಬಲವಾಗಿ ಗ್ಲಾಕೊಮಾ ಉಂಟಾಗುವ ಸಂಭವವಿದೆ. ಮಕ್ಕಳು ಹುಟ್ಟಿದ ಸಂದರ್ಭದಲ್ಲೂ ಗ್ಲಾಕೊಮಾ ಕಾಣಿಸಿಕೊಳ್ಳಬಹುದು. ನವಜಾತ ಶಿಶುಗಳ ಕಣ್ಣಿನ ಗುಡ್ಡೆಗಳು ದೊಡ್ಡದಾಗಿದ್ದರೆ ಅದು ಗ್ಲಾಕೊಮಾದ ಲಕ್ಷಣ ಆಗಿರಬಹುದು' ಎಂದು ಅವರು ಹೇಳುತ್ತಾರೆ.`ಸಾಮಾನ್ಯವಾಗಿ ಇತರ ರೋಗಗಳಂತೆ ಗ್ಲಾಕೊಮಾಗೆ ಯಾವುದೇ ಲಕ್ಷಣಗಳಿಲ್ಲ. ರೋಗ ಕಾಣಿಸಿಕೊಳ್ಳುವಾಗ ನೋವು, ನವೆ ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ, ರೋಗದ ಯಾವುದೇ ಮುನ್ಸೂಚನೆಗಳೂ ತಿಳಿಯುವುದಿಲ್ಲ. ಕುಟುಂಬದಲ್ಲಿ ಹಿರಿಯರಿಗೆ ಗ್ಲಾಕೊಮಾ ಇದ್ದರೆ ವಂಶಪಾರಂಪರ್ಯವಾಗಿ ಕಾಣಿಸಿಕೊಳ್ಳುತ್ತದೆ. ಮಧುಮೇಹ, ರಕ್ತದೊತ್ತಡ ಇರುವವರು, 40 ವರ್ಷದ ನಂತರ ಮತ್ತು ದೂರದೃಷ್ಟಿ ದೋಷ ಇರುವವರಲ್ಲಿಯೂ ಈ ರೋಗ ಕಾಣಿಸಿಕೊಳ್ಳುತ್ತದೆ' ಎಂಬುದು ಅವರ ವಿವರಣೆ.`ಪ್ರಾರಂಭದ ಹಂತದಲ್ಲಿ ಸ್ವಲ್ಪ ಪ್ರಮಾಣದಲ್ಲಿ ದೃಷ್ಟಿ ದೋಷ ಕಂಡು ಬಂದು ನಂತರದಲ್ಲಿ ಶಾಶ್ವತವಾಗಿ ದೃಷ್ಟಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ದೃಷ್ಟಿ ಮಂಜಾಗುತ್ತಿದ್ದರೆ ವಯೋ ಸಹಜವಾಗಿ ಹಾಗಾಗುತ್ತಿದೆ ಎಂದು ನಿರ್ಲಕ್ಷ್ಯ   ಮಾಡಬಾರದು. ಬದಲಾಗಿ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ಅವರು ಸಲಹೆ ನೀಡುತ್ತಾರೆ.ಮುನ್ನೆಚ್ಚರಿಕೆ ಹೀಗಿರಲಿ

ನಿಯಮಿತವಾಗಿ ನೇತ್ರ ತಪಾಸಣೆಗೆ ಒಳಗಾಗಬೇಕುಕಣ್ಣಿನ ಯಾವುದೇ ಸಮಸ್ಯೆಗಳಿಗೆ ಶೀಘ್ರವಾಗಿ ನೇತ್ರ ತಜ್ಞರನ್ನು ಸಂಪರ್ಕಿಸಬೇಕುಪ್ರತಿ ಆರು ತಿಂಗಳಿಗೊಮ್ಮೆ ಓದಲು ಬಳಸುವ ಕನ್ನಡಕವನ್ನು ಬದಲಾಯಿಸಬೇಕುವೈದ್ಯರ ಸಲಹೆಯಂತೆ ನಿರಂತರವಾಗಿ ಐ- ಡ್ರಾಪ್ ಬಳಸಬೇಕುಜಾಗೃತಿ ಹೆಚ್ಚಲಿ

ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಜನರಲ್ಲಿ ಗ್ಲಾಕೊಮಾ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಕಣ್ಣು ಕೆಂಪಾಗುವುದು, ಕಣ್ಣಿನ ಊತ ಕಂಡುಬಂದರೆ ವೈದ್ಯರ ಸಲಹೆ ಪಡೆಯದೆ ಔಷಧದ ಅಂಗಡಿಗಳಲ್ಲಿ ಸಿಗುವ ಐ- ಡ್ರಾಪ್ ಉಪಯೋಗಿಸಿ ನಿರ್ಲಕ್ಷ್ಯ ವಹಿಸುತ್ತಾರೆ. ಇದರಿಂದಾಗಿ ಗ್ಲಾಕೊಮಾ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗೆ ಮಾಡುವುದರಿಂದ ಶಾಶ್ವತವಾಗಿ ದೃಷ್ಟಿಹೀನತೆಗೆ ಒಳಗಾಗುತ್ತಾರೆ. ರಾಜ್ಯ ಮತ್ತು ಕೇಂದ್ರ ಆರೋಗ್ಯ ಇಲಾಖೆಯು ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಯೋಜನೆಯನ್ನು ರೂಪಿಸಬೇಕಾದ ಅಗತ್ಯವಿದೆ

ಡಾ. ಬಿ.ಟಿ.ಜೆ.ರಾಜೇಶ್, ನೇತ್ರ ತಜ್ಞಮುಂಜಾಗ್ರತೆ ಅಗತ್ಯ

ದೃಷ್ಟಿ ಮಂಜಾಗುತ್ತಿದ್ದರೆ ಕಣ್ಣಿನ ಪೊರೆಯಿಂದಾಗಿ ಹಾಗಾಗುತ್ತಿದೆ ಎಂದು ನಿರ್ಲಕ್ಷಿಸುತ್ತಾರೆ. ಇಂತಹ ಸಂದರ್ಭದಲ್ಲಿ ಗ್ಲಾಕೊಮಾ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಕಣ್ಣಿನ ಪೊರೆಗೆ ಶಸ್ತ್ರಚಿಕಿತ್ಸೆ ನಡೆಸಿದರೆ ದೃಷ್ಟಿ ಮರಳುತ್ತದೆ.ಆದರೆ, ಗ್ಲಾಕೊಮಾಗೆ ಯಾವುದೇ ಶಸ್ತ್ರಚಿಕಿತ್ಸೆಯಿಂದ ಪ್ರಯೋಜನ ಆಗುವುದಿಲ್ಲ. ಒಮ್ಮೆ ಗ್ಲಾಕೊಮಾ ಬಂದರೆ ಶಾಶ್ವತ ಅಂಧತ್ವಕ್ಕೆ ಈಡಾಗಬೇಕಾಗುತ್ತದೆ. ಆದ್ದರಿಂದ, ಪ್ರಾರಂಭದ ಹಂತದಲ್ಲೇ ಮುಂಜಾಗ್ರತೆ ವಹಿಸಿ ಚಿಕಿತ್ಸೆ ಪಡೆಯಬೇಕು.

ಡಾ. ಭುಜಂಗ ಶೆಟ್ಟಿ ನಿರ್ದೇಶಕರು, ನಾರಾಯಣ ನೇತ್ರಾಲಯಮುಖ್ಯಾಂಶ
ಶೇ 90ರಷ್ಟು ಜನರಿಗೆ ಗ್ಲಾಕೊಮಾ ಬಗ್ಗೆ ಅರಿವಿಲ್ಲನೋವು ರಹಿತ ಅಪಾಯಕಾರಿ ಕಾಯಿಲೆಯಾವುದೇ ಮುನ್ಸೂಚನೆಗಳಿಲ್ಲಕಣ್ಣು ಮಂಜಾಗುತ್ತಿದ್ದರೆ ನಿರ್ಲಕ್ಷ್ಯ ಬೇಡನವಜಾತ ಶಿಶುವಿಗೂ ಸಾಧ್ಯತೆ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.