ಘಟಂ: ಮಣ್ಣಲ್ಲಿ ಮಾಧುರ್ಯ

7

ಘಟಂ: ಮಣ್ಣಲ್ಲಿ ಮಾಧುರ್ಯ

Published:
Updated:
ಘಟಂ: ಮಣ್ಣಲ್ಲಿ ಮಾಧುರ್ಯ

ದೇವನಹಳ್ಳಿ ಎಂದಾಕ್ಷಣ ನೆನಪಿಗೆ ಬರುವುದು `ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಟಿಪ್ಪು ಜನ್ಮ ಸ್ಥಳ ಹಾಗೂ ರಸವತ್ತಾದ ಚಕ್ಕೋತ ಹಣ್ಣು~. ಆದರೆ ಇಲ್ಲಿನ ಕೆರೆಗಳ ಮಣ್ಣಿನಲ್ಲಿ `ಮಾಧುರ್ಯ~ ಇದೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ದಕ್ಷಿಣಾದಿ ಸಂಗೀತದಲ್ಲಿ ಪ್ರಮುಖ ಪಾತ್ರವಹಿಸುವ ದೇಶ ವಿದೇಶಗಳಲ್ಲಿ ಸದ್ದುಮಾಡುತ್ತಿರುವ ಘಟ (ಅಥವಾ ಘಟಂ) ತಯಾರಾಗುವುದು ಇ್ಲ್ಲಲಿಯೇ.ಕರ್ನಾಟಕ  ಆಂಧ್ರ, ಕೇರಳ, ತಮಿಳುನಾಡುಗಳಲ್ಲಿ ಅತ್ಯಂತ ಜನಪ್ರಿಯವಾದ ದಕ್ಷಿಣಾದಿ ಅಥವಾ ಕರ್ನಾಟಕ ಸಂಗೀತ ಕಛೇರಿಯ ಪಕ್ಕವಾದ್ಯಗಳಲ್ಲಿ ಘಟಂಗೆ ಪ್ರಮುಖ ಸ್ಥಾನವಿದೆ. ಈ ಸಂಗೀತದ ಗಾಯಕರಿಗೆ ಹಾಗೂ ಸಂಗೀತ ಕಛೇರಿಗೆ ಸೂಕ್ತವಾದ ಘಟ ಸಿದ್ಧಪಡಿಸುತ್ತಾರೆ ದೇವನಹಳ್ಳಿ ಗೋಪಾಲಪ್ಪ ಮತ್ತು ಅವರ ಕುಟುಂಬದ ಸದಸ್ಯರು.ಮಿರುಗು ಮೈಕಟ್ಟು, ಆಕರ್ಷಕ ಏಳುಸ್ವರಗಳ ನಾದ ಮಾಧುರ್ಯ, ಎಂತಹ ಶ್ರುತಿಗೂ ಹೊಂದಿಕೊಂಡು ಸಂಗೀತ ಕಛೇರಿಗೆ ಕಳೆ ಕಟ್ಟಿ ಸುಗಮಗೊಳಿಸುವ ಈ ಪಕ್ಕವಾದ್ಯ ತಯಾರಿಕೆ ಮಾತ್ರ ಏಳುಕೆರೆಯ ನೀರು ಕುಡಿದಷ್ಟೇ ಕಷ್ಟ. ಏಕೆಂದರೆ ಇದಕ್ಕೆ ಮೂರು ಕೆರೆಯ ಮಣ್ಣು ಬೇಕು.ಇದಕ್ಕಾಗಿ ದೇವನಹಳ್ಳಿ ಕೆರೆ, ಭುವನಹಳ್ಳಿ ಕೆರೆ, ವೆಂಕಟಗಿರಿಕೋಟೆ ಕೆರೆಯ ಅಂಗಳದ ಒಣಗಿದ ಭಾಗದಲ್ಲಿ ಐದಾರು ಅಡಿ ಆಳದಲ್ಲಿ ಹೊಂಡ ತೋಡಿ ಮಣ್ಣು  ತೆಗೆಯುತ್ತಾರೆ. ಅವನ್ನು ಮನೆಯಂಗಳಕ್ಕೆ ತಂದು ಮೂರೂ ಕೆರೆಗಳ ವಿವಿಧ ಬಣ್ಣಗಳ ಮಣ್ಣುಗಳನ್ನು ಸಮನಾಗಿ ಬೆರೆಸಿ ಇಪ್ಪತ್ತು ದಿನ ನೆರಳು ಮತ್ತು ಬಿಸಿಲಿನಲ್ಲಿ ಒಣಗಿಸಿ ತೇವಾಂಶ ಆರುವಂತೆ ಮಾಡುತ್ತಾರೆ.

 

ನಂತರ ಜರಡಿ ಆಡಿಸಿ ಹುಡಿಯನ್ನು ಮತ್ತೊಮ್ಮೆ ಪರೀಕ್ಷಿಸಿ ಕಸಕಡ್ಡಿ, ಸಣ್ಣಪುಟ್ಟ ಕಲ್ಲು ಇದ್ದರೆ ಆರಿಸಿ ತೆಗೆದು ಶುದ್ಧ ನೀರಿನಲ್ಲಿ ಲೋಹದ ಪುಟ್ಟಿ ಮತ್ತು ಕಾಗೆ ಬಂಗಾರ ಮಿಶ್ರ ಮಾಡಿ ಮಣ್ಣು ನೆನೆಹಾಕುತ್ತಾರೆ. ಇದನ್ನು ಭಕ್ತ ಕುಂಬಾರನಂತೆ ಕಾಲಿನಲ್ಲಿ ತುಳಿದು ಹದ ಮಾಡುತ್ತಾರೆ. ನಂತರ ಕುಂಬಾರರ ಚಕ್ರದ ಮೇಲಿಟ್ಟು ಘಟದ ಆಕಾರ ಕೊಡುತ್ತಾರೆ.ನಂತರ ಘಟಂಗೆ ಬಲ ಪ್ರಯೋಗ ಆರಂಭ. ಕನಿಷ್ಠ 1000 ದಿಂದ 1200 ಬಾರಿ ತಟ್ಟಿದಾಗ (ಬಡಿತ) ಘಟ ರೂಪಿ ಮಣ್ಣು ಪರಿಪೂರ್ಣವಾಗಿ ಇನ್ನಷ್ಟು ಸದೃಡಗೊಳ್ಳುತ್ತದೆ. ನಂತರ ಮತ್ತೊಮ್ಮೆ ಚಕ್ರದ ಮೇಲಿರಿಸಿ ತಣ್ಣನೆಯ ಬಣ್ಣ ಹಚ್ಚಿ ಮೆಲ್ಲಗೆ ತಿರುಗಿಸುತ್ತಾರೆ. ಆಗ ತನಗಾಗಿಯೇ ಮೀಸಲಾದ ವಿಶೇಷ ಬಣ್ಣ ಹಾಗೂ ಪಾಲಿಶ್‌ನಿಂದ ಘಟ ಹೊಳಪು ಪಡೆದು ಮಿರಮಿರನೆ ಹೊಳೆಯುತ್ತದೆ.ಆದರೆ ಮುಂದೆ ನಡೆಯುವುದೇ ಕುಂಬಾರನ ಅಗ್ನಿ ಪರೀಕ್ಷೆ. ಘಟಕ್ಕೆ ನೇರ ಶಾಖ ತಾಕದಂತೆ ವಿನ್ಯಾಸಗೊಳಿಸಿರುವ ಗೂಡಿನಲ್ಲಿ ಇಟ್ಟು ಜಾಗರೂಕತೆಯಿಂದ ಹಂತಹಂತವಾಗಿ ಕಾವು ಏರಿಸುತ್ತಾ, ಇಳಿಸುತ್ತಾ ಕೊನೆ ಹಂತದಲ್ಲಿ ಪೂರ್ಣ ಕಾವು ನೀಡಿ ಆರಿಸಿದಾಗ ಘಟ ಸಿದ್ಧ, ಪಟ್ಟ ಶ್ರಮಕ್ಕೆ ಫಲ. ಇದರಲ್ಲಿ ಸ್ವಲ್ಪ ಎಡವಟ್ಟಾದರೂ ಅದುವರೆಗಿನ ಶ್ರಮ ಮಣ್ಣುಪಾಲು.ನೋಡಲು ಒಂದೇ ರೀತಿ ಕಾಣುವ ಘಟದಲ್ಲಿ ಒಂದೇ ರೀತಿ ಸ್ವರಗಳು ಸಾಧ್ಯವಿಲ್ಲ. ಅದಕ್ಕಾಗಿ ಪ್ರತಿಯೊಂದು ಘಟವನ್ನೂ ಸ್ವರ ಪರೀಕ್ಷೆಗೆ ಒಳಪಡಿಸಲೇಬೇಕು. ಅದಕ್ಕಾಗಿ ಬರಿ ಘಟ ತಯಾರಿಸಿದರೆ ಸಾಲದು; ಸಂಗಿತ ಸ್ವರ ಜತಿಗಳ ಅರಿವು ಇರಬೇಕು. ಹೀಗಾಗಿ ಸ್ವರ ಪರೀಕ್ಷಾ ಸಾಧನವನ್ನು ಬಾಯಿಯಲ್ಲಿ ಇಟ್ಟುಕೊಂಡು ಪ್ರತಿಯೊಂದ ಶ್ರುತಿ ಪರೀಕ್ಷೆ ಮಾಡುತ್ತಾರೆ. ಸ್ವರ ತಾಳೆಯಾಗದಿದ್ದರೂ ಪ್ರಯೋಜನವಿಲ್ಲ.ಹೀಗೆ ನೂರು ಘಟ ತಯಾರಿಸಿದರೆ ಸ್ವರದಲ್ಲಿ ತೇರ್ಗಡೆ ಹೊಂದುವುದು 20 ರಿಂದ 25 ಮಾತ್ರ. ಆದರೆ ಒಂದೊಂದು ಘಟದ ಬೆಲೆ 1500 ರಿಂದ 2000 ರೂಪಾಯಿ ವರೆಗೂ ಇರುತ್ತದೆ. ಕೆಲವು ಘಟಗಳು ಇಲ್ಲೇ ಸುತ್ತಲಿನ ರಾಜ್ಯಗಳಲ್ಲಿ ವಾದಕರ ಕೈಸೇರಿದರೆ, ಪುಣ್ಯವಂತ ಘಟಗಳು ವಿಮಾನದ ಮೂಲಕ ವಿದೇಶಗಳಿಗೂ ಹೋಗಿವೆ.ದೇವನಹಳ್ಳಿ ಮಣ್ಣಿನ ಗುಣದಲ್ಲಿ ಇಷ್ಟೆಲ್ಲ ಮಹಿಮೆ ಇದೆ. ಅದು ವಿದೇಶದಲ್ಲೂ ಸುಸ್ವರ ನಾದ ಮೊಳಗಿಸುತ್ತಿದೆ. ಆದರೆ ತಮಗೆ ಸರ್ಕಾರದಿಂದ ಸೂಕ್ತ ಪ್ರೋತ್ಸಾಹ, ಬೆಂಬಲ ಸಿಗುತ್ತಿಲ್ಲ ಎನ್ನುವ ಅಳಲು ಮಾತ್ರ ಘಟದ ಸೃಷ್ಟಿಕರ್ತರಿಗೆ ಇದೆ.ಪಾರಂಪರಿಕ ಬಳುವಳಿ

ಗೋಪಾಲಪ್ಪನವರಿಗೆ ಘಟಂ ತಯಾರಿಕೆ ವಂಶಪಾರಂಪರ್ಯ ಬಳುವಳಿ. ಇದಕ್ಕೆ ಮುನ್ನ ತಂದೆ ಮಲ್ಲೇಶಪ್ಪ, ತಾತ ಕೃಷ್ಣಪ್ಪ ಇದೇ ವೃತ್ತಿಯಲ್ಲಿದ್ದವರು. ಚಿಕ್ಕಂದಿನಿಂದಲೂ ಸಂಗೀತದೊಂದಿಗೆ ಘಟಂ ತಯಾರಿಕೆಯಲ್ಲಿ ಆಸಕ್ತಿ ಮೂಡಿಸಿದವರು ಅವರೇ.`ಮೊದಲು ತಮಿಳುನಾಡಿನ ಮನಮಧುರೈಯ ಒಂದು ಕುಟುಂಬ ಮಾತ್ರ ಘಟ ತಯಾರಿಸುತ್ತಿತ್ತು. 70- 80 ವರ್ಷದಿಂದ ನಮ್ಮ ಕುಟುಂಬವೂ ಇದರ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಜೀವನ ನಿರ್ವಹಣೆಗೆ ಬೇರೆ ಬೇರೆ ಕುಂಬಾರಿಕೆ ಉತ್ಪನ್ನ ಆಶ್ರಯಿಸಿದ್ದೇವೆ.ಆದರೆ ಕುಲ ಕಸುಬು ಬಿಡಬಾರದು ಎಂಬ ಕಾರಣಕ್ಕಾಗಿ ಕಷ್ಟವಾದರೂ ಘಟ ತಯಾರಿಕೆ ಮುಂದುವರಿಸಿದ್ದೇವೆ. ಇತ್ತೀಚೆಗೆ ವಿದ್ಯುನ್ಮಾನ ವಾದಕಗಳಿಂದ ಸಾಂಪ್ರದಾಯಿಕ ಘಟಕ್ಕೆ  ಪೆಟ್ಟುಬಿದ್ದಿದೆ~ ಎನ್ನುತ್ತಾರೆ ಗೋಪಾಲಪ್ಪ. ಅವರೇ ಹೇಳುವಂತೆ ಅವರ ಕುಟುಂಬ ಇದುವರೆಗೆ 18 ರಿಂದ 20 ಸಾವಿರ ಘಟ ತಯಾರಿಸಿದೆಯಂತೆ.ಅವರ ಸಂಪರ್ಕ ಸಂಖ್ಯೆ 99022 64917. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry