ಘಟಪ್ರಭಾ ಬಂದ್, ಮುನವಳ್ಳಿಯಲ್ಲಿ ರಸ್ತೆ ತಡೆ

7

ಘಟಪ್ರಭಾ ಬಂದ್, ಮುನವಳ್ಳಿಯಲ್ಲಿ ರಸ್ತೆ ತಡೆ

Published:
Updated:
ಘಟಪ್ರಭಾ ಬಂದ್, ಮುನವಳ್ಳಿಯಲ್ಲಿ ರಸ್ತೆ ತಡೆ

ಘಟಪ್ರಭಾ (ಗೋಕಾಕ): ಭ್ರಷ್ಟಾಚಾರದ ವಿರುದ್ಧ ಗಾಂಧಿವಾದಿ ಅಣ್ಣಾ ಹಜಾರೆ ಅವರು ಆರಂಭಿಸಿರುವ ಅಮರಣ ಉಪವಾಸ ಸತ್ಯಾಗ್ರಹ ಬೆಂಬಲಿಸಿ, ಭ್ರಷ್ಟಾಚಾರ ವಿರೋಧಿ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರ ನೇತೃತ್ವದಲ್ಲಿ ಬಂದ್ ಶಾಂತಿಯುತವಾಗಿ ನಡೆಯಿತು.ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದರು. ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಕರ್ನಾಟಕ ರಕ್ಷಣಾ ವೇದಿಕೆ, ವರ್ತಕ ಸಂಘ, ರೈತ ಸಂಘಟನೆಗಳು ಸೇರಿದಂತೆ ಇನ್ನೂ ಅನೇಕ ಸಂಘ-ಸಂಸ್ಥೆಗಳು ಬಂದ್ ಕರೆಗೆ ಸ್ಪಂದಿಸಿ, ಬಂದ್ ಯಶಸ್ಸಿಗೆ ಸಹಕರಿಸಿದವು.ಸಮಿತಿ ಸಂಚಾಲಕ ಬಸವರಾಜ ಹುದ್ದಾರ ಮಾತನಾಡಿ, ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೆಸೆಯಲು ಹೋರಾಟದ ಸಂಕಲ್ಪ ಅನಿವಾರ್ಯವಾಗಿದೆ ಎಂದು ನುಡಿದರು.ಬಸವಣ್ಣೆಪ್ಪ ಕಂಬಾರ, ಸುರೇಶ ಹುದ್ದಾರ, ಕಲ್ಲಪ್ಪ ಚೌಕಶಿ, ಸುಕ್ಷೇತ್ರ ಬೆಂಡವಾಡದ ಸದಾಶಿವಪ್ಪ ಸ್ವಾಮೀಜಿ, ಶಿವರಡ್ಡಿ ಗಿರಡ್ಡಿ, ಡಾ. ಕಿರಣ ವಾಲಿ, ಹರೀಶ ಕಾಳೆ, ಬಸವರಾಜ ಹತ್ತರವಾಟ, ಬಸವರಾಜ ಜಂಬ್ರಿ ಮಾತನಾಡಿದರು.ಮಾನವ ಸರಪಳಿ:

ಬಿ.ಆರ್. ಪಾಟೀಲ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಹಾಗೂ ನರ್ಸಿಂಗ್ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮಾನವ ಸರಪಳಿ ನಿರ್ಮಿಸಿ, ಸತ್ಯಾಗ್ರಹ ಬೆಂಬಲಿಸಲು ಜಾಗೃತಿ ಮೂಡಿಸಿದರು. ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬಂದ್‌ಗೆ ಬೆಂಬಲಿಸಿದರು.ವಿದ್ಯಾರ್ಥಿಗಳಿಂದ ರಸ್ತೆ ತಡೆ

ಖಾನಾಪುರ: ಭ್ರಷ್ಟಾಚಾರ ವಿರುದ್ಧ ಅಣ್ಣಾ ಹಜಾರೆಯವರ ಹೋರಾಟ ಬೆಂಬಲಿಸಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಮರಾಠಾ ಮಂಡಳ ಪಿಯು ಕಾಲೇಜು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು.ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಣಜಿ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ನಂತರ ಮೆರವಣಿಗೆಯ ಮೂಲಕ ಮಿನಿವಿಧಾನಸೌಧಕ್ಕೆ ತೆರಳಿದ ಅವರು ತಹಶೀಲದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಗ್ರಾಮಸ್ಥರಿಂದ ಧರಣಿ

ಮುನವಳ್ಳಿ (ತಾ. ಸವದತ್ತಿ): ಲೋಕಪಾಲ್ ಮಸೂದೆ ಜಾರಿಗೊಳಿಸುವಂತೆ ಒತ್ತಾಯಿಸಿ ಅಣ್ಣಾ ಹಜಾರೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ಮುನವಳ್ಳಿಯಲ್ಲಿ ವಿವಿಧ ಸಂಘಟನೆಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದವು.ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಜೈಂಟ್ಸ್ ಗ್ರೂಪ್, ಕರ್ನಾಟಕ ರಕ್ಷಣಾ ವೇದಿಕೆ, ಗ್ರಾಮಸ್ಥರು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮುರುಘೇಂದ್ರ ಸ್ವಾಮೀಜಿ ಮಾತನಾಡಿದರು. ಲೋಕಪಾಲ್ ಮಸೂದೆ ಪ್ರಜಾತಂತ್ರ ವ್ಯವಸ್ಥೆಗೆ ಪೂರಕವಾಗಿದೆ. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಉಮೇಶ ಬಾಳಿ. ನಿಂಗನಗೌಡ ಮಲಗೌಡ್ರ. ಮಂಜುನಾಥ ಭಂಡಾರಿ. ವಿಜಯ ವನಕುದರಿ. ಮೋಹನ ಸರ್ವಿ. ಶಿವಾನಂದ ಬುರ್ಜಿ. ಶಿವು ಕಲ್ಲೋಳ್ಳಿ. ಎಮ್.ಎಮ್. ಹನಸಿ. ಅಶೋಕ ರೇಣಕೆ.  ಶ್ರೀಶೈಲ ಬಾಳಿ. ಬಾಳು ಹೊಸಮನಿ. ಸುಭಾಸ ಗಂಗಣ್ಣವರ. ಬಸು ಶಿಗ್ಗಾಂವಿ. ಪ್ರಸಾದ ವಿರೂಪಯ್ಯನವರಮಠ. ಸುಣಗಾರ. ಜಿ.ಜಿ. ಗಂಗಣ್ಣವರ. ಬಸವರಾಜ ದೇವಣಗಾಂವಿ. ಚಂದ್ರಯ್ಯಸ್ವಾಮಿ ವಿರಕ್ತಮಠ ಪಾಲ್ಗೊಂಡಿದ್ದರು.ಮೇಣದ ಬತ್ತಿ ಬೆಳಗಿ ಧರಣಿ

ನಿಪ್ಪಾಣಿ: ಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ಸ್ಥಳೀಯ ಜನಜಾಗೃತಿ ಅಭಿಯಾನ ಮತ್ತು ಪ್ರೋಬ್ಸ್ ಕ್ಲಬ್ ಸಹಯೋಗದಲ್ಲಿ ನಗರದ ಮೇಣದ ಬತ್ತಿ ಬೆಳಗಿ ಪ್ರತಿಭಟಿಸಲಾಯಿತು.ಪ್ರತಿಭಟನೆ ಅಂಗವಾಗಿ ಮೇಣದ ಬತ್ತಿ ಬೆಳಕಿನಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕಾರ್ಯಕರ್ತರು ದೇಶಭಕ್ತಿಗೀತೆ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಸಮಾಧಿಮಠದ ಶ್ರದ್ಧಾನಂದ ಸ್ವಾಮೀಜಿ, ಸಂಗಮದೇವ ಸ್ವಾಮೀಜಿ, ಜನಜಾಗೃತಿ ಅಭಿಯಾನದ ಅಧ್ಯಕ್ಷ ಡಾ. ರಾಜೇಶ ಬನವನ್ನ, ಡಾ. ರಾಜೇಶ ನೇರ್ಲಿ, ಡಾ. ಸಿ.ಬಿ. ಕುರಬೆಟ್ಟಿ, ಡಾ. ಅಚ್ಯುತ ಮಾನೆ, ವಿಜಯ ಮೇತ್ರಾಣಿ, ರಾಜೇಶ ಕಂಗಳೆ ಉಪಸ್ಥಿತರಿದ್ದರು.

ನಗರಸಭೆ ಸದಸ್ಯ ಸುನಿಲ ಪಾಟೀಲ, ಸಮಾಜ ಸೇವಕ ಮೋಹನ ಬುಡಕೆ, ಸಂಜಯ ಮೊಳವಾಡೆ ಭಾಗವಹಿಸಿದ್ದರು.ವಿದ್ಯಾರ್ಥಿಗಳ ಬೆಂಬಲ

ರಾಮದುರ್ಗ: ಬಲಿಷ್ಟ ಜನ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಅಣ್ಣಾ ಹಜಾರೆ ನಡೆಸಿರುವ ಹೋರಾಟವನ್ನು ಬೆಂಬಲಿಸಿ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಬೆಂಬಲ ಸೂಚಿಸಿದರು.ಪಟ್ಟಣದ ಅರಮನೆ ಆವರಣದಲ್ಲಿ ಸೇರಿದ ವಿವಿಧ ಸಂಘಟನೆಗಳ ಸದಸ್ಯರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಪ್ರತಿಭಟನೆ ನಡೆಸಿದರು.

ತಾಲೂಕಿನ ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ, ವ್ಯಾಪಾರಸ್ಥರ ಸಂಘ, ಐಎಂಎ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ವಿದ್ಯಾರ್ಥಿಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ಸದಸ್ಯರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.ಸಾಲಹಳ್ಳಿಯಲ್ಲಿ ಉಪವಾಸ

ರಾಮದುರ್ಗ: ಅಣ್ಣಾ ಸತ್ಯಾಗ್ರಹ ಬೆಂಬಲಿಸಿ ತಾಲೂಕಿನ ಸಾಲಹಳ್ಳಿ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ನಡೆಸಿದರು.ಗ್ರಾಮದ ವಿಲಾಸ ರೇಣಕೆ, ಬಸವರಾಜ ಬಟಕುರ್ಕಿ, ಮಾರುತಿ ಪಾಸಲಕರ, ಸೋಮಶೇಖರ ಸೊಗಲದ, ರಾಜೇಂದ್ರ ಮಿರ್ಜಿ, ಔಷಧಿ ಅಂಗಡಿ ಮಾಲೀಕರು, ರಕ್ತ ತಪಾಸಣಾ ಕೇಂದ್ರದ ಮಾಲೀಕರು ಹಾಗೂ ಗ್ರಾಮಸ್ಥರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.ಅಭಿಮಾನಿಗಳ ಮೆರವಣಿಗೆ

ಬೈಲಹೊಂಗಲ: ಲೋಕಪಾಲ್ ಮಸೂದೆ ಜಾರಿಗೊಳಿಸುವಂತೆ ಆಗ್ರಹಿಸಿ ಆಗ್ರಹಿಸಿ ಅಣ್ಣಾ ಹಜಾರೆ ಆರಂಭಿಸಿರುವ ಆಮರಣ ಉಪವಾಸ ಸತ್ಯಾಗ್ರಹ  ಬೆಂಬಲಿಸಿ ಶುಕ್ರವಾರ ಅಣ್ಣಾ ಅಭಿಮಾನಿಗಳ ಬಳಗದ ಸದಸ್ಯರು ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ ಪಿ.ಎನ್. ಲೋಕೇಶ ಅವರಿಗೆ ಮನವಿ ಸಲ್ಲಿಸಿದರು.

ಸೋಮವಾರ ಪೇಟೆಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಗೆ ಹಿರಿಯ ವಕೀಲ ಸಿ.ಎಂ. ಪಾಟೀಲ ಚಾಲನೆ ನೀಡಿದರು. ಡಾ. ಸತೀಶ ಖಾಸನೀಸ, ಎಂ.ಸಿ. ಪಾಟೀಲ, ಸೋಮನಿಂಗ್ ಬೋರಕನವರ, ಈರಣ್ಣ ಶೆಟ್ಟರ, ಯಲ್ಲಪ್ಪ ಬಡ್ಲಿ, ನಿಂಗಪ್ಪ ಕುರಿ, ರಫೀಕ್ ಬಡೇಘರ, ಎಂ.ಡಿ. ಮುಲ್ಲಾ, ಸಿ.ಎಂ. ಮರಳಿ, ಎಂ.ಬಿ. ಹಿರೇಮಠ, ನಾಗೇಶ ಯಕ್ಕುಂಡಿ, ಚನ್ನಪ್ಪ ಚಪಳಿ, ಡಾ. ಕಲಘಟಗಿ, ಚಿದಾನಂದ ಚಿನಿವಾಲರ, ವಿಜಯ ಚನ್ನಣ್ಣವರ  ಪಾಲ್ಗೊಂಡಿದ್ದರು.ವಿದ್ಯಾರ್ಥಿಗಳ ರ‌್ಯಾಲಿ

ಮೂಡಲಗಿ: ಲೋಕಪಾಲ್ ಮಸೂದೆ ಅನುಷ್ಠಾನಕ್ಕಾಗಿ ಹೋರಾಟ ನಡೆಸಿರುವ ಹಜಾರೆ ಅವರಿಗೆ ಸ್ಥಳೀಯ ಎಂ.ಇ.ಎಸ್. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರ‌್ಯಾಲಿ ನಡೆಸಿದರು.

ಕಾಲೇಜಿನಿಂದ ಆರಂಭಗೊಂಡ ರ‌್ಯಾಲಿ ಬಿಇಒ ಕಚೇರಿಗೆ ತೆರಳಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಸರ್ಕಾರಕ್ಕೆ ಮನವಿ ಅರ್ಪಿಸಿದರು.ವಿದ್ಯಾರ್ಥಿಗಳಾದ ಅಶೋಕ ಅಂಬಾಜಿ, ಎ.ಬಿ. ದಾನಿಹಾಳ, ಎ.ಎಸ್. ಢವಳೇಶ್ವರ, ಬಿ.ಎಸ್. ಗಾನಗಿ, ವಿ.ಎಚ್. ಕಮತೆ, ಪಿ. ಹೊಸಕೋಟಿ, ವಿ.ಎಚ್. ಪಾಟೀಲ, ಎಂ.ಎಸ್. ನೇರ್ಲಿ, ಎಂ.ಎಸ್. ಕೌಜಲಗಿ, ಎಸ್. ಮಂಟೂರ, ಎಚ್. ಬಡಲಕ್ಕನವರ, ಆರ್. ಹರಿಜನ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪಂಜಿನ ಮೆರವಣಿಗೆ


ಕೊಣ್ಣೂರ (ಗೋಕಾಕ): ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೋರಾಟ ಬೆಂಬಲಿಸಿ ಇಲ್ಲಿಯ ನಾಗರಿಕೆ ವೇದಿಕೆ ಕಾರ್ಯಕರ್ತರು  ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆಸಿದರು.

ಶಾಂತು ಹೊಳಿ, ವಿರೂಪಾಕ್ಷಿ ಯಲಿಗಾರ, ರಾಜು ತೇಲಿ, ರಮೇಶ ಹಿರೇಮಠ, ಅಭಯ ಪಾಟೀಲ, ಧರೆಪ್ಪ ತೇಲಿ, ಭುಜಪ್ಪ ಬೇಡಿಕಾಳ, ರವಿ ಹಂಚಿನಾಳ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಪ್ರತಿಕೃತಿ ದಹನ

ಘಟಪ್ರಭಾ (ಗೋಕಾಕ): ಲೋಕಪಾಲ್ ವಿಧೇಯಕ ಜಾರಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಲ್ಲಿಯ ಗಾಂಧಿ ಚೌಕ್‌ದಲ್ಲಿ ಪ್ರತಿಭಟನೆ ನಡೆಸಿದರು.ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಲೋಕಪಾಲ್ ಮಸೂದೆಗಾಗಿ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಕರವೇ ಕಾರ್ಯಕರ್ತರು, ಅಣ್ಣಾ ಅವರನ್ನು ಬಂಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಭ್ರಷ್ಟಾಚಾರದ ಪ್ರತಿಕೃತಿ ದಹನ ಮಾಡಿದರು.ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾಧಿಕ ಹಲ್ಯಾಳ,  ಅಬ್ಬಾಸ್ ದೇಸಾಯಿ, ರಮೇಶ ಹಿರೇಮಠ ಭಾಗವಹಿಸಿದ್ದರು.

ಅಣ್ಣಾ ಬೆಂಬಲಿಸಿ ಖಾನಾಪುರ ಬಂದ್ ಇಂದು

ಖಾನಾಪುರ: ಹಿರಿಯ ಗಾಂಧೀವಾದಿ ಅಣ್ಣಾ ಹಜಾರೆ ಅವರು ಲೋಕಪಾಲ್ ಮಸೂದೆ ಜಾರಿಗಾಗಿ ನಡೆಸುತ್ತಿರುವ ಹೋರಾಟ ಬೆಂಬಲಿಸಿ ಎಂಇಎಸ್ ಶನಿವಾರ ಖಾನಾಪುರ ಬಂದ್‌ಗೆ ಕರೆ ನೀಡಿದೆ.ಎಂಇಎಸ್ ನೀಡಿರುವ ಬಂದ್ ಕರೆಗೆ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಶಾಲೆ, ಕಾಲೇಜು, ಅಂಗಡಿ ಮುಂಗಟ್ಟು ಮುಚ್ಚುವಂತೆ ಹಾಗೂ ಬಸ್ ಸಂಚಾರ ಸ್ಥಗಿತಗೊಳಿಸಲು ಮುಂದಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಪಿಐ ಪಿ. ವೀರೇಂದ್ರಕುಮಾರ ತಿಳಿಸಿದ್ದಾರೆ.ತಾಲ್ಲೂಕಿನ ತಹಶೀಲ್ದಾರ ಶಿವಾನಂದ ಭಜಂತ್ರಿ ಅವರು, ಬಂದ್ ಆಚರಿಸುವ ಕುರಿತು ಎಂಇಎಸ್ ತಮ್ಮನ್ನು ಸಂಪರ್ಕಿಸಿಲ್ಲ ಹಾಗೂ ಬಂದ್‌ನ ಮಾಹಿತಿ ತಾಲ್ಲೂಕು ಆಡಳಿತಕ್ಕೆ ಲಭ್ಯವಾಗಿಲ್ಲ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry