ಮಂಗಳವಾರ, ಆಗಸ್ಟ್ 20, 2019
27 °C

ಘಟಾನುಘಟಿಗಳ ನಾಮಪತ್ರ

Published:
Updated:

>ರಾಮನಗರ/ಮಂಡ್ಯ: ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶನಿವಾರ ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್, ಚಿತ್ರನಟಿ ರಮ್ಯಾ, ಜೆಡಿಎಸ್‌ನಿಂದ ಅನಿತಾ ಕುಮಾರಸ್ವಾಮಿ, ಬಿಜೆಪಿಯಿಂದ ಶಾಸಕ ಎಂ.ಕೃಷ್ಣಪ್ಪ ಹಾಗೂ ಸರ್ವೋದಯ ಕರ್ನಾಟಕ ಪಕ್ಷದಿಂದ ರೈತ ನಾಯಕಿ ನಂದಿನಿ ಜಯರಾಂ ನಾಮಪತ್ರ ಸಲ್ಲಿಸಿದ್ದಾರೆ. ಘಟಾನುಘಟಿ ಅಭ್ಯರ್ಥಿಗಳು ಕಣಕ್ಕಿಳಿಯುವು ದರೊಂದಿಗೆ ಚುನಾವಣಾ ಅಖಾಡ ರಂಗೇರಿದೆ.ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಎರಡೂ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜೆಡಿಎಸ್ ಮತ್ತು ಬಿಜೆಪಿ ಒಗ್ಗೂಡಿ ಉಪ ಚುನಾವಣೆ ಎದುರಿಸುವ ಕುರಿತು ಚರ್ಚೆ ನಡೆಯುತ್ತಿದ್ದರೂ, ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಕಾದುನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇಬ್ಬರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಅಚ್ಚರಿಯ ನಡೆ ಪ್ರದರ್ಶಿಸಿದೆ.ಚಟುವಟಿಕೆ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಪ್ರಕ್ರಿಯೆಯ ಕೇಂದ್ರ ಸ್ಥಾನವಾಗಿರುವ ರಾಮನಗರದಲ್ಲಿ ಶನಿವಾರ ರಾಜಕೀಯ ಚಟುವಟಿಕೆಗಳು ಬಿರುಸಾಗಿದ್ದವು.>ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ  ನಾಮಪತ್ರ ಸಲ್ಲಿಸುವಾಗ ಅವರ ಪತಿ, ಪಕ್ಷದ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾವ, ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಇ. ಕೃಷ್ಣಪ್ಪ, ಸೈಯದ್ ಮುದೀರ್ ಆಘಾ, ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ಮಾಜಿ ಶಾಸಕ ಕೆ.ರಾಜು ಹಾಜರಿದ್ದರು. ಜೆಡಿಎಸ್‌ನ ನೂರಾರು ಕಾರ್ಯಕರ್ತರು ಜಿಲ್ಲಾ ಕಂದಾಯ ಭವನದ ಮುಂದೆ ಜಮಾಯಿಸಿದ್ದರು.ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರು ಸಹೋದರ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್, ಗೃಹ ಸಚಿವ ಕೆ.ಜೆ.ಜಾರ್ಜ್, ಸಚಿವ ಶಿವರಾಜ್ ತಂಗಡಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ತಿನ ಸದಸ್ಯ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ಎಚ್.ಎಂ.ರೇವಣ್ಣ ಮತ್ತಿತರರ ಜೊತೆ ಬಂದು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾದ ಮುಟ್ಟಿ ಸುರೇಶ್ ಆಶೀರ್ವಾದ ಪಡೆದರು.ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಅವರು ಪಕ್ಷದ ಶಾಸಕ ಆರ್.ಅಶೋಕ ಅವರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು. ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಮುನಿರಾಜು ಅವರೂ ಹಿಂದೆಯೇ ನಾಮಪತ್ರ ಸಲ್ಲಿಸಿದ್ದಾರೆ. ಕೃಷ್ಣಪ್ಪ ಬಿಜೆಪಿಯ ಎರಡನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇಬ್ಬರಲ್ಲಿ ಒಬ್ಬರನ್ನು ಕಣದಲ್ಲಿ ಉಳಿಸಲು ಬಿಜೆಪಿ ವರಿಷ್ಠರು ಯೋಚಿಸಿದ್ದಾರೆ.ಸಾಕು ತಂದೆ ಸಾವು

ಮಂಡ್ಯ: ನಟಿ ರಮ್ಯಾ ಅವರ ಸಾಕು ತಂದೆ ಆರ್.ಟಿ.ನಾರಾಯಣ್ (77) ಹೃದಯಾಘಾತದಿಂದ ಶನಿವಾರ ಸಂಜೆ ಇಲ್ಲಿ ನಿಧನರಾದರು.

ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಲು ಬಂದಿದ್ದ ರಮ್ಯಾ ಜತೆ ನಾರಾಯಣ್ ಇದ್ದರು. ಮಧ್ಯಾಹ್ನ 3.50ರ ಸುಮಾರಿಗೆ ರಮ್ಯಾ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗ, ಅನತಿ ದೂರದಲ್ಲಿದ್ದ ನಾರಾಯಣ್ ಕುಸಿದು ಬಿದ್ದರು. ತಕ್ಷಣ ಇಲ್ಲಿನ ವಿಕ್ರಮ್ ಆಸ್ಪತ್ರೆಗೆ ಸೇರಿಸಲಾಯಿತು. ಅವರು ಮೃತಪಟ್ಟಿದ್ದಾರೆ ಎಂದು ಸಂಜೆ 5.15ಕ್ಕೆ ವೈದ್ಯರು ಘೋಷಿಸಿದರು.ದಾಖಲೆ ಬಿಟ್ಟ ರಮ್ಯಾ

ಲೋಕಸಭೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಮುಂದಾದಾಗ ಪ್ರಮಾಣಪತ್ರ ಸೇರಿದಂತೆ ಎಲ್ಲಾ ದಾಖಲೆಗಳು ಬೇರೊಂದು ವಾಹನದಲ್ಲಿ ಇರುವುದು ತಿಳಿಯಿತು. ನರೇಂದ್ರಸ್ವಾಮಿ ಮತ್ತು ಮಾಜಿ ಶಾಸಕ ಕೆ. ಸುರೇಶ್‌ಗೌಡ ಅವರು ಮತ್ತೊಂದು ವಾಹನದಲ್ಲಿ ಇರುವವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದರು. ವಾಹನ ಗೆಜ್ಜಲಗೆರೆಯ ಬಳಿ ಬರುತ್ತಿರುವುದು ಗೊತ್ತಾಯಿತು. ನಂತರ ಕ್ಷಣ, ಕ್ಷಣಕ್ಕೂ ವಾಹನ ಎಲ್ಲಿದೆ ಎಂದು ತಿಳಿಯುತ್ತಲೇ ಇದ್ದರು.2.30ರ ವೇಳೆಗೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರೊಂದಿಗೆ ಬಂದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ನಂದಿನಿ ಜಯರಾಂ ಅವರು ನಾಮಪತ್ರ ಸಲ್ಲಿಸಲು ಮುಂದಾದರು. ಚುನಾವಣಾಧಿಕಾರಿಯವರು ನಂದಿನಿ ಅವರ ದಾಖಲೆಗಳನ್ನು ಪರಿಶೀಲಿಸಲು ಆರಂಭಿಸಿದರು.ಮಧ್ಯಾಹ್ನ 2.40 ಸಮೀಪಿಸಿದರೂ ರಮ್ಯಾ ಅವರ ದಾಖಲೆಗಳಿರುವ ವಾಹನ ಬಾರದ್ದರಿಂದ ಕಾಂಗ್ರೆಸ್ ನಾಯಕರಲ್ಲಿ ಚಡಪಡಿಕೆ ಆರಂಭವಾಗಿತ್ತು. ಮೊಬೈಲ್ ಕರೆಗಳನ್ನು ಮಾಡುತ್ತಲೇ ಇದ್ದರು. ಪೊಲೀಸರಿಗೆ ವಾಹನದ ಸಂಖ್ಯೆ ನೀಡಿ, `ಟ್ರಾಫಿಕ್ ಕ್ಲಿಯರ್' ಮಾಡಿಕೊಡುವಂತೆ ಹಾಗೂ ವಾಹನವನ್ನು ಎಲ್ಲಿಯೂ ನಿಲ್ಲಿಸದೆ ಜಿಲ್ಲಾಧಿಕಾರಿಯ ಕಚೇರಿಯವರೆಗೆ ಬಿಡುವಂತೆ ಮನವಿ ಮಾಡಿದರು. ದಾಖಲೆಗಳಿದ್ದ ವಾಹನ 2.45ರ ವೇಳೆಗೆ ಜಿಲ್ಲಾಧಿಕಾರಿ ಕಚೇರಿ ತಲುಪಿತು. ನಂತರ ಕಾಂಗ್ರೆಸ್ ನಾಯಕರು ನಿಟ್ಟುಸಿರುಬಿಟ್ಟರು.

 

Post Comments (+)