ಘನತೆಗೆ ಸಲ್ಲದ ಮಾತು

ಬುಧವಾರ, ಜೂಲೈ 24, 2019
28 °C

ಘನತೆಗೆ ಸಲ್ಲದ ಮಾತು

Published:
Updated:

ಮೈಕ್ ಮುಂದೆ ನಿಂತರೆ ರಾಜಕಾರಣಿಗಳ ನಾಲಗೆ ನಿಯಂತ್ರಣ ಕಳೆದುಕೊಳ್ಳುತ್ತದೆ ಎಂಬ ಮಾತಿಗೆ ಜೆಡಿ(ಎಸ್) ಮುಖಂಡ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಉದುರಿಸಿರುವ ಆಣಿಮುತ್ತು ಮತ್ತೊಂದು ನಿದರ್ಶನವಾಗಿ ನಿಲ್ಲುತ್ತದೆ. ಒಕ್ಕಲಿಗರ ಒಕ್ಕೂಟ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತ `ಒಕ್ಕಲಿಗ ಸಮುದಾಯದ ಅಧಿಕಾರಿಗಳಿಗೆ ತೊಂದರೆ ಕೊಟ್ಟರೆ ಸುಮ್ಮನಿರುವುದಿಲ್ಲ' ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿ, ತಮ್ಮ ಘನತೆ ಹಾಗೂ ಸ್ಥಾನಮಾನಕ್ಕೆ ತಾವೇ ಚ್ಯುತಿ ತಂದುಕೊಂಡಿದ್ದಾರೆ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಅಧಿಕೃತ ನಾಯಕ. ಅದೇ ಕಾರಣಕ್ಕೆ ಸಂಪುಟ ಸಚಿವ ದರ್ಜೆಯ ಸ್ಥಾನಮಾನವನ್ನೂ ಹೊಂದಿದ್ದಾರೆ. ಅಂತಹವರು ಒಂದು ನಿರ್ದಿಷ್ಟ ಜಾತಿಗೆ ಸೇರಿದ ಅಧಿಕಾರಿಗಳ ಪರ ಹೀಗೆ ಬಹಿರಂಗವಾಗಿ ವಕಾಲತ್ತು ವಹಿಸಿದ್ದು ಒಪ್ಪುವಂತಹ ನಡತೆಯಲ್ಲ. ಅವರು, ವಿರೋಧ ಪಕ್ಷದ ನಾಯಕರಾಗಿರುವುದು ರಾಜ್ಯದ ಎಲ್ಲ ಜಾತಿ- ವರ್ಗಗಳ ಜನಸಾಮಾನ್ಯರ ಹಿತ ಕಾಯುವುದಕ್ಕೋ ಅಥವಾ ಒಂದು ಸಮುದಾಯದ ಅಧಿಕಾರಿ ವರ್ಗದ ಹಿತರಕ್ಷಣೆಗೋ? `ಜಾತ್ಯತೀತ' ಹಣೆಪಟ್ಟಿ ಅಂಟಿಸಿಕೊಂಡ ಪಕ್ಷದ ಅಧ್ಯಕ್ಷರೂ ಆಗಿರುವ ಅವರಿಂದ ರಾಜ್ಯದ ಜನತೆ ಈ ಬಗೆಯ ಮಾತನ್ನು ನಿರೀಕ್ಷಿಸಿರಲಾರರು! ಆ ಪಕ್ಷದ ನಲವತ್ತೂ ಶಾಸಕರು ಬರಿ ಒಂದು ಸಮುದಾಯದ ಮತಗಳಿಂದಲೇ ಆರಿಸಿ ಬಂದಿದ್ದಾರೆಯೇ? ಜೆಡಿ(ಎಸ್) ಅಧ್ಯಕ್ಷರಾಗಿ ಈ ಪ್ರಶ್ನೆಗೆ ಅವರು ಜನರಿಗೆ ಉತ್ತರಿಸಬೇಕಾಗುತ್ತದೆ.`ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದಲ್ಲಿ ಇದ್ದಿದ್ದರೆ, ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾದಲ್ಲಿ ಹೋರಾಟ ನಡೆಸುತ್ತಿದ್ದರು' ಎಂದು ಹೇಳಿ, ಆಡಳಿತಾರೂಢ ಕಾಂಗ್ರೆಸ್ ಶಾಸಕರ ಪರ ಅನುಕಂಪ ತೋರಿರುವುದು ಮತ್ತೂ ವಿಚಿತ್ರ. ಶಿವಕುಮಾರ್ ವಿರುದ್ಧ ಕೆಂಡಕಾರುತ್ತಿದ್ದವರು ದಿಢೀರನೆ ಹೀಗೆ ಪ್ರೀತಿಯ ಮಳೆಗರೆದರೆ ಅದರ ಹಿಂದಿನ ರಾಜಕಾರಣ ಅರ್ಥ ಮಾಡಿಕೊಳ್ಳಲಾಗದಷ್ಟು ದಡ್ಡರಲ್ಲ ರಾಜ್ಯದ ಜನ.ಮುಖ್ಯಮಂತ್ರಿ ಗಾದಿ ಏರಿದವರ ಸುತ್ತ ಸ್ವಜಾತಿ ಬಂಧುಗಳು ಠಳಾಯಿಸುವುದು ಹೊಸದಲ್ಲ. ಆಯಕಟ್ಟಿನ ಹುದ್ದೆಗಳಿಗೆ ಅದೇ ಸಮುದಾಯವರು ನೇಮಕಗೊಂಡ ಉದಾಹರಣೆಗಳಿಗೂ ಕೊರತೆ ಇಲ್ಲ. ಇದಕ್ಕೆ ಕುಮಾರಸ್ವಾಮಿ ಅವರ ಅಧಿಕಾರ ಅವಧಿಯೂ ಹೊರತಲ್ಲ ಎಂಬುದನ್ನು ರಾಜ್ಯದ ಜನ ಬಲ್ಲರು.ಸೂಕ್ತ ಆಧಾರಗಳಿಲ್ಲದೆ `ಆದರೆ, ಹೋದರೆ' ನೆಲೆಯಲ್ಲಿ ಮಾಡುವ ಟೀಕೆಗಳು ಅಸಹನೆಯ ದ್ಯೋತಕವಷ್ಟೇ. ಇದರಿಂದ ಪಕ್ಷಕ್ಕೂ   ಪ್ರಯೋಜನವಾಗಲಾರದು. ರಾಜ್ಯದಲ್ಲಿ ರಾಜಕೀಯ ವಾಗ್ವಾದಗಳು ಈ ಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ.ಅಭಿವೃದ್ಧಿ ಕಾರ್ಯ, ಆಡಳಿತ ಮತ್ತು ಜನರ ಸಮಸ್ಯೆಗಳ ಕುರಿತು ಚರ್ಚಿಸಬೇಕಾದವರು ಜಾತಿಯ ಚುಂಗು ಹಿಡಿದು ಮಾತನಾಡುವುದು ತರವಲ್ಲ. ಜಾತಿ ಎಲ್ಲೆಲ್ಲಿ ಉಪಯೋಗಕ್ಕೆ ಬರುತ್ತದೆಯೋ ಅಲ್ಲೆಲ್ಲ ಜಾತಿಯನ್ನು ಒಂದು ಅಸ್ತ್ರವಾಗಿ ಬಳಸುವ ಪ್ರವೃತ್ತಿ ಹೆಚ್ಚಿದೆ.ಗ್ರಾಮ ಪಂಚಾಯಿತಿಯಿಂದ ಸಂಸತ್ತಿನ ತನಕದ ಜನಪ್ರತಿನಿಧಿ ಸಭೆಗಳನ್ನು ಪ್ರವೇಶಿಸಲು ಜಾತಿಯನ್ನು ಮೆಟ್ಟಿಲಾಗಿ ಬಳಸಲಾಗುತ್ತಿದೆ. ಜಾತಿ, ಧರ್ಮ, ಭಾಷೆಯ ನೆಲೆಯಲ್ಲಿ ಸಮಾಜವನ್ನು ಒಡೆಯಲು ಪ್ರಯತ್ನಿಸುವ ರಾಜಕಾರಣಿಗಳಿಗೆ ಜನರೇ ಬುದ್ಧಿ ಕಲಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry