ಘನತೆಯ ಬದುಕಿಗೆ ಎಲ್ಲಿದೆ ದಾರಿ?

7

ಘನತೆಯ ಬದುಕಿಗೆ ಎಲ್ಲಿದೆ ದಾರಿ?

Published:
Updated:ಬಿಳಿಸೀರೆ ಒಲ್ಲೆವಣ್ಣ ಬಿಳಿ

ಕುಬುಸ ಒಲ್ಲೆವಣ್ಣ

ಭಲೆ ಗಂಡ ಬೇಕು ನನ ಜನುಮಕೇನ

ಗಂಡ ಬೇಡಿದರ ತಂಗಿ

ರುಂಡ ಮಾಡಿ ಕೆಡಹುವೇನ

ಅಲ್ಲೇ ಏನ ದಂಡ ಕೊಡುಲೇನ

ರಾಮಸ್ವಾಮಿನ ಭಲೆ ಭಂಡಾರ

ಕುಡು ಬಾರೆ ಭಗತರಿಗೇನ

ಹ್ಯಾಂಗ ಹೋಗಲೇನಣ್ಣಾ

ಜೋಗಕ ಹಸರಟ್ಟಿ

ಎಲಿ ಮ್ಯಾಲ ಹಂದರಾಕೇನ

ನಿಂತ ಒಗದಾರೊ  ಅಕ್ಕಿ ಕಾಳೇನ...
ದೇವದಾಸಿಯಾಗುವುದಿಲ್ಲ ಎಂದು ಹಠ ಹಿಡಿದ ನೀಲಗಂಗಾ ಎಂಬ ಯುವತಿಯೊಬ್ಬಳನ್ನು ಆಕೆಯ ಅಣ್ಣ ಒತ್ತಾಯದಿಂದ ಬಿಳಿ ಸೀರೆ ಉಡಿಸಿ ಭಂಡಾರ ಹಚ್ಚಿ ಜೋಗಕ್ಕೆ ಕಳಿಸುವ ಪ್ರಕರಣದ ಹಾಡಿದು. ಭಲೆ ಗಂಡ ಬೇಕು ನನ್ನ ಜನುಮಕ್ಕೆ ದೇವದಾಸಿಯಾಗಲೊಲ್ಲೆ ಅಂದಿದ್ದಕ್ಕೆ ರುಂಡ ಮಾಡಿ ಕೆಡಹುವೆನ ಎಂದು ಧಮಕಿ ಹಾಕಿ ತಂಗಿಯನ್ನು ನಟ್ಟ ನಡುಬರಕಿನ ಗುಡ್ಡದ ದೇವತೆಗೆ ಬಿಡುವನು.ನಾನು ಈ ಹಾಡನ್ನು ದೇವದಾಸಿ ಮಹಿಳೆಯರ ಬಾಯಿಂದ ಕೇಳುತ್ತ ಕೂತಿದ್ದೆ. ಅವರು ಅನೇಕ ಹಾಡುಗಳನ್ನು ಚೌಡಕಿಯ ತಂತಿ ಮೀಟುತ ಹಾಡಿದರು. ಸುತ್ತಲಿನ ಜೋಗತಿ ಜೋಗಪ್ಪಂದಿರರು ದನಿಗೂಡಿಸಿದರು. ಅಷ್ಟರಲ್ಲಿ ಹಿರಿಯ ಜೋಗತಿಯೊಬ್ಬಳು ಪರಡಿ ಹೊತ್ತು ಮೆಲ್ಲಗೆ ನಡೆದು ಬಂದಳು. ಕಾಲಲ್ಲಿ ಶಕ್ತಿಯೇ ಇರಲಿಲ್ಲ ಎನ್ನುವಂತೆ ಒಂದೊಂದೆ ಹೆಜ್ಜೆ ಇಡುತಿದ್ದಳು. ಅವಳಿಗೆ ನಾಲ್ಕು ಮಕ್ಕಳು. ಎರಡು ಹೆಣ್ಣು, ಎರಡು ಗಂಡು. ಹೆಣ್ಣುಮಕ್ಕಳ ಮದುವೆ ಮಾಡಿರುವಳು. ಗಂಡುಮಕ್ಕಳು ದುಡಿದುಣ್ಣಲು ಬೊಂಬಾಯಿಗೆ ಹೋಗಿರುವರು. ‘ನಿನಗ ಯಾವಾಗ ದೇವದಾಸಿ ಮಾಡ್ಯಾರ?’ ನಾನು ಕೇಳಿದೆ. ಅವಳ ಕಣ್ಣುಗಳು ನೆನಪುಗಳ ಬೇಟೆಯಾಡುತ ಹಿಂದಕ್ಕೆ ಹೋಗಿ ಮರಳಿ ನನ್ನತ್ತ ನೋಡಿ, ‘ಊಹುಂ ನೆಂಪಿಲ್ಲ. ನನಗೆ ಯಾಕ ಯಾವ ದೇವದಾಸಿಗನೂ ಗೊತ್ತಿಲ್ಲ.’ ಹೌದು. ಯಾಕೆಂದರೆ ಎಲ್ಲ  ದೇವದಾಸಿಯರಿಗೆ ಮುತ್ತು ಕಟ್ಟಿದ್ದು  ತಿಳಿವಳಿಕೆ ಬರುವ ಮೊದಲೇ. ಎಷ್ಟೊ ಬಾರಿ ಕೂಸಿದ್ದಾಗ. ‘ನಿನಗ ಯಾಕ ದೇವದಾಸಿ ಮಾಡಿದ್ರು?’ ಇಷ್ಟು ಕೇಳಿದ್ದೇ ಸಾಕಾಯಿತು. ಅವಳು ತನ್ನ ಜೀವನದ ಒಂದೊಂದೆ ಪುಟಗಳನ್ನು ತಿರುವತೊಡಗಿದಳು.  ಕೂಸಿದ್ದಾಗ ಆಕೆಗೆ ಮುತ್ತು ಕಟ್ಟಿದ್ದರು. ಯಾಕೆಂದರೆ ಅವಳ ಹೆತ್ತವರಿಗೆ ಗಂಡು ಮಗು ಬೇಕಿತ್ತು. ಕಾಣಿಸಿಕೊಂಡ ಕಾಯಿಲೆಗೆ ಎಲ್ಲಮ್ಮನ ಕೋಪ ಕಾರಣವೆಂದು; ಪೂಜಾರಿ ಹೇಳಿದ್ದ. ಸರಿ. ಹಿರಿಯ ಮಗಳು. ಮುತ್ತು ಕಟ್ಟಿದರು. ಹರಕೆ ಕೈಗೂಡಿ ಗಂಡುಮಗನೂ ಹುಟ್ಟಿದ. ಆದರೆ ಇವಳು? ತಿಳಿವಳಿಕೆ ಬಂದ ಮೇಲೆ ಉಡಿ ತುಂಬಿದವನು ಬಂದು ಹೋದ. ಯಾರೆಲ್ಲ ಬಂದು ಹೋದರು. ಮನೆ ತುಂಬ ಮಕ್ಕಳು. ಹೆತ್ತವರನ್ನು ಸಾಕಬೇಕಾದ ಕಿರಿಯ ಸೋದರ ಚಟಕ್ಕೆ ಬಿದ್ದು ಹಾಳಾಗಿದ್ದ. ತಂಗಿಯರ ಬಾಳುವೆ ಹಸನು ಮಾಡಲು ಹೆಣಗಿದಳು.ಹೆತ್ತವರು ಮುಪ್ಪಿನ ಬಲೆಯಲ್ಲಿ ನರಳುತಿದ್ದರು. ಇವಳೆ ಗಂಜಿ ಹಾಕಬೇಕು. ಹಸಿದ ಕಂದಮ್ಮಗಳು. ಕರುಳು ಚುರ್ರೆನ್ನದೆ? ಆದರೆ ಕಾಸೆಲ್ಲಿಯದು? ಬಂದುಹೋದವರು ಮಕ್ಕಳು ಕೊಟ್ಟರು. ಜವಾಬ್ದಾರಿ ನಿಭಾಯಿಸಲಿಲ್ಲ. ಇವಳು ಪರಡಿ ಹೊತ್ತು ಹೊರಟಳು. ದಾರಿ ಏನಿದೆ? ಅಂಗೈಯಗಲ ಭೂಮಿ ಇಲ್ಲ. ಇರಲೊಂದು ಬೆಚ್ಚನೆ ಸೂರಿಲ್ಲ. ಮುತ್ತು ಕಟ್ಟಿಸಿಕೊಂಡಿರುವುದರಿಂದ ಸಂಪ್ರದಾಯ ನೇಮಗಳು ಆಚರಣೆಗಳು ಪಾಲಿಸಲೇಬೇಕು. ದೇವಿಯ ಭಯ ಒಂದು ಕಡೆ. ಕಿತ್ತು ತಿನ್ನುವ ಬಡತನ ಇನ್ನೊಂದುಕಡೆ. ಕಾಡುವ ಭಕ್ತಿಯೂ ಬೆನ್ನಟ್ಟುವುದು.

ಹೇಗೆ ನಿಭಾಯಿಸುವುದು?

ಹೇಗೆ ನಿಭಾಯಿಸುವುದು? ಹೊರಗಿನ ಉಪಟಳ. ಒಳಗಿನ ಬೇಗುದಿ. ಬಂದು ಹೋಗುವವನ ಕಡಿವಾಣ... ’ಮತ್ತ್ಯಾವನ ಮ್ಯಾಲ ನೆದರಿಟ್ಟಿದಿ? ಎಂದು ಹಾದಿ ಬೀದಿಯಲ್ಲಿ ಹೊಡೆತ. ಇನ್ನು ಮಕ್ಕಳ ಗತಿ? ಅಪ್ಪನಿಲ್ಲದ ಮಕ್ಕಳೆಂದು ಅಪಮಾನ.ಏನೇನು ವ್ಯವಸ್ಥೆ ಇಲ್ಲದ ಶಾಲೆ, ಮಕ್ಕಳು ಓದಲೇ ಇಲ್ಲ. ಮನೆ ನಿಭಾಯಿಸಲು ಕೂಲಿಗೆ ಹೋಗುವುದು ಅನಿವಾರ್ಯವಾಯಿತು. ಕೂಲಿಯಾದರೂ ಸಿಗುವುದೆಷ್ಟು? ಗಂಡಸರಿಗೆ ರೂಪಾಯಿ 50 ಇದ್ದರೆ ಹೆಂಗಸರಿಗೆ ರೂಪಾಯಿ 20! ವರ್ಷ ಪೂರ್ತಿ ಕೂಲಿ ಕೆಲಸ ಸಿಗುವುದಿಲ್ಲ. ವರ್ಷದಲ್ಲಿ 60 ರಿಂದ 80 ದಿನಗಳು ಮಾತ್ರ! ಉಳಿದ ದಿನಗಳಲ್ಲಿ ಹೇಗೆ ಬದುಕುವುದು? ಯಾವ ಆಸ್ತಿಯ ಆಧಾರವಿಲ್ಲ. ಆದ್ದರಿಂದ ದೇವದಾಸಿಯರಿಗೆ ಕೂಲಿ ಬಿಟ್ಟರೆ ಭಿಕ್ಷೆಯೇ ಗತಿ! ಪರಡಿ ಹೊತ್ತು ಹೊರಟಳು. ದುಡಿದಳು.ಎಲ್ಲ ನಮೂನೆಯಿಂದ ದುಡಿದೇ ದುಡಿದಳು. ಬದುಕಿನ ಬಂಡಿ ನಡೆಯಲು ಜೀವನದ ತುಂಬ ಎಲ್ಲಮ್ಮನ ಸೇವೆ ಮಾಡಿ, ಪರಡಿ ಹೊತ್ತು ಸಾಕಾಗಿತ್ತು. ಮೈಯ ಶಕ್ತಿ ನಿಂತಿತ್ತು. ಹೆತ್ತವರು ಕಾಲನ ಕರೆಗೆ ಓಗೊಟ್ಟಿದ್ದರು. ಈಗ ಇವಳು ಒಂಟಿಯೇ. ಅದೇ ಮುರುಕು ಗುಡಿಸಲು. ಎಣ್ಣೆ ಇಲ್ಲದ ಪಣತಿಯಲ್ಲಿ ಬತ್ತಿಯನ್ನಿಟ್ಟು ಬೆಳಕಿಗಾಗಿ ಹಂಬಲಿಸುತಿದ್ದಳು.ಅವಳು ಮಾತಾಡುವ ಪರಿಗೆ ಹಣೆಯ ಭಂಡಾರ ಸಣ್ಣಗೆ ಉದುರುತಿತ್ತು. ಜಿಡ್ಡುಗಟ್ಟಿದ ತಲೆಯ ಕೂದಲನ್ನು ಆವರಿಸಿಕೊಂಡಿದ್ದ ಹಸಿರು ಸೀರೆ. ಎಲ್ಲಮ್ಮ, ರೇಣುಕ, ಮಾಪುರತಾಯಿ ಹೀಗೆ ಇವರಿಗೆಲ್ಲ ಸೇವೇ ಮಾಡಿ ಮಾಡಿ ಸವೆದ ಕೈ ಬೆರಳುಗಳಿಂದ ದಣಿದ ಕಣ್ಣೆವೆಗಳನ್ನು ಒರೆಸಿಕೊಂಡಳು. ಹನಿ ನೀರೂ ಇಲ್ಲದ ಕಂಗಳಲ್ಲಿ ಉಲ್ಲಾಸದ ಛಾಯೆಯೂ ಇರಲಿಲ್ಲ. ಅವಳ ಕಣ್ಣ ಮುಂದೆಯೇ ಜೀವನವೆಂಬುದು ಕೊಚ್ಚಿ ಹೋಗಿತ್ತು.ಅಷ್ಟರಲ್ಲಿ ಇನ್ನೊಬ್ಬಳು ನಡೆದು ಬಂದಳು. ಅವಳ ಬದುಕೊಂದು ಕರುಳಿರಿಯುವ ನೋವಿನ ಪ್ರತೀಕವಾಗಿತ್ತು. ಕೂಸಿದ್ದಾಗ ಮುತ್ತು ಕಟ್ಟಿದ್ದರು. ದೊಡ್ಡವಳಾದ ಮೇಲೆ ಉಡಿ ತುಂಬಿದರು. ಜೊತೆ ಬಂದವನನ್ನು ಧಿಕ್ಕರಿಸಿದಳು. ಅದಕ್ಕಾಗಿ ಹೆತ್ತವರು ದೂರಾದರು.ಮಾತ್ರವಲ್ಲ, ಅವಳೊಂದಿಗೆ ಕ್ರೂರವಾಗಿ ನಡೆದುಕೊಂಡರು. ಯಾಕೆಂದರೆ ಯಾರೊಂದಿಗೆಲ್ಲ ಹೋಗಿ ಹಣ ತರಲಾರದಕ್ಕೆ. ಅವಳು ಜೀವನದ ತುಂಬ ಒಂಟಿಯಾಗಿಯೇ ಬದುಕಿದಳು. ಮತ್ತು ಬದುಕಿನ ಕಿತ್ತು ತಿನ್ನುವ ಬಡತನವನ್ನೇ ಹಾಸಿ ಹೊದ್ದಳು.ದೇವದಾಸಿಯಾದ್ದರಿಂದ ಪುಂಡು ಪೋಕರಿಗಳ ಭಂಡಾಟವನ್ನೆಲ್ಲ ಎದುರಿಸಬೇಕಾಯಿತು. ಬದುಕೆಲ್ಲ ಕಣ್ಣೀರು. ಮೈಯಲ್ಲಿ ಕಸುವಿದ್ದಷ್ಟು ದಿನ ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಂಡಳು.ಈಗ? ಮಕ್ಕಳಿದ್ದವರು, ಇಲ್ಲದವರು, ಜೊತೆಗಾರ ಸಿಕ್ಕವರು, ಸಿಗದವರು, ಹೀಗೆ ಎಲ್ಲರೂ ಬಾಳಸಂಜೆಯಲ್ಲಿ ಒಂಟಿಯೇ. ಮುಪ್ಪು, ರೋಗಗಳು ಬೆನ್ನು ಹತ್ತಿದ ಸಂಗಾತಿಗಳು. ಕರ್ನಾಟಕ ರಾಜ್ಯದ 14 ಜಿಲ್ಲೆಗಳಲ್ಲಿ ಇಂಥ ಕತೆಗಳು ಅರವತ್ತು ಸಾವಿರದಷ್ಟಿವೆ. ಒಬ್ಬೊಬ್ಬರದೂ ಒಂದೊಂದು ಕತೆಗಳು. ದೂರದಿಂದ ಒಬ್ಬ ಜೋಗಪ್ಪ ನಡೆದು ಬಂದು ನಮ್ಮ ಗುಂಪಿಗೆ ಸೇರಿಕೊಂಡ. ತನ್ನ ಹಾಡು ಕೇಳಿಸಲು ಎದ್ದು ನಿಂತ.ತಲಿಯ ಬ್ಯಾನಿ ಘನವನಾಗ್ಯಾವೆ

ಎಲ್ಲಮ್ಮ ತಾಯಿ

ತಲಿಯ ಮ್ಯಾಲೆ ಕೊಡವನ್ಹೊರಸ್ಯಾರೆ

ಎಲ್ಲಮ್ಮ ತಾಯಿ......ಬದುಕಿನ ಭಾರಕ್ಕೆ ತಲ್ಲಣಿಸಿದ ಅವರೆಲ್ಲ, ಒಡಲ ನೋವನ್ನು, ಮನದ ತಳಮಳವನ್ನು ಹಾಡಿ ಹಾಡಿ ಮರೆಯಲು ಹವಣಿಸುತಿದ್ದರು. ಅವರ ಹಾಡು ಕುಣಿತದಲ್ಲಿ ಬಿಡುಗಡೆಯ ಧಾಟಿಯಿತ್ತು. ಯಾವುದರಿಂದ ಬಿಡುಗಡೆ..? ಅವರಿಗೂ ಅದು ಸ್ಪಷ್ಟವಿರಲಿಲ್ಲ.ಬಾಳ ಸಂಜೆಯ ಈ ಹೊತ್ತಲ್ಲಿ ಅವರಿಗೆ ನಿರುಮ್ಮಳವಾಗಿ ಒಂದು ತುತ್ತು ಅನ್ನ ಬೇಕಿತ್ತು ಎಂಬ ಸತ್ಯವನ್ನು ಅವರು ಕಣ್ಣೀರಿಡುತ ಹೇಳುತಿದ್ದರು.ಶತಮಾನಗಳಿಂದ ಅವರದಲ್ಲದ ತಪ್ಪಿಗೆ ಅವರನ್ನು ಬಲಿ ಮಾಡಲಾಗುತ್ತಿದೆ.ಯಾಕೆಂದರೆ ಯಾವ ದೇವದಾಸಿಯೂ ತನ್ನ ಸ್ವಯಂ ಇಚ್ಛೆಯಿಂದ ದೇವದಾಸಿಯಾಗಿರುವುದಿಲ್ಲ. ಆದರೆ ದೇವದಾಸಿಯಾದ ಕಾರಣಕ್ಕೆ ಅವಳು ತನ್ನ ಬದುಕನ್ನೆ ಹೀನಾಯವಾಗಿ ಬದುಕಬೇಕಾಗಿದೆ. ಯಾಕೆಂದು ಕೇಳದಂತೆ ಅವರನ್ನು, ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮವೆಂದು ನಂಬಿಸಲಾಗಿದೆ. ಹೀಗಾಗಿ ಅವರು ತಲೆ ತಗ್ಗಿಸಿ ಕೀಳರಿಮೆಯಲ್ಲಿಯೇ ಬದುಕುವಂತೆ ಮಾಡಲಾಗಿದೆ. ಗೌರವ ಘನತೆಯ ಬದುಕು ಬಯಸದಂತೆ ಅವರನ್ನು ಅನಕ್ಷರತೆ, ಬಡತನ ಮತ್ತು ಮೌಢ್ಯದ ಕೂಪದಲ್ಲಿ ಇಡಲಾಗಿದೆ. ಆದ್ದರಿಂದಲೇ ಶೇಕಡ 90ಕ್ಕೂ ಹೆಚ್ಚು ದೇವದಾಸಿಯರು ಇಂದಿಗೂ ಅನಕ್ಷರಸ್ತರು.ದೇವದಾಸಿ ಪದ್ಧತಿಯನ್ನು  ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪ್ರಶ್ನೆಗಳಿಂದ ಪ್ರತ್ಯೇಕಿಸಿ ನೋಡಲಾಗದು. ದೇವದಾಸಿಯರೆಲ್ಲ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು ಮಾತ್ರ. ಆದ್ದರಿಂದಲೆ ಒಟ್ಟು ದಲಿತ ಸಮುದಾಯದ ಆರ್ಥಿಕ ಪರಿಸ್ಥಿತಿಯತ್ತ ದೃಷ್ಟಿ ಹರಿಸಲೇಬೇಕಾಗುತ್ತದೆ. ಸರ್ಕಾರದ ಸಮೀಕ್ಷೆ (2006-07) ಪ್ರಕಾರವೇ ದಲಿತರ ತಲಾ ಆದಾಯ ದಿನಕ್ಕೆ, 9 ರೂಪಾಯಿಂದ ರಿಂದ ರೂ 9.11 ಪೈಸೆ! ಬೆಲೆಯೇರಿಕೆಯ ಈ ದಿನಗಳಲ್ಲಿ ಹೇಗೆ ಜೀವನ ನಿರ್ವಹಿಸುವುದು? ಶೇ 95 ರಷ್ಟು ಜನರಿಗೆ ಸ್ವಂತ ಮನೆಗಳಿಲ್ಲ. ಸರಕಾರ ಕಟ್ಟಿಸಿದ ಮನೆಗಳು ಮಾತ್ರ ಕೆಲವರಿಗೆ. ಹಾಗಾದರೆ ಇದೇ ಸಮುದಾಯದವರಾದ ದೇವದಾಸಿಯರ ಆರ್ಥಿಕ ಪರಿಸ್ಥಿತಿ ಹೇಗಿರಬಹುದು? ಭಿಕ್ಷೆ ಇಲ್ಲವೆ ಕೂಲಿ ಮಾತ್ರ ಇವರ ಜೀವನಕ್ಕೆ ಆಧಾರವಾಗಿದೆ.ಎಪ್ಪತ್ತರ ದಶಕದ ತರುವಾಯ ಕರ್ನಾಟಕದಲ್ಲಿ ಅನೇಕ ಚಳವಳಿಗಳು ಚಿಂತನೆಗಳು ಬೆಸೆದುಕೊಂಡು ಕೇಂದ್ರಕ್ಕೆ ಬಂದವು. ಬೆತ್ತಲೆ ಸೇವೆ ತಡೆಗಾಗಿ ಹೋರಾಟಗಳು ನಡೆದವು.ದಲಿತ ಮತ್ತು ಮಹಿಳಾ ಸಮುದಾಯವನ್ನು ಶೋಷಿಸುತ್ತಿರುವ ಹುನ್ನಾರುಗಳನ್ನು ಬಯಲುಗೊಳಿಸಿ ಸಂಘಟನೆ ಹೋರಾಟಗಳು ಹುರಿಗೊಂಡವು. ಆ ಹೊತ್ತಿನಲ್ಲಿ ಸರ್ಕಾರವು (1982ರಲ್ಲಿ) ‘ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ’ ಪಾಸು ಮಾಡಿತು.ಆದರೆ ಕಾಯ್ದೆ ಪರಿಣಾಮಕಾರಿಯಾಗಿ ಜಾರಿ ಮಾಡಲು ರಾಜಕೀಯ ಇಚ್ಛೆಯೂ ಮತ್ತು ಸಾಮಾಜಿಕ ಒತ್ತಡವು ಅತ್ಯವಶ್ಯಕವಾದದ್ದು. ಈ ದೃಷ್ಟಿಯಿಂದ ನೋಡಿದರೆ ಅಂದಿನ ಸರ್ಕಾರವು ದೇವದಾಸಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಪುನರ್ವಸತಿ ಕ್ರಮಗಳ ಭಾಗವಾಗಿ ಮಾಡಬೇಕಾದ ಸಮೀಕ್ಷೆಯು ಆರಂಭ ಮಾಡಿದ್ದೆ ಹನ್ನೊಂದು ವರ್ಷಗಳ ತರುವಾಯ! ಅಂದರೆ 1993-94 ರಲ್ಲಿ.ಸಮೀಕ್ಷೆಯ ವಿಧಾನ ಕಾಳಜಿಯಿಂದ ಇರಲೇ ಇಲ್ಲ. ‘ದೇವದಾಸಿ’ ಎಂದು ಹೇಳಿದರೇನೆ ಅಪರಾಧ. ಶಿಕ್ಷೆಯಾಗುವುದು ಎಂಬ ಸುಳ್ಳುಗಳನ್ನು ಹಬ್ಬಿಸಲಾಯಿತು. ಕಾಯ್ದೆಯನ್ನು ಹೆದರಿಸುವ ಅಸ್ತ್ರವಾಗಿಸಲಾಯಿತು. ಅಕ್ಷರ ಲೋಕದ ನೆರಳೂ ಇಲ್ಲದ ಅಮಾಯಕ ದೇವದಾಸಿಯರು ಭಯಗೊಂಡು ತಮ್ಮ ಹೆಸರು ಬರೆಸಲು ಹಿಂದೆ ಮುಂದೆ ನೋಡಿದರು.ಸಮೀಕ್ಷೆ ನಡೆದದ್ದು ಅವರು ವಲಸೆ ಹೋದಾಗ, ಕೂಲಿಗೆ ಹೋದಾಗ, ಜೋಗಕ್ಕೆ ಹೋದಾಗ. ಸಹಜವಾಗಿಯೇ ಅವರ ಹೆಸರುಗಳು ಸಮೀಕ್ಷೆ ಪಟ್ಟಿಯಲ್ಲಿ ಸೇರಲಿಲ್ಲ. ಸರ್ಕಾರ ಮತ್ತು ಸರ್ಕಾರಿ ಯಂತ್ರದ ಈ ದಿವ್ಯ ನಿರ್ಲಕ್ಷ್ಯದ ಧೋರಣೆಯಿಂದಾಗಿ ಮೊದಲ ಸಮೀಕ್ಷೆಯಲ್ಲಿ ಅನೇಕ ತಾಲೂಕು ಮತ್ತು ಗ್ರಾಮಗಳ ದೇವದಾಸಿಯರು ಸರ್ಕಾರಿ ಸೌಲಭ್ಯಗಳಿಂದ ಇಂದಿಗೂ ವಂಚಿತರಾಗಿರುವರು.ಸರ್ಕಾರವು ನಂತರ ದೇವದಾಸಿ ಪುನರ್ವಸತಿ ನಿಗಮ ರಚಿಸಿತು. ದೇವದಾಸಿಯರ ಬದುಕನ್ನು ಅಮೂಲಾಗ್ರವಾಗಿ ಬದಲಾಯಿಸಲು ನಿರ್ದಿಷ್ಟ ಯೋಜನೆಗಳನ್ನು ರೂಪಿಸಲಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ ಇಲಾಖೆಯ ಮೂಲಕ ಕೆಲವು ಸಾಲ ಸೌಲಭ್ಯ ತರಬೇತಿಗಳನ್ನು ಒದಗಿಸಲಾಗುತಿದೆ. 45 ವಯಸ್ಸಿನ ಮೇಲ್ಪಟ್ಟ ಮಹಿಳೆಯರಿಗೆ ರೂ 400 ಮಾಸಿಕ ಭತ್ಯೆ ಕೊಡಲಾಗುತ್ತಿದೆ.ವಯಸ್ಸಿನ ಮಿತಿಯಿಂದಾಗಿ ಎಲ್ಲ ದೇವದಾಸಿಯರಿಗೆ ಈ ಅಲ್ಪ ಧನ ಸಹಾಯವೂ ದೊರೆಯುತ್ತಿಲ್ಲ. ಅವರನ್ನು ನಿಖರವಾಗಿ ಆರ್ಥಿಕ ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಸರ್ಕಾರವು ಸಮಗ್ರ ಯೋಜನೆ ರೂಪಿಸುವ ಜರೂರಿ ಇದೆ.ಸರ್ಕಾರಕ್ಕೆ ಈ ಬಜೆಟ್ಟಿನ ಸಂದರ್ಭದಲ್ಲಾದರೂ ದೇವದಾಸಿ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳುವ ಜರೂರಿ ಅನಿಸಬೇಕಿದೆ. ಮತ್ತು ಸಮಾಜದ ಪ್ರಜ್ಞಾವಂತ ಲೋಕವು, ತಮ್ಮದಲ್ಲದ ತಪ್ಪಿಗೆ ನರಕ ಜೀವನ ನಡೆಸುತ್ತಿರುವ ದೇವದಾಸಿಯರ ಬಗ್ಗೆ ಚಿಂತನೆ ಮಾಡಲು ಮುಂದಾಗಲಿ. ಅವರ ಘನತೆಯ ಬದುಕು ಕಟ್ಟಲು ಕೈಗೂಡಿಸಲಿ. ಈಗಾಗಲೆ ಅನೇಕ ಸಂಘ ಸಂಸ್ಥೆಗಳು, ವ್ಯಕ್ತಿ-ಶಕ್ತಿಗಳು ಈ ದಿಕ್ಕಿನತ್ತ ತಮ್ಮ ಜವಾಬ್ದಾರಿ ನಿಭಾಯಿಸುತ್ತಿವೆ. 

ನೆನೆಗುದಿಗೆ ಬಿದ್ದ ಸಮೀಕ್ಷೆ

ದೇವದಾಸಿ ಮಹಿಳೆಯರ ಸಂಘಟಿತ ಚಳವಳಿಯ ಕಾರಣವಾಗಿ ಸರ್ಕಾರ 2007-08ರಲ್ಲಿ ಇನ್ನೊಂದು ಸಮೀಕ್ಷೆಯನ್ನು ಕೈಗೊಂಡಿದೆ. ಆದರೆ ಇದು ಇಂದಿಗೂ ಆರ್ಥಿಕ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿದೆ. ಕಳೆದ ಬಾರಿ ಸರ್ಕಾರವು ಗುಲಬರ್ಗಾದಲ್ಲಿ ಕ್ಯಾಬಿನೆಟ್ ಸಭೆ ನಡೆಸುವ ಸಂದರ್ಭದಲ್ಲಿ ದೇವದಾಸಿ ಮಹಿಳಾ ವಿಮೋಚನಾ ಸಂಘಟನೆಯಿಂದ  ತಮ್ಮ ಹಕ್ಕೊತ್ತಾಯಗಳನ್ನಿಟ್ಟುಕೊಂಡು ಮತ್ತೊಮ್ಮೆ ಹೋರಾಟ ಹಮ್ಮಿಕೊಂಡಿದ್ದರು. ಆಗ  ಎರಡನೆಯ ಹಂತದ ಸಮೀಕ್ಷೆಯನ್ನು ಮಂಜೂರು ಮಾಡುವುದಾಗಿ ಸರ್ಕಾರ ಭರವಸೆ ಕೊಟ್ಟಿತ್ತು.ವಯಸ್ಸಿನ ಮಿತಿ ತೆಗೆಯಲು, ಮಾಸಾಶನದ ಮೊತ್ತವು 1000 ರೂಪಾಯಿಗೆ ಹೆಚ್ಚಿಸಲು, ದುಡಿದುಣ್ಣಲು ಉಳುವೆಯೋಗ್ಯ ಎರಡು ಎಕರೆ ಭೂಮಿ ಒದಗಿಸಲು ಈ ಮಹಿಳೆಯರು ಕೇಳುತಲೇ ಇರುವರು. (ಇಲ್ಲಿವರೆಗೂ ಸರ್ಕಾರ ಇತರೆ ಕೆಲವು ದಲಿತರಿಗೆ ಮಾತ್ರ ಕೊಟ್ಟ ಭೂಮಿಯು ಉಳುಮೆಗೆ ಯೋಗ್ಯವಾದದ್ದು ಆಗಿರುವುದಿಲ್ಲ.) ದಲಿತರಿಗೆ ಮತ್ತು ಮಹಿಳೆಯರಿಗೆ ಸ್ವಾಭಿಮಾನದಿಂದ ಬದುಕಲು ಭೂಮಿಯ ಅವಶ್ಯಕತೆ ಇದೆ. ಉದ್ಯೋಗದ ಅವಶ್ಯಕತೆ ಇದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry