ಘನತ್ಯಾಜ್ಯಕ್ಕೆ ದಿಕ್ಕೆಟ್ಟ ಬದುಕು

7

ಘನತ್ಯಾಜ್ಯಕ್ಕೆ ದಿಕ್ಕೆಟ್ಟ ಬದುಕು

Published:
Updated:

ಚಾಮರಾಜನಗರ: ದಿನೇ ದಿನೇ ನಗರಸಭೆ ವ್ಯಾಪ್ತಿ ಕಸದ ರಾಶಿಗಳ ಸಂಖ್ಯೆ ಹೆಚ್ಚುತ್ತಿದ್ದು, ನಗರ ಸ್ಥಳೀಯ ಸಂಸ್ಥೆ ಆಡಳಿತ ಮಾತ್ರ ವಿಲೇವಾರಿಗೆ ನಿರ್ಲಕ್ಷ್ಯವಹಿಸಿದೆ. ರಸ್ತೆಬದಿ, ಹೋಟೆಲ್-ದೇವಸ್ಥಾನದ ಮುಂಭಾಗದ ಘನತ್ಯಾಜ್ಯ ಚರಂಡಿ ಸೇರುತ್ತಿದೆ. ತ್ಯಾಜ್ಯ ವಿಲೇವಾರಿ ಸಂಬಂಧ ಅನುಷ್ಠಾನ ಗೊಂಡಿರುವ ಯೋಜನೆಯ ಆಮೆಗತಿ ಕಾಮಗಾರಿ ಪರಿಣಾಮ ನಿತ್ಯವೂ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ಸದಸ್ಯರ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಶಾಹಿಯ ನಿರ್ಲಕ್ಷ್ಯ ದಿಂದ ಸಾರ್ವಜನಿಕರಿಗೆ ತೊಂದರೆ ಕಟ್ಟಿಟ್ಟ ಬುತ್ತಿಯಾಗಿದೆ.ಸ್ಥಳೀಯ ಆಡಳಿತ ಘನತ್ಯಾಜ್ಯ ವಿಲೇವಾರಿ ಸಂಬಂಧ ರೂಪಿಸಿರುವ ಕ್ರಿಯಾಯೋಜನೆ ಪ್ರಕಾರ ನಗರದಲ್ಲಿ 12,673 ಮನೆಗಳಿವೆ. 854 ವಾಣಿಜ್ಯ ಕಟ್ಟಡಗಳಿವೆ. ಒಟ್ಟು 27 ಕೊಳೆಗೇರಿಗಳಿದ್ದು, 15 ಮಾತ್ರ ಘೋಷಣೆಯಾಗಿವೆ. 14 ಕೈಗಾರಿಕೆಗಳು, 43 ದೇವಸ್ಥಾನ ಹಾಗೂ 7 ಕಲ್ಯಾಣ ಮಂಟಪಗಳಿವೆ. ಇವುಗಳಿಂದ ನಿತ್ಯವೂ 16 ಟನ್‌ನಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಆದರೆ, ಸಮರ್ಪಕ ವಿಲೇವಾರಿ ಮಾತ್ರ ನಡೆಯುತ್ತಿಲ್ಲ.ಘನತ್ಯಾಜ್ಯ ನಿರ್ವಹಣೆ ನಿಯಮಾವಳಿ- 2000ರ ಪ್ರಕಾರ ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ವಿಲೇವಾರಿಗೆ ಸಮರ್ಪಕವಾದ ಕ್ರಮಕೈಗೊಳ್ಳ ಬೇಕಿದೆ. ಶಾಲಾ-ಕಾಲೇಜುಮಟ್ಟದಲ್ಲಿ ವಿದ್ಯಾರ್ಥಿ ಗಳಿಗೆ ಅರಿವು ಮೂಡಿಸುವಂಥ ಕಾರ್ಯಕ್ರಮ ರೂಪಿಸಬೇಕು. ನಾಗರಿಕರನ್ನು ಇದರಲ್ಲಿ ಸೇರಿಸಿಕೊಂಡು ಜಾಗೃತಿ ಮೂಡಿಸಬೇಕು. ಆದರೆ, ನಗರಸಭೆಯಿಂದ ನಡೆಯುವ ಕಾರ್ಯಕ್ರಮಗಳು ಸಾರ್ವಜನಿಕರಿಗೆ ತಲುಪುತ್ತಿಲ್ಲವೆಂದು ಜನರು ಆರೋಪಿಸುತ್ತಿದ್ದಾರೆ. ಇದು ಸದಸ್ಯರು ಮತ್ತು ಅಧಿಕಾರಿಗಳ ಕಾರ್ಯವೈಖರಿಗೆ ಕನ್ನಡಿ ಹಿಡಿದಿದೆ.ಆಸ್ಪತ್ರೆ, ವಾಣಿಜ್ಯ ಉದ್ದೇಶದಿಂದ ಉತ್ಪಾದನೆ ಯಾಗುವ ತ್ಯಾಜ್ಯವನ್ನು ಪ್ರತ್ಯೇಕ್ಷಿಸಿ ವಿಲೇವಾರಿ ಮಾಡಬೇಕಿದೆ. ಆದರೆ, ಇಂಥ ಪ್ರಯತ್ನವೇ ನಡೆಯುತ್ತಿಲ್ಲ. ಸಂದಿಗೊಂದಿಗಳಲ್ಲಿ ನಗರಸಭೆ ಸಿಬ್ಬಂದಿ ಕಸ ಸುರಿದು ಬೆಂಕಿ ಹಚ್ಚುವ ಪ್ರವೃತ್ತಿ ಬೆಳೆಸಿಕೊಂಡಿರುವುದು ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ.ಇನ್ನೂ ಮನೆಗಳ ಹಿಂಭಾಗದ ಕನ್ಸರ್‌ವೆನ್ಸಿಗಳ ಸ್ಥಿತಿ ಭಯ ಹುಟ್ಟಿಸುತ್ತದೆ. ಅಲ್ಲಿರುವ ಕಸ ತೆಗೆಯುವ  ಪ್ರಕ್ರಿಯೆ ನಡೆಯುತ್ತಿಲ್ಲ. ರಸ್ತೆ, ಚರಂಡಿ ಯಲ್ಲಿರುವ ಕಸ ತಂದು ಪುನಃ ಕನ್ಸರ್‌ವೆನ್ಸಿಗೆ ಹಾಕುವ ಬೆಳವಣಿಗೆ ಹೆಚ್ಚಿದೆ. ಇದರಲ್ಲಿಯೇ ನಾಯಿ, ಬಿಡಾಡಿ ದನಗಳು ಮೂತಿ ತೂರಿಸಿ ಮತ್ತಷ್ಟು ಕಲ್ಮಷ ವಾತಾವರಣ ಸೃಷ್ಟಿಸುತ್ತಿವೆ. ಈ ಬಗ್ಗೆ ಮನೆಯ ಸದಸ್ಯರು ಸಿಬ್ಬಂದಿಯ ಗಮನ ಸೆಳೆದರೂ ಪ್ರಯೋಜನ ಮಾತ್ರ ಶೂನ್ಯ.ನಾಗರಿಕರು ಕೂಡ ಎಲ್ಲೆಂದರಲ್ಲಿ ಕಸ ಹಾಕುವ ಪ್ರವೃತ್ತಿ ಬೆಳೆಸಿಕೊಂಡಿರುವುದು ವಿಲೇವಾರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಕಸದ ತೊಟ್ಟಿ ಇಟ್ಟಿದ್ದರೂ ಅಲ್ಲಿಗೆ ಹಾಕುವುದು ಕಡಿಮೆ. ಜತೆಗೆ, ಕಬ್ಬಿಣ ಸೇರಿದಂತೆ ಮರಮುಟ್ಟು ಸಾಮಗ್ರಿಯನ್ನು ಬೇರ್ಪಡಿಸಿ ಹಾಕುತ್ತಿಲ್ಲ. ಈ ಬಗ್ಗೆ ನಗರಸಭೆಯಿಂದ ಅರಿವು ಮೂಡಿಸುವ ಪ್ರಯತ್ನವೂ ನಡೆದಿಲ್ಲ.‘ಕಸದ ಸಮಸ್ಯೆಯಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಸಮರ್ಪಕ ವಿಲೇವಾರಿ ನಡೆಯು ತ್ತಿಲ್ಲ. ಐದು ವರ್ಷದ ಹಿಂದೆಯೇ ಘನತ್ಯಾಜ್ಯ ವಸ್ತುಗಳ ವಿಲೇವಾರಿಗೆ ಕ್ರಿಯಾಯೋಜನೆ ರೂಪಿಸ ಲಾಗಿತ್ತು. ಸರ್ಕಾರದಿಂದ ಅನುದಾನ ಲಭಿಸಿದರೂ ಯೋಜನೆ ಮಾತ್ರ ಇಂದಿಗೂ ಪೂರ್ಣಗೊಂಡಿಲ್ಲ. ಇದರಿಂದ ನಾಗರಿಕರಿಗೆ ಸಮಸ್ಯೆ ಹೆಚ್ಚು. ಈ ಬಗ್ಗೆ ಅಧಿಕಾರ ನಡೆಸುವ ಮಂದಿಗೆ ತಿಳಿವಳಿಕೆ ಇರಬೇಕು’ ಎನ್ನುತ್ತಾರೆ ಚಾಲಕ ಕೇಶವ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry