ಮಂಗಳವಾರ, ಮೇ 18, 2021
22 °C

ಘನ ವಾದ್ಯ ಘಟ

ಅವನೀಶ್ Updated:

ಅಕ್ಷರ ಗಾತ್ರ : | |

`ನನಗಾಗ 10 ವರ್ಷ. ಚೆನ್ನೈನಲ್ಲಿದ್ದೆ. ಸಂಗೀತದಲ್ಲಿ ಯಾವ ಹೆಣ್ಣು ಮಗಳೂ ಮಾಡದೇ ಇರುವ ಸಾಧನೆ ಮಾಡಬೇಕು ಎಂದು ಆಗಲೇ ಅನಿಸಿತ್ತು. ಇದಕ್ಕಾಗಿ ಮಹಿಳೆಯರು ಆಯ್ಕೆ ಮಾಡದೇ ಇರುವ ಮೃದಂಗ ಕಲಿಯಲು ಆರಂಭಿಸಿದೆ. ಮೂರು ವರ್ಷ ಕಲಿತ ನಂತರ ಘಟದ ಮೇಲೆ ಕಣ್ಣು ಬಿತ್ತು. ಘಟ ವಿದ್ವಾಂಸ ವಿಕ್ಕು ವಿನಾಯಕಂ ಅವರ ಕಛೇರಿಗೆ ತಪ್ಪದೇ ಹೋಗುತ್ತಿದ್ದೆ. ಘಟದ ನಾದ ಕೇಳಿ ಇದನ್ನೇ ಕಲಿಯಬೇಕು ಎನ್ನುವ ಆಸೆ ಚಿಗುರಿತು.

 

ಅದನ್ನು ಸಾಕಾರಗೊಳಿಸಲು ವಿಕ್ಕು ವಿನಾಯಕಂ ಅವರ ಬಳಿ ಹೋಗಿ `ನನಗೆ ಕಲಿಸುವಿರಾ~ ಎಂದೆ. `ಇದು ಮಣ್ಣು ವಾದ್ಯ, ಶ್ರುತಿ ಮಾಡೋದು, ನುಡಿಸೋದು ತುಂಬ ಕಷ್ಟ~ ಅಂದ್ರು. ಆಗ ಇದನ್ನೇ ಕಲೀಬೇಕು ಎಂಬ ಹಟ ಇನ್ನಷ್ಟು ಹೆಚ್ಚಾಯಿತು..~ ಇದು ಗಂಡು ವಾದ್ಯ ಎಂದೇ ಹೆಸರಾದ, ವಾದ್ಯ ಪ್ರಕಾರಗಳಲ್ಲಿ ಅತ್ಯಂತ ಕಷ್ಟಕರವಾದ ಘಟದಲ್ಲಿ ಬಹಳಷ್ಟು ಖ್ಯಾತಿ ಗಳಿಸಿದ ದೇಶದ ವಿರಳಾತಿ ವಿರಳ ಕಲಾವಿದೆ ವಿದುಷಿ ಸುಕನ್ಯಾ ರಾಮ್‌ಗೋಪಾಲ್ ತಮ್ಮ ಕಲೆಯ ಹಿನ್ನೆಲೆಯನ್ನು ವಿವರಿಸಿದ್ದು ಹೀಗೆ.`ನಾನು 15 ವರ್ಷದ ಹುಡುಗಿ ಇದ್ದಾಗಿನಿಂದಲೂ (ಸುಮಾರು 40 ವರ್ಷಗಳಿಂದಲೂ) ಘಟ ನುಡಿಸ್ತಾ ಇದ್ದೀನಿ. ಸಾಕಷ್ಟು ಶಿಷ್ಯರನ್ನು ತಯಾರು ಮಾಡಿದ್ದೇನೆ. ಹೆಣ್ಣು ಮಕ್ಕಳು ಕೂಡ ಇಷ್ಟಪಟ್ಟು ಕಲಿಯುತ್ತಿದ್ದಾರೆ. ಹೀಗಾಗಿ ಕಲೆಗೆ ಗಂಡು ಹೆಣ್ಣು ಎಂಬ ಭೇದ ಇಲ್ಲವೇ ಇಲ್ಲ. ಮನಸ್ಸು, ಶ್ರಮ ಪಡುವ ಆಸೆ ಇದ್ದರೆ ಐದು ವರ್ಷದ ಮಗು ಕೂಡ ಘಟ ಕಲಿಯಬಹುದು~ ಎನ್ನುತ್ತಾರೆ ಈ ಹಿರಿಯ ಕಲಾವಿದೆ.`ಹಾಗೆ ನೋಡಿದರೆ ಮೃದಂಗಕ್ಕೂ ಘಟಕ್ಕೂ ಹೆಚ್ಚೇನು ವ್ಯತ್ಯಾಸ ಇಲ್ಲ. ಆದರೆ ಘಟದಲ್ಲಿ ಶ್ರುತಿ ಹಿಡಿಯೋದು ಕಷ್ಟ. ಲಯ ಸರಿಯಾಗಿರಬೇಕು. ಹೀಗಾಗಿ ಸಾಮಾನ್ಯವಾಗಿ ಗಾಯಕರು ಘಟವನ್ನು ಮಹಿಳೆ ನುಡಿಸಲು ಬಂದರೆ ಒಪ್ಪಿಕೊಳ್ಳುವುದೇ ಇಲ್ಲ. ಇದೂ ನನ್ನ ಸಾಧನೆಗೆ ಸವಾಲಾಯಿತು.

 

ಇದೀಗ ಘಟಕ್ಕೆ ಉತ್ತಮ ಸ್ಥಾನಮಾನ ತರಲು ಪ್ರಯತ್ನಿಸಿದ್ದೇನೆ. ಒಂದೇ ರಾಗವನ್ನು (ಉದಾ: ರಾಗ ಮೋಹನ) ತೆಗೆದುಕೊಂಡು ಸುತ್ತಲೂ ಆರೆಂಟು ಘಟಗಳನ್ನು ಇಟ್ಟು ಅದರ ಸ್ಕೇಲ್ ನುಡಿಸಲು ಶುರು ಮಾಡಿದೆ. ಇದೀಗ ಅನೇಕ ಹಿರಿಯ ಕಲಾವಿದರು ನಾನು ನುಡಿಸುವ “ಮಾನಮಧುರೆ” ಘಟವನ್ನೇ ಪಕ್ಕವಾದ್ಯಕ್ಕೆ ಇಷ್ಟಪಡುತ್ತಾರೆ~ ಎನ್ನುತ್ತಾರೆ ವಿದುಷಿ ಸುಕನ್ಯಾ.ಪ್ರಾಚೀನ ಲಯವಾದ್ಯ

ಘಟಂ ಅಥವಾ ಘಟ ದಕ್ಷಿಣ ಭಾರತದ ಬಹಳ ಪ್ರಾಚೀನ ಲಯವಾದ್ಯ. ಮಣ್ಣಿನ ಮಡಿಕೆಯನ್ನೇ ಹೋಲುವ ಇದರ `ಬಾಯಿ~ ಅಗಲವಾಗಿದ್ದು, ಎರಡೂ ಕೈಗಳ ಹತ್ತು ಬೆರಳುಗಳನ್ನೂ ಬಳಸಿ ನುಡಿಸಲಾಗುತ್ತದೆ. ಘಟಂನಲ್ಲಿ ಎರಡು ವಿಧ. ಮದ್ರಾಸ್ ಘಟಂ ಮತ್ತು `ಮಾನ ಮಧುರೆ~ ಘಟಂ.

 

ಮದ್ರಾಸ್ ಘಟಂ ತುಂಬ ಹಗುರವಾಗಿದ್ದು, ಹೆಚ್ಚಿನ ಶಕ್ತಿ ಹಾಕಿದರೆ ಒಡೆದು ಹೋಗುವ ಸಾಧ್ಯತೆ ಹೆಚ್ಚು. ಮಾನ ಮಧುರೆ ಘಟಂ ಹೆಚ್ಚು ಗಟ್ಟಿಯಿದ್ದು, ಜೇಡಿಮಣ್ಣಿನ ಜತೆಗೆ ಕಂಚನ್ನು ಮಿಶ್ರಣ ಮಾಡಿ ತಯಾರು ಮಾಡಲಾಗುತ್ತದೆ. ಇದರಿಂದ ಹೊಮ್ಮುವ ನಾದ ವಿಶಿಷ್ಟವಾಗಿರುತ್ತದೆ. ಘಟಂ ಅನ್ನು ಮಣ್ಣು, ತಾಮ್ರ, ಕಂಚು, ಕಬ್ಬಿಣವನ್ನೂ ಬಳಸಿ ತಯಾರು ಮಾಡಲಾಗುತ್ತದೆ.ಪಂಚಭೂತಗಳನ್ನು ಘಟಂ ಒಳಗೊಂಡಿರುವುದು ವಿಶೇಷ. ಭೂಮಿ, ನೀರು, ಗಾಳಿ, ಅಗ್ನಿ ಮತ್ತು ಆಕಾಶ ಎಲ್ಲವನ್ನೂ ಒಳಗೊಂಡ ವಾದ್ಯವಿದು. ಘಟಂಗೆ ಬಹು ಮುಖ್ಯವಾಗಿ ಮಣ್ಣು ಬೇಕು; ಇದು ಭೂಮಿಯನ್ನು ಪ್ರತಿನಿಧಿಸುತ್ತದೆ.ಇದನ್ನು ಬೆರೆಸಲು ನೀರು ಬೇಕು, ಮಡಿಕೆಯನ್ನು ಸುಡುವಂತೆ ಇದನ್ನೂ ಬೆಂಕಿಯಿಂದ ಸುಡಲಾಗುತ್ತದೆ.  ಘಟಂ ಒಳಗಡೆ ಗಾಳಿಯಿದ್ದು, ಸಂಗೀತದ ನಾದ ಆಕಾಶದವರೆಗೂ ವ್ಯಾಪಿಸುತ್ತದೆ. ಹೀಗೆ ಘಟಂ ಪ್ರಕೃತಿಯ ಎಲ್ಲ ಅಂಶಗಳನ್ನೂ ಒಳಗೊಂಡಿರುತ್ತದೆ.ಇದಕ್ಕೆ ಕುಂಭವಾದ್ಯ ಎಂದೂ ಹೆಸರಿದೆ. ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಗಾಯಕ, ಪಿಟೀಲು, ಮೃದಂಗ, ಖಂಜೀರದ ನಂತರದ ಸ್ಥಾನ ಇರುವುದು ಘಟಂಗೆ. ಇದರಲ್ಲಿ ನಾದ ತರುವುದು ತುಂಬ ಕಷ್ಟ. ಗಾಯಕ ಶ್ರುತಿಗೆ ಹೊಂದಿಕೊಳ್ಳುವಂತಹ ಘಟ ಬಳಸಬೇಕಾದುದು ಬಹಳ ಮುಖ್ಯ.

 

ಘಟದಲ್ಲಿ ಕೈಚಳಕ ಇದ್ದರೆ ಬೇರೆ ಬೇರೆ ತರಹದ ನಾದ ಹೊಮ್ಮಿಸಬಹುದು. ಸಂಗೀತ ಕಛೇರಿಗೆ ಯಾವ ಘಟವನ್ನು ಬೇಕಾದರೂ ತರುವಂತಿಲ್ಲ. ಗಾಯಕನ ಶ್ರುತಿಗೆ ಸರಿಹೊಂದುವಂತಹ ಘಟವನ್ನೇ ತರಬೇಕಾಗುತ್ತದೆ. ಇದೊಂದು ಉಪ ಪಕ್ಕವಾದ್ಯ.ಕರ್ನಾಟಕದಲ್ಲಿ ಸುಕನ್ಯಾ ರಾಮ್‌ಗೋಪಾಲ್, ಗಿರಿಧರ ಉಡುಪ, ದಯಾನಂದ ಮೋಹಿತೆ, ಎಂ.ಎ. ಕೃಷ್ಣಮೂರ್ತಿ, ಶ್ರೀಶೈಲ, ನಾರಾಯಣ ಮೂರ್ತಿ, ಜಿ.ಎಸ್. ರಾಮಾನುಜಂ (ಮೈಸೂರು), ಕೃಷ್ಣಪ್ರಸಾದ್ ಮುಂತಾದವರು ಘಟ ನುಡಿಸುವ ಘಟಾನುಘಟಿ ಕಲಾವಿದರು.ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಗೋಪಾಲ್ ಎಂಬವರ ಇಡೀ ಕುಟುಂಬದವರು ಘಟ ವಾದ್ಯ ತಯಾರಿಸಿ ರಾಜ್ಯದ ನಾನಾ ಭಾಗಗಳಿಗೆ ಸರಬರಾಜು ಮಾಡುತ್ತಾರೆ. ಬೆಲೆ 500ರಿಂದ 600 ರೂಪಾಯಿ. ಚಿಕ್ಕಪೇಟೆಯ ಗಣೇಶ್ ಮ್ಯೂಸಿಕಲ್ಸ್, ಮಲ್ಲೇಶ್ವರಂನ ಅನ್ನಾ ಮ್ಯೂಸಿಕಲ್ಸ್, ಕೋರಮಂಗಲದಲ್ಲಿರುವ ಅರುಣಾ ಮ್ಯೂಸಿಕಲ್ಸ್ ನ್ಯೂ (9341214105) ನಲ್ಲಿ ಉತ್ತಮ ಗುಣಮಟ್ಟದ ಘಟ ಸಿಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.