ಘಮ ಘಮ ಘಮಾಡಿಸ್ತಾವ ಮಲ್ಲಿಗಿ...

7

ಘಮ ಘಮ ಘಮಾಡಿಸ್ತಾವ ಮಲ್ಲಿಗಿ...

Published:
Updated:
ಘಮ ಘಮ ಘಮಾಡಿಸ್ತಾವ ಮಲ್ಲಿಗಿ...

ಇದರ ಅಂದ-ಚೆಂದ, ಸುವಾಸನೆಗೆ ಮನಸೋಲದವರು ಯಾರು? ನಾರಿಯ ಮುಡಿಯನ್ನು ಇದು ಏರಿದರೆ ಆಕೆಯ ಸೌಂದರ್ಯ ಇಮ್ಮಡಿ. ದೇವರ ಮುಡಿ ಸೇರಿದರೆ ಪೂಜೆಗೆ ಸಾರ್ಥಕ್ಯ. ಪತ್ನಿಗೆ ನೀಡಿದರೆ ಆಕೆಯಲ್ಲಿ ಧನ್ಯತಾ ಭಾವ. (ಅದಕ್ಕೇ ಅಲ್ಲವೇ `ಪ್ರೇಯಸಿಗೆ ಗುಲಾಬಿ, ಪತ್ನಿಗೆ ಮಲ್ಲಿಗೆ' ಎನ್ನುವ ಗಾದೆ ಹುಟ್ಟಿದ್ದು...!)ಮನುಜರು ಹುಟ್ಟಿದಾಗಿನಿಂದ ಹಿಡಿದು ಮಸಣ ಸೇರುವವರೆಗೆ ಈ `ಮಲ್ಲಿಕಾ' ತನ್ನದೇ ವೈಶಿಷ್ಟ್ಯಗಳಿಂದ ಮೆರೆಯುತ್ತಾಳೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತಿರುವ ಈ ಪುಷ್ಪದ ಕೃಷಿಯಲ್ಲಿ ರಾಜ್ಯಕ್ಕೆ ಎರಡನೆಯ ಸ್ಥಾನದ ಹೆಗ್ಗಳಿಕೆ . ಕಾಕಡಾ, ದುಂಡು ಮಲ್ಲಿಗೆ, ಸೂಜಿಮಲ್ಲಿಗೆ, ಜಾಜಿ ಮಲ್ಲಿಗೆ ಎಂಬುದು ಹೆಚ್ಚು ಪ್ರಚಲಿತದಲ್ಲಿದ್ದರೂ ಸುಮಾರು 200 ಪ್ರಬೇಧ ಈ ಪುಷ್ಪದಲ್ಲಿದೆ.ಮಲ್ಲಿಗೆ ಎಂದ ತಕ್ಷಣ ಅದರಿಂದ ತಯಾರಿಸುವ ಸುಗಂಧದ ಕುರಿತು ಹೇಳದೇ ಹೋದರೆ ಹೇಗೆ...? ಅಮೆರಿಕ, ಹಾಲೆಂಡ್, ಸಿಂಗಪುರ, ಜಪಾನ್, ರಷ್ಯಾ ಸೇರಿದಂತೆ ಹತ್ತು ಹಲವು ದೇಶಗಳು ಮೊಲ್ಲೆ ಹೂವಿನ ಸುಗಂಧ ದ್ರವ್ಯ ಆಮದು ಮಾಡಿಕೊಳ್ಳುತ್ತಿವೆ!ಕರ್ನಾಟಕ, ತಮಿಳುನಾಡು, ಆಂಧ್ರ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಇತರ ಕೆಲ ರಾಜ್ಯಗಳಲ್ಲಿ ಸುಮಾರು 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ರಾಣಿ ತನ್ನ ಕಂಪು ಸೂಸುತ್ತಿದ್ದಾಳೆ. ಈ ಪೈಕಿ ಕರ್ನಾಟಕದ ಕೊಡುಗೆ ಸುಮಾರು 4,500 ಹೆಕ್ಟೇರ್. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೈಸೂರು, ತುಮಕೂರು, ಬಳ್ಳಾರಿ, ಚಿತ್ರದುರ್ಗ ಇತ್ಯಾದಿ ನಗರಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ.ಮೊದಲ ವರ್ಷವೇ ಕೊಯ್ಲು

ನಾಟಿ ಮಾಡಿದ ವರ್ಷವೇ ಈ ಹೂವು ಕೊಯ್ಲಿಗೆ ಬರುತ್ತದೆ. ರಾತ್ರಿಯ ವೇಳೆ ಅರಳುವ ಈ ಪುಷ್ಪವನ್ನು ಸೂರ್ಯೋದಯಕ್ಕೂ ಮುಂಚೆಯೇ ಕೊಯ್ಲು ಮಾಡಿದರೆ ಉತ್ತಮ. ಅಂದಹಾಗೆ ಈ ಹೂವು ರಾತ್ರಿ ಅರಳುವುದಕ್ಕೂ ಒಂದು ಕಾರಣವಿದೆ. ಹೂವು ಅರಳುವುದಕ್ಕೆ ಪ್ರೇರೇಪಿಸುವ ಹಾರ್ಮೋನ್ ಎಲೆಗಳಲ್ಲಿ ಇರುತ್ತವೆ. ಇದೇ `ಪವರ್ ಜನರೇಟಿಂಗ್ ಹಾರ್ಮೋನ್', ಸಂಕ್ಷಿಪ್ತದಲ್ಲಿ ಹೇಳುವುದಾಗಿ ಫ್ಲೋರಿಜೆನ್. ಸೂರ್ಯನ ಬೆಳಕಿನಲ್ಲಿ ಈ ಹಾರ್ಮೋನ್‌ಗಳು ಚುರುಕಾಗುತ್ತವೆ. ಈ ಬೆಳಕು ಎಲೆಗಳಿಂದ ಮೊಗ್ಗಿಗೆ ಸಾಗುವ ಹೊತ್ತಿಗೆ ಸಾಯಂಕಾಲವಾಗುತ್ತದೆ. ಬೆಳಕು ಮೊಗ್ಗಿಗೆ ಸೇರಿದೊಡನೇ ಮೊಗ್ಗು ಅರಳಿ ಹೂವಾಗುವುದು.ದಂಡುಮಲ್ಲಿಗೆ ಎಂದೂ ಕರೆಸಿಕೊಳ್ಳುವ ದುಂಡು ಮಲ್ಲಿಗೆ ಹಾಗೂ ಕಾಕಡಾ ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಹೆಚ್ಚು ಹೂವು ನೀಡಿದರೂ ವರ್ಷಪೂರ್ತಿ ಪುಷ್ಪ ಲಭ್ಯ. ದುಂಡು ಮಲ್ಲಿಗೆಯಿಂದ ಒಂದು ಹೆಕ್ಟೇರ್ ಪ್ರದೇಶದಲ್ಲಿ ಏನಿಲ್ಲವೆಂದರೂ ಕನಿಷ್ಠ 8-9 ಟನ್ ಪುಷ್ಪ ಲಭ್ಯ!ಸೂಜಿ ಮಲ್ಲಿಗೆ ಹೆಸರಿಗೆ ತಕ್ಕಂತೆ ಸೂಜಿಯಂತೆ ಮೊನಚಾಗಿರುತ್ತದೆ. ಇದಕ್ಕೆ ವಸಂತ ಪುಷ್ಪ ಎಂದೂ ಹೆಸರು. ಸುಗಂಧ ದ್ರವ್ಯ ತಯಾರಿಕೆಯಲ್ಲಿ ಈ ಪುಷ್ಪದ ಪಾತ್ರ ಮಹತ್ತರ. ಪ್ರಿಯಂವದೆ ಎಂದೂ ಕರೆಸಿಕೊಳ್ಳುವ ಜಾಜಿ ಮಲ್ಲಿಗೆಯಿಂದ ಕೂಡ ಸುಗಂಧ ದ್ರವ್ಯ ತಯಾರಿಸಬಹುದು.ಹಬ್ಬ- ಹರಿದಿನಗಳಲ್ಲಿ ಮಾತ್ರವಲ್ಲದೇ ವರ್ಷಪೂರ್ತಿ ಭಾರಿ ಬೇಡಿಕೆ ಹೊಂದಿರುವ ಈ ಪುಷ್ಪದ ಕೃಷಿಯಲ್ಲಿ ತೊಡಗಿದ ರೈತರು ಆರ್ಥಿಕವಾಗಿ ಸದೃಢರಾಗುವಲ್ಲಿ ಸಂದೇಹವಿಲ್ಲ ಎನ್ನುವುದು ಅನುಭವಸ್ಥರ ಮಾತು. ಮಧ್ಯವರ್ತಿಗಳ ಹಾವಳಿ ಮಲ್ಲಿಗೆ ಬೆಳೆಗಾರರಿಗೂ ತಟ್ಟಿರುವ ಕಾರಣ, ಈ ಕೃಷಿಕರ ರಕ್ಷಣೆಗೆ ಸರ್ಕಾರ ಸೂಕ್ತ ಮಾರುಕಟ್ಟೆ ಒದಗಿಸಬೇಕು ಎನ್ನುವುದು ರೈತರ ಒಕ್ಕೊರಲಿನ ಕೂಗು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry