ಘರ್ಷಣೆ: ವಿಶೇಷ ತನಿಖಾ ತಂಡ ಪುನರ್‌ರಚನೆ

7

ಘರ್ಷಣೆ: ವಿಶೇಷ ತನಿಖಾ ತಂಡ ಪುನರ್‌ರಚನೆ

Published:
Updated:

ನವದೆಹಲಿ: ಬೆಂಗಳೂರಿನಲ್ಲಿ ಮಾರ್ಚ್ 2ರಂದು ನಡೆದ ವಕೀಲರು, ಪೊಲೀಸರು ಹಾಗೂ ಪತ್ರಕರ್ತರ ನಡುವಿನ ಘರ್ಷಣೆ ಕುರಿತು ತನಿಖೆ ನಡೆಸಲು ಹೈಕೋರ್ಟ್ ನೇಮಿಸಿದ್ದ `ವಿಶೇಷ ತನಿಖಾ ತಂಡ~ (ಎಸ್‌ಐಟಿ) ವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪುನರ್‌ರಚಿಸಿದೆ.ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾ. ಸ್ವತಂತ್ರ ಕುಮಾರ್ ಹಾಗೂ ನ್ಯಾ. ಎಸ್.ಜೆ. ಮುಖ್ಯೋಪಾಧ್ಯಾಯ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ, ಸಂಬಂಧಪಟ್ಟ ಎಲ್ಲರ ಒಪ್ಪಿಗೆ ಬಳಿಕ ಸಿಬಿಐ ಮಾಜಿ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದ ವಿಶೇಷ ತನಿಖಾ ತಂಡವನ್ನು ಬದಲಾವಣೆ ಮಾಡುವ ತೀರ್ಮಾನ ಕೈಗೊಂಡಿತು.ಕೇರಳ ಹಾಗೂ ತಮಿಳುನಾಡಿನ ತಲಾ ಒಬ್ಬರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಕನ್ನಡ ಬಲ್ಲ ಸಿಬಿಐ ಡಿಐಜಿ ದರ್ಜೆ ಅಧಿಕಾರಿ ಹಾಗೂ ಹಲಸೂರುಗೇಟ್ ಪೊಲೀಸ್ ಠಾಣೆ ಇನ್‌ಸ್ಟೆಕ್ಟರ್ ಪುನರ್‌ರಚಿತ ವಿಶೇಷ ತನಿಖಾ ತಂಡದಲ್ಲಿರುತ್ತಾರೆ. ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಈ ತಂಡಕ್ಕೆ ನ್ಯಾಯಾಪೀಠ ನಿರ್ದೇಶಿಸಿದೆ.ತನಿಖಾ ತಂಡ ಪುನರ್‌ರಚಿಸುವ ನ್ಯಾಯಪೀಠದ ಪ್ರಸ್ತಾವನೆಯನ್ನು ವಕೀಲರ ಸಂಘದ ಪರ ವಕೀಲ ಕೆ.ಕೆ.ವೇಣುಗೋಪಾಲ್ ಹಾಗೂ ರಾಜ್ಯ ಸರ್ಕಾರ ಪರ ವಕೀಲ ಕೆ.ವಿ.ವಿಶ್ವನಾಥನ್ ಒಪ್ಪಿದ ಬಳಿಕ ಅಧಿಕಾರಿಗಳ ಹೆಸರನ್ನು ಸೂಚಿಸಲಾಯಿತು. ಹೈಕೋರ್ಟ್ ರಚಿಸಿರುವ ಆರ್.ಕೆ.ರಾಘವನ್ ನೇತೃತ್ವದ ತಂಡದಲ್ಲಿ ಪ್ರಕರಣದಲ್ಲಿ ಭಾಗಿಯಾದ ಆರೋಪಕ್ಕೊಳಗಾದ ಅಧಿಕಾರಿಗಳಿದ್ದಾರೆ ಎಂದು ವೇಣುಗೋಪಾಲ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಂಡವನ್ನು ಪುನರ್‌ರಚಿಸಲಾಯಿತು.ಹೈಕೋರ್ಟ್ ಮೇ 16ರಂದು ನೀಡಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ವಿಶೇಷ ಮೇಲ್ಮನವಿ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್ ನಿರ್ದೇಶನಗಳ ಹಿನ್ನೆಲೆಯಲ್ಲಿ ಮಾರ್ಚ್ 2ರ ಘಟನೆ ಹಾಗೂ ವಕೀಲರು, ಪೊಲೀಸರು ಹಾಗೂ ಪತ್ರಕರ್ತರ ದೂರುಗಳ ತನಿಖೆಗೆ ಹೈಕೋರ್ಟ್ ತನಿಖಾ ತಂಡ ರಚಿಸಿತ್ತು.ಸಂವಿಧಾನ ಕಲಂ 19 (1) ಮತ್ತು 19 (2) ರ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ನಿಯಂತ್ರಿಸುವ ವಿಧಿವಿಧಾನ ಕುರಿತು ಪರಿಶೀಲಿಸುವಂತೆ ರಾಜ್ಯ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಹೇಳಿದೆ.ಮಾರ್ಚ್ 2ರಂದು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಪ್ರಕರಣವೊಂದನ್ನು ವರದಿ ಮಾಡಲು ಮಾಧ್ಯಮಗಳ ಪ್ರತಿನಿಧಿಗಳು ತೆರಳಿದ್ದ ಸಂದರ್ಭದಲ್ಲಿ ಘರ್ಷಣೆ ನಡೆದಿತ್ತು. ನ್ಯಾಯಾಲಯದ ಆವರಣದ ಹೊರಗೂ ಗಲಭೆ ಹರಡಿ ಪೊಲೀಸರು ಹಾಗೂ ವಕೀಲರ ನಡುವೆ ಮಾರಾಮಾರಿಯೇ ನಡೆದಿತ್ತು.ಈ ಪ್ರಕರಣದ ವಿಚಾರಣೆಗೆ ನ್ಯಾ. ವೈದ್ಯನಾಥನ್ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿತ್ತು. ಅಲ್ಲದೆ, ಹೈಕೋರ್ಟ್ ವಿಶೇಷ ತನಿಖಾ ತಂಡ ರಚಿಸಿತ್ತು. ಈ ಮಧ್ಯೆ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೆಲವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry