ಶನಿವಾರ, ಮೇ 15, 2021
24 °C

ಘಾಯ್‌ಗೆ ಜಮೀನು: ಸಿಎಜಿ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್(ಪಿಟಿಐ): ಚಿತ್ರ ನಿರ್ದೇಶಕ ಸುಭಾಷ್ ಘಾಯ್ ಅವರಿಗೆ ಸಂಸ್ಥೆಯೊಂದನ್ನು ಸ್ಥಾಪಿಸಲು ಆಯಕಟ್ಟಿನ ಜಾಗದಲ್ಲಿ 20.10 ಎಕರೆ ಭೂಮಿ ಮಂಜೂರು ಮಾಡಿದ ಸರ್ಕಾರದ ಕ್ರಮಕ್ಕೆ ಮಹಾಲೇಖಪಾಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಘಾಯ್ ಅವರು ಇಲ್ಲಿಯೂ ಭೂ ಮಂಜೂರಾತಿ ಪ್ರಕರಣದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದಾರೆ.ಹೈದರಾಬಾದ್‌ನಲ್ಲಿ ಘಾಯ್ ಅವರಿಗೆ ಭೂಮಿ ಮಂಜೂರಾತಿ ಪ್ರಕರಣವೂ ಆಂಧ್ರ ಹೈಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿದೆ. ದಿವಂಗತ ವೈ.ಎಸ್.ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದಾಗ ಘಾಯ್ ಅವರ ವಿಸ್ಲಿಂಗ್ ವುಡ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ಗೆ ಭೂಮಿ ಮಂಜೂರು ಮಾಡಿದ ಪ್ರಕರಣದಲ್ಲಿ `ಆಂಧ್ರ ಪ್ರಾಚೀನ ಹಾಗೂ ಚಾರಿತ್ರಿಕ ಸ್ಮಾರಕ ಮತ್ತು ಪುರಾತತ್ವ ತಾಣಗಳ ಸಂರಕ್ಷಣೆ-1960~ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಹೇಳಿದೆ. ಫಿಲ್ಮ್, ಟೆಲಿವಿಷನ್, ಆನಿಮೇಷನ್ ಮತ್ತಿತರ ವಿಷಯಗಳ ತರಬೇತಿ ಸಂಸ್ಥೆ ಸ್ಥಾಪಿಸುವ ಉದ್ದೇಶದಿಂದ ಭೂಮಿ ಮಂಜೂರು ಮಾಡಿರುವುದಾಗಿ ಸರ್ಕಾರ ತಿಳಿಸಿತ್ತು.ಖಾಸಗಿ ವ್ಯಕ್ತಿಯೊಬ್ಬರು ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ 2010ರ ಜನವರಿಯಲ್ಲಿ ರಾಜ್ಯ ಸರ್ಕಾರದ ಭೂ ಮಂಜೂರಾತಿ ಆದೇಶವನ್ನು ರದ್ದುಗೊಳಿಸಿತ್ತು. ಈ ಮಧ್ಯೆ ಈ ಪ್ರಕರಣದ ವಿಚಾರಣೆ ಇನ್ನೂ ಮುಂದುವರಿದಿದ್ದು, ಹೈಕೋರ್ಟ್ ತೀರ್ಪು ಹಾಗೂ ಸಿಎಜಿ ತರಾಟೆ ಹಿನ್ನೆಲೆಯಲ್ಲಿ ಸರ್ಕಾರ ತನ್ನ ತೀರ್ಮಾನವನ್ನು ಪುನರ್ ಪರಿಶೀಲಿಸಲು ಚಿಂತಿಸುತ್ತಿದೆ.ವಿಸ್ಲಿಂಗ್ ವುಡ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ಗೆ ಹೈದರಾಬಾದ್ ಜಿಲ್ಲೆಯ ಗೋಲ್ಕೊಂಡ ಮಂಡಲಕ್ಕೆ ಸೇರಿದ ಇಬ್ರಾಹಿಂಬಾಗ್ ಗ್ರಾಮದ ಸರ್ವೆ ನಂಬರ್ 173 ಮತ್ತು 178ರಲ್ಲಿ ಜಮೀನು ಮಂಜೂರು ಮಾಡಲಾಗಿತ್ತು. ಇದು ಐತಿಹಾಸಿಕ ಮಸೀದಿಯೊಂದಕ್ಕೆ ಹೊಂದಿಕೊಂಡ ಭೂಮಿಯಾಗಿದೆ.ಜಿಲ್ಲಾಧಿಕಾರಿಯವರ ಪ್ರಕಾರ ಘಾಯ್ ಅವರಿಗೆ ಭೂಮಿ ಮಂಜೂರು ಮಾಡಿರುವ ಸ್ಥಳದಲ್ಲಿ ಭೂಮಿಯ ಮಾರುಕಟ್ಟೆ ದರ ಎಕರೆಗೆ 4.84 ಕೋಟಿ ರೂಪಾಯಿ ಇದೆ. ಆದರೆ ಘಾಯ್ ಅವರಿಗೆ ಸರ್ಕಾರ ಅದನ್ನು ಎಕರೆಗೆ 2 ಕೋಟಿ ರೂಪಾಯಿ ದರದಲ್ಲಿ ನೀಡಲು ಒಪ್ಪಿಕೊಂಡಿದೆ.ಜತೆಗೆ ಘಾಯ್ ಅವರಿಗೆ ಭೂಮಿ ಕೊಳ್ಳಲು 10 ವರ್ಷಗಳ ಕಾಲಾವಕಾಶ ನೀಡಲಾಗಿದೆ. ಮೊದಲ 3 ವರ್ಷಗಳ ಕಾಲ 2 ಕೋಟಿ ಮೊತ್ತದ 0.2ರಷ್ಟು ಹಣವನ್ನು ಭೋಗ್ಯದ ದರವನ್ನಾಗಿ ನಿಗದಿ ಮಾಡಿತ್ತು.ಸರ್ಕಾರ ಘಾಯ್ ಅವರಿಗೆ ಇಷ್ಟೆಲ್ಲಾ ವಿನಾಯಿತಿಗಳನ್ನು ನೀಡಿದ್ದರ ಬಗ್ಗೆ ಮಹಾಲೇಖಪಾಲರು ತರಾಟೆಗೆ ತೆಗೆದುಕೊಂಡಿದ್ದರು. 10 ವರ್ಷಗಳ ನಂತರ ಭೂಮಿಯ ಬೆಲೆ ಏರಿಕೆಯಾಗುವುದು ನಿಶ್ಚಿತವಿದ್ದ ಸಂದರ್ಭದಲ್ಲೂ ಹಿಂದಿನ ಬೆಲೆಗೇ ಕೊಂಡುಕೊಳ್ಳಲು (ಎಕರೆಗೆ 2 ಕೋಟಿ) ಅವಕಾಶ ಕಲ್ಪಿಸಿಕೊಟ್ಟದ್ದು ಸರಿಯಲ್ಲ ಎಂದು ಸಿಎಜಿ ಅಭಿಪ್ರಾಯಪಟ್ಟಿತ್ತು.ಸುಭಾಷ್ ಘಾಯ್ ಅವರಿಗೆ ಮುಂಬೈನಲ್ಲಿ ಫಿಲ್ಮ್ ಅಕಾಡೆಮಿ ಸ್ಥಾಪಿಸಲು ವಿಲಾಸ್‌ರಾವ್ ದೇಶಮುಖ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗ 20 ಎಕರೆ ಭೂಮಿ ಮಂಜೂರು ಮಾಡಿದ್ದಕ್ಕೆ ಸುಪ್ರೀಂಕೋರ್ಟ್ ಬುಧವಾರವಷ್ಟೇ ಛೀಮಾರಿ ಹಾಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.