ಗುರುವಾರ , ಜನವರಿ 23, 2020
27 °C

ಘೋಷಣೆಯಲ್ಲೇ ಉಳಿದ ಭೀಮಸೇನ ಜೋಶಿ ಸ್ಮಾರಕ ಯೋಜನೆ

ಗಣೇಶ ಅಮೀನಗಡ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಪಂ. ಭೀಮಸೇನ ಜೋಶಿ ನಿಧನಹೊಂದಿ ಮಂಗಳವಾರಕ್ಕೆ (ಜನವರಿ 24) ಒಂದು ವರ್ಷ. ಅವರ ಸ್ಮರಣಾರ್ಥ 10 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ರಾಜ್ಯದ ಅಂದಿನ  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದು ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.ಭೀಮಸೇನ ಜೋಶಿ ತೀರಿಕೊಂಡಾಗ ಅವರ ಸ್ಮರಣಾರ್ಥ ಭವ್ಯ ಸ್ಮಾರಕ ನಿರ್ಮಾಣ, ಸಭಾಭವನ ನಿರ್ಮಾಣ ಸೇರಿದಂತೆ ಸಂಗೀತಕ್ಕೆ ಪೂರಕವಾದ ಹಲವಾರು ಯೋಜನೆಗಳಿಗೆ 10 ಕೋಟಿ ರೂಪಾಯಿ ವೆಚ್ಚ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು.ಜೋಶಿ ಅವರ ನೆನಪಿನ ಸ್ಮಾರಕ ನಿರ್ಮಾಣಕ್ಕೆ ಯಾವುದೇ ಪ್ರಯತ್ನಗಳೂ ಇದುವರೆಗೆ ನಡೆದಿಲ್ಲ ಎಂಬುದು ಸಂಗೀತಾಸಕ್ತರಿಗೆ ನೋವು ತಂದಿದೆ.ಜೋಶಿ ಹುಟ್ಟಿದ್ದು ಗದಗ ಜಿಲ್ಲೆಯ ರೋಣದಲ್ಲಿ. ಶಾಸ್ತ್ರೀಯ ಸಂಗೀತ ಕಲಿತದ್ದು ಧಾರವಾಡ ಜಿಲ್ಲೆ  ಕುಂದಗೋಳದ ಸವಾಯಿ ಗಂಧರ್ವರ ಬಳಿ. ಅವರ ಮೊದಲ ಸಂಗೀತ ಕಛೇರಿ ನಡೆದದ್ದು ಹುಬ್ಬಳ್ಳಿಯಲ್ಲಿ. ಅದು 1944ನೇ ಇಸವಿ.`ಕರ್ನಾಟಕದಲ್ಲಿ ಶಾಸ್ತ್ರೀಯ ಸಂಗೀತದ ಸಂಸ್ಕಾರ ಪಡೆದು ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿದ ಭೀಮಸೇನರು ಅಲ್ಲಿ ಖ್ಯಾತಿ ಪಡೆದರು. ಆದರೆ ಅವರನ್ನು ರೂಪಿಸಿದ್ದು ಹುಬ್ಬಳ್ಳಿ ಹಾಗೂ ಕುಂದಗೋಳ. ಆದ್ದರಿಂದ  ಹುಬ್ಬಳ್ಳಿಯ ರೈಲ್ವೆ ಇನ್‌ಸ್ಟಿಟ್ಯೂಟ್ ಸಂಸ್ಥೆಯನ್ನು ಭೀಮಸೇನ ಜೋಶಿ ಸ್ಮಾರಕವನ್ನಾಗಿ ಮಾಡಬೇಕು. ಹಾಗೆಯೇ ಕುಂದಗೋಳದ ಸವಾಯಿ ಗಂಧರ್ವರ ಮನೆಯನ್ನು ಸಹ ರಾಷ್ಟ್ರೀಯ ಸ್ಮಾರಕವಾಗಿ  ಘೋಷಣೆ ಮಾಡಬೇಕು~ ಎಂದು ಡಾ. ಗಂಗೂಬಾಯಿ ಹಾನಗಲ್ ಮ್ಯೂಜಿಕ್ ಫೌಂಡೇಶನ್ ಸಂಸ್ಥಾಪಕ ಮನೋಜ ಹಾನಗಲ್ಲ ಆಗ್ರಹಿಸುತ್ತಾರೆ.

 

ಪ್ರತಿಕ್ರಿಯಿಸಿ (+)