ಚಂಚಲಗುಡ ಜೈಲಿಗೆ ಜಗನ್‌ಮೋಹನ್

7

ಚಂಚಲಗುಡ ಜೈಲಿಗೆ ಜಗನ್‌ಮೋಹನ್

Published:
Updated:

ಹೈದರಾಬಾದ್: ಗಾಲಿ ಜನಾರ್ದನ ರೆಡ್ಡಿ ಅವರ `ದೇವರು ಕೊಟ್ಟ ಸಹೋದರ~ ಜಗನ್, ಚಂಚಲಗುಡ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ನಂಬರ್ 6093.

ಕಡಪಾ ಜಿಲ್ಲೆಯಲ್ಲಿ ಬ್ರಹ್ಮಣಿ ಉಕ್ಕು ವ್ಯವಹಾರ ನಡೆಯುತ್ತಿದ್ದ ದಿನಗಳಲ್ಲಿ ಜನಾರ್ದನ ರೆಡ್ಡಿ ಹಾಗೂ ಜಗನ್ ಸ್ನೇಹ ಉತ್ತುಂಗದಲ್ಲಿತ್ತು.

ಇಬ್ಬರ ಸಂಬಂಧದ ಬಗ್ಗೆ ಹಿಂದೊಮ್ಮೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದ್ದಾಗ ಜಗನ್ ಸಿಡಿಮಿಡಿಗೊಂಡಿದ್ದರು. ಕರ್ನಾಟಕದ ಕಳಂಕಿತ ಸಚಿವರೊಂದಿಗೆ ಸಂಬಂಧ ಕಲ್ಪಿಸುವ ಮುನ್ನ ವಾಸ್ತವಾಂಶಗಳನ್ನು ಪರಿಶೀಲಿಸಿ ಎಂದು ಗುಡುಗಿದ್ದರು.

`ವಿಪರ್ಯಾಸವೆಂದರೆ ಇದೇ ಅಲ್ಲವೇ? ಜಗನ್ ಇಲ್ಲಿ, ಗಾಲಿ ಬೆಂಗಳೂರಿನಲ್ಲಿ. ಜಗನ್ ಅವರಿಗೆ ಸಿಬಿಐ ಕೋರ್ಟ್ ಜೈಲಿನಲ್ಲಿ ವಿಶೇಷ ಸ್ಥಾನಮಾನ ನೀಡಿದೆ. ಅವರು ತಮ್ಮ ಕುಟುಂಬದವರನ್ನು, ಪಕ್ಷದ ಮುಖಂಡರನ್ನು ಭೇಟಿಯಾಗಬಹುದು. ಜನಾರ್ದನ ರೆಡ್ಡಿ ಅವರು ಜೈಲು ವಾಸಕ್ಕೆ ಹೊಂದಿಕೊಳ್ಳಲು ಆರಂಭದಲ್ಲಿ ತುಂಬಾ ಕಷ್ಟಪಟ್ಟರು. ನಂತರದಲ್ಲಿ ಅವರಿಗೆ ವಿಶೇಷ ಸ್ಥಾನಮಾನ ನೀಡಲಾಯಿತು~ ಎಂದು ಚಂಚಲಗುಡ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ಕೋಣೆಯ ಕಾವಲುಗಾರರಾದ ಕಾನ್ಸ್‌ಟೆಬಲ್ ಒಬ್ಬರು ಹೇಳುತ್ತಾರೆ.

ಮುಂದುವರಿದ ಧರಣಿ: ಜಗನ್ ಬಂಧನ ಖಂಡಿಸಿ ಅವರ ತಾಯಿ ವಿಜಯಮ್ಮ ಹಾಗೂ ಕುಟುಂಬದವರು ಸೋಮವಾರ ಕೂಡ ಧರಣಿ ಮುಂದುವರಿಸಿದರು. `ಆಮರಣಾಂತ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ವಿಜಯಮ್ಮ ಅವರಿಗೆ ನಾವು ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದೇವೆ. ಚುನಾವಣಾ ಪ್ರಚಾರ ಕಾರ್ಯದಲ್ಲಿ ನಮಗೆ ಅವರ ನೆರವು ಬೇಕಿದೆ~ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮೂಲಗಳು ಹೇಳಿವೆ.

`ಕಾನೂನು ಬಾಹಿರ ಬಂಧನ~

`ಜಗನ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದ್ದಾಗಲೇ ಅವರನ್ನು ಬಂಧಿಸಿದ್ದು ಕಾನೂನು ಬಾಹಿರ~ ಎಂದು ಪ್ರತಿವಾದಿ ವಕೀಲ ಮುಕುಲ್ ರೋಹಟಗಿ ಆರೋಪಿಸಿದರು.

`ಒಂಬತ್ತು ತಿಂಗಳ ಹಿಂದೆ ಜಗನ್ ವಿರುದ್ಧ ಪ್ರಕರಣ ದಾಖಲಿಸಿದಾಗಿನಿಂದ ಸಿಬಿಐಗೆ ಅವರನ್ನು ಬಂಧಿಸಲು ಸಾಕಷ್ಟು ಕಾಲಾವಕಾಶ ಇತ್ತು. ಆದರೆ ಉಪ ಚುನಾವಣೆಯ ಪ್ರಚಾರದಲ್ಲಿದ್ದಾಗಲೇ ಅವರನ್ನು ಬಂಧಿಸಲಾಗಿದೆ. ನನ್ನ ಕಕ್ಷಿದಾರನನ್ನು ಬಿಡುಗಡೆ ಮಾಡಿ. ಅವರು ತನಿಖೆಗೆ ಸಹಕರಿಸುವಂತೆ ನೋಡಿಕೊಳ್ಳುತ್ತೇನೆ~ ಎಂದು ಮುಕುಲ್ ಮನವಿ ಮಾಡಿಕೊಂಡರು.

ತಾರಾ ಪ್ರಚಾರಕನ ಕೊರತೆ

ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ `ತಾರಾ ಪ್ರಚಾರಕ~ನ ಅನುಪಸ್ಥಿತಿ ಕಾಡುತ್ತಿದೆ. ಉಪ ಚುನಾವಣೆಗೆ ಕೇವಲ 13 ದಿನಗಳು ಮಾತ್ರ ಉಳಿದಿದ್ದು, ಜಗನ್ ಪಾಳಯಕ್ಕೆ ಇನ್ನಷ್ಟು ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ.

`ಕಳೆದ ಮೂರು ದಿನಗಳಲ್ಲಿ ಮೂರು ಶಾಸಕರು ನಮ್ಮ ಕಡೆ ಬಂದಿದ್ದಾರೆ. ಇನ್ನೂ ಕನಿಷ್ಠ 12 ಜನರು ನಮ್ಮ ಪಕ್ಷಕ್ಕೆ ಬರುವುದು ಖಂಡಿತ~ ಎನ್ನುತ್ತಾರೆ ಪಕ್ಷದ ವಕ್ತಾರ ಅಂಬಟಿ ರಾಂಬಾಬು.

ಶಾಂತಿಯುತ ಬಂದ್

ಜಗನ್ ಬಂಧನ ಖಂಡಿಸಿ ರಾಜ್ಯದಾದ್ಯಂತ ವೈಎಸ್‌ಆರ್ ಕಾಂಗ್ರೆಸ್ ಕರೆ ನೀಡಿದ್ದ ಬಂದ್ ಶಾಂತಿಯುತವಾಗಿತ್ತು. ಜಗನ್ ತವರು ಜಿಲ್ಲೆ ಕಡಪಾ ಹಾಗೂ ರಾಯಲಸೀಮೆಯ ಬಹುತೇಕ ಭಾಗಗಳಲ್ಲಿ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಆಂಧ್ರ ಪ್ರಾಂತ್ಯದಲ್ಲಿ ಭಾಗಶಃ ಬಂದ್ ಆಚರಿಸಲಾಯಿತು. ತೆಲಂಗಾಣದಲ್ಲಿ ಬಂದ್‌ಗೆ ಪ್ರತಿಕ್ರಿಯೆ ದೊರೆಯಲಿಲ್ಲ.

`ಆರೋಪ ಸರಿಯಲ್ಲ~

`ನನ್ನ ಪತಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಸಾವಿನ ಹಿಂದೆ ಕಾಂಗ್ರೆಸ್ ಕೈವಾಡ ಇತ್ತು ಎನ್ನುವ ಅನುಮಾನ ನಿಜವಾಗಿದೆ~ ಎಂದು ವಿಜಯಮ್ಮ ಅವರು ಮಾಡಿರುವ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದೆ.

`ವಿಜಯಮ್ಮ ಅವರು ಇಂಥ ಆರೋಪ ಮಾಡಿರುವುದು ಸರಿಯಲ್ಲ~ ಎಂದು ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಹೇಳಿದ್ದಾರೆ.

`ತಮ್ಮ ಬಂಧನಕ್ಕೆ ಕಾಂಗ್ರೆಸ್ ಕಾರಣ ಎಂದು ಜಗನ್ ಮಾಡಿರುವ ಆರೋಪ ರಾಜಕೀಯ ಉದ್ದೇಶದಿಂದ ಕೂಡಿದೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾತ್ರ ಇಲ್ಲ~ ಎಂದು ಹೇಳಿದ್ದಾರೆ.

ಜೈಲಿನಲ್ಲಿ ಸಾಥಿಗಳು

ಸತ್ಯಂ ರಾಜು, ಗಾಲಿ ಜನಾರ್ದನ ರೆಡ್ಡಿ, ಶ್ರೀನಿವಾಸ ರೆಡ್ಡಿ, ಬಿ.ಪಿ.ಆಚಾರ್ಯ, ವಿಜಯ್ ಸಾಯಿ ರೆಡ್ಡಿ ಹಾಗೂ ವೈ.ಲಕ್ಷ್ಮಿ

ಷೋಕಾಸ್ ನೋಟಿಸ್

ಜಗನ್ ಜತೆಯಲ್ಲಿ ಸಿಬಿಐ ಕಚೇರಿಗೆ ತೆರಳಿದ್ದ ಮೂವರು ಶಾಸಕರು ಹಾಗೂ ಸಂಸದರೊಬ್ಬರಿಗೆ ಕಾಂಗ್ರೆಸ್ ಷೋಕಾಸ್ ನೋಟಿಸ್ ನೀಡಿದೆ.

ಟಿಡಿಪಿ ಕೂಡ ಶಾಸಕ ಬಾಲನಾಗಿ ರೆಡ್ಡಿ ಹಾಗೂ ಕಾರ್ಯಕರ್ತರಿಬ್ಬರಿಗೆ ಷೋಕಾಸ್ ನೋಟಿಸ್ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry