ಸೋಮವಾರ, ಮೇ 23, 2022
24 °C

ಚಂಡೀಗಡದಲ್ಲಿ ಹರಿಯುತಿದೆ ಕ್ರಿಕೆಟ್ ಹೊನಲು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡ (ಐಎಎನ್‌ಎಸ್): ಕೈದಿಗಳಿಗೂ ಪಂದ್ಯ ನೋಡುವ ಅದೃಷ್ಟ, ಪ್ರಮುಖ ಪ್ರವಾಸಿ ತಾಣಗಳಲ್ಲಿ ಬೃಹತ್ ಪರದೆಗಳ ಅಳವಡಿಕೆ, ಭಾರತ ತಂಡಕ್ಕೆ ಶುಭ ಹಾರೈಸಿ ಸಹಿ ಸಂಗ್ರಹ...ಈ ಕೇಂದ್ರಾಡಳಿತ ಪ್ರದೇಶದಲ್ಲಿ ವಿಶ್ವಕಪ್ ಕ್ರಿಕೆಟ್ ಜಾತ್ರೆಯ ಸಂಭ್ರಮಕ್ಕೆ ಕೊನೆ ಎನ್ನುವುದೇ ಇಲ್ಲ. ಕ್ರಿಕೆಟ್ ಪ್ರೇಮದ ಎಲ್ಲ ‘ಫುಲ್ ಸ್ಟಾಪ್’ಗಳನ್ನು ದೇಶದ ಈ ಅಂದದ ನಗರ, ವಿಶ್ವಕಪ್ ಟೂರ್ನಿ ಮಟ್ಟಿಗೆ ತಾತ್ಕಾಲಿಕವಾಗಿ ತೆಗೆದು ಹಾಕಿದೆ.ನಗರದಲ್ಲಿ ಅತ್ಯಂತ ಬಿಗಿ ಭದ್ರತೆಯ ಸ್ಥಳವೆನಿಸಿದ ಬುರೇಲ್ ಜೈಲಿನ ಕೈದಿಗಳಿಗೂ ಕ್ರಿಕೆಟ್ ಪಂದ್ಯದ ನೇರ ಪ್ರಸಾರವನ್ನು ಸವಿಯುವ ಭಾಗ್ಯ ಒಲಿದಿದೆ. ಜೈಲಿನಲ್ಲಿ ಟಿವಿ ಸೆಟ್‌ಗಳ ವ್ಯವಸ್ಥೆ ಮಾಡಲಾಗಿದೆ. ನಗರದ ಪ್ರಮುಖ ತಾಣಗಳಲ್ಲಿ ಬೃಹತ್ ಪರದೆ ಹಾಕಲಾಗಿದ್ದು, ಪ್ರವಾಸಿಗರು ಕ್ರೀಡಾಂಗಣದಲ್ಲಿಯೇ ಕುಳಿತು ಪಂದ್ಯ ನೋಡಿದಂತೆ ಆಟವನ್ನು ಆಸ್ವಾದಿಸಬಹುದಾಗಿದೆ.‘ಬುರೇಲ್ ಜೈಲಿನಲ್ಲಿ 20 ಟಿವಿ ಸೆಟ್‌ಗಳನ್ನು ಅಳವಡಿಸಿದ್ದೇವೆ. ಕೈದಿಗಳು ಬೇಜಾರು ಮಾಡಿಕೊಳ್ಳದೆ ಉತ್ಸಾಹದಿಂದ ಕ್ರಿಕೆಟ್‌ನ ಆನಂದ ಪಡೆಯಬೇಕೆಂಬುದು ನಮ್ಮ ಅಭಿಲಾಷೆ. ಅವರನ್ನು ಮತ್ತೆ ಮುಖ್ಯ ವಾಹಿನಿಗೆ ತರುವ ಉದ್ದೇಶವೂ ಅದರಲ್ಲಿದೆ’ ಎಂದು ಪೊಲೀಸ್ ನಿರ್ದೇಶಕ (ಬಂದಿಖಾನೆ) ಎಚ್.ಎಸ್. ಡೂನ್ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದರು.

‘ಕೈದಿಗಳೆಲ್ಲ ಒಂದೆಡೆ ಕುಳಿತು ಪಂದ್ಯ ನೋಡಿದರೆ ಅವರಲ್ಲಿ ಪರಸ್ಪರ ಸೋದರಭಾವ ಬೆಳೆಯುತ್ತದೆ. ಸ್ಫೂರ್ತಿಯೂ ಮೂಡುತ್ತದೆ’ ಎಂದು ಡೂನ್ ಹೇಳಿದರು. ‘ಮಹತ್ವದ ಪಂದ್ಯಗಳಲ್ಲಿ ಭಾರತ ಗೆದ್ದರೆ ಕೈದಿಗಳಿಗೆ ಸಿಹಿ ಹಂಚಲು ಉದ್ದೇಶಿಸಿದ್ದೇವೆ’ ಎಂದೂ ಅವರು ತಿಳಿಸಿದರು.ಪಂಜಾಬಿನ ಮುಖ್ಯಮಂತ್ರಿಯಾಗಿದ್ದ ಬಿಯಾಂತ್ ಸಿಂಗ್ ಅವರನ್ನು 1995ರಲ್ಲಿ ಹತ್ಯೆ ಮಾಡಿದ್ದಕ್ಕಾಗಿ ಶಿಕ್ಷೆ ಅನುಭವಿಸುತ್ತಿರುವ ಜಗತಾರ್ ಸಿಂಗ್ ಹವಾರಾ ಮತ್ತು ಪರಮ್‌ಜಿತ್ ಸಿಂಗ್ ಬೆವೋರಾ ಸೇರಿದಂತೆ ಹಲವು ಜನ ಕುಖ್ಯಾತ ಕೈದಿಗಳು ಈ ಜೈಲಿನಲ್ಲಿದ್ದಾರೆ. 550 ಜನ ಕೈದಿಗಳನ್ನು ಬುರೇಲ್ ಜೈಲ್ ಹೊಂದಿದೆ.‘ಕ್ರಿಕೆಟ್‌ಗೆ ಎಲ್ಲರನ್ನೂ ಒಂದುಗೂಡಿಸುವ ಶಕ್ತಿಯಿದೆ. ಪಂದ್ಯದ ನೇರ ಪ್ರಸಾರವಿದ್ದಾಗ ಟಿವಿಗಳ ಮುಂದೆ ಜನ ನೆರೆಯುವುದು ಸಾಮಾನ್ಯ. ಹೀಗಾಗಿ ಸುಖ್ನಾ ಸರೋವರ, ಸೆಕ್ಟರ್ 17ರ ಪ್ಲಾಜಾ ಸೇರಿದಂತೆ ಮಹತ್ವದ ಪ್ರವಾಸಿ ಕೇಂದ್ರಗಳಲ್ಲಿ ಬೃಹತ್ ಪರದೆ ಅಳವಡಿಸಿ, ಪಂದ್ಯದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ’ ಎಂದು ಚಂಡೀಗಡದ ಗೃಹ ಮತ್ತು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ರಾಮ್ ನಿವಾಸ್ ತಿಳಿಸಿದರು.‘ಪ್ರತಿದಿನ ಸಾವಿರಾರು ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಅವರು ಪಂದ್ಯವನ್ನೂ ಆನಂದಿಸಬೇಕು ಎಂಬುದು ನಮ್ಮ ಬಯಕೆ’ ಎಂದು ಅವರು ವಿವರಿಸಿದರು. ಚಂದೀಗಡ ಆಡಳಿತದಿಂದ ಭಾರತ ತಂಡಕ್ಕೆ ಶುಭ ಹಾರೈಸಿ ಸಹಿ ಸಂಗ್ರಹವನ್ನೂ ಮಾಡಲಾಗುತ್ತಿದೆ. ಇತರ ರಂಗಗಳಂತೆ ನ್ಯಾಯಾಂಗ ಕ್ಷೇತ್ರಕ್ಕೂ ಕ್ರಿಕೆಟ್ ಜ್ವರ ಹಿಡಿದಿದೆ. ಬಾರ್ ರೂಮ್‌ನಲ್ಲಿ ಎಲ್‌ಸಿಡಿ ಪರದೆ ಅಳವಡಿಸಲಾಗಿದೆ. 800 ಜನ ವಕೀಲರು ಕುಳಿತು ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.ಹಾಸ್ಟೆಲ್‌ಗಳಲ್ಲಿ ಬಿಡಾರ ಹುಡಿದ ವಿದ್ಯಾರ್ಥಿಗಳು, ಉದ್ಯೋಗಿಗಳು ತಮ್ಮದೇ ಆದ ರೀತಿಯಲ್ಲಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ‘ಹಾಸ್ಟೆಲ್‌ನ ದೊಡ್ಡ ಕೋಣೆಯಲ್ಲಿ ಎಲ್‌ಸಿಡಿ ಅಳವಡಿಸಿದ್ದೇವೆ. ಭಾರತದ ಪಂದ್ಯಗಳ ಸಂದರ್ಭದಲ್ಲಿ ಧೋಲ್‌ಗಳನ್ನೂ ತರಲಿದ್ದೇವೆ’ ಎಂದು ಸಂಶೋಧನಾ ವಿದ್ಯಾರ್ಥಿ ಹರ್ಮಂಜಿತ್ ಸಿಂಗ್ ಉತ್ಸಾಹದಲ್ಲಿ ತಿಳಿಸಿದರು.‘1983ರ ಸಾಧನೆಯನ್ನು ಪುನರಾವರ್ತಿಸಬೇಕು ಎಂಬುದು ನಮ್ಮ ಅಭಿಲಾಷೆ. ಸಚಿನ್ ತೆಂಡೂಲ್ಕರ್ ಮೇಲೆ ನಮಗೆ ಅಪಾರ ಭರವಸೆ ಇದೆ. ಭಾರತ ಒಂದುವೇಳೆ ವಿಶ್ವಕಪ್ ಎತ್ತಿ ಹಿಡಿದರೆ ಪಂಜಾಬ್ ವಿಶ್ವವಿದ್ಯಾಲಯ ಮೈದಾನದಲ್ಲಿ ದೊಡ್ಡ ಔತಣಕೂಟ ನಡೆಯಲಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.