ಸೋಮವಾರ, ನವೆಂಬರ್ 18, 2019
26 °C

ಚಂದನವನದಲಿ ಚಂದನ.....

Published:
Updated:
ಚಂದನವನದಲಿ ಚಂದನ.....

ಕಣ್ಣಿನಲ್ಲಿ ಕನಸುಗಳ ಗೊಂಚಲು. ಮಾತಿನಲ್ಲಿ ಆನೆಪಟಾಕಿಯ ಚುರುಕು. ಮೊದಲ ನೋಟಕ್ಕೇ ಗಮನಸೆಳೆಯುವ ಚೆಲುವು- ಈ ಹುಡುಗಿಯ ಹೆಸರು ಚಂದನ. `ಚಂದನವನ' ಎಂದು ಕರೆಸಿಕೊಳ್ಳುವ ಕನ್ನಡ ಸಿನಿಮಾ ಅಂಗಳದಲ್ಲಿ ಸುಳಿದಾಡುತ್ತಿರುವ ಹೊಸ ಚೆಲುವೆ.ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ತವಕಿಸುತ್ತಿರುವ ಚಂದನ `ರಂಗನ್ ಲವ್‌ಸ್ಟೋರಿ' ಚಿತ್ರದ ನಾಯಕಿ. ಪ್ರಸ್ತುತ ಬಿ.ಎಸ್ಸಿ ಓದುತ್ತಿದ್ದಾರೆ. ಕಲಿಕೆಯ ಜೊತೆಗೆ ಮಾಡೆಲಿಂಗ್, ನೃತ್ಯ, ಸಂಗೀತ, ಕಾರ್ಯಕ್ರಮ ನಿರೂಪಣೆ, ಕಿರುತೆರೆಯಲ್ಲಿ ನಟನೆ- ಹೀಗೆ, ಹಲವು ಕ್ಷೇತ್ರಗಳಲ್ಲಿ ಅವರು ಅನುಭವ ಪಡೆದುಕೊಂಡಿದ್ದಾರೆ.ಚಂದನ ಬೆಂಗಳೂರಿನ ಹುಡುಗಿ. ಅವರ ತಾಯಿ ಸರಸ್ವತಿ ಗುಪ್ತ ಕಂಠದಾನ ಕಲಾವಿದೆಯಾಗಿ ಗುರ್ತಿಸಿಕೊಂಡವರು. ಅಮ್ಮನೊಂದಿಗೆ ಸ್ಟುಡಿಯೋಗಳಿಗೆ ಹೋಗುತ್ತಿದ್ದ ಮಗಳಿಗೆ ಸಿನಿಮಾ ಮಂದಿ ಅಪರಿಚಿತರೇನೂ ಅಲ್ಲ. `ಮದುವೆ ಮನೆ' ಚಿತ್ರದ ಸಂದರ್ಭದಲ್ಲಿ ಅಮ್ಮನೊಂದಿಗೆ ಹೋಗಿದ್ದ ಅವರನ್ನು ಚಿತ್ರತಂಡ ಕಂಠದಾನ ನೀಡುವಂತೆ ಪ್ರೇರೇಪಿಸಿತು. ಆಗಿನ್ನೂ ಅವರು ಪಿಯುಸಿ ವಿದ್ಯಾರ್ಥಿನಿ. `ಮದುವೆಮನೆ' ಅವರು ಕಂಠದಾನ ನೀಡಿದ ಮೊದಲ ಚಿತ್ರವಾಯಿತು. ಆನಂತರ `ಕ್ಲಾಸ್‌ಮೇಟ್ಸ್' ಧಾರಾವಾಹಿಯಲ್ಲಿ ನಟನೆಗೆ ಅವಕಾಶ ಸಿಕ್ಕಿತು.ನಟನೆಯ ಅವಕಾಶಗಳು ಬಂದರೂ ಕಂಠದಾನವನ್ನು ಶ್ರದ್ಧೆಯಿಂದ ಮಾಡಿಕೊಂಡು ಬರುತ್ತಿರುವ ಅವರು, ಈವರೆಗೆ 40 ಚಿತ್ರಗಳ ವಿವಿಧ ಪಾತ್ರಗಳಿಗೆ ಧ್ವನಿ ನೀಡಿದ್ದಾರೆ. `ಮದುವೆ ಮನೆ' ಹೊರತುಪಡಿಸಿ ಉಳಿದ ಚಿತ್ರಗಳಲ್ಲಿ ನಾಯಕಿಯ ಪಾತ್ರಗಳಿಗೆ ಧ್ವನಿ ನೀಡಿರುವುದು ವಿಶೇಷ.`ಕಿರಾತಕ' ಚಿತ್ರದ ನಾಯಕಿ ಒವಿಯಾಗೆ ಮಂಡ್ಯ ಶೈಲಿಯಲ್ಲಿ ಡಬ್ಬಿಂಗ್ ಮಾಡಿದ್ದು ಅವರಿಗೆ ಖುಷಿ ನೀಡಿದೆ. `ದೇವ್ ಸನ್‌ಆಫ್ ಮುದ್ದೇಗೌಡ', `ಲೂಸ್‌ಗಳು', `ಬೀಟ್', `ಹಾಯ್‌ಕೃಷ್ಣ', `ಹಲೋ ಕೃಷ್ಣ' ಮುಂತಾದ ಸಿನಿಮಾಗಳಿಗೆ ಕಂಠ ನೀಡಿರುವ ಅವರು ರೇಖಾ, ಐಶ್ವರ್ಯಾ ನಾಗ್, ತೇಜಸ್ವಿನಿ ಮುಂತಾದವರಿಗೆ ದನಿಯಾದವರು. ಇದೀಗ ನಟನೆಯ ಕಡೆ ವಾಲಿರುವ ಚಂದನಾಗೆ ಉತ್ತಮ ನಟಿ ಎನಿಸಿಕೊಳ್ಳುವ ಆಸೆ. ಆದರೆ ಅವರ ತಂದೆಗೆ ಮಗಳು ಉತ್ತಮ ಗಾಯಕಿ ಆಗಬೇಕು ಎನ್ನುವ ಆಸೆ.ಅಪ್ಪನ ಆಸೆ ಈಡೇರಿಸುವ ದಿಕ್ಕಿನಲ್ಲಿ ಕೂಡ ಮಗಳ ನಡಿಗೆ ಸ್ಪಷ್ಟವಾಗಿದೆ.ಈಗಾಗಲೇ ಸಂಗೀತಾ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಡಾ. ಆಶ್ಲೀ ವಿಲಿಯಂ ಅವರಿಂದ ಪಾಶ್ಚಾತ್ಯ ಸಂಗೀತ ಕಲಿತಿರುವ ಅವರು, `ಸ್ಯಾಂಡಲ್‌ವುಡ್ ಗುರು' ಚಿತ್ರದ `ಟುನೈಟ್ ದೇರ್ ವಿಲ್ ಬಿ ಡಾರ್ಕ್‌ನೆಸ್..' ಎಂಬ ಇಂಗ್ಲಿಷ್ ಹಾಡನ್ನು ಹಾಡಿದ್ದಾರೆ.

`ಸ್ಯಾಂಡಲ್‌ವುಡ್ ಗುರು' ಚಿತ್ರದ ನಾಯಕಿಗೆ ಡಬ್ಬಿಂಗ್ ಮಾಡಲು ಹೋಗಿದ್ದ ಅವರ ದನಿಯನ್ನು ಮೆಚ್ಚಿ ಹಾಡುವ ಅವಕಾಶ ನೀಡಲಾಯಿತಂತೆ. ಸದ್ಯಕ್ಕೆ ಅಭಿನಯದ ಕಡೆ ಮನಸ್ಸು ಹರಿದಿರುವುದರಿಂದ ಗಾಯನದ ಕಡೆ ಏಕಾಗ್ರತೆ ಮೂಡುತ್ತಿಲ್ಲ ಎನ್ನುತ್ತಾರೆ.`ಪ್ರೀತಿ ಪ್ರೇಮ', `ಚಿತ್ರಲೇಖ', `ದೇವಿ', `ನಿನ್ನೊಲುಮೆಯಿಂದಲೇ', `ಮುಕ್ತ ಮುಕ್ತ' ಹೀಗೆ ಕೆಲವು ಧಾರಾವಾಹಿಗಳಲ್ಲೂ ಚಂದನ ನಟಿಸಿದ್ದಾರೆ. ನಿರ್ದೇಶಕ ಟಿ.ಎನ್. ಸೀತಾರಾಂ ಅವರ ಮಗಳು ವೈದೇಹಿಯಾಗಿ (ಮುಕ್ತ ಮುಕ್ತ) ನಟಿಸಿದ್ದು ಮತ್ತು `ಪ್ರೀತಿ ಪ್ರೇಮ' ಟೆಲಿಫಿಲ್ಮ್ ನಟನೆ ತಮ್ಮ ಅಭಿನಯವನ್ನು ಸುಧಾರಿಸಿತು ಎನ್ನುವ ಚಂದನಾ, `ರಂಗನ್ ಲವ್‌ಸ್ಟೋರಿ' ಚಿತ್ರದಲ್ಲಿ ಡೀಸೆಂಟಾದ ಪಾತ್ರ ಸಿಕ್ಕಿದ್ದರಿಂದ ಒಪ್ಪಿಕೊಂಡರಂತೆ. ಈ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಶೈಲಿಯಲ್ಲಿ ಮಾತನಾಡಬೇಕಿರುವುದು ಅವರಿಗೆ ಸವಾಲು ಎನಿಸಿದೆ.

ಪ್ರತಿಕ್ರಿಯಿಸಿ (+)