ಚಂದಮಾಮನ ಅಂಗಿ

7

ಚಂದಮಾಮನ ಅಂಗಿ

Published:
Updated:

ಒಂದು ಚಳಿ ಚಳಿ ಹುಣ್ಣಿಮೆ ರಾತ್ರಿ. ಆಕಾಶದಲ್ಲಿ ಪೂರ್ಣ ಚಂದ್ರಮ ಬಂದಿದ್ದ. ‘ಅಬ್ಬಾ... ಏನು ಚಳಿ... ತಡೆಯೋಕೇ ಆಗ್ತಿಲ್ಲ...’ ಅಂತ ಗಡ ಗಡ ನಡಗುತ್ತಾ ಚಂದಮಾಮ ಸುತ್ತಮುತ್ತ ನೋಡ್ದ. ಕೆಳಗೆ ಮನೆಯ ಹೊರಗಿನ ವರಾಂಡದಲ್ಲಿ, ತಿಂಗಳ ಬೆಳಕಿನಲ್ಲಿ ಕುಳಿತು ಟೈಲರ್‌ ರಂಗಪ್ಪ ಬಟ್ಟೆ ಹೊಲೀತಾ ಇದ್ದದ್ದು ಕಾಣಿಸ್ತು. ಚಂದಮಾಮ ಸೀದಾ ಕೆಳಗಿಳಿದು ಟೈಲರ್‌ ರಂಗಪ್‍ಪನ ಬಳಿಗೆ ಬಂದ.‘ರಂಗಪ್ಪ ರಂಗಪ್ಪ... ನನಗೆ ತುಂಬಾ ಚಳಿಯಾಗ್ತಿದೆ, ತಡೆಯೋಕೆ ಆಗ್ತಿಲ್ಲ. ನಂಗೊಂದು ಬೆಚ್ಚನೆಯ ಅಂಗಿ ಹೊಲೆದು ಕೊಡಪ್ಪಾ...’ ಎಂದ. ‘ಸರಿ ಸರಿ, ಆಯ್ತು’ ಎಂದ ರಂಗಪ್ಪ, ದುಂಡನೆಯ ಚಂದ್ರನ ಮೈಯಳತೆ ತಗೊಂಡ. ‘ಇನ್ನು ನಾಲ್ಕು ದಿನ ಬಿಟ್ಟು ಬಾ. ಅಂಗಿ ಹೊಲೆದು ಇಟ್ಟಿರ್ತೀನಿ’ ಅಂದ. ಆಗ್ಲಿ ಅಂತ ಚಂದಮಾಮ ಖುಷಿಯಿಂದ ಆಕಾಶಕ್ಕೆ ಹೋಗಿ ಕುಳಿತ.ನಾಲ್ಕು ದಿನ ಕಳೆದ ಮೇಲೆ ಚಂದಮಾಮ ಟೈಲರ್‌ ರಂಗಪ್ಪನ ಬಳಿ ಬಂದಾಗ ರಂಗಪ್ಪ ಅಂಗಿ ಹೊಲೆದು ಸಿದ್ಧ ಮಾಡಿಟ್ಟಿದ್ದ. ಚಂದ್ರ ಅಂಗಿ ಹಾಕ್ಕೊಂಡು ನೋಡಿದರೆ ಅಂಗಿ ತುಂಬಾ ಸಡಿಲ ಆಗಿ ಬಿಟ್ಟಿತ್ತು. ‘ಇದೇನು ರಂಗಪ್ಪ, ಅಂಗಿ ತುಂಬಾ ಲೂಸು. ಅಳತೆ ಸರಿಯಾಗಿಲ್ಲ’ ಎಂದ ಚಂದ್ರ. ಅದಕ್ಕೆ ರಂಗಪ್ಪ, ನಾನು ಅಳತೆ ಸರಿಯಾಗೇ ತಗೊಂಡಿದ್ದೆ. ಆದ್ರೆ ನೀನೂ ಈಗ ಸಣ್ಣ ಆಗಿಬಿಟ್ಟಿದ್ದೀಯಾ... ನಾನೇನ್ಮಾಡ್ಲಿ... ಇರಲಿ, ವಾರ ಬಿಟ್ಟು ಬಾ. ಅಂಗಿ ಸರಿ ಮಾಡಿ ಇಟ್ಟಿರ್ತೀನಿ’ ಅಂದ.ವಾರ ಬಿಟ್ಟು ಮತ್ತೆ ಬಂದ ಚಂದಮಾಮ. ಯಾಕೋ ಸೊರಗಿ ಸೊರಗಿ ಅರ್ಧ ಆಗಿಬಿಟ್ಟಿದ್ದ. ಅಂಗಿ ಹಾಕಿ ನೋಡಿದರೆ ಅದು ಮತ್ತೂ ಸಡಿಲ ಆಗಿತ್ತು. ‘ಅಂಗೀ ಸರೀ ಮಾಡ್ಲಿಕ್ಕೆ ನಂಗೀಗ ಸಮಯ ಇಲ್ಲ. ತುಂಬಾ ಬಟ್ಟೆ ಹೊಲೆಯೋದಿದೆ. ಸ್ವಲ್ಪ ದಿನ ಬಿಟ್ಟು ಬಾ. ಅಂಗೀನ ನಿನ್ನ ಅಳತೆಗೆ ಸರಿಯಾಗಿ ಮತ್ತೂ ಬಿಗಿ ಮಾಡಿಟ್ಟಿರ್ತೀನಿ’ ಎಂದ. ‘ಆಗಲೀ’ ಎನ್ನುತ್ತಾ ಚಂದ್ರ ಬೇಸರದಿಂದಲೇ ಮೇಲೆಹೋದ.ಕೆಲವು ದಿನಗಳ ಮೇಲೆ ಬಿಡುವು ಸಿಕ್ಕಾಗ ರಂಗಪ್ಪ, ಚಂದ್ರಪ್ಪನ ಅಂಗೀಗೆ ಮತ್ತೆರಡು ಹೊಲಿಗೆ ಹಾಕಿ ಬಿಗಿ ಮಾಡಿ ಚಂದ್ರನಿಗೋಸ್ಕರ ಕಾಯ್ತಾ ಇದ್ದ. ಆದ್ರೆ ತುಂಬಾ ದಿನ ಚಂದ್ರ ಅಂಗಿ ತಗೊಂಡು ಹೋಗೋಕೆ ಬರಲೇ ಇಲ್ಲ. ಕಡೆಗೊಂಡು ದಿನ ಚಂದಮಾಮ ಆಕಾಶದಲ್ಲಿ ಬಂದ. ಆವೊತ್ತು ಮತ್ತೆ ಹುಣ್ಣಿಮೆ ಆಗಿತ್ತು. ಈಗ ಚಳಿಗಾಲ ಮುಗಿದು ಬೇಸಿಗೆ ಶುರುವಾಗಿತ್ತು. ಆಕಾಶದಲ್ಲಿ ಚಂದ್ರನನ್ನು ಕಂಡ ರಂಗಪ್ಪ ‘ಹೋಯ್‌ ಚಂದ್ರಪ್ಪ ನಿನ್ನ ಅಂಗಿ ರೆಡೀ ಇದೆ.

ಸರಿ ಮಾಡಿಟ್ಟಿದೀನಿ, ಬಂದು ತಗೊಂಡು ಹೋಗು’ ಎಂದ. ಚಂದ್ರ ಕೆಳಗೆ ಬಂದು ಅಂಗಿ ಹಾಕಿಕೊಳ್ಳಲು ನೋಡಿದ. ಮತ್ತೆ ಮೊದಲಿನಂತೆ ದುಂಡುದುಂಡಾಗಿ ಮೈತುಂಬಿಕೊಂಡಿದ್ದ ಚಂದ್ರನಿಗೆ, ಈಗ ರಂಗಪ್ಪ ಬಿಗಿ ಮಾಡಿಬಿಟ್ಟಿದ್ದ ಅಂಗಿ ಹಿಡಿಸಲೇ ಇಲ್ಲ. ‘ಇದೇನು ರಂಗಪ್ಪ....ಅಂಗಿ ತುಂಬಾ ಟೈಟು. ಹಾಕ್ಕೊಳಕ್ಕೇ ಬರ್ತಿಲ್ಲ’ ಎಂದ ಚಂದ್ರ. ‘ಅಯ್ಯಯ್ಯಪ್ಪ ಚಂದ್ರಪ್ಪ, ನಿಂಗೆ ಅಂಗಿ ಹೊಲಿಯೋಕೆ ನನ್ನ ಕೈಲಿ ಆಗಲ್ಲಪ್ಪ....!’ ಎಂದು ಬಿಟ್ಟ ರಂಗಪ್ಪ.‘ಹೋಗ್‌ ಹೋಗೋ ರಂಗಪ್ಪ, ನಿನ್ನಂಗಿ ಯಾರಿಗೆ ಬೇಕು! ಹೀಗೇ ತಣ್ಣಗೆ ಹಾಯಾಗಿದೆ’ ಎನ್ನುತ್ತಾ ಚಂದಮಾಮ ತಂಗಾಳಿಯಲ್ಲಿ ತೇಲುತ್ತಾ ಹೋಗಿ ಮತ್ತೆ ಆಕಾಶ ಏರಿ ಕುಳಿತುಬಿಟ್ಟ.

–ಚಂದ್ರಿಕಾ ಹೆಗಡೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry