ಚಂದ್ರಗ್ರಹಣ ಸಂಭವ ಹೇಗೆ?

ಮಂಗಳವಾರ, ಜೂಲೈ 16, 2019
28 °C

ಚಂದ್ರಗ್ರಹಣ ಸಂಭವ ಹೇಗೆ?

Published:
Updated:

ನವದೆಹಲಿ: ನಮ್ಮ ಸೌರಕೂಟದಲ್ಲಿ ನಾವಿರುವ ಭೂಮಿ ಸೂರ್ಯನ ಸುತ್ತ ಪರಿಭ್ರಮಿಸುತ್ತಿದ್ದರೆ, ತಣ್ಣನೆಯ ಕಾಯವಾದ ಚಂದ್ರ ತನ್ನ ಒಡೆಯನಾದ ಭೂಮಿಯ ಸುತ್ತ ಗಿರಗಿಟ್ಟಲೆ ತಿರುಗುತ್ತಿದ್ದಾನೆ. ಒಂದೇ ಸಮತಲದಲ್ಲಿರುವ ಈ ಕಾಯಗಳು ಸಾಮಾನ್ಯ ಹುಣ್ಣಿಮೆ ದಿನಗಳಂದು ಒಂದೇ ಸರಳ ರೇಖೆಯಲ್ಲಿ ಇರುವುದಿಲ್ಲ. ಅಲ್ಲದೇ, ಅಂದು ಚಂದ್ರ ತನ್ನ ಮೇಲೆ ಬೀಳುವ ಸೂರ್ಯ ರಶ್ಮಿಯನ್ನು ಅತ್ಯಧಿಕ ಪ್ರಮಾಣದಲ್ಲಿ ಪ್ರತಿಫಲಿಸುತ್ತಾನೆ. ಪರಿಣಾಮವಾಗಿ ಅಂದು ಧರೆಯು ಹಾಲಿನಂತಹ ಬೆಳದಿಂಗಳಿನಲ್ಲಿ ಮೀಯುತ್ತದೆ.ಆದರೆ ಒಮ್ಮಮ್ಮೆ  ಈ ಕಾಯಗಳು ಹುಣ್ಣಿಮೆಯ ದಿನ ಒಂದೇ ಸರಳ ರೇಖೆಯಲ್ಲಿ ಬರುತ್ತವೆ. ಅಷ್ಟೇ ಅಲ್ಲ, ಭೂಮಿಯ ಪರಿಭ್ರಮಣದ ಅವಸ್ಥೆ ಸೂರ್ಯ, ಚಂದ್ರರ ನಡುವೆ ಬಂದುಬಿಡುತ್ತದೆ. ಹೀಗಾಗಿ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವುದೇ ಇಲ್ಲ. ಬದಲಾಗಿ ಭೂಮಿಯ ನೆರಳು ಚಂದ್ರ ಕಾಯವನ್ನು ಆವರಿಸುತ್ತದೆ.ಸೂರ್ಯ, ಭೂಮಿ, ಚಂದ್ರ ಇವೆಲ್ಲಾ ಗೋಳ ಕಾಯಗಳು. ಜತೆಗೆ, ಭೂಮಿ, ಚಂದ್ರ ಇವು ಸ್ಥಿರ ವೇಗದಲ್ಲಿ ನಿಶ್ಚಿತ ದಿಕ್ಕಿನಲ್ಲಿ ಪರಿಭ್ರಮಿಸುತ್ತಿವೆ. ಒಂದು ಕಾಯ ಮತ್ತೊಂದು ಕಾಯವನ್ನು ಸಂಪೂರ್ಣ ಮರೆ ಮಾಡಬೇಕಾದರೆ ಅದಕ್ಕೆ ನಿರ್ದಿಷ್ಟ ಸಮಯ ಹಿಡಿಯುತ್ತದೆ.ಸ್ಥೂಲವಾಗಿ ಹೇಳಬೇಕೆಂದರೆ, ನಿರ್ದಿಷ್ಟ ವೇಗದಲ್ಲಿ ನಡೆದು ಹೋಗುತ್ತಿರುವ ಒಬ್ಬ ವ್ಯಕ್ತಿ ಕಟ್ಟಡದ ಒಂದು ಬದಿಯಿಂದ ಮತ್ತೊಂದು ಬದಿಯನ್ನು ಹೇಗೆ ಕ್ರಮೇಣ ಕ್ರಮಿಸುತ್ತಾನೋ ಇದೂ ಹಾಗೆಯೇ. ಹೀಗಾಗಿಯೇ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ ಇತ್ಯಾದಿಗಳಂತೆ ಚಂದ್ರಗ್ರಹಣ, ಸೂರ್ಯಗ್ರಹಣಗಳು ಕೂಡ ಕ್ರಮೇಣ ಸಂಭವಿಸುವ ವಿದ್ಯಮಾನಗಳು. ಭೂಕಂಪ, ಜ್ವಾಲಾಮುಖಿ, ಸುನಾಮಿಗಳಂತೆ ಇವು ಧುತ್ತನೆ ಸಂಭವಿಸಲಾರವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry