ಬುಧವಾರ, ಜೂನ್ 23, 2021
30 °C

ಚಂದ್ರನಿಗೂ ಉಂಟು ಕಲೆ (ಚಿತ್ರ: ಪ್ರಸಾದ್)

ಡಿ.ಕೆ. ರಮೇಶ್ Updated:

ಅಕ್ಷರ ಗಾತ್ರ : | |

ಕಲಾವಿದರಿಬ್ಬರ ಬದಲಾದ ಇಮೇಜು, ಕಾಡಬಲ್ಲ ಕತೆ, ಏಕಕಾಲಕ್ಕೆ ಕ್ಲಾಸಿಗೂ ಮಾಸಿಗೂ ತಲುಪುವ ಯತ್ನ ಮುಂತಾದ ಕಾರಣಗಳಿಗಾಗಿ ಗಮನ ಸೆಳೆಯುವ ಚಿತ್ರ `ಪ್ರಸಾದ್~. ಅರ್ಜುನ್ ಸರ್ಜಾ ತಮ್ಮ ಅನುಗಾಲದ ನಾಯಕನ ಛಾಪಿನಿಂದ ಬೇರೆಯಾಗಿ ನಿಂತಿರುವುದು, ಗ್ಲಾಮರ್‌ಗೆ ಮೀಸಲಾಗಿದ್ದ ಮಾಧುರಿ ಭಟ್ಟಾಚಾರ್ಯ ಒಂದೊಳ್ಳೆಯ ಪಾತ್ರವನ್ನು ನಿಭಾಯಿಸಿರುವುದು ಚಿತ್ರದ ವಿಶೇಷಗಳಲ್ಲಿ ಕೆಲವು. ನಿಜ ಜೀವನದಲ್ಲಿಯೂ ಅಂಗವೈಕಲ್ಯಕ್ಕೆ ತುತ್ತಾಗಿರುವ ಮಾಸ್ಟರ್ ಸಂಕಲ್ಪ್ ಮುಗ್ಧತೆಯಿಂದ ಪ್ರೇಕ್ಷಕರನ್ನು ಕಲಕುತ್ತಾರೆ.ಮೆಕಾನಿಕ್ ಶಂಕರ್ (ಅರ್ಜುನ್ ಸರ್ಜಾ) ಹಾಗೂ ಮಾಲತಿ (ಮಾಧುರಿ) ದಂಪತಿಗೆ ಗಂಡು ಮಗುವಾಗಬೇಕೆಂಬ ಬಯಕೆ. ಅಂದುಕೊಂಡಂತೆಯೇ ಹುಟ್ಟಿದ್ದು ಗಂಡು ಮಗು. ದೇವರ ಕರುಣೆ ಎಂಬ ಕಾರಣಕ್ಕೆ ಮಗುವಿನ ಹೆಸರು ಪ್ರಸಾದ್ (ಮಾಸ್ಟರ್ ಸಂಕಲ್ಪ್) ಎಂದಾಗುತ್ತದೆ.ಕಾಲ ಕಳೆದಂತೆ ದಂಪತಿ ಕಟು ಸತ್ಯವೊಂದಕ್ಕೆ ಮುಖಾಮುಖಿಯಾಗುತ್ತಾರೆ. ಅದು ದಂಪತಿ ಬಯಸಿದಂತಹ ಮಗುವಲ್ಲ. ಕಿವಿ ಕೇಳದು, ಮಾತು ಬಾರದು. ಶಂಕರ್‌ಗೆ ನಿಶ್ಶಬ್ದವೇ ಕವಿದಂಥ ಸ್ಥಿತಿ. ಆದರೆ ಸಾವರಿಸಿಕೊಳ್ಳುತ್ತಾಳೆ ಮಾಲತಿ. ಒಂದು ಹಂತದಲ್ಲಿ ಶಂಕರ್ ಕೂಡ ಬದಲಾಗುತ್ತಾನೆ. ಹಾಗೆ ಬದಲಾಗುವಂತೆ ಮಾಡುವುದು ಮಗ.ಒಳ್ಳೆಯ ದಿನಗಳು ಬರತೊಡಗುತ್ತವೆ. ಈಗ ಮಾಲತಿ ತನ್ನ ಮಗನ ವಿಶೇಷ ಶಾಲೆಯಲ್ಲಿಯೇ ಅಧ್ಯಾಪಕಿ. ಶಂಕರ್ ಸ್ವಂತ ಅಂಗಡಿ ತೆರೆಯುವ ಮಟ್ಟಿಗೆ ಬೆಳೆದಿದ್ದಾನೆ. ಆದರೆ ಅಂದುಕೊಂಡಂತೆಲ್ಲಾ ಬದುಕು ಇರದು. ಪ್ರಸಾದ್ ಅಪಘಾತಕ್ಕೆ ತುತ್ತಾಗುತ್ತಾನೆ. ಮಗ ಬದುಕುಳಿಯುವನೆ? ಪ್ರಸಾದ್ ಪ್ರತಿಷ್ಠಾನ ಸ್ಥಾಪನೆಯಾಗುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಚಿತ್ರಮಂದಿರದಲ್ಲಿ.ಸಾಮಾಜಿಕ ಕಳಕಳಿಯ ಕಥಾವಸ್ತುವನ್ನು ಆರಿಸಿಕೊಂಡಿದ್ದರೂ ರಂಜನೆಗೆ ಅಡ್ಡಿ ಇಲ್ಲ. ಸಾಮಾನ್ಯನೊಬ್ಬನ ಸುಖ ದುಃಖಗಳು ಚಿತ್ರದಲ್ಲಿ ಆಪ್ತವಾಗಿ ಮೂಡಿವೆ. ಅನುಭವದ ಮೂಸೆಯಲ್ಲಿ ಮೂಡಿರುವ ಮಾತುಗಳು ಅನನ್ಯವಾಗಿವೆ.ಕತೆಗೆ ಜೀವ ತುಂಬುವ ನವಿರಾದ ಸಂಭಾಷಣೆಯನ್ನು ಅರ್ಜುನ್ ಸರ್ಜಾ, ಕೆ.ಜಗದೀಶ್ ರೆಡ್ಡಿ ಕಟ್ಟಿಕೊಟ್ಟಿದ್ದಾರೆ. ಚಿತ್ರದ `ಮಾತುಕತೆ~ ಯಾರೊಬ್ಬರ ಜೀವನದಲ್ಲೂ ನಡೆಯಬಹುದಾದಂಥದ್ದು. ಆ ಸಾಧ್ಯತೆಯಿಂದಾಗಿಯೇ ಪ್ರೇಕ್ಷಕನಿಗೆ ಚಿತ್ರ ಹೆಚ್ಚು ಹತ್ತಿರವಾಗುತ್ತದೆ.ಅರ್ಜುನ್ ಸರ್ಜಾ ಅವರದು ಅನುಭವಿ ಅಭಿನಯ. ಅವರೊಳಗೆ ಅವಿತಿದ್ದ ಭಿನ್ನ ಬಗೆಯ ಕಲಾವಿದನನ್ನು ಚಿತ್ರ ಹೊರತೆಗೆದಿದೆ. ದೃಶ್ಯದಿಂದ ದೃಶ್ಯಕ್ಕೆ ಮಾಧುರಿ ಮಾಗುತ್ತಾ ಹೋಗಿದ್ದಾರೆ. ದೇಹದ ನ್ಯೂನತೆಯನ್ನೇ ನೂತು `ಕಾವ್ಯ~ ಕಟ್ಟಿರುವುದು ಸಂಕಲ್ಪ್ ಅಗ್ಗಳಿಕೆ. ಇಡೀ ಕತೆ ಈ ಮೂವರ ಸುತ್ತಲೇ ಸುತ್ತುತ್ತದೆ.

 

ಹೀಗಾಗಿ ರಾಮಕೃಷ್ಣ, ನೀನಾಸಂ ಅಶ್ವತ್ಥ್ ಹಾಗೂ ಶಮಾ ಅವರ ಅಭಿನಯ ಆಟಕ್ಕುಂಟು ಲೆಕ್ಕಕ್ಕಿಲ್ಲ. ಚಿತ್ರದ ಸೌಂದರ್ಯ ವರ್ಧನೆಗೆ ಕಾರಣ ಸಂಜಯ್ ಮಲ್ಕರ್ ಅವರ ಛಾಯಾಗ್ರಹಣ. ನೆರಳು ಬೆಳಕಿನ ಜತೆ ಅವರು ಉತ್ತಮ ಆಟ ಆಡಿದ್ದಾರೆ. ಇಳಯರಾಜ ಹಾಗೂ ಮನೋಮೂರ್ತಿ ಸಂಗೀತದಲ್ಲಿ ವಿ.ನಾಗೇಂದ್ರ ಪ್ರಸಾದ್, ಕವಿರಾಜರ ಹಾಡುಗಳು ಹದವಾಗಿ ಬೆರೆತಿವೆ.ನಿರ್ದೇಶಕ ಮನೋಜ್ ಸತಿ ಅವರಿಗೆ ಕತೆಯನ್ನು ದೃಶ್ಯವಾಗಿಸಲು ಬೇಕಾದ ಮುಂಜಾಗ್ರತೆ ಇದ್ದಂತಿಲ್ಲ. ಹೀಗಾಗಿ ಅವರೇ ಬರೆದ ಕತೆ ಲಯ ತಪ್ಪಿದೆ. ಪ್ರಸಾದ್ ಪಾತ್ರವನ್ನು ಇನ್ನಷ್ಟು ಬೆಳೆಸುವತ್ತ ನಿರ್ದೇಶಕರ ಗಮನ ಹರಿದಿಲ್ಲ.

 

ಮೇಕಪ್ ಕತೆಗೆ ಹೊಂದಿಕೊಂಡಿಲ್ಲ. ಲಾಟರಿಯಲ್ಲಿ ಕೋಟಿ ಪಡೆದು ಬದುಕು ಉದ್ಧಾರ ಮಾಡಿಕೊಳ್ಳುವ ಆಲೋಚನೆ ಬಾಲಿಶ. ಕೊನೆಯಲ್ಲಿ ಬರುವ ಭಾಷಣ ಚಿತ್ರವನ್ನು ವಾಚ್ಯವಾಗಿಸಿದೆ. ಈ ಕಾರಣಕ್ಕೆ ಉತ್ತಮ ಕಲಾಕೃತಿಯಾಗುವ ಅವಕಾಶ ಚಿತ್ರದ ಕೈ ಮೀರಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.