ಚಂದ್ರನ ಮೇಲಕ್ಕೇ ಪ್ರವಾಸ ಹೋಗಿ..!

7

ಚಂದ್ರನ ಮೇಲಕ್ಕೇ ಪ್ರವಾಸ ಹೋಗಿ..!

Published:
Updated:

ವಾಷಿಂಗ್ಟನ್ (ಪಿಟಿಐ): ನಾವು- ನೀವೆಲ್ಲಾ ಚಂದ್ರನ ಮೇಲಕ್ಕೂ ಪ್ರವಾಸ ಹೋಗಬಹುದು!ಹೌದು. ನಾಸಾದ ನಿವೃತ್ತ ಕಾರ್ಯನಿರ್ವಾಹಕರು ಸೇರಿ ಆರಂಭಿಸಿರುವ ಖಾಸಗಿ ಕಂಪೆನಿಯೊಂದು ಈ ಯೋಜನೆ ಹಾಕಿಕೊಂಡಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಇನ್ನು ಎಂಟು ವರ್ಷಗಳಲ್ಲಿ, ಅಂದರೆ 2020ರ ಹೊತ್ತಿಗೆ ಪ್ರವಾಸ ತೆರಳಿ ಚಂದ್ರ ನೆಲವನ್ನೇ ಸ್ಪರ್ಶಿಸಿ ಬರಬಹುದು! ಒಮ್ಮೆಗೆ ಇಬ್ಬರನ್ನು ಅಲ್ಲಿಗೆ ಹೊತ್ತೊಯ್ಯುವುದಕ್ಕಾಗಿ ಭರಿಸಬೇಕಾದ ವೆಚ್ಚ ಕೇಳಿ ಹೌಹಾರಬೇಡಿ; ಅದರ ಶುಲ್ಕ ಬರೋಬ್ಬರಿ 150 ಕೋಟಿ ಡಾಲರ್‌ಗಳು! (ಸುಮಾರು 8000 ಕೋಟಿ ರೂಪಾಯಿಗಳು!)ಗೋಲ್ಡನ್ ಸ್ಪೈಕ್ಸ್ ಕಂಪೆನಿಯು ಚಂದ್ರ ಯಾನ ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸುವ ಕುರಿತು ಚಿಂತನೆ ನಡೆಸಿದೆ. ರಾಷ್ಟ್ರಗಳು, ಸಂಸ್ಥೆಗಳು ಅಥವಾ ಆಸಕ್ತ ವ್ಯಕ್ತಿಗಳು ಹೀಗೆ ಯಾರು ಬೇಕಾದರೂ ಮುಂದೆ ಬರಬಹುದು ಎಂದು ಕಂಪೆನಿಯ ಸಿಇಒ ಹಾಗೂ ನಾಸಾದ ನಿವೃತ್ತ ನಿರ್ದೇಶಕ ಆ್ಯಲನ್ ಸ್ಟೆರ್ನ್ ಹೇಳಿದ್ದಾರೆ.ಈಗಾಗಲೇ ಈ ಸಂಬಂಧ ಏಷ್ಯಾ ಮತ್ತು ಯೂರೋಪ್ ರಾಷ್ಟ್ರಗಳ ಬಾಹ್ಯಾಕಾಶ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗಿದ್ದು, ಅವುಗಳು ಚಂದ್ರಯಾನದ ಬಗ್ಗೆ ತುಂಬಾ ಆಸಕ್ತಿ ವ್ಯಕ್ತಪಡಿಸಿವೆ ಎಂದೂ ಸ್ಟೆರ್ನ್ ವಿವರಿಸಿದ್ದಾರೆ.ತಮ್ಮದೇ ಬಾಹ್ಯಾಕಾಶ ಸಂಸ್ಥೆ ಹೊಂದಿಲ್ಲದ ರಾಷ್ಟ್ರಗಳು ಅಥವಾ ಮಾನವ ಸಹಿತ ಚಂದ್ರಯಾನ ಯೋಜನೆಗೆ ಹಣ ಭರಿಸಲಾಗದ ರಾಷ್ಟ್ರಗಳು ಹಾಗೂ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಚಂದ್ರನಲ್ಲಿಗೆ ಹೋಗಿ ಬರಬೇಕೆಂದು ಬಯಸುವವರನ್ನು ಗುರಿಯಾಗಿಸಿಕೊಂಡು ಮುಂಗಡ ಕಾಯ್ದಿರಿಸಲಾಗುವುದು ಎಂದೂ ಅವರು ಹೇಳಿದ್ದಾರೆ.ಚಂದ್ರನ ಮೇಲಕ್ಕೆ ಮನುಷ್ಯ ಕಡೆಯ ಬಾರಿಗೆ ಕಾಲಿಟ್ಟ 40ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ (1972ರ ಡಿ.7) ಈ ಯೋಜನೆಯನ್ನು ಪ್ರಕಟಿಸಲಾಗಿದೆ.ಇದಕ್ಕಾಗಿ ಬೇಕಾಗುವ ಉಡಾವಣಾ ವಾಹಕವನ್ನು 2014ರೊಳಗೆ ಅಂತಿಮಗೊಳಿಸಲು ಕೂಡ ಕಂಪೆನಿ ನಿರ್ಧರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry