ಗುರುವಾರ , ಮಾರ್ಚ್ 4, 2021
21 °C

ಚಂದ್ರನ ಮೇಲೆ ಬದುಕುವ ಕನಸು

ಅನಿತಾ ಈ. Updated:

ಅಕ್ಷರ ಗಾತ್ರ : | |

ಚಂದ್ರನ ಮೇಲೆ ಬದುಕುವ ಕನಸು

ಚಂದ್ರನ ಮೇಲೆ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ಮನುಷ್ಯ ಕುಲದ ಬಹುದೊಡ್ಡ ಕನಸು. ಈ ಕನಸನ್ನು ಹೇಗೆ ನನಸಾಗಿಸಬಹುದು ಎಂಬ ನಿಮ್ಮ ಆಲೋಚನೆಗೆ ಮೂರ್ತ ರೂಪ ಕೊಡಲು ‘ಟೀಂ ಇಂಡಸ್’ ಸಜ್ಜಾಗಿದೆ.

ಬಾಹ್ಯಾಕಾಶ ಎಂದೊಡನೆ ಎಲ್ಲರಲ್ಲೂ ಒಂದು ರೀತಿಯ ಕುತೂಹಲ. ಮಕ್ಕಳಲ್ಲಂತೂ ಹೊಸ ಕಲ್ಪನಾ ಲೋಕವೇ ತೆರೆದುಕೊಳ್ಳುತ್ತದೆ. ಇಂಥ ಮಕ್ಕಳು ಮತ್ತು ಯುವಜನರಿಗಾಗಿ ಬೆಂಗಳೂರಿನ ನವೋದ್ಯಮ ಸಂಸ್ಥೆ ‘ಟೀಮ್‌ ಇಂಡಸ್‌’  ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಲ್ಯಾಬ್‌ ಟು ಮೂನ್‌’ ಎಂಬ ವಿಶಿಷ್ಟ ಸ್ಪರ್ಧೆ ಆಯೋಜಿಸಿದೆ.14 ರಿಂದ 25 ವರ್ಷದೊಳಗಿನವರು ಭಾಗವಹಿಸಬಹುದು. ಪ್ರತೀ ತಂಡದಲ್ಲಿ ಮೂವರು ಸ್ಪರ್ಧಿಗಳಿರುತ್ತಾರೆ. ಎಷ್ಟು ತಂಡಗಳು ಬೇಕಾದರೂ ಪಾಲ್ಗೊಳ್ಳಬಹುದು.ಸ್ಪರ್ಧೆಯಲ್ಲಿ ಎರಡು ಸುತ್ತುಗಳಿರುತ್ತವೆ. ಆನ್‌ಲೈನ್‌ನಲ್ಲಿ ಮೊದಲನೇ ಸುತ್ತಿನ ಸ್ಪರ್ಧೆ ನಡೆಯಲಿದೆ. ಇದಕ್ಕಾಗಿ ಆ. 20ರ ಒಳಗೆ lab2moon.teamindus.in ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.ಪ್ರಯೋಗ ನಡೆಸುತ್ತಿರುವ ವಿಷಯದ ಬಗ್ಗೆ 300 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು. ತಾವು ತಯಾರಿಸಿದ ಸಾಧನವನ್ನು ಚಂದ್ರ ಗ್ರಹಕ್ಕೆ ಏಕೆ ಕಳಿಸಬೇಕು ಎಂಬ ಬಗ್ಗೆ ಗರಿಷ್ಠ 2 ನಿಮಿಷದ ವಿಡಿಯೊ ಕ್ಲಿಪ್ಪಿಂಗ್ ಅಪ್‌ಲೋಡ್‌ ಮಾಡಬೇಕು.ಪ್ರಯೋಗಕ್ಕೆ ಬಳಸುವ ಉಪಕರಣಗಳ ಒಟ್ಟು ತೂಕ  250 ಗ್ರಾಂ ಮೀರುವಂತಿಲ್ಲ. ಪ್ರಯೋಗಕ್ಕೆಂದು ರವಾನಿಸುವ ವಸ್ತು 65 ಮಿ.ಮೀ. ಸುತ್ತಳತೆ ಮತ್ತು 115 ಮಿ.ಮೀ ಎತ್ತರ ಇರಬೇಕು.ಪ್ರಯೋಗಕ್ಕೆ ಇಂಥದ್ದೇ ವಿಷಯ ಆರಿಸಿಕೊಳ್ಳಬೇಕು ಎಂಬ ನಿಯಮವಿಲ್ಲ. ಚಂದ್ರನಲ್ಲಿ ಮನುಷ್ಯ ಹೇಗೆ ಜೀವಿಸಬಹುದು, ಅಲ್ಲಿ ಇರಬಹುದಾದ ಜೀವಿಗಳ ಪತ್ತೆ ಹೇಗೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ವಿಷಯವನ್ನು ಆರಿಸಿಕೊಂಡು ಪ್ರಯೋಗ ಮಾಡಬಹುದು.ಮೊದಲನೇ ಸುತ್ತಿನಲ್ಲಿ ಆಯ್ಕೆಯಾಗುವ 20 ತಂಡಗಳು ಡಿಸೆಂಬರ್‌ ಒಳಗಾಗಿ ‘ಪ್ರೊಟೊಟೈಪ್‌’ (ಪ್ರಾಯೋಗಿಕ ಮಾದರಿ) ಅಭಿವೃದ್ಧಿಪಡಿಸಬೇಕು. ಈ ಮಾದರಿ ಕಂಪ್ಯೂಟರ್‌ಗೆ ಜೋಡಣೆಯಾಗುವಂತಿರಬೇಕು.

ಕಂಪ್ಯೂಟರ್‌ಗೆ ಮಾಹಿತಿ ರವಾನಿಸುವ ಮತ್ತು ಸ್ವೀಕರಿಸುವ ಸಾಮರ್ಥ್ಯ ಈ ಮಾದರಿಗೆ ಇರಬೇಕು. ಆಯ್ಕೆಯಾದ ತಂಡಗಳನ್ನು ಜನವರಿ ತಿಂಗಳಲ್ಲಿ ಬೆಂಗಳೂರಿಗೆ ಕರೆಸಲಾಗುವುದು. ಕೆ. ಕಸ್ತೂರಿರಂಗನ್‌  ನೇತೃತ್ವದ ತೀರ್ಪು ಗಾರರ ತಂಡ ಈ ಮಾದರಿಗಳನ್ನು ಪರಿಶೀಲಿಸುತ್ತದೆ.ಜ.26ಕ್ಕೆ ವಿಜೇತರನ್ನು ಘೋಷಿಸಲಾಗುತ್ತದೆ.‘ಆಯ್ಕೆಯಾದ ಮಾದರಿಯನ್ನು ಟೀಮ್ ಇಂಡಸ್, ಬಾಹ್ಯಾಕಾಶಕ್ಕೆ ಕಳಿಸಿಕೊಡಲಿದೆ. ಈ ಕಾರ್ಯ ಸಂಪೂರ್ಣವಾಗುವವರೆಗೂ ಯುವ ತಂಡ ಟೀಮ್‌ ಇಂಡಸ್‌ ಜೊತೆಯಲ್ಲೇ ಇರಬೇಕಾಗುತ್ತದೆ’ ಎನ್ನುತ್ತಾರೆ ವಿಜ್ಞಾನಿ  ಮೋಹಿನಿ ಪರಮೇಶ್ವರನ್‌. ‘ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿದೆ’ ಎನ್ನುತ್ತಾರೆ ಅವರು.

ಮಾಹಿತಿಗೆ lab2moon.teamindus.in ವೆಬ್‌ಸೈಟ್‌ ನೋಡಿ. 

ಬಾಹ್ಯಾಕಾಶ ಅನ್ವೇಷಣೆ

‘ಟೀಮ್‌ ಇಂಡಸ್‌’ ಬೆಂಗಳೂರಿನ ನವೋದ್ಯಮ. ಬಾಹ್ಯಾಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಈ ಸಂಸ್ಥೆಯು ಇದೀಗ ಬಾಹ್ಯಾಕಾಶ ನೌಕೆಯನ್ನು ಅಭಿವೃದ್ಧಿಪಡಿಸುತ್ತಿದೆ.ಗೂಗಲ್‌ ಲೂನಾರ್‌ ಎಕ್‌್ಸಪ್ರೈಸ್‌ ಸ್ಪರ್ಧೆಯಲ್ಲಿ ಸಂಸ್ಥೆಯ ತಂತ್ರಜ್ಞರು ಪ್ರದರ್ಶಿಸಿದ ಲ್ಯಾಂಡಿಂಗ್ ತಂತ್ರಜ್ಞಾನಕ್ಕೆ 10 ಲಕ್ಷ ಡಾಲರ್ (₹66.84 ಕೋಟಿ) ಮೊತ್ತದ ಬಹುಮಾನ ಸಿಕ್ಕಿತ್ತು.ಮುಂದಿನ ಹಂತದಲ್ಲಿ ಚಂದ್ರನ ಮೇಲೆ ಒಂದು ರೋಬೊಟ್ ಇಳಿಸಿ, ಅನ್ವೇಷಣೆ ನಡೆಸುವುದು ಈ ತಂಡದ ಮುಂದಿನ ಕನಸು. ಎಲ್ಲವೂ ಅಂದುಕೊಂಡಂತೆ ಆದರೆ ಟೀಮ್‌ ಇಂಡಸ್‌ನ ಬಾಹ್ಯಾಕಾಶ ನೌಕೆ 2017ರ ಸೆಪ್ಟೆಂಬರ್‌ನಲ್ಲಿ ಉಡಾವಣೆಯಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.