ಚಂದ್ರವಳ್ಳಿ ಹುಲ್ಲುಗಾವಲು ಹಡ್ಲುವಿನಲ್ಲಿ ಚಾರಣ

7

ಚಂದ್ರವಳ್ಳಿ ಹುಲ್ಲುಗಾವಲು ಹಡ್ಲುವಿನಲ್ಲಿ ಚಾರಣ

Published:
Updated:

ಚಿತ್ರದುರ್ಗ: ನಗರದ ಬಡ್ಡಿಂಗ್ ಆರ್ಟ್ಸ್ ಗ್ಯಾಲರಿಯವತಿಯಿಂದ ಭಾನುವಾರ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಐತಿಹಾಸಿಕ ಚಂದ್ರವಳ್ಳಿಯ ಹುಲ್ಲುಗಾವಲು ಹಡ್ಲು ಪ್ರದೇಶದಲ್ಲಿ ಚಾರಣವನ್ನು ಹಮ್ಮಿಕೊಳ್ಳಲಾಗಿತ್ತು.ಗ್ಯಾಲರಿಯ ಮುಖ್ಯಸ್ಥ ಡಿ.ಎನ್. ರವಿಕುಮಾರ್ ಅವರನ್ನೊಳಗೊಂಡ ಹತ್ತಕ್ಕೂ ಹೆಚ್ಚು ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಈ ಚಾರಣದಲ್ಲಿ ಪಾಲ್ಗೊಂಡಿದ್ದರು. ಹುಲ್ಲುಗಾವಲು ಪ್ರದೇಶದಲ್ಲಿರುವ ಜೀವವೈವಿಧ್ಯ ಪರಿಚಯ ಚಾರಣದ ಉದ್ದೇಶವಾಗಿತ್ತು.ಚಂದ್ರವಳ್ಳಿಯ ಹುಲೆಗೊಂದೀಶ್ವರ ದೇವಾಲಯದಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಹುಲ್ಲುಗಾವಲ ಹಡ್ಲು. ಈ ಪ್ರದೇಶದ ಸುತ್ತಲು ಸಾಲಾಗಿ ಹಬ್ಬಿರುವ ಬೋಳು ಗುಡ್ಡಗಳು ಮಳೆಗಾಲದ ಆರಂಭದಿಂದ ಚಳಿಗಾಲದವರೆಗೂ ಹಚ್ಚ ಹಸಿರಿನ ಹುಲ್ಲಿನ ಹೊದಿಕೆಯಿಂದ ಆವೃತಗೊಂಡಿರುತ್ತವೆ.‘ಚಂದ್ರವಳ್ಳಿಯು ಕೇವಲ ರಾಜ ಮಹಾರಾಜರ ಆಳ್ವಿಕೆಗೆ ಒಳಪಟ್ಟ ಸ್ಥಳವಲ್ಲ. ಇದೊಂದು ಪರಿಸರಪೂರಕ ವನ ಮತ್ತು ವನ್ಯಜೀವಿಗಳ ತಾಣವೂ ಹೌದು. ಈ ಪ್ರದೇಶವೊಂದರಲ್ಲೆ ಹಲವು ವಿಶಿಷ್ಟ ಭೌಗೋಳಿಕ ನೆಲೆಗಳುಂಟು. ದೈತ್ಯಾಕಾರವಾಗಿ ಹಬ್ಬಿರುವ ಗುಡ್ಡ ಬಂಡೆಗಳು, ಗುಹೆಗಳು, ಕುರುಚಲು ಪೊದೆ ಸಸ್ಯಗಳು, ಅಪಾರ ಔಷಧ ಸಸ್ಯಗಳು, ಶೋಲಾ ಕಾಡಿನಂತೆ ಕಂಗೊಳಿಸುವ ಕಡಿದಾದ ಹುಲ್ಲುಗಾವಲ ಗುಡ್ಡಗಳ ನೆಲೆಗಳು ಈ ಪ್ರದೇಶ ದಲ್ಲುಂಟು’ ಎಂದು ರವಿಕುಮಾರ್, ವಿದ್ಯಾರ್ಥಿಗಳಿಗೆ ವಿವರಿಸಿದರು.‘ಮಳೆಗಾಲ ಆರಂಭವಾದ ಕೂಡಲೇ ಈ ಭಾಗದಲ್ಲಿ ಹುಲ್ಲಿನ ಗೊಪ್ಪೆಗಳು ಬೆಳೆಯಲು ಆರಂಭಿಸುತ್ತವೆ. ಒಂದೊಂದು ಗೊಪ್ಪೆ, ಕನಿಷ್ಠ 1 ಅಡಿಯ ಸುತ್ತಳತೆಯಿಂದ ಗರಿಷ್ಠ 3 ಅಡಿಯ ಸುತ್ತಳತೆಯವರೆಗೂ ವ್ಯಾಪಿಸಿರುತ್ತವೆ. ಇದನ್ನೇ ಹಡ್ಲು ಎನ್ನುತ್ತಾರೆ’ ಎಂದು ನೆಲದಲ್ಲಿ ಹರಡಿವು ಹುಲ್ಲಿನ ಗೊಪ್ಪೆಗಳನ್ನು ತೋರಿಸಿದರು.‘ಈ ಪ್ರದೇಶದ ಸುಮಾರು 2 ಕಿ.ಮೀ. ಸುತ್ತಳತೆಯಲ್ಲಿ ಈ ಹುಲ್ಲಿನದ್ದೇ ಕಾರುಬಾರು. ಜುಮು ಜುಮು ಸುರಿಯುವ ಮಳೆ ನೀರನ್ನು ಈ ಗೊಪ್ಪೆ ಹುಲ್ಲು ಹಿಡಿದು ಭೂಮಿಯಲ್ಲಿ ಇಂಗಿಸುತ್ತದೆ. ಈ ಹುಲ್ಲಿನ ಗೊಪ್ಪೆಗಳು ಸ್ಪಂಜಿನಂತೆ ಮಳೆ ನೀರು ಇಂಗಿಸುತ್ತವೆ. ಜುಲೈನಿಂದ ಸೆಪ್ಟೆಂಬರ್ ತಿಂಗಳುಗಳಲ್ಲಿ ಇಲ್ಲಿನ ಹಸಿರು ರಾಶಿಯ ಪೂರ್ಣಪ್ರಮಾಣದ ಸೌಂದರ್ಯವನ್ನು ಸವಿಯಬಹುದು’ ಎಂದು ರವಿಕುಮಾರ್ ವಿವರಿಸಿದರು.‘ಹುಲ್ಲು ಹಡ್ಲುವಿನ ಪ್ರದೇಶ: ಚಿರತೆ, ತೋಳ, ಗುಳ್ಳೆನರಿ,  ಉಡ  ಮತ್ತು ಪುಣುಗು/ಕಬ್ಬೆಕ್ಕುಗಳ ಆವಾಸಸ್ಥಾನ. ಸಸ್ಯಹಾರಿಗಳಾದ ಕೊಂಡುಕುರಿ ಮತ್ತು ಕಾಡುಮೊಲಗಳೂ ಈ ಪ್ರದೇಶದಲ್ಲಿ ವಾಸಿಸುತ್ತವೆ. ಈ ಹುಲ್ಲುಗಾವಲಿನ ಕಡಿದಾದ ಮಾರ್ಗಗಳಲ್ಲಿ ಹರಿಯುವ ಮಳೆ ನೀರು ಚಂದ್ರವಳ್ಳಿ ಕೆರೆಯನ್ನು ಸಂಗಮಿಸಲು ಪ್ರಮುಖ ಪಾತ್ರ ವಹಿಸಿವೆ’ ಎಂದು ವಿವರಿಸಿದರು.ಹುಲ್ಲು ಹಡ್ಲು, ಸಾಲುಗುಡ್ಡಗಳಲ್ಲಿನ ಚಾರಣ ತಂಡದಲ್ಲಿದ್ದ ವಿದ್ಯಾರ್ಥಿಗಳಿಗೆ ಪರಿಸರ ಮಾಹಿತಿಯೊಂದಿಗೆ, ಅವುಗಳ ಮಹತ್ವವನ್ನು ವಿವರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry