ಚಂದ್ರಶೇಖರಯ್ಯ ನೇಮಕ ಮುಖ್ಯಮಂತ್ರಿ ಸಮರ್ಥನೆ

7

ಚಂದ್ರಶೇಖರಯ್ಯ ನೇಮಕ ಮುಖ್ಯಮಂತ್ರಿ ಸಮರ್ಥನೆ

Published:
Updated:

ಮಂಗಳೂರು: ಎರಡನೇ ಉಪಲೋಕಾಯುಕ್ತರನ್ನಾಗಿ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರ ನೇಮಕವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು, ವಿವಾದವನ್ನು ಬಗೆಹರಿಸುವ ಸಂಬಂಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದರು.ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಭಾನುವಾರ ಇಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು. `ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ವಾಗ್ದಂಡನೆಗೆ ಒಳಪಡಿಸುವುದು ಕ್ಲಿಷ್ಟದ ಕೆಲಸ. ವಾಗ್ದಂಡನೆಗೆ ಗಂಭೀರವಾದ ಆಪಾದನೆಗಳು ಇರಬೇಕು. ಈ ನಿಟ್ಟಿನಲ್ಲಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು. ಚಂದ್ರಶೇಖರಯ್ಯ ಅವರ ನೇಮಕಕ್ಕೆ ಮುನ್ನ ಎಲ್ಲರ ಸಲಹೆ ಪಡೆಯಲಾಗಿದೆ. ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ ಸಲಹೆ ಪಡೆಯಲಾಗಿತ್ತು. ಯಾವುದೇ ರೀತಿ ತಪ್ಪು ನಡೆದಿಲ್ಲ ಎಂದು~ ಅವರು ವಿವರಿಸಿದರು.ಚಾಲನೆ: ನೂತನ ಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆಗೆ ಸೋಮವಾರದಿಂದಲೇ ಚಾಲನೆ ನೀಡಲಿದ್ದು, ಹತ್ತು ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಸದಾನಂದ ಗೌಡ ತಿಳಿಸಿದರು.ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ವಿಧಾನ ಪರಿಷತ್ ಸಭಾಪತಿ, ವಿಧಾನಸಭೆ ಸ್ಪೀಕರ್, ವಿರೋಧ ಪಕ್ಷಗಳ ಮುಖಂಡರ ಸಲಹೆ ಪಡೆದು ಹತ್ತು ದಿನಗಳಲ್ಲಿ ನೂತನ ಲೋಕಾಯುಕ್ತರ ನೇಮಕಕ್ಕೆ ಶಿಫಾರಸು ಕಳುಹಿಸಲಾಗುವುದು ಎಂದರು.`ಲೋಕಾಯುಕ್ತ ಬಲಪಡಿಸಬೇಕು ಎಂಬುದು ಬಿಜೆಪಿ ಸರ್ಕಾರದ ಸ್ಪಷ್ಟ ಉದ್ದೇಶ. ದುರ್ಬಲಗೊಳಿಸಬೇಕೆಂಬ ಭಾವನೆ ನಮ್ಮಲ್ಲಿ ಇಲ್ಲ. ಇತ್ತೀಚಿನ ವಿದ್ಯಮಾನಗಳು, ಲೋಕಾಯುಕ್ತರ ನೇಮಕಕ್ಕೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ವಿರೋಧ ಪಕ್ಷಗಳ ಟೀಕೆ ಮತ್ತು ಸಾರ್ವಜನಿಕ ಚರ್ಚೆ ನೋವು ತಂದಿದೆ~ ಎಂದು ಅವರು ಹೇಳಿದರು.`ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಈ ಹಿಂದೆ ರಾಜ್ಯಪಾಲರಿಗೆ ಹೆಸರು ಶಿಫಾರಸು ಮಾಡುವಾಗ ಲೋಕಾಯುಕ್ತ ಕಾಯ್ದೆಯನ್ನು ಗಾಳಿಗೆ ತೂರಿಲ್ಲ. ಲೋಕಾಯುಕ್ತ ನೇಮಕಕ್ಕೆ ಸಮರ್ಪಕವಾಗಿ ಸಲಹೆ ಪಡೆದಿಲ್ಲ ಎಂಬ ಮಾತು ಕೇಳಿಬಂದಿದೆ. ಹಿಂದಿನ ದಿನಗಳಲ್ಲಿ ಯಾವ ರೀತಿ ಸಲಹೆ ಪಡೆದು ನೇಮಕ ಮಾಡಲಾಗಿದೆಯೋ ಅದೇ ರೀತಿಯಲ್ಲಿ ಚಾಚೂ ತಪ್ಪದೆ ಪಾಲಿಸಿದ್ದೇನೆ. ಕಾನೂನುಬದ್ಧವಾಗಿ ಸಲಹೆ ಪಡೆದು ಬಹುಮತದ ಹೆಸರನ್ನು ಲೋಕಾಯುಕ್ತ, ಉಪಲೋಕಾಯುಕ್ತರ ನೇಮಕಕ್ಕೆ ಕಳುಹಿಸಿದ್ದೇನೆ. ಬಾಹ್ಯ ಚರ್ಚೆಗೆ ನಾನು ಜವಾಬ್ದಾರನಲ್ಲ~ ಎಂದು ಸ್ಪಷ್ಟಪಡಿಸಿದರು.ಸಂಪುಟ ವಿಸ್ತರಣೆ ತಡ: ಸದ್ಯಕ್ಕೆ 16 ಖಾತೆಗಳು ತಮ್ಮ ಬಳಿ ಇವೆ. 16 ಖಾತೆಗಳನ್ನು ತಾವೇ ಇಟ್ಟುಕೊಳ್ಳುವುದಿಲ್ಲ. ಬಜೆಟ್ ಮಂಡನೆ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು. ಹಣಕಾಸು ಖಾತೆಯನ್ನು ಮಾತ್ರ ತಮ್ಮ ಬಳಿ ಇಟ್ಟುಕೊಂಡು ಉಳಿದ ಖಾತೆಗಳನ್ನು ಇತರರಿಗೆ ಹಂಚಲಾಗುವುದು. ಈಗ ಬೇರೆ ಬೇರೆ ಕಾರಣಗಳಿಂದ ಈ ಖಾತೆಗಳು ತಮ್ಮ ಬಳಿ ಇವೆ ಎಂದು ಸದಾನಂದ ಗೌಡ ತಿಳಿಸಿದರು.ರಾಜಕೀಯ ಇಚ್ಛಾಶಕ್ತಿ ಇದ್ದರೆ ಯಾವುದೇ ಕೆಲಸ ಮಾಡಬಹುದು. 16 ಖಾತೆಗಳು ಹೊರೆಯಾಗಿಲ್ಲ. ಸೋಮವಾರ 16 ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಸಮಾಲೋಚಿಸಲಾಗುವುದು. ಪ್ರತಿವಾರವೂ ಆಯಾ ವಾರದ ಪ್ರಗತಿ ಕುರಿತು ವರದಿ ನೀಡುವಂತೆ ಸೂಚಿಸಲಾಗುವುದು ಎಂದು ಅವರು ಹೇಳಿದರು.`ಮುಂದಿನ 25 ದಿನಗಳ ಕಾಲ ಬಜೆಟ್ ತಯಾರಿಯಲ್ಲಿ ತೊಡಗಿಸಿಕೊಳ್ಳಲಾಗುವುದು. ಮುಖ್ಯಮಂತ್ರಿಯಾಗಿ ಆರು ತಿಂಗಳ ಕೆಲಸ ಸ್ವಲ್ಪ ಮಟ್ಟಿನ ಸಂತೃಪ್ತಿ ಮೂಡಿಸಿತ್ತು. ಕಳೆದ ಎಂಟು ದಿನಗಳಲ್ಲಿ ಹಲವಾರು ಸಂಗತಿಗಳಿಂದ ಮುಜುಗರಕ್ಕೆ ಒಳಗಾಗಿದ್ದೇನೆ. ಲೋಕಾಯುಕ್ತ ನೇಮಕಾತಿ, ಉಪಲೋಕಾಯುಕ್ತರ ನೇಮಕದ ವಿದ್ಯಮಾನ, ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ರಾಜೀನಾಮೆ, ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಘಟನೆ ಮನಸ್ಸಿಗೆ ನೋವು ತಂದಿದೆ. ಕೆಲಸದಲ್ಲಿ ಮುಜುಗರ ಅನುಭವಿಸುವಂತಾಗಿದೆ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry