ಚಂದ್ರಶೇಖರಯ್ಯ ರಾಜೀನಾಮೆ ನೀಡಲಿ

7

ಚಂದ್ರಶೇಖರಯ್ಯ ರಾಜೀನಾಮೆ ನೀಡಲಿ

Published:
Updated:

ಬೆಂಗಳೂರು: ರಾಜ್ಯ ಸರ್ಕಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರನ್ನು ಕತ್ತಲೆಯಲ್ಲಿಟ್ಟು ಎರಡನೇ ಉಪ ಲೋಕಾಯುಕ್ತರನ್ನು ನೇಮಿಸಿದೆ ಎಂದು ಆರೋಪಿಸಿರುವ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್, `ಕಾನೂನುಬಾಹಿರವಾಗಿ ಈ ಹುದ್ದೆಗೇರಿರುವ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರು ತಕ್ಷಣವೇ ರಾಜೀನಾಮೆ ನೀಡಬೇಕು~ ಆಗ್ರಹಿಸಿದೆ.ಉಪ ಲೋಕಾಯುಕ್ತರ ನೇಮಕಾತಿ ವಿವಾದ ಕುರಿತು ಸೋಮವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಪ್ರತಿನಿಧಿ ಬಿಜು ಕೋಶಿ, ಭಾರತೀಯ ಮಹಿಳಾ ಒಕ್ಕೂಟದ ಬೆಂಗಳೂರು ನಗರ ಘಟಕದ ಅಧ್ಯಕ್ಷೆ ಜೆ.ಎನ್.ಜಯಶ್ರೀ, ವಕೀಲ ವಿಶ್ವನಾಥ್, ಭ್ರಷ್ಟಾಚಾರದ ವಿರುದ್ಧ ಭಾರತ ಸಂಘಟನೆಯ ಡೇನಿಯಲ್ ಮತ್ತು ಆನಂದ ಯಾದವಾಡ, `ಚಂದ್ರಶೇಖರಯ್ಯ ಅವರು ತಾವಾಗಿಯೇ ಉಪ ಲೋಕಾಯುಕ್ತರ ಹುದ್ದೆ ತ್ಯಜಿಸುವ ಮೂಲಕ ನೈತಿಕತೆ ಪ್ರದರ್ಶಿಸಬೇಕು~ ಎಂದು ಒತ್ತಾಯಿಸಿದರು.ಲೋಕಾಯುಕ್ತ ಸಂಸ್ಥೆಯ ಪ್ರಮುಖ ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಸುವಾಗ ಸರ್ಕಾರ ಪಾರದರ್ಶಕತೆ ಕಾಯ್ದುಕೊಳ್ಳುತ್ತಿಲ್ಲ. ಇದರಿಂದಾಗಿಯೇ ನಿರಂತರವಾಗಿ ವಿವಾದ ಸೃಷ್ಟಿಯಾಗುತ್ತಿದೆ. ಮುಖ್ಯಮಂತ್ರಿಯವರು ಕೆಲ ವಿಷಯಗಳನ್ನು ಮುಚ್ಚಿಟ್ಟು ಚಂದ್ರಶೇಖರಯ್ಯ ಅವರ ಹೆಸರನ್ನು ಉಪ ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡುವ ಮೂಲಕ ರಾಜ್ಯಪಾಲರಿಗೆ ಮೋಸ ಮಾಡಿದ್ದಾರೆ. ಉಪ ಲೋಕಾಯುಕ್ತರು ತಾವಾಗಿಯೇ ರಾಜೀನಾಮೆ ನೀಡದಿದ್ದರೆ, ಮುಖ್ಯ ನ್ಯಾಯಮೂರ್ತಿಯವರ ಪತ್ರದ ಆಧಾರದಲ್ಲಿ ರಾಜ್ಯಪಾಲರು ಚಂದ್ರಶೇಖರಯ್ಯ ಅವರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.ಪರಿಶೀಲನೆಗೆ ಒಳಪಡುತ್ತದೆ: `ಎರಡನೇ ಉಪ ಲೋಕಾಯುಕ್ತರ ನೇಮಕಾತಿಯಲ್ಲಿ ಕಾನೂನು ಉಲ್ಲಂಘನೆ ನಡೆದಿದೆ ಎಂಬುದು ಈಗಾಗಲೇ ಬಹಿರಂಗವಾಗಿದೆ. ರಾಜ್ಯಪಾಲರು ಹೊರಡಿಸಿದ ಆದೇಶವನ್ನು ಪ್ರಶ್ನಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಪ್ರಕರಣ ನ್ಯಾಯಾಂಗದ ಪರಿಶೀಲನೆಗೆ ಒಳಪಡುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ಹೋರಾಟ ನಡೆಸಲಾಗುವುದು~ ಎಂದು ಬಿಜು ಕೋಶಿ ಮತ್ತು ವಿಶ್ವನಾಥ್ ಹೇಳಿದರು.`ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೇರಿದಂತೆ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಎಲ್ಲರೂ ತಮ್ಮ ಕರ್ತವ್ಯಗಳನ್ನು ಮರೆತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ತಮ್ಮ ವಿರುದ್ಧದ ಆರೋಪಗಳು ಮತ್ತು ತಾವು ಹೊಂದಿರುವ ಅರ್ಹತೆಯ ಬಗ್ಗೆ ಇತರೆಯವರಿಗಿಂತ ಚಂದ್ರಶೇಖರಯ್ಯ ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಅವರು ತಾವಾಗಿಯೇ ಹುದ್ದೆಯನ್ನು ನಿರಾಕರಿಸಬೇಕಿತ್ತು. ಹಾಗೆ ಮಾಡದೇ ಇರುವುದರಿಂದ ಈಗ ರಾಜೀನಾಮೆ ನೀಡುವ ಮೂಲಕ ಸಂಸ್ಥೆಯ ಘನತೆಯನ್ನು ಉಳಿಸಬೇಕು~ ಎಂದು ಜಯಶ್ರೀ ಒತ್ತಾಯಿಸಿದರು.ಆನಂದ ಯಾದವಾಡ ಮಾತನಾಡಿ, ಚಂದ್ರಶೇಖರಯ್ಯ ಅವರ ನೇಮಕಾತಿಗೆ ವಿರೋಧ ವ್ಯಕ್ತಪಡಿಸಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲು `ಲೋಕಾಯುಕ್ತ ರಕ್ಷಿಸಿ~ ಆಂದೋಲನದ ವತಿಯಿಂದ ಪ್ರಯತ್ನ ನಡೆಸಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ನೇತೃತ್ವದ ನಿಯೋಗ ಭೇಟಿಗೆ ಅವಕಾಶ ಕೋರಿದ್ದರೂ, ಇಬ್ಬರೂ ಅದಕ್ಕೆ ಪ್ರತಿಕ್ರಿಯೆ ನೀಡದೇ ನುಣುಚಿಕೊಂಡಿದ್ದರು ಎಂದು ದೂರಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry