ಚಂದ್ರಶೇಖರ ರಾವ್ ಬೇನಾಮಿ ಗುತ್ತಿಗೆ

7

ಚಂದ್ರಶೇಖರ ರಾವ್ ಬೇನಾಮಿ ಗುತ್ತಿಗೆ

Published:
Updated:

ಹೈದರಾಬಾದ್:  ತೆಲಂಗಾಣ ಜನತೆ ಒಕ್ಕೊರಲಿನಿಂದ ವಿರೋಧಿಸುತ್ತಿರುವ ಪೋಲವರಂ ಯೋಜನೆಯ ಗುತ್ತಿಗೆಯನ್ನು ಟಿಆರ್‌ಎಸ್ ನಾಯಕ ಕೆ.ಚಂದ್ರಶೇಖರ ರಾವ್ ಬೇನಾಮಿ ಮೂಲಕ ಪಡೆದಿದ್ದಾರೆ ಎಂದು ತೆಲುಗು ದೇಶಂ ಪಕ್ಷ ಗಂಭೀರ ಆಪಾದನೆ ಮಾಡಿದೆ.

4,717 ಕೋಟಿ ರೂಪಾಯಿ ಕಾಮಗಾರಿಯ ಈ ಗುತ್ತಿಗೆಯನ್ನು ಸದರ್ನ್ ಎಂಜಿನಿಯರಿಂಗ್ ವರ್ಕ್ಸ್‌ಗೆ (ಎಸ್‌ಇಡಬ್ಲ್ಯು) ನೀಡಲಾಗಿದೆ. `ನಮಸ್ತೆ ತೆಲಂಗಾಣ~ ದಿನಪತ್ರಿಕೆಯ ಪ್ರಕಾಶಕರು ಈ ಕಂಪೆನಿಯ ಮಾಲೀಕರಾಗಿದ್ದು, ಚಂದ್ರಶೇಖರ ರಾವ್ (ಕೆಸಿಆರ್) ಅವರಿಗೆ ಅತ್ಯಂತ ನಿಕಟದವರಾಗಿದ್ದಾರೆ ಎಂದು ತೆಲುಗು ದೇಶಂ ತೆಲಂಗಾಣ ವೇದಿಕೆಯ ಪ್ರಮುಖ ಸದಸ್ಯರಾದ ರೇವಂತ್ ರೆಡ್ಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಗೋದಾವರಿ- ಕೃಷ್ಣಾ ನದಿಗಳನ್ನು ಜೋಡಿಸುವ ಉದ್ದೇಶದ ಈ ಯೋಜನೆ ಜಾರಿಗೊಂಡರೆ ತನ್ನ ಬುಡಕಟ್ಟು ಪ್ರದೇಶದ ಲಕ್ಷಾಂತರ ಎಕರೆ ಪ್ರದೇಶ ನೀರಿನಲ್ಲಿ ಮುಳುಗುತ್ತದೆ ಎಂಬ ಕಾರಣಕ್ಕೆ ತೆಲಂಗಾಣ ಜನತೆ ಇದನ್ನು ಪ್ರಬಲವಾಗಿ ವಿರೋಧಿಸುತ್ತಿದ್ದಾರೆ. ಇದೇ ವೇಳೆ ತೆಲಂಗಾಣ ರಾಜ್ಯ ರಚನೆಗೆ ಟೊಂಕಕಟ್ಟಿ ಹೋರಾಡುತ್ತಿರುವ ಚಂದ್ರಶೇಖರ ರಾವ್ ಅವರೇ ಜನತೆ ವಿರೋಧಿಸುತ್ತಿರುವ ಯೋಜನೆಗೆ ಗುತ್ತಿಗೆ ಪಡೆದಿರುವುದು ವಿಪರ್ಯಾಸ. ಇದೇ ಕಾರಣಕ್ಕೆ ಈ ಯೋಜನೆ ವಿರುದ್ಧದ ಚಳವಳಿಯನ್ನು ಹಂತ ಹಂತವಾಗಿ ದಮನಿಸಲಾಗಿದೆ ಎಂದು ರೇವಂತ್ ದೂಷಿಸಿದ್ದಾರೆ.

ಈ ಯೋಜನೆಗೆ ಟೆಂಡರ್ ಹಾಕುವ ಅರ್ಹತೆ ಎಸ್‌ಇಡಬ್ಲ್ಯು ಕಂಪೆನಿಗೆ ಇಲ್ಲ ಎಂದು ಎಂಜಿನಿಯರುಗಳು ಹಾಗೂ ತಜ್ಞರ ಸಮಿತಿ ಹೇಳಿತ್ತು. ಆದರೂ ಅತ್ಯಂತ ನಾಟಕೀಯ ಬೆಳವಣಿಗೆಗಳ ನಡುವೆ ಈ ಕಂಪೆನಿ ಕಾಮಗಾರಿಯ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಎನ್. ಕಿರಣ್   ಕುಮಾರ್ ರೆಡ್ಡಿ ಅವರ ಕಚೇರಿಯೇ ಇದರಲ್ಲಿ ನೇರ ಹಸ್ತಕ್ಷೇಪ ಎಸಗಿದೆ ಎಂದು ಮಾಜಿ ನೀರಾವರಿ ಸಚಿವ ಎಂ.ವೆಂಕಟೇಶ್ವರ ರಾವ್ ಆರೋಪಿಸಿದ್ದಾರೆ.

ಈ ಮಧ್ಯೆ ಸರ್ಕಾರ, ಎಸ್‌ಇಡಬ್ಲ್ಯು ಕಂಪೆನಿಗೆ ಗುತ್ತಿಗೆ ನೀಡಿದ್ದರಿಂದ 650 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಒಂದೆಡೆ ಚಂದ್ರಶೇಖರ ರಾವ್ ತೆಲಂಗಾಣಕ್ಕಾಗಿ ಹೋರಾಡುತ್ತಿದ್ದಾರೆ. ಅನಿರ್ದಿಷ್ಟ ಪ್ರತಿಭಟನೆ ನಡೆಸಲು ಸರ್ಕಾರಿ ನೌಕರರಿಗೆ ಕರೆ ನೀಡುತ್ತಾರೆ. ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಜನತೆಗೆ ಕರೆ ನೀಡುತ್ತಾರೆ. ಆದರೆ ಅವರು ಮಾತ್ರ ಆಂಧ್ರದ ಜನರ ಜತೆ ಸೇರಿ ಪಾಲುದಾರಿಕೆ ವ್ಯವಹಾರ ನಡೆಸುತ್ತಾರೆ ಎಂದು ಸಂಯುಕ್ತ ಆಂಧ್ರ ಪ್ರತಿಪಾದಕರಾದ ಟಿಡಿಪಿಯ ಕೊಡೇಲ ಶಿವಪ್ರಸಾದ ರಾವ್ ಛೇಡಿಸಿದ್ದಾರೆ.

ಟಿಆರ್‌ಎಸ್ ನಾಯಕತ್ವದ ಬಗ್ಗೆ ಅಪಸ್ವರ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಈ ಮುನ್ನ, ಪಕ್ಷದ ನಾಯಕರಾದ ಕೆ.ಟಿ.ರಾಮರಾವ್ ಮತ್ತು ಟಿ.ಹರೀಶ್ ರಾವ್ ವಿರುದ್ಧ ಮಕ್ಕಳನ್ನು ಕಾರ್ಪೊರೇಟ್ ಶಾಲೆಗಳಿಗೆ ಕಳುಹಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry