ಶುಕ್ರವಾರ, ನವೆಂಬರ್ 15, 2019
22 °C

ಚನ್ನಕೇಶವಸ್ವಾಮಿ ತೆಪ್ಪೋತ್ಸವ

Published:
Updated:

ಬೇಲೂರು: ಇಲ್ಲಿನ ಚನ್ನಕೇಶವಸ್ವಾಮಿಯ ತೆಪ್ಪೋತ್ಸವ ಇಲ್ಲಿನ ವಿಷ್ಣುಸಮುದ್ರ ಕೆರೆಯ ತೆಪ್ಪದ ಕೊಳದಲ್ಲಿ (ಬಿಷ್ಟಮ್ಮನ ಕೆರೆ) ಬುಧವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.ಚನ್ನಕೇಶವಸ್ವಾಮಿ ರಥೋತ್ಸವದ ಅಂಗವಾಗಿ ನಡೆಯುವ ಉತ್ಸವಗಳ ಪೈಕಿ ತೆಪ್ಪೋತ್ಸವವು ಪ್ರಮುಖವಾದ ಉತ್ಸವವಾಗಿದೆ. ಕಾರಣಾಂತರಗಳಿಂದ ಕಳೆದ 50 ವರ್ಷಗಳಿಂದ ತೆಪ್ಪೋತ್ಸವ ಸ್ಥಗಿತಗೊಂಡಿತ್ತು. ತೆಪ್ಪೋತ್ಸವವನ್ನು ಕಳೆದ ಎರಡು ವರ್ಷಗಳಿಂದ ಪುನರಾರಂಭಿಸಲಾಗಿದೆ.

ಸೇವಾರ್ಥದಾರರು ತೆಪ್ಪೋತ್ಸವವನ್ನು ನಡೆಸಲು ಮುಂದೆ ಬಂದಿದ್ದರಿಂದ ದೇವಾಲಯದ ಆಡಳಿತ ಮಂಡಳಿ  ತೆಪ್ಪೋತ್ಸವವನ್ನು ಅದ್ಧೂರಿಯಿಂದ ನಡೆಸುತ್ತಿದೆ.ತೆಪ್ಪೋತ್ಸವಕ್ಕಾಗಿ ವಿಷ್ಣುಸಮುದ್ರ ಕೆರೆಯಲ್ಲಿ ಕಬ್ಬಿಣದ ಡ್ರಂಗಳಿಂದ ತೆಪ್ಪವನ್ನು ಸಿದ್ದಗೊಳಿಸಲಾಗಿತ್ತು. ರಾತ್ರಿ 8ಗಂಟೆಯ ಸಮಯದಲ್ಲಿ ತೆಪ್ಪದ ಮೇಲೆ ಅಲಂಕೃತವಾದ ಮಂಟಪದಲ್ಲಿ ಸೌಮ್ಯನಾಯಕಿ ಮತ್ತು ರಂಗನಾಯಕಿ ಅಮ್ಮನವರ ಸಹಿತನಾದ ಶ್ರೀಚೆನ್ನಕೇಶವಸ್ವಾಮಿಯನ್ನು ಕೂರಿಸಿ ಪೂಜಾ ಕೈಂಕರ್ಯಗಳನ್ನು ನಡೆಸಿದ ಬಳಿಕ ವಿಷ್ಣುಸಮುದ್ರ ಕೆರೆಯ ಕಲ್ಯಾಣಿಯ ವಸಂತ ಮಂಟಪದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ತೆಪ್ಪದ ಕೊಳದ ಮಧ್ಯದಲ್ಲಿರುವ ವಸಂತ ಮಂಟಪ ಅಥವಾ ತೆಪ್ಪೋತ್ಸವ ಮಂಟಪದಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಿ ಆರಾಧಿಸಲಾಯಿತು.ಇದಕ್ಕೂ ಮುನ್ನ ಚನ್ನಕೇಶವಸ್ವಾಮಿ ದೇವಾಲಯ ದಿಂದ ದೇವರ ಉತ್ಸವ ಮೂರ್ತಿಯನ್ನು ಕೆರೆಯ ಬಳಿಗೆ ಮೆರವಣಿಗೆಯಲ್ಲಿ ತರಲಾಯಿತು. ದೇವರು ಹಾದು ಹೋದ ಕೆರೆ ಬೀದಿಯ ಉದ್ದಕ್ಕೂ ರಂಗೋಲಿ ಹಾಕಿ ಅಲಂಕರಿಸಲಾಗಿತ್ತು. ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಜನರು ತೆಪ್ಪೋತ್ಸವ ವೀಕ್ಷಿಸಿ ಪುನೀತರಾದರು. ತೆಪ್ಪೋತ್ಸವ ನಂತರ ನೆರೆದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ದೇವಾಲಯದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್ಟರ್ ಮತ್ತು ಕೃಷ್ಣಸ್ವಾಮಿ ಭಟ್ಟರ್ ಪೂಜಾ ಕಾರ್ಯ ನೆರವೇರಿಸಿದರು.ಈ ಸಂದರ್ಭದಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿಯ ಉಪ ಸಮಿತಿ ಅಧ್ಯಕ್ಷ ಎನ್.ಆರ್.ಸಂತೋಷ್, ಸದಸ್ಯರಾದ ಬಿ.ಕೆ.ಶ್ರೀಹರಿ, ಕೆ.ಪಿ.ಶೈಲೇಶ್  ತೆಪ್ಪೋತ್ಸವದ ಸೇವಾರ್ಥದಾರರಾದ ಎಸ್.ಸುಧಾ, ಕೇಶವೇಗೌಡ(ಬಾಳೆಹಣ್ಣು ರಮೇಶ್), ಬೆಂಗಳೂರಿನ ಬಿ.ಎಸ್.ಕೇಶವನ್, ಬಿ.ಎಸ್.ಸತ್ಯನಾರಾಯಣ ಇದ್ದರು.

ಪ್ರತಿಕ್ರಿಯಿಸಿ (+)